ಪ್ರಾತಿನಿಧಿಕ ಚಿತ್ರ
ಆಧುನಿಕ ವೈದ್ಯಶಾಸ್ತ್ರದ ದೊಡ್ಡ ಸಾಧನೆಗಳಲ್ಲಿ ಒಂದು ಅಂಗದಾನ ಮತ್ತು ಅಂಗ ಬದಲಾವಣೆ (ಟ್ರಾನ್ಸ್‌ಪ್ಲಾಂಟ್). ಇದರಿಂದ ಸಾವಿರಾರು ರೋಗಿಗಳು ಹೊಸ ಜೀವನದ ಅವಕಾಶ ಪಡೆಯುತ್ತಿದ್ದಾರೆ. ಪಿತ್ತಕೋಶ, ಕಿಡ್ನಿ, ಹೃದಯ, ಶ್ವಾಸಕೋಶ, ಕಣ್ಣು, ಎಲುಬು, ಚರ್ಮ/ಅಂಗಾಂಶ ಮುಂತಾದ ಅಂಗಗಳನ್ನು ದಾನ ಮಾಡುವುದು ಮತ್ತೊಂದು ರೋಗಿಗೆ ಮರುಜನ್ಮನೀಡುವ ಪುಣ್ಯ ಕಾರ್ಯವೂ ಹೌದು. ಆದರೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು (ಮಿಥ್ಯೆಗಳು) ಈ ದಾನದ ಪ್ರಕ್ರಿಯೆಗೆ ಅಡ್ಡಿಯಾಗುತ್ತಿವೆ.
ಭಾರತದಲ್ಲಿನ್ನೂ ಅಂಗದಾನದ ಪ್ರಮಾಣ ತೀರಾ ಕಡಿಮೆ. ದಾನಿಗಳ ಸಂಖ್ಯೆಯು ಪ್ರತೀ ಹತ್ತು ಲಕ್ಷ ಜನರಿಗೆ ಒಬ್ಬನಿಗಿಂತಲೂ ಕಡಿಮೆ (NOTTO ಅಂಕಿಅಂಶ ಪ್ರಕಾರ). ಹೀಗಾಗಿ, ಕಾಯುವವರ ಸಂಖ್ಯೆ ಹೆಚ್ಚು, ಆದರೆ ಲಭ್ಯವಾಗುವ ಅಂಗಗಳು ತುಂಬಾ ಕಡಿಮೆ.
1. ಜೀವಿತಾವಧಿಯಲ್ಲಿ ಅಂಗಾಂಗ ದಾನ ಮಾಡಲು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು.
ಮರಣಾನಂತರ ದಾನಕ್ಕೆ ಯಾವುದೇ ವಯಸ್ಸಿನವರೂ ಅರ್ಹರು.
ವೈದ್ಯರು ಆರೋಗ್ಯ, ಅಂಗದ ಕಾರ್ಯಕ್ಷಮತೆ ಇತ್ಯಾದಿ ಪರಿಶೀಲಿಸುತ್ತಾರೆ.
2. ಹಲವಾರು ಕಾಯಿಲೆಗಳಿದ್ದರೂ ಅದರಿಂದಲೇ ದಾನಕ್ಕೆ ಅನರ್ಹ ಎನ್ನಲಾಗುವುದಿಲ್ಲ. ವೈದ್ಯರು ಸೋಂಕಿನ ಅಪಾಯ, ಅಂಗದ ಕಾರ್ಯಸಾಮರ್ಥ್ಯ ಇತ್ಯಾದಿ ಪರಿಶೀಲಿಸುತ್ತಾರೆ.
3. ಜೀವಿತಾವಧಿಯಲ್ಲೇ ದಾನ ಮಾಡುವವರಿಗೆ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಯುತ್ತದೆ. ಇದು ದಾನಿಯ ಮತ್ತು ದಾನ ಸ್ವೀಕರಿಸುವವರ ಸುರಕ್ಷತೆ ಖಚಿತಪಡಿಸಲು.
4. ದಾನ ಮಾಡಲು ಡೋನರ್ ಕಾರ್ಡ್ ಪಡೆಯಬಹುದು ಅಥವಾ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬಹುದು. ಆದರೆ ಭಾರತದಲ್ಲಿ ಮರಣಾನಂತರ ದಾನಕ್ಕೆ ಕುಟುಂಬದ ಒಪ್ಪಿಗೆ ಅಗತ್ಯ. ಆದ್ದರಿಂದ ನಿಮ್ಮ ಇಚ್ಛೆಯನ್ನು ಕುಟುಂಬಕ್ಕೆ ತಿಳಿಸುವುದು ಮುಖ್ಯ.
5. ಅಂಗದಾನ ಮಾಡಿದ ನಂತರ ದೇಹ ದುರ್ಬಲವಾಗುವುದಿಲ್ಲ, ವಿಕಾರಗೊಳ್ಳುವುದಿಲ್ಲ.
6. ತೀರಾ ಅನಾರೋಗ್ಯವುಳ್ಳ ರೋಗಿಗಳ ಜೀವ ಉಳಿಸಲು ವೈದ್ಯರು ಮೊದಲು ಶ್ರಮಿಸುತ್ತಾರೆ. ಮರಣವನ್ನು ದೃಢಪಡಿಸಿದ ನಂತರವಷ್ಟೇ ಅಂಗದಾನ ನಡೆಯುತ್ತದೆ.
ಯಾವುದೇ ಅಂಗ ಜೋಡಿಸಬೇಕಾದ ರೋಗಿಗೆ ಮೊದಲು ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಅರ್ಹರಾದರೆ ಅವರನ್ನು NOTTO ಕಾಯುವ ಪಟ್ಟಿಗೆ ಸೇರಿಸಲಾಗುತ್ತದೆ.
ಅಂಗ ನೀಡುವಾಗ ರಕ್ತದ ಗುಂಪು, ಅಂಗದ ಗಾತ್ರ, ಕಾಯಿಲೆಯ ತೀವ್ರತೆ ಮತ್ತು ಕಾಯುತ್ತಿರುವ ಅವಧಿ ಮುಂತಾದ ಅಂಶಗಳನ್ನು ಗಮನಿಸಲಾಗುತ್ತದೆ.
ಕಾಯುವ ಅವಧಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು, ವೈದ್ಯರ ಸೂಚನೆ ಪಾಲಿಸುವುದು ಬಹಳ ಮುಖ್ಯ.
ಸ್ವೀಕರಿಸುವ ರೋಗಿಗಳಿಗೆ ಮನೋವೈಜ್ಞಾನಿಕ ಬೆಂಬಲ ಹಾಗೂ ಕುಟುಂಬದ ಬೆಂಬಲವೂ ಅಗತ್ಯವಾಗಬಹುದು.
ಅಂಗ ಬದಲಾವಣೆ ಬಳಿಕ ದೇಹವು ಆ ಹೊಸ ಅಂಗವನ್ನು ತಿರಸ್ಕರಿಸದಂತೆ ಜೀವಿತಾವಧಿಯ ಚಿಕಿತ್ಸಾಕ್ರಮ (ಇಮ್ಯುನೊಸಪ್ರೆಸಿವ್ ಥೆರಪಿ) ಬೇಕಾಗುತ್ತದೆ. ನಿಯಮಿತ ಫಾಲೋ-ಅಪ್, ಜಾಗ್ರತೆ, ಮತ್ತು ಆರೋಗ್ಯಕರ ಜೀವನಶೈಲಿ ಅತ್ಯಗತ್ಯ.
ಅಂಗದಾನ ಮತ್ತು ಅಂಗ ಬದಲಾವಣೆ ಪ್ರಕ್ರಿಯೆ ಕಟ್ಟುನಿಟ್ಟಾದ ವೈದ್ಯಕೀಯ ನಿಯಮಗಳನ್ನು ಪಾಲಿಸಿಕೊಂಡೇ ನಡೆಯುತ್ತದೆ.
ದಾನಿಯಾಗಲಿ, ಸ್ವೀಕರಿಸುವವರಾಗಲಿ ಪ್ರತಿಯೊಬ್ಬರಿಗೂ ಕಠಿಣ ವೈದ್ಯಕೀಯ ತಪಾಸಣೆಗಳು ನಡೆಯುತ್ತವೆ.
ಇದರಿಂದ ಗರಿಷ್ಠ ಸುರಕ್ಷತೆ ಮತ್ತು ಯಶಸ್ಸು ಖಚಿತಪಡಿಸಲಾಗುತ್ತದೆ.
ಕರ್ನಾಟಕವು ಅಂಗದಾನದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ವೈದ್ಯಶಾಸ್ತ್ರ ಮತ್ತು ಮಾನವೀಯತೆಯ ಮಿಳಿತವೇ ಅಂಗದಾನ ಪ್ರಕ್ರಿಯೆ. ಅಂಗದಾನವು ಹೊಸ ಭರವಸೆ, ಹೊಸ ಜೀವನ ಕೊಡುವ ಅಮೂಲ್ಯ ಉಡುಗೊರೆ.
(ಲೇಖಕರು: ಡಾ. ಜಗದೀಶ್ ಕೃಷ್ಣಮೂರ್ತಿ, ಕನ್ಸಲ್ಟೆಂಟ್ – ಜಿಐ, ಎಚ್.ಪಿ.ಬಿ. ಸರ್ಜನ್ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಷನ್ ಪ್ರೋಗ್ರಾಂ, ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟರಿಕ್ ಸೈನ್ಸಸ್, ರಾಮಯ್ಯ ಮೆಮೊರಿಯಲ್ ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.