ADVERTISEMENT

ನಡೆ–ನುಡಿ: ಮುದ್ದೂ ಇರಲಿ, ಗುದ್ದೂ ಇರಲಿ

ನಡೆ–ನುಡಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 21:53 IST
Last Updated 19 ಸೆಪ್ಟೆಂಬರ್ 2025, 21:53 IST
<div class="paragraphs"><p>ಮಕ್ಕಳು</p></div>

ಮಕ್ಕಳು

   

ಮನೆಯಲ್ಲಿ ಮಕ್ಕಳು ಏನಾದರೂ ತಪ್ಪು ಮಾಡಿದಾಗ ಸಾಮಾನ್ಯವಾಗಿ ಪೋಷಕರು ‘ನಿಮ್ಮ ಸ್ಕೂಲ್‌ನಲ್ಲಿ ಟೀಚರ್ ಇದನ್ನೇ ಏನು ಹೇಳಿ ಕೊಟ್ಟಿರೋದು’ ಎಂದು ಕೇಳುತ್ತಾರೆ. ಇದು ಸ್ವಲ್ಪ ಸಹಜವೂ ಹೌದು! ಮಕ್ಕಳು ಶಾಲೆಯಲ್ಲಿ ಇರುವಾಗ ಅವರ ತಪ್ಪು ನಡವಳಿಕೆಗಳನ್ನು ತಿದ್ದಿ ಹೇಳುವ ಪ್ರಯತ್ನವನ್ನು ಶಿಕ್ಷಕರು ಮಾಡುತ್ತಲೇ ಇರುತ್ತಾರೆ. ನಂತರದ ಅವಧಿಯಲ್ಲಿ ಅವರನ್ನು ತಿದ್ದುವ ಕೆಲಸ ಮನೆಯಲ್ಲಿ ಪೋಷಕರಿಗೆ ಸಂಬಂಧಿಸಿರುತ್ತದೆ.

ನಾನಾಗ ಆರನೇ ತರಗತಿಯಲ್ಲಿದ್ದೆ. ನನ್ನ ಶಿಕ್ಷಕರು ನೀಡಿದ್ದ ಹೋಂವರ್ಕ್ ಬರೆಯಲು ಹೊಸ ನೋಟ್‌ಪುಸ್ತಕ ತರಬೇಕಾಗಿತ್ತು. ನನ್ನ ಹತ್ತಿರ ಇದ್ದ ಸ್ವಲ್ಪ ಹಣವನ್ನೇ ತೆಗೆದುಕೊಂಡು, ನಾವಿದ್ದ ಕ್ವಾರ್ಟರ್ಸ್‌ ಹತ್ತಿರದ ಅಂಗಡಿಗೆ ಹೋಗಿ, ಅಂಗಡಿಯ ಅಜ್ಜಿಯ ಮುಂದೆ ಹಣ ಇಟ್ಟು ಪುಸ್ತಕ ಕೇಳಿದೆ. ಆದರೆ ಸಾಲದೇ ಬಂದ ಇನ್ನೂ ಐದು ಪೈಸೆಗೆ ಏನು ಮಾಡುವುದು ಎಂದು ನಾನು ಮುಖ ಸಪ್ಪಗೆ ಮಾಡಿಕೊಂಡದ್ದನ್ನು ನೋಡಿ ಆ ಅಜ್ಜಿ ‘ಪರವಾಗಿಲ್ಲ, ನಾಳೆ ತಂದುಕೊಡು’ ಎಂದರು. ಅದಾಗಿ ಒಂದು ವಾರವೇ ಕಳೆಯಿತು. ಆದರೂ ನನಗೆ ಬೇಕಾಗಿದ್ದ ಐದು ಪೈಸೆಯನ್ನು ಅಮ್ಮನಿಂದ ಪಡೆದುಕೊಳ್ಳುವುದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ. ಕೊನೆಗೂ ಕಾಡಿ ಬೇಡಿ ಅಮ್ಮನಿಂದ ಹಣ ಪಡೆದೆ. ಕೂಡಲೇ ಅಜ್ಜಿಯ ಅಂಗಡಿಗೆ ಹೋಗಿ, ನಾನೇ ನೆನಪು ಮಾಡಿ ದುಡ್ಡು ಕೊಟ್ಟೆ. ಆ ನನ್ನ ಪ್ರಾಮಾಣಿಕ ನಡತೆಯನ್ನು ನೋಡಿ ಅಜ್ಜಿ ನನ್ನನ್ನು ಕೊಂಡಾಡಿತು!

ADVERTISEMENT

‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಈ ರೀತಿಯ ಸಣ್ಣಪುಟ್ಟ ಉತ್ತಮ ನಡವಳಿಕೆಗಳನ್ನು ನಾವು ನಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ರೂಢಿಸಬೇಕಾಗುತ್ತದೆ. ಕೂಡುಕುಟುಂಬ ಇದ್ದ ಕಾಲದಲ್ಲಿ ತಾತ, ಅಜ್ಜಿ, ಅಪ್ಪ, ಅಮ್ಮ ಸೇರಿದಂತೆ ಮನೆಯ ಹಿರಿಯ ಸದಸ್ಯರು ಮಕ್ಕಳಿಗೆ ತಪ್ಪು– ಸರಿಗಳ ಬಗ್ಗೆ ಹೇಳಿಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇರುವ ಒಬ್ಬನೇ ಮಗ ಅಥವಾ ಮಗಳನ್ನು ಮುದ್ದು ಮಾಡಿ ಬೆಳೆಸುವುದೇ ಹೆಚ್ಚು. ಆದರೆ ಅದರ ನಡುವೆಯೂ ಮಕ್ಕಳು ತಪ್ಪು ಮಾಡಿದಾಗ ಮುಲಾಜಿಲ್ಲದೇ ಅವರನ್ನು ತಿದ್ದುವ ಕೆಲಸವೂ ಅವಶ್ಯವಾಗಿ ಆಗಬೇಕು. ಹಿರಿಯರಿಗೆ, ಮನೆಗೆ ಬಂದ ಅತಿಥಿಗಳಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ತಿಳಿಸಬೇಕು. ಸಂಸ್ಕಾರ, ಸನ್ನಡತೆಯನ್ನು ಕಲಿಸಬೇಕು. ಇದು ಹೆತ್ತವರ ಕರ್ತವ್ಯವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.