ADVERTISEMENT

World Diabetes Day: ಮಕ್ಕಳಲ್ಲಿ ಮಧುಮೇಹ ತಡೆಯಲು ಹೀಗೆ ಮಾಡಿ

ಡಾ.ಅದಿತಿ ಚೋಪ್ರಾ
Published 14 ನವೆಂಬರ್ 2022, 9:00 IST
Last Updated 14 ನವೆಂಬರ್ 2022, 9:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬದಲಾದ ಜೀವನಶೈಲಿಯಿಂದ ಇಂದು ಮಕ್ಕಳಲ್ಲಿಯೂ ಮಧುಮೇಹವನ್ನು ಸರ್ವೇಸಾಮಾನ್ಯವಾಗಿ ನೋಡುತ್ತಿದ್ದೇವೆ. ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಮಕ್ಕಳಲ್ಲಿಯೂ ಪ್ರಮುಖವಾಗಿ ಟೈಪ್–1 ಮತ್ತು ಟೈಪ್–2 ಡಯಾಬಿಟಿಸ್‌ ಕಾಣಿಸಿಕೊಳ್ಳುತ್ತದೆ. ಟೈಪ್–1 ಅನ್ನು ಜುವೆನೈಲ್‌ ಡಯಾಬಿಟಿಸ್‌ ಎಂದೂ ಕರೆಯಲಾಗುತ್ತದೆ. ಇದು ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿದೆ. ಇಂದು ಮಕ್ಕಳ ದಿನಾಚರಣೆ, ಈ ದಿನದಂದು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಡಯಾಬಿಟಿಸ್‌ನನ್ನು ನಿಯಂತ್ರಿಸಲು ಒಂದಷ್ಟು ಸಲಹೆಯನ್ನು ವೈದ್ಯರು ನೀಡಿದ್ದಾರೆ

ಟೈಪ್‌-1ಡಯಾಬಿಟಿಸ್‌ ಯಾವುದು?:
ಮಕ್ಕಳಲ್ಲಿ ಹೆಚ್ಚಾಗಿ ಟೈಪ್–1 ಮಧುಮೇಹ ಕಾಣಿಸುವುದು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿ ಆಗದೆ ಇರುವ ಪರಿಣಾಮ. ಮಕ್ಕಳಿಗೆ ಬದುಕಲು ಇನ್ಸುಲಿನ್ ಬೇಕು ಮತ್ತು ಇನ್ಸುಲಿನ್ ಅನ್ನು ಹೊರಗಿನಿಂದ ಅವರ ದೇಹಕ್ಕೆ ನೀಡಬೇಕಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹವನ್ನು ಎಳೆಹರೆಯದ ಮಧುಮೇಹ (ಜುವೆನೈಲ್ ಡಯಾಬಿಟಿಸ್) ಅಥವಾ ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್ ಎಂದು ಕರೆಯಲಾಗುತ್ತದೆ. ಮಕ್ಕಳಲ್ಲಿ ಕಾಣಿಸುವ ಟೈಪ್–1 ಡಯಾಬಿಟಿಸ್ ಆರಂಭದಲ್ಲಿ ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದರೆ ಇದರ ಬಳಿಕ ನಿಮಗೆ ಮಗುವಿಗೆ ಹೇಗೆ ಇಂಜೆಕ್ಷನ್ ನೀಡಬೇಕು, ಕಾರ್ಬೋಹೈಡ್ರೇಟ್ಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಲೆಕ್ಕ ಹಾಕಬೇಕು ಎಂದು ತಿಳಿಯುವುದು. ಇದಕ್ಕೆ ನಿರಂತರ ಕಾಳಜಿ ಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ನೀಡುವಿಕೆ ವಿಚಾರದಲ್ಲಿ ಕೆಲವೊಂದು ಮುಂದುವರಿದಿರುವ ವಿಧಾನಗಳು ಬಂದಿರುವುದರಿಂದ ದಿನನಿತ್ಯವು ನಿರ್ವಹಿಸುವುದು ಅಷ್ಟು ಕಷ್ಟವೇನಲ್ಲ.

ಮಕ್ಕಳಲ್ಲಿ ಟೈಪ್-1 ಮಧುಮೇಹ ತಿಳಿಯುವುದು ಹೇಗೇ?
ಟೈಪ್‌–1 ಡಯಾಬಿಟಿಸ್‌ ಇರುವ ಮಕ್ಕಳಲ್ಲಿ ಅತಿಯಾದ ಮೂತ್ರ ವಿಸರ್ಜನೆ, ಬಾಯಾರಿಕೆ, ಹಸಿವು, ತೂಕ ನಷ್ಟ, ವಾಕರಿಕೆ, ವಾಂತಿ ಮತ್ತು ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಮಕ್ಕಳು ಹುಟ್ಟುತ್ತಲೇ ಈ ಎಲ್ಲಾ ಲಕ್ಷಣಗಳೊಂದಿಗೂ ಹುಟ್ಟಬಹುದು. ಈ ಲಕ್ಷಣಗಳು ಕಂಡು ಬರುತ್ತಿದ್ದರೆ, ತಡ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ADVERTISEMENT

ನಿಯಂತ್ರಣ ಹೇಗೆ?
ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಅತ್ಯಗತ್ಯ. ಹೆಚ್ಚು ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್‌ ಸೇವನೆ ಹೆಚ್ಚಾಗಿರಲಿ. ಸಕ್ಕರೆ, ಕಾರ್ಬೋಹೈಡ್ರೇಟ್‌ ಆಹಾರದ ಮೇಲೆ ಸಂಪೂರ್ಣ ನಿಯಂತ್ರಣ ಇರಲಿ.
ನಿಯಮಿತ ಏರೋಬಿಕ್ ವ್ಯಾಯಾಮ, ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವುದು ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ. ಜೊತೆಗೆ, ಸಕ್ಕರೆ ಮಟ್ಟವನ್ನು ಪ್ರತಿ ನಿತ್ಯ ತಪಾಸಣೆ ಮಾಡುತ್ತ ಬರುವುದರಿಂದ ಸಕ್ಕರೆ ಮಟ್ಟದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಮಕ್ಕಳಿಗೂ ಇನ್ಸುಲಿನ್ ಅಗತ್ಯವಿದೆಯೇ?
ಕೆಲವು ಮಕ್ಕಳಿಗೆ ಟೈಪ್‌-1 ಮಧುಮೇಹ ಮಿತಿಮೀರಿದ್ದರೆ, ಖಂಡಿತ ಇನ್ಸುಲಿನ್‌ ಅಗತ್ಯವಿರುತ್ತದೆ. ಆದರೆ, ಎಲ್ಲಾ ಮಕ್ಕಳಿಗೂ ಅಲ್ಲ. ಮಕ್ಕಳಲ್ಲಿ ಡಯಾಬಿಟಿಸ್‌ನ ಲಕ್ಷಣ ಕಂಡು ಬರುತ್ತಿದ್ದಂತೆಯೇ ಆಸ್ಪತ್ರೆಗೆ ಕರೆದು ತರುವುದರಿಂದ ಸೂಕ್ತ ಚಿಕಿತ್ಸೆ ಹಾಗೂ ಜೀವನ ಶೈಲಿ ಬದಲಾವಣೆಯಿಂದ ಡಯಾಬಿಟಿಸ್‌ ಮಟ್ಟವನ್ನು ಇಳಿಸಿಕೊಳ್ಳಬಹುದು.

ಮಕ್ಕಳ ಬಗ್ಗೆ ಜಾಗೃತಿ ಇರಲಿ
ಮಧುಮೇಹ ಹೊಂದಿರುವ ಮಕ್ಕಳ ಬಗ್ಗೆ ಪೋಷಕರು ವಿಶೇಷವಾದ ಕಾಳಜಿ ತೆಗೆದುಕೊಳ್ಳಬೇಕು. ಮುಖ್ಯವಾಗಿ ಮಕ್ಕಳ ಆಹಾರಕ್ರಮದ ಬಗ್ಗೆ, ದೈಹಿಕ ಚಟುವಟಿಕೆ ಬಗ್ಗೆ ಎಚ್ಚರಿಕೆವಹಿಸಬೇಕು. ಮಗುವಿಗೆ ಹಸಿವಾಗದಂತೆ ನೋಡಿಕೊಳ್ಳುವುದು, ಪೌಷ್ಠಿಕ ಆಹಾರ ಸೇವನೆ ಬಗ್ಗೆ ಗಮನ ಕೊಡುವುದು, ಮಕ್ಕಳು ಮಾನಸಿಕವಾಗಿ ಕುಗ್ಗದೇ ಇರುವಂತೆ ನೋಡಿಕೊಳ್ಳುವುದು, ಮಧುಮೇಹದ ಬಗ್ಗೆ ಸೂಕ್ತ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸುವುದು ಸೇರಿದಂತೆ ಈ ಹೋರಾಟದಲ್ಲಿ ಮಕ್ಕಳೊಂದಿಗೆ ನಿಲ್ಲುವ ಮೂಲಕ ಮಾನಸಿಕ ಸ್ಥೈರ್ಯ ನೀಡುವುದು ಬಹುಮುಖ್ಯ. ಈ ಧೈರ್ಯ ಮಕ್ಕಳು ಮಧುಮೇಹವನ್ನು ಗೆದ್ದು ಬರಲು ಸಹಾಯ ಮಾಡುತ್ತದೆ.

(ಲೇಖಕರು ಫೋರ್ಟಿಸ್‌ ಆಸ್ಪತ್ರೆಯ ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರದ ಸಲಹೆಗಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.