ADVERTISEMENT

ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕ ಅಭಿಯಾನ

ಚಂದ್ರಪ್ಪ ಎಂ.
Published 1 ಸೆಪ್ಟೆಂಬರ್ 2018, 9:46 IST
Last Updated 1 ಸೆಪ್ಟೆಂಬರ್ 2018, 9:46 IST
ಕಲೆ: ಡಿ.ವಿ.ಸಾಂಗಳೇಕರ್
ಕಲೆ: ಡಿ.ವಿ.ಸಾಂಗಳೇಕರ್   

ಹಸಿವು, ಅಪೌಷ್ಟಿಕತೆ ನಿವಾರಣೆ ಜಗತ್ತಿನ ಮುಂದಿರುವ ಎರಡು ಜ್ವಲಂತ ಸಮಸ್ಯೆಗಳು. ಇವುಗಳ ನಿರ್ಮೂಲನೆಗಾಗಿ ವಿಶ್ವಸಂಸ್ಥೆ, ಸ್ಥಳೀಯ ಸರ್ಕಾರ, ಸಂಘ ಸಂಸ್ಥೆಗಳು ಅವಿರತ ಶ್ರಮಿಸುತ್ತಿವೆ. ಆದರೂ ಅಪೌಷ್ಟಿಕತೆ ನಿರ್ಮೂಲನೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ವಿಶ್ವಸಂಸ್ಥೆ, ಯೂನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸಹಭಾಗಿತ್ವದ ಸಮೀಕ್ಷೆ ಪ್ರಕಾರ ವಿಶ್ವದಲ್ಲಿ ಹಲವು ರಾಷ್ಟ್ರಗಳಲ್ಲಿ ಅಪೌಷ್ಟಿಕತೆ ಪ್ರಮಾಣ ಏರಿಕೆ ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿ ವರ್ಷ 5 ವರ್ಷದೊಳಗಿನ 30 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಅಪೌಷ್ಟಿಕತೆಯ ಸಮಸ್ಯೆ ನಿವಾರಣೆಗಾಗಿ ಪ್ರತಿ ವರ್ಷ ಪೌಷ್ಟಿಕ ಅಭಿಯಾನ ನಡೆಸಲಾಗುತ್ತಿದೆ. ಭಾರತದಲ್ಲಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಸೆಪ್ಟೆಂಬರ್ 1ರಿಂದ7ರವರೆಗೆ ನಡೆಯಲಿದೆ.

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಅತಿಯಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ 1,218 ಮಕ್ಕಳನ್ನು ಗುರುತಿಸಲಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಇಂಥ ಮಕ್ಕಳ ಆರೋಗ್ಯದ ಮೇಲೆ ಸರ್ಕಾರ ನಿಗಾ ಇರಿಸಿದೆ. ಅದಕ್ಕಾಗಿ ಅನೇಕ ಯೋಜನೆಗಳನ್ನೂ ಜಾರಿಗೆ ತಂದಿದೆ. ಜಿಲ್ಲಾ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು ರಾಷ್ಟ್ರೀಯ ಪೌಷ್ಟಿಕ ಸಪ್ತಾಹದ ಅಂಗವಾಗಿ ಇಡೀ ತಿಂಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪೋಷಣಾ ಅಭಿಯಾನ ಹೆಸರಿನಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ರಕ್ಷಣೆ, ಅಪೌಷ್ಟಿಕತೆಯಿಂದ ಎದುರಾಗುವ ಸಮಸ್ಯೆಗಳು, ಅಪೌಷ್ಟಿಕತೆ ಕುರಿತು ಪೋಷಕರಿಗೆ ತಿಳಿವಳಿಕೆ, ಜಾಗೃತಿ ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

ADVERTISEMENT

ಮೊದಲ ವಾರ: ಎದೆ ಹಾಲು ಉಣಿಸುವುದು, ಪೂರಕ ಪೌಷ್ಟಿಕ ಆಹಾರ, ಅಪೌಷ್ಟಿಕ ಮಕ್ಕಳ ಬೆಳವಣಿಗೆ ಮೇಲೆ ನಿಗಾ ವಹಿಸುವಿಕೆ, ಚುಚ್ಚುಮದ್ದು ಹಾಗೂ ಪೌಷ್ಟಿಕ ಆಹಾರ ತಯಾರಿಕೆ ಬಗ್ಗೆ ತಜ್ಞರಿಂದ ಮಕ್ಕಳ ತಾಯಂದಿರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗುತ್ತದೆ.

ಎರಡನೇ ವಾರ: ಗರ್ಭಿಣಿಯರಿಗೆ ಕ್ಯಾಲ್ಶಿಯಂ, ಕಬ್ಬಿಣಾಂಶದ ಮಾತ್ರೆ ನೀಡುವುದು, ಕಿಶೋರಿಯರಿಗೆ ಆರೋಗ್ಯ ತಪಾಸಣೆ, ಜಂತುಹುಳು ಮಾತ್ರೆ ನೀಡಲಾಗುವುದು.

ಮೂರನೇ ವಾರ: ಅತಿಸಾರ ಭೇದಿ ನಿರ್ಮೂಲನೆ, ಮಳೆಗಾಲದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು, ಶುದ್ಧ ಕುಡಿಯುವ ನೀರು, ಶೌಚಾಲಯ ಬಳಕೆಯ ಬಗ್ಗೆ ಅರಿವು ಮೂಡಿಸಲಾಗುವುದು.

ನಾಲ್ಕನೇ ವಾರ: ಅಪೌಷ್ಟಿಕತೆ ನಿರ್ಮೂಲನೆ ಕುರಿತು ಗ್ರಾಮ ಪಂಚಾಯ್ತಿ ಸದಸ್ಯರು, ಸ್ತ್ರೀಶಕ್ತಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡು ಜಾಗೃತಿ ಜಾಥಾ ನಡೆಸಲಾಗುವುದು. ಹೆಣ್ಣು ಮಕ್ಕಳ ಶಿಕ್ಷಣ, ಆಹಾರ ಕ್ರಮ, ಬಾಲ್ಯವಿವಾಹದ ಬಗ್ಗೆ ಅರಿವು ಮೂಡಿಸಲಾಗುವುದು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಿಲ್ಲಾ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಕುಕನೂರು ‘ಮೆಟ್ರೊ’ಗೆ ವಿವರಿಸಿದರು.

ಅತಿಯಾದ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು(ಎಸ್‌ಎಎಂ) ಹಾಗೂ ಮಧ್ಯಮ ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ(ಎಂಎಎಂ) ಬಗ್ಗೆಯೂ ನಿಗಾ ವಹಿಸಲಾಗಿದೆ. ನಗರ ಭಾಗದ ಕೊಳೆಗೇರಿ ಪ್ರದೇಶಗಳು, ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ಮಕ್ಕಳ ನಿಯಮಿತ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಮಕ್ಕಳ ತೂಕ, ಎತ್ತರ ಪರೀಕ್ಷೆ, ಪೌಷ್ಟಿಕ ಆಹಾರ ಪದಾರ್ಥಗಳ ಪೂರೈಕೆ ಮಾಡಿ, ಅಪೌಷ್ಟಿಕತೆ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ ಎಂದು ಕುಕನೂರು ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ವಾರಕ್ಕೆ ಐದು ದಿನ ಮೊಟ್ಟೆ, ಹಾಲು ವಿತರಣೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಪದಾರ್ಥಗಳ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಮಗುವಿನ ಆರೋಗ್ಯ ರಕ್ಷಣೆಗಾಗಿ ವಾರ್ಷಿಕ ₹2ಸಾವಿರ ವೆಚ್ಚದಲ್ಲಿ ಔಷಧ ಪೂರೈಸಲಾಗುತ್ತಿದೆ ಎಂದರು.

ಇದು ಸರ್ಕಾರದ ಮಟ್ಟದಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ಕೈಗೊಂಡ ಕ್ರಮಗಳಾದರೆ, ಸಂಘ ಸಂಸ್ಥೆಗಳೂ ಕೂಡ ಸರ್ಕಾರದ ಸಹಭಾಗಿತ್ವದಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ಹಲವು ಉಪಕ್ರಮಗಳನ್ನು ಕೈಗೊಂಡಿವೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಈ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನು ಇರಿಸಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ‘ನಗು–ಮಗು’ ಎಂಬ ಯೋಜನೆ ಮೂಲಕ ಅಪೌಷ್ಟಿಕ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯೊಂದಿಗೆ ಮುನ್ನಡೆದಿದೆ. ಟಾಟಾ ಮಾರ್ಕೋ ಪೋಲೊ ಮೋಟಾರ್ಸ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಿದೆ. 1,500 ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಯಲ್ಲಿ ತೊಡಗಿಸಿಕೊಂಡಿದೆ. ಪೌಷ್ಟಿಕಯುಕ್ತ ಆಹಾರ ಸೇವನೆ, ಅಗತ್ಯ ವೈದ್ಯಕೀಯ ನೆರವು, ನೈರ್ಮಲ್ಯ ಜಾಗೃತಿ ಮೂಡಿಸುತ್ತಿದೆ. ಈ ಉಪಕ್ರಮಗಳನ್ನು ಕೈಗೊಂಡ ಬಳಿಕ ಶೇ 70ರಷ್ಟು ಮಕ್ಕಳ ದೇಹದ ತೂಕ ಏರಿಕೆಯಾಗಿದೆ ಎಂದು ಫೌಂಡೇಷನ್ ಮಾಹಿತಿ ಹಂಚಿಕೊಂಡಿದೆ.

ಉಪಕ್ರಮಗಳು ಏನು?

ದತ್ತಾಂಶ ಸಂಗ್ರಹ: ಅಪೌಷ್ಟಿಕ ಮಕ್ಕಳ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ, ನೀರು ಹಾಗೂ ನೈರ್ಮಲ್ಯ ಪರಿಸ್ಥಿತಿ, ಕುಟುಂಬಗಳ ಆಹಾರ ಕ್ರಮದ ದತ್ತಾಂಶ ಸಂಗ್ರಹಿಸಿ ವಿಶ್ಲೇಷಿಸುವುದು

ಪೌಷ್ಟಿಕಾಂಶ ನೆರವು: ಎಲ್ಲ ಅಪೌಷ್ಟಿಕ ಮಕ್ಕಳಿಗೆ ಸ್ಪಿರುಲಿನಾ, ಬಾಳೆಹಣ್ಣು ಹಾಗೂ ಶೇಂಗಾ (ಜೀನತ್ ಪೀನಟ್ ಪೇಸ್ಟ್) ವಿತರಣೆ.

ವೈದ್ಯಕೀಯ ನೆರವು: ಅಪೌಷ್ಟಿಕ ಮಕ್ಕಳ ಆರೋಗ್ಯ ಸ್ಥಿತಿಗತಿ ಪರಿಶೀಲನೆಗೆ ನಿಯಮಿತ ತಪಾಸಣೆ, ಆರೋಗ್ಯ ಶಿಬಿರ ಏರ್ಪಡಿಸುವುದು.

ನೈರ್ಮಲ್ಯ ನೆರವು: ಅಪೌಷ್ಟಿಕ ಮಕ್ಕಳ ತಾಯಂದಿರು, ಗರ್ಭಿಣಿಯರಿಗೆ ಶುಚಿತ್ವ, ಆರೋಗ್ಯ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು. ತರಬೇತಿ ಹಾಗೂ ಕಾರ್ಯಾಗಾರಗಳನ್ನು ನಡೆಸುವುದು.

ತರಬೇತಿ: ಆಹಾರ ಕ್ರಮ, ಎದೆ ಹಾಲು ಉಣಿಸುವುದು, ಸಮತೋಲಿತ ಆಹಾರ ನೀಡುವ ಕುರಿತು ತಾಯಂದಿರಿಗೆ ತರಬೇತಿ ನೀಡುವ ಮೂಲಕ ಅಪೌಷ್ಟಿಕತೆ ನಿರ್ಮೂಲನೆಗೆ ದೇಶಪಾಂಡೆ ಫೌಂಡೇಷನ್ ಪಣ ತೊಟ್ಟಿದೆ.

ಸೂಕ್ತ ಪೌಷ್ಟಿಕಾಂಶದ ಚಿಕಿತ್ಸೆ ಅಗತ್ಯ...

ಬಹುತೇಕ ವೃತ್ತಿನಿರತ ಮಹಿಳೆ ಹಾಗೂ ಗೃಹಿಣಿಯರಲ್ಲಿ ಕ್ಯಾಲ್ಶಿಯಂ ಹಾಗೂ ಕಬ್ಬಿಣಾಂಶದ ಕೊರತೆ ಇರುತ್ತದೆ. ಅಂತಹವರಿಗೆ ಸೂಕ್ತ ಪೌಷ್ಟಿಕಾಂಶದ ಚಿಕಿತ್ಸೆ ಅಗತ್ಯವಿರುತ್ತದೆ. ಸರ್ಕಾರ ಗರ್ಭಿಣಿಯರಿಗೆ ಕಬ್ಬಿಣಾಂಶ ಮಾತ್ರೆ ನೀಡುತ್ತಿದೆ. ಆದರೆ, ಕೆಲವರಿಗೆ ಅದು ಹೊಂದುವುದಿಲ್ಲ. ನಿಂಬೆ ಹಣ್ಣಿನ ಪಾನಕ ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ಲಭ್ಯವಾಗಲಿದೆ ಎಂದು ಪೌಷ್ಟಿಕಾಂಶ ತಜ್ಞೆ ಸೋನಲ್ ಮೆಹ್ತಾ ‘ಮೆಟ್ರೊ’ಗೆ ತಿಳಿಸಿದರು.

ಮಕ್ಕಳಿಗೆ ಬಿಸ್ಕತ್ ನೀಡುವುದರಿಂದ ಪ್ರೊಟೀನ್ ಹಾಗೂ ವಿಟಮಿನ್ ಕೊರತೆ ಉಂಟಾಗುತ್ತದೆ. ಅನ್ನ, ಇಡ್ಲಿಯಲ್ಲೂ ಸಾಕಷ್ಟು ಪ್ರೊಟೀನ್‌ಗಳಿವೆ. ಆದರೆ ಅದನ್ನು ಕ್ರಮಬದ್ಧವಾಗಿ ಮಾಡಿ ಉಣ ಬಡಿಸಬೇಕು. ಸಿರಿಧಾನ್ಯಗಳಿಂದ ಮಾಡಿದ ಉಂಡೆಗಳನ್ನು ನೀಡುವುದರಿಂದ ಪ್ರೊಟೀನ್ ಹಾಗೂ ಪೈಬರ್ ಅಂಶ ಮಕ್ಕಳ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಇಡುತ್ತದೆ.

ಸೆಪ್ಟೆಂಬರ್ 1ರಿಂದ 7ರವರೆಗೆ ರಾಷ್ಟ್ರೀಯ ಪೌಷ್ಟಿಕ ಸಪ್ತಾಹದ ಅಂಗವಾಗಿ ಆರು ತಿಂಗಳಿಂದ ಆರು ವರ್ಷದ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಉಚಿತ ಸಮಾಲೋಚನೆ(ಕೌನ್ಸೆಲಿಂಗ್) ನೀಡಲಾಗುವುದು. ತೂಕ ಹಾಗೂ ಎತ್ತರ ಪರಿಶೀಲನೆ, ಅವರಿಗೆ ಸರಿ ಹೊಂದುವ ಪೌಷ್ಟಿಕ ಆಹಾರ ಶಿಫಾರಸು ಮಾಡಲಾಗುವುದು. ಶಾಲೆಗಳಲ್ಲೂ ಸಪ್ತಾಹದ ಅವಧಿಯಲ್ಲಿ ಸಂಜೆ 5ರಿಂದ 8ರವರೆಗೆ ಶಿಬಿರ ನಡೆಸಲಾಗುವುದು. ತಾಯಂದಿರಿಗೆ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮಕ್ಕಳಿಗೆ ಟಿಫಿನ್ ಕೊಡುವ ಬಗ್ಗೆ ವೃತ್ತಿನಿರತ ಮಹಿಳೆಯರಿಗೆ ಸಲಹೆಗಳನ್ನು ನೀಡಲಾಗುವುದು. ಊಟೋಪಚಾರದ ಕ್ಯಾಲೆಂಡರ್ ಬಗ್ಗೆ ತಿಳಿಸಲಾಗುವುದು ಎಂದು ಸೋನಲ್ ಮೆಹ್ತಾ ತಿಳಿಸಿದರು.

ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್ ಪಡೆಯುವವರಿಗೆ ಸಪ್ತಾಹದ ಅವಧಿಯಲ್ಲಿ ಉಚಿತ ಸಮಾಲೋಚನೆ ನೀಡಲಾಗುವುದು. ಮಾಹಿತಿಗೆ 9448450312 ಸಂಖ್ಯೆಗೆ ಕರೆ ಮಾಡಿ ಅಪಾಯಿಂಟ್‌ಮೆಂಟ್ ಪಡೆದು ನೋಂದಣಿ ಮಾಡಿಕೊಳ್ಳಬಹುದು. ಬೆಳಿಗ್ಗೆ 10.30ರಿಂದ ಸಂಜೆ 6.30 ರೊಳಗೆ ಸಂದರ್ಶನಕ್ಕೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.