ADVERTISEMENT

ನಾಲಿಗೆಯ ಮೇಲೆ ಕಲೆಯೂ ಒಂದು ಲಕ್ಷಣವೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋವಿಡ್‌–19ನ ಮುಖ್ಯ ಲಕ್ಷಣಗಳಲ್ಲಿ ಜ್ವರ, ನಿರಂತರ ಕೆಮ್ಮು, ಆಘ್ರಾಣ ಶಕ್ತಿ ಅಥವಾ ರುಚಿ ಕಡಿಮೆಯಾಗುವುದು ಅಥವಾ ಸಂಪೂರ್ಣ ಕಳೆದುಕೊಳ್ಳುವುದು ಸೇರಿವೆ. ಇನ್ನಿತರ ಲಕ್ಷಣಗಳೆಂದರೆ ಚರ್ಮದ ಮೇಲೆ ದದ್ದು, ತಲೆನೋವು, ವಾಕರಿಕೆ, ಭೇದಿ, ಬಳಲಿಕೆ, ಉಸಿರಾಟದ ತೊಂದರೆ, ಬೆರಳುಗಳ ಬಣ್ಣ ಬದಲಾಗುವುದು ಮೊದಲಾದವು.

ಆದರೆ ಈಗ ಈ ಎಲ್ಲ ಲಕ್ಷಣಗಳ ಜೊತೆ ನಾಲಿಗೆಯ ಬಣ್ಣದಲ್ಲೂ ಬದಲಾವಣೆ ಕಾಣಿಸಿಕೊಂಡಿದೆ. ಕೆಲವರಲ್ಲಿ ನಾಲಿಗೆಯ ಬಣ್ಣ ಬದಲಾಗಿದ್ದು, ಇದು ಬಾಯಿಯ ‘ಕ್ಯಾಂಡಿಡಿಯಾಸಿಸ್‌’ ಅಂದರೆ ಯೀಸ್ಟ್‌ ಅಥವಾ ಫಂಗಸ್‌ ಸೋಂಕು ಎಂದು ಭಾವಿಸಿದ ವೈದ್ಯರು ಚಿಕಿತ್ಸೆ ನೀಡಿದರೂ ಕಡಿಮೆಯಾಗದಿದ್ದಾಗ ಕೋವಿಡ್‌ ಲಕ್ಷಣ ಎಂದು ಖಚಿತಪಡಿಸಲಾಗಿದೆ. ಇಂಗ್ಲೆಂಡ್‌ನ ರಾಯಲ್‌ ಡೇವನ್‌ ಆ್ಯಂಡ್‌ ಎಕ್ಸ್‌ಟರ್‌ ಆಸ್ಪತ್ರೆಯ ವೈದ್ಯ ಡಾ. ಡೇವಿಡ್‌ ಸ್ಟ್ರೇನ್‌ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದು, ಕೋವಿಡ್‌ನಿಂದ ಕಳೆದುಕೊಂಡ ನಾಲಿಗೆ ರುಚಿ ಸರಿಹೋಗಲು ತೆಗೆದುಕೊಂಡ ಸಮಯವನ್ನೇ ಈ ನಾಲಿಗೆಯ ಮೇಲಿನ ಕಲೆ ಕಡಿಮೆಯಾಗಲು ತೆಗೆದುಕೊಂಡಿದೆ ಎಂದಿದ್ದಾರೆ.

ಬ್ರಿಟಿನ್‌ನ ಕೋವಿಡ್‌ ಲಕ್ಷಣ ಕುರಿತು ಅಧ್ಯಯನ ನಡೆಸಿರುವ ಬ್ರಿಟನ್‌ನ ಪ್ರೊ. ಟಿಮ್‌ ಸ್ಪೆಕ್ಟರ್‌ ಕೂಡ ನಾಲಿಗೆಯ ಮೇಲೆ ಬಿಳಿ ಕಲೆಗಳು ಕೋವಿಡ್ ಇದ್ದವರಲ್ಲಿ ಕಂಡು ಬಂದಿದೆ ಎಂದು ವರದಿಯೊಂದರಲ್ಲಿ ಹೇಳಿದ್ದಾರೆ.

ADVERTISEMENT

ನಾಲಿಗೆಯ ಮೇಲೆ ಬಿಳಿ ಕಲೆಗಳು ಇದರ ಲಕ್ಷಣ. ಆದರೆ ಈ ಕಲೆಗಳು ಬೇರೆ ಕಾರಣಗಳಿಂದಲೂ ಕಾಣಿಸಿಕೊಳ್ಳಬಹುದು. ಆಹಾರದ ಕಣಗಳು, ಇತರ ಸಮಸ್ಯೆಗಳಿಂದ ನಾಲಿಗೆಯ ಮೇಲೆ ಸತ್ತ ಜೀವಕೋಶಗಳು ಸಂಗ್ರಹವಾಗಬಹುದು. ಶಿಶುಗಳಲ್ಲಿ ಹಾಲಿನಿಂದ ಈ ರೀತಿ ಬಣ್ಣ ಬದಲಾವಣೆಯಾಗುತ್ತದೆ. ಇವುಗಳೆಲ್ಲ ನಾಲಿಗೆಯ ಶುಚಿತ್ವದ ಕೊರತೆಯಿಂದ ಆಗುವಂಥವು. ಫಂಗಸ್‌ ಸೋಂಕು ಉಂಟಾದಾಗ ಕೆಂಪು ಮತ್ತು ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಜ್ವರ ಬಂದಾಗ, ಆ್ಯಂಟಿಬಯಾಟಿಕ್‌ ತೆಗೆದುಕೊಂಡಾಗಲೂ ನಾಲಿಗೆಯ ಬಣ್ಣ ಬದಲಾಗಬಹುದು. ಹೀಗಾಗಿ ಕೊರೊನಾ ವೈರಸ್‌ನಿಂದಲೇ ಬಂದಿದೆ ಎಂಬುದನ್ನು ಉಳಿದ ಲಕ್ಷಣಗಳಿಂದ ಖಚಿತಪಡಿಸಬೇಕಾಗಿದೆ.

ಸಾಂಕ್ರಾಮಿಕ ಕಾಯಿಲೆ ಕುರಿತ ಅಂತರರಾಷ್ಟ್ರೀಯ ಜರ್ನಲ್‌ನಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ನಾಲಿಗೆಯ ಬಣ್ಣ ಬದಲಾವಣೆಗೆ ಗಮನ ನೀಡುವ ಬದಲು ನಿರಂತರ ಜ್ವರ, ಕೆಮ್ಮು ಇದ್ದರೆ, ರುಚಿ ಅಥವಾ ವಾಸನೆ ಶಕ್ತಿ ಕಡಿಮೆಯಾದರೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.