
ಪುರುಷರಲ್ಲಿ ಸ್ತನ ಕ್ಯಾನ್ಸರ್
ಪುರುಷರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ವಿದೇಶದಲ್ಲಿ ನಡೆದಿರುವ ಇತ್ತೀಚಿನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಸುಮಾರು 2,500ಕ್ಕೂ ಹೆಚ್ಚು ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿರುವ ಟೆಕ್ಸಾಸ್ ಎಂ.ಡಿ ಆ್ಯಂಡರ್‌ಸನ್ ಕ್ಯಾನ್ಸರ್ ಕೇಂದ್ರದ ಸಂಶೋಧಕರು ಈ ವಿಷಯ ತಿಳಿಸಿದ್ದಾರೆ.
25 ವರ್ಷಗಳ ಹಿಂದೆ ಪ್ರತಿ ಒಂದು ಕೋಟಿ ಪುರುಷರಲ್ಲಿ 86 ಜನರಿಗೆ ಸ್ತನ ಕ್ಯಾನ್ಸರ್ ಬರುತ್ತಿತ್ತು. ಈಗ ಈ ಪ್ರಮಾಣ 108ಕ್ಕೆ ಏರಿಕೆಯಾಗಿದೆ.
ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಈ ರೋಗದ ಬಗ್ಗೆ ಪುರುಷರು ಈಗ ಹೆಚ್ಚು ಜಾಗೃತರಾಗಿದ್ದಾರೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಪುರುಷರ ಸ್ತನ ಕ್ಯಾನ್ಸರ್‌ನ ಲಕ್ಷಣಗಳು
ಗಂಟು ಅಥವಾ ಊತ: ಸ್ತನದಲ್ಲಿ ಅಥವಾ ಎದೆಯ ಮೇಲೆ ನೋವುರಹಿತ ಗಂಟು ಕಂಡುಬರುವುದು ಮೊದಲ ಹಾಗೂ ಪ್ರಮುಖ ಲಕ್ಷಣವಾಗಿದೆ. ಇದು ಸಾಮಾನ್ಯವಾಗಿ ಪುರುಷರ ಎದೆ ತೊಟ್ಟಿನ ಹಿಂಬದಿಯಲ್ಲಿ ಕಾಣಿಸುವಂಥದ್ದು.
ತೊಟ್ಟಿನಲ್ಲಿ ಬದಲಾವಣೆ: ಮೊಲೆತೊಟ್ಟು ಒಳಕ್ಕೆ ಹೋಗುವುದು, ಕೆಂಪು ಬಣ್ಣವಾಗುವುದು ಅಥವಾ ಚರ್ಮ ಸುಲಿದಂತೆ ಆಗುವುದು.
ಸ್ರವಿಸುವಿಕೆ: ಮೊಲೆತೊಟ್ಟಿನಿಂದ ರಕ್ತ ಅಥವಾ ಇತರ ದ್ರವ ಸೋರುವುದು.
ಚರ್ಮದ ಬದಲಾವಣೆ: ಸ್ತನದ ಚರ್ಮದಲ್ಲಿ ಗುಳ್ಳೆ, ಸುಕ್ಕು ಉಂಟಾಗುವುದು.
ಅಪಾಯಕಾರಿ ಅಂಶಗಳು ಮತ್ತು ಪರಿಹಾರ
ಅಪಾಯಕಾರಿ ಅಂಶಗಳು: ವಂಶಾವಳಿಯ ಇತಿಹಾಸ, ವಯಸ್ಸು, ಹಾರ್ಮೋನ್ ಅಸಮತೋಲನ, ಅಧಿಕ ತೂಕ, ಮದ್ಯಪಾನ ಮತ್ತು ವಿಕಿರಣಕ್ಕೆ ಒಡ್ಡಿಕೊಳ್ಳುವಿಕೆಯಂತಹ ಅಂಶಗಳು ಅಪಾಯವನ್ನು ಹೆಚ್ಚಿಸುತ್ತವೆ.
ಪುರುಷರಲ್ಲಿ ಸ್ತನ ಕ್ಯಾನ್ಸರ್ ಅಪರೂಪವಾದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ಪತ್ತೆ ಹಚ್ಚಿದರೆ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚು.
ಲೇಖಕಿ: ಡಾ. ಸಿ.ಯು. ಪೂವಮ್ಮ, ಮುಖ್ಯಸ್ಥೆ, ಸ್ತನ ಕ್ಯಾನ್ಸರ್ ಮತ್ತು ಆಂಕೋಪ್ಲಾಸ್ಟಿ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.