ADVERTISEMENT

ಕ್ಷೇಮ ಕುಶಲ: ನರಗಳ ದೌರ್ಬಲ್ಯ ನರರಿಗೆ ತಿಳಿದಿರಬೇಕು!

ಡಾ. ವೀಣಾ ಎನ್‌.ಸುಳ್ಯ
Published 7 ಅಕ್ಟೋಬರ್ 2025, 0:30 IST
Last Updated 7 ಅಕ್ಟೋಬರ್ 2025, 0:30 IST
   
ನಿರಂತರ ವ್ಯಾಯಾಮ, ಪೌಷ್ಟಿಕ ಆಹಾರಸೇವನೆ, ಒತ್ತಡಗಳ ಸರಿಯಾದ ನಿರ್ವಹಣೆ ಇವು –ನರಗಳ ದೌರ್ಬಲ್ಯವನ್ನು ತಗ್ಗಿಸಬಹುದು. ನರಗಳ ದೌರ್ಬಲ್ಯಕ್ಕೆ ಕಾರಣಗಳನ್ನು ಕಂಡುಹಿಡಿಯಲು ಚಿಕಿತ್ಸೆಯನ್ನು ಆರಂಭಿಸಿದರೆ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದು

ನರಗಳು ನಮ್ಮ ದೇಹದಲ್ಲಿ ಎಲ್ಲೆಲ್ಲೂ ವ್ಯಾಪಿಸಿರುವ ಬೆಳ್ಳನೆ ನೂಲಿನಂತೆ ಕಾಣುವ ಒಂದು ಜೀವಂತ ರಚನೆ. ಮಿದುಳು ಮತ್ತು ಮಿದುಳುಬಳ್ಳಿಯಿಂದ ಪ್ರಾರಂಭವಾಗಿ, ಉದ್ದಕ್ಕೆ ಕ್ರಮಿಸುತ್ತ ಪ್ರತಿಯೊಂದು ನರವೂ ಕವಲೊಡೆಯುತ್ತಾ, ಕಿರಿದಾಗುತ್ತಾ ಕೊನೆಗೆ ಯಾವುದಾದರೂ ಗ್ರಂಥಿ, ಮೂಳೆ, ಅಂಗ ಅಥವಾ ಚರ್ಮದ ಬುಡವನ್ನು ಹೊಕ್ಕು ಕಣ್ಮರೆಯಾಗುತ್ತದೆ.

ನರಗಳನ್ನು ಜ್ಞಾನವಾಹಿತಂತುಗಳು ಮತ್ತು ಕ್ರಿಯಾವಹಿತಂತುಗಳು ಎಂದು ಕರೆಯಬಹುದು. ಸಂವೇದನೆಗಳನ್ನು ಹೊರವಲಯದಿಂದ ಒಳಗೆ ತೆಗೆದುಕೊಂಡು ಹೋಗುವ (ಸೆನ್ಸರಿ) ಮತ್ತು ಅದಕ್ಕೆ ತಕ್ಕದಾದ ಪ್ರತಿಕ್ರಿಯೆಗಳನ್ನು ನಿರ್ವಹಿಸಲು ಸೂಚನೆಗಳನ್ನು ನಿರ್ದಿಷ್ಟ ಸ್ಥಳಕ್ಕೆ ಒಯ್ಯುವ (ಮೋಟಾರ್) ನರಗಳ ಸಮೂಹದ ಕಟ್ಟುಗಳನ್ನೇ ‘ನರಗಳು’ ಎಂದು ಕರೆಯುತ್ತೇವೆ.

ನರಗಳ ಕಟ್ಟುಗಳಲ್ಲಿ ಬೇರೆ ಬೇರೆ ಸಂವೇದನೆಗಳನ್ನು ಸಾಗಿಸಲು ಬೇರೆ ಬೇರೆ ನರಗಳು ಇರುತ್ತವೆ. ಉದಾಹರಣೆಗೆ, ಮೃದು ಸ್ಪರ್ಶ/ ಜೋರಾದ ಸ್ಪರ್ಶ, ತಾಪಮಾನಗಳನ್ನು ತಿಳಿಸಲು ತಂಪು/ ಬಿಸಿ, ಕಂಪನ ಮತ್ತು ನೋವನ್ನು ತಿಳಿಸಲು ಬೇರೆ ಬೇರೆ ನರಗಳು ಇರುತ್ತವೆ.

ADVERTISEMENT

ಈ ನರಗಳಿಗೆ ‘ಮೈಲಿನ್ ಶೀತ್’ ಎನ್ನುವ ಪೊರೆ ಇರುತ್ತದೆ. ಇದರಿಂದ ಸಂದೇಶಗಳನ್ನು ವೇಗವಾಗಿ ಸಾಗಿಸಲು ಸಾಧ್ಯವಾಗುತ್ತದೆ. ನರಮಂಡಲವನ್ನು ಸ್ಥೂಲವಾಗಿ ಐಚ್ಛಿಕ ನರಮಂಡಲ ಮತ್ತು ಅನೈಚ್ಛಿಕ ನರಮಂಡಲ ಎಂದು ವಿಭಾಗಿಸಬಹುದು. ಸ್ಪಷ್ಟವಾಗಿ ಕಂಡುಬರುವ ದೇಹದ ಎಲ್ಲ ಚಲನೆಗಳು ಐಚ್ಚಿಕ ನರಮಂಡಲದ ವ್ಯಾಪ್ತಿಗೆ ಬರುತ್ತವೆ. ಹೃದಯ, ಶ್ವಾಸಕೋಶ, ಮೂತ್ರನಾಳಗಳು, ಜೀರ್ಣಕ್ರಿಯೆಯ ಅಂಗಗಳು ರಸಗ್ರಂಥಿಗಳು ಇವುಗಳ ಕಾರ್ಯಗಳನ್ನು ನಿಯಂತ್ರಿಸಲು ಸಹಕರಿಸುವ ನರಗಳು ಅನೈಚ್ಛಿಕ.

ನರಗಳ ಕಾರ್ಯನಿರ್ವಹಣೆಗೆ ಅನೇಕ ಅಂಶಗಳು ಮುಖ್ಯವಾಗುತ್ತವೆ. ಖನಿಜಗಳಾದ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್‌ಗಳಾದ B1, B6, B12, ಜೊತೆಗೆ ಆಕ್ಸಿಜನ್–ಗ್ಲುಕೋಸ್ – ಇವು ಅವಶ್ಯಕ ಪ್ರಮಾಣದಲ್ಲಿ ಇದ್ದಾಗ ಮಾತ್ರ ನರಗಳು ತಮ್ಮ ಕೆಲಸವನ್ನು ನಿರ್ವಹಿಸಲು ಸಾಧ್ಯ. ಈ ಅಂಶಗಳಲ್ಲಿ ಏರುಪೇರಾದಾಗ ನರಗಳ ಕಾರ್ಯ ಕುಂಠಿತಗೊಳ್ಳುವುದಲ್ಲದೆ, ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವೂ ಉಂಟಾಗುತ್ತದೆ.

ನರದೌರ್ಬಲ್ಯದ ಲಕ್ಷಣಗಳು:

ಐಚ್ಚಿಕ ನರಗಳ ದೌರ್ಬಲ್ಯ:

ದೇಹ ಜುಮ್ಮೆನ್ನಿಸುವುದು, ಸೂಜಿ ಚುಚ್ಚಿದಂತೆ ಆಗುವುದು; ಕುತ್ತಿಗೆಯಿಂದ ಕೈಗೆ ಹರಡುವ ನೋವು, ಬೆನ್ನಿನಿಂದ ಕಾಲಿಗೆ ಹರಡುವ ನೋವು; ಕೈ–ಕಾಲುಗಳಲ್ಲಿ ಶಕ್ತಿ ಕಡಿಮೆ ಆಗುವುದು; ವಸ್ತುಗಳನ್ನು ಎತ್ತಿಕೊಳ್ಳಲು ಕಷ್ಟವಾಗುವುದು, ಮುಷ್ಟಿಯಲ್ಲಿ ಬಿಗಿತ ಕಡಿಮೆಯಾಗುವುದು, ಬರೆಯಲು, ತಿನ್ನಲು, ನಡೆಯಲು ಕಷ್ಟವಾಗುವುದು, ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದಿರುವುದು, ಸಮತೋಲನ ತಪ್ಪುವುದು.

ಅನೈಚ್ಚಿಕ ನರಗಳ ದೌರ್ಬಲ್ಯ:

ಹೃದಯ ಬಡಿತದಲ್ಲಿ ಏರುಪೇರು, ನೋವು ಇಲ್ಲದ ಹೃದಯಾಘಾತ; ರಕ್ತ
ದೊತ್ತಡದ ಏರುಪೇರು; ಮೂತ್ರವಿಸರ್ಜನೆಯಲ್ಲಿ ಸಮಸ್ಯೆಗಳು; ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆಗಳು; ಲೈಂಗಿಕ ತೊಂದರೆಗಳು (ನಿಮಿರುವಿಕೆಯ ತೊಂದರೆ; ಅತಿಯಾಗಿ ಬೆವರುವುದು; ತಲೆಸುತ್ತು; ಮೂರ್ಛೆ ಹೋಗುವುದು.

ಕಾರಣಗಳು

*ಗಡ್ಡೆಗಳು, ರಕ್ತನಾಳಗಳು, ಮೂಳೆ, ಅಸ್ಥಿರಜ್ಜುಗಳಿಂದ ನರಗಳ ಮೇಲೆ ಒತ್ತಡ; ಮಿದುಳಿನಲ್ಲಿ ಅಥವಾ ಬೆನ್ನುಹುರಿ ಯಿಂದ ಹೊರಟಿರುವ ನರಗಳ ಮೇಲೆ ಒತ್ತಡ ಬಿದ್ದಾಗ.

*ಸಕ್ಕರೆ ನಿಯಂತ್ರಣದಲ್ಲಿ ಏರುಪೇರಾದಾಗ ನರದ ಜೀವಕೋಶಗಳಿಗೆ, ನರದ ಪದರಗಳಿಗೆ ಹಾನಿ ಉಂಟಾಗುತ್ತದೆ; ಸಣ್ಣ ಸಣ್ಣ ರಕ್ತನಾಳಗಳಲ್ಲಿಯೂ ಉಂಟಾದ ತೊಂದರೆಗಳಿಂದ ನರಗಳ ರಕ್ತಸಂಚಾರದಲ್ಲಿ ವ್ಯತ್ಯಾಸ ಉಂಟಾಗುತ್ತದೆ.

*ಮೋಟಾರ್ ನ್ಯೂರಾನ್ ಡಿಸೀಸ್: ನರದ ಮುಖ್ಯ ಭಾಗವಾದ ನ್ಯೂಕ್ಲಿಯಸ್ ನಿಷ್ಕ್ರಿಯವಾದಾಗ ಆ ನರಗಳಿಗೆ ಸಂಬಂಧಿಸಿದ ಸ್ನಾಯುಗಳು ಕೆಲಸ ಮಾಡಲು ಸಾಧ್ಯವಾಗದೆ ಹೋಗುತ್ತದೆ.

*ವಿಟಮಿನ್ B1, B6, B12 ಕೊರತೆ.

*ಸೀಸ, ತಾಮ್ರ, ಆರ್ಸೆನಿಕ್ ಲೋಹಗಳ ಮಟ್ಟ ದೇಹದಲ್ಲಿ ಹೆಚ್ಚಾಗುವುದು.

*ಸಿಪಿಲಿಸ್ ಹರ್ಪಿಸ್ ಜೋಸ್ಟರ್ (ಸರ್ಪಸುತ್ತು), ಎಚ್ಐವಿ.

*ಅತಿಯಾದ ಮದ್ಯಸೇವನೆ.

*ಆನುವಂಶಿಕ ಕಾಯಿಲೆಗಳು.

*ಕಾರ್ಪಲ್ ಟನ್ನೆಲ್ ಸಿಂಡ್ರೋಮ್: ಮಣಿಗಂಟಿನಲ್ಲಿ ನರದ ಮೇಲಿನ ಒತ್ತಡ.

*ಸರಿಯಾಗಿ ಹೊಂದಿಕೊಳ್ಳದ ಬ್ರೇಸ್, ಪ್ಲಾಸ್ಟರ್, ಊರುಗೋಲುಗಳು ನರಗಳ ಮೇಲೆ ಒತ್ತಡ ತರಬಹುದು.

ಚಿಕಿತ್ಸೆ:

ನರಗಳ ದೌರ್ಬಲ್ಯಕ್ಕೆ ಕಾರಣಗಳನ್ನು ಕಂಡು ಹಿಡಿದು, ತಕ್ಕ ಚಿಕಿತ್ಸೆಯನ್ನು ಕೊಡಬೇಕು. ಸಮಸ್ಯೆಯ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳಬೇಕು. ಇದಕ್ಕಾಗಿ ದೈಹಿಕ ಪರೀಕ್ಷೆ, ರಕ್ತಪರೀಕ್ಷೆ, ನರಗಳ ಪರೀಕ್ಷೆ ‘NCS’ (ನರ್ವ್ ಕಂಡಕ್ಷನ್ ಸ್ಟಡಿ),‘EMG’ (ಎಲೆಕ್ಟ್ರೋ ಮಯಾಗ್ರಫಿ), ಮಾಂಸಖಂಡಗಳ ಸಂಕೋಚನ–ವಿಕಚನ ವಿಕಸನಗಳ ಪರೀಕ್ಷೆ, ಎಕ್ಸ್‌–ರೇ, ಸಿಟಿಸ್ಕ್ಯಾನ್, ಎಂ. ಆರ್. ಐ. (ಇವು ಬೆನ್ನುಮೂಳೆ, ಬೆನ್ನುಹುರಿಗಳ ತೊಂದರೆಗಳನ್ನು ಗಮನಿಸಲು) ಮುಂತಾದವು ನೆರವಾಗುತ್ತವೆ ಮಧುಮೇಹವನ್ನು ನಿಯಂತ್ರಣಕ್ಕೆ ತರಬೇಕು. ವಿಟಮಿನ್‌ ಔಷಧಗಳ (ನ್ಯೂರೋ ವಿಟಮಿನ್ಸ್) ಸೇವನೆ ಬೇಕಾಗಬಹುದು. ಒತ್ತಡಕ್ಕೆ ಸಿಕ್ಕಿಬಿದ್ದ ನರಗಳ ಒತ್ತಡವನ್ನು ನಿವಾರಿಸಿ, ಹಾನಿಗೊಳಗಾದ ನರಗಳನ್ನು ಸರಿಪಡಿಸಲು ಕೆಲವೊಮ್ಮೆ ಶಸ್ತ್ರಕ್ರಿಯೆ ಬೇಕಾಗಬಹುದು.

ವ್ಯಾಯಾಮಗಳ ಮೂಲಕ ಕೈ–ಕಾಲುಗಳ ಚಲನಶೀಲತೆಯನ್ನು ಹೆಚ್ಚಿಸಬೇಕು; ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಯೋಗ, ಪ್ರಾಣಾಯಾಮ, ಧ್ಯಾನಗಳು ನೆರವಾಗಬಲ್ಲವು.

ಆರೋಗ್ಯಕ್ಕೆ ಮಾರಕವಾಗಿರುವ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ಸಮತೋಲಿತ ಆಹಾರಸೇವನೆ, ನಿಯಮಿತ ನಿದ್ರೆ, ಅಗತ್ಯ ನೀರಿನ ಸೇವನೆ ಮುಖ್ಯ. ಬಾಳೆಹಣ್ಣು, ಕಿತ್ತಳೆ, ದಾಳಿಂಬೆ, ದ್ರಾಕ್ಷಿ, ಹಾಲು, ಸೊಪ್ಪು, ಮೊಟ್ಟೆಗಳಂಥ ಆಹಾರ ಸೇವನೆಯನ್ನು ರೂಢಿಸಿ
ಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.