ADVERTISEMENT

ನಮ್ಮ ಮಗು‘ಟಾಯ್ಲೆಟ್‌ ’ ಬಳಸುತ್ತಿದೆ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:30 IST
Last Updated 19 ಜುಲೈ 2019, 19:30 IST
Baby girl on a potty
Baby girl on a potty   

ಒಂದು ಪುಟ್ಟ ಮಗುವಿನ ತಾಯಿಯ ಹೆಗಲಿಗೆ ತೂಗುವ ಬ್ಯಾಗ್‌ನಲ್ಲಿ ಸಾಮಾನ್ಯವಾಗಿ ಏನಿರುತ್ತದೆ ಹೇಳಿ. ಡಯಾಪರ್‌! ಒಂದಲ್ಲ ಹಲವಾರು ಡಯಾಪರ್‌ಗಳ ಸಂಗ್ರಹವನ್ನೇ ಇಟ್ಟುಕೊಳ್ಳಬೇಕಾಗುತ್ತದೆ. ಶಿಶು ಬೆಳೆದು 2–3 ವರ್ಷಗಳ ಪುಟ್ಟ ಮಗುವಾಗುವ ತನಕವೂ ತಾಯಿಗೆ ಈ ಡಯಾಪರ್‌ಗಳ ಸಹವಾಸ ತಪ್ಪುವಂತಹದ್ದಲ್ಲ.

ಮಗು ಚೂರು ಬೆಳೆದ ಬಳಿಕ ಇಂತಹ ಡಯಾಪರ್‌ ಬಳಕೆ ಬಿಡಿಸಿ ಆ ಮಗುವಿಗೆ ಶೌಚಾಲಯ ಅಥವಾ ‘ಪಾಟಿ’ ಬಳಸುವ ಬಗ್ಗೆ ತರಬೇತಿ ನೀಡುವ ಕೆಲಸ ತಾಯಂದಿರಿಗೆ! ಎಷ್ಟೋ ಪೋಷಕರು ಈ ಹಂತ ಬಂತೆಂದರೆ ಯಾಕಾದರೂ ಇದೊಂದು ತಲೆನೋವು ಬಂತೋ ಎಂದು ಚಡಪಡಿಸುವುದು ಸಾಮಾನ್ಯ. ಮತ್ತೆ ಕೆಲವರು ಕಂದಮ್ಮಗಳಿಗೆ ಇದನ್ನು ಕಲಿಸಲು ಎಲ್ಲಿಲ್ಲದ ಉತ್ಸಾಹ ತೋರಿಸಿ, ‘ನಮ್ಮ ಪಾಪು ಎಷ್ಟು ನೀಟಾಗಿ ಮಾಡುತ್ತೆ ನೋಡಿ’ ಎಂದು ಗೆಳತಿಯರ ಜೊತೆ ಹೇಳಿಕೊಳ್ಳುವುದಿದೆ!

ಏನೇ ಆದರೂ ಪುಟ್ಟ ಮಗುವಿಗೆ ಶೌಚದ ಬಳಕೆಯ ಬಗ್ಗೆ ತರಬೇತಿ ನೀಡುವ ಸಂದರ್ಭ ಬಂದಾಗ ಹತ್ತಾರು ಅನುಮಾನಗಳು, ಪ್ರಶ್ನೆಗಳು ಕಾಡುವುದು ಸಹಜ.

ADVERTISEMENT

ಡಯಾಪರ್‌ನಿಂದ ಮುಕ್ತಿ..

ಮಗುವಿಗೆ ಯಾವ ವಯಸ್ಸಿನಲ್ಲಿ ಈ ತರಬೇತಿ ನೀಡಬೇಕು ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಒಂದು ಮಗು ಎರಡನೇ ವರ್ಷದಲ್ಲೇ ಈ ಬಗ್ಗೆ ಕುತೂಹಲ, ಆಸಕ್ತಿ ತಾಳಬಹುದು. ಇನ್ನು ಕೆಲವು ಮಕ್ಕಳು 3– 4 ವರ್ಷ ದಾಟಿದರೂ ಈ ವಿಷಯದಲ್ಲಿ ಹಠ ಮಾಡುತ್ತವೆ. ಹಾಗೆಯೇ ಕೆಲವು ಮಕ್ಕಳು ಒಂದೆರಡು ವಾರದಲ್ಲೇ ಡಯಾಪರ್‌ನಿಂದ ಪಾಟಿ ಬಳಸುವ ಬದಲಾವಣೆಗೆ ಹೊಂದಿಕೊಳ್ಳಬಹುದು. ಇನ್ನು ಕೆಲವು ಮಕ್ಕಳಿಗೆ ವರ್ಷಗಟ್ಟಲೆ ಹಿಡಿಯುತ್ತದೆ. ಸಾಮಾನ್ಯವಾಗಿ ಗಂಡು ಮಕ್ಕಳು ಈ ವಿಷಯದಲ್ಲೂ ನಿಧಾನ. ಒಟ್ಟಿನಲ್ಲಿ ಮಕ್ಕಳ ಸಂವಹನ ಕೌಶಲ ಹಾಗೂ ಚುರುಕುತನ ಈ ತರಬೇತಿಯಲ್ಲೂ ಕೆಲಸ ಮಾಡುತ್ತದೆ ಎನ್ನಬಹುದು.

ಮಕ್ಕಳ ಕೆಲವೊಂದು ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಾಯಂದಿರಿಗೆ ಈ ಬಗ್ಗೆ ಸುಳಿವು ಸಿಗುತ್ತದೆ ಎನ್ನುತ್ತಾರೆ ಮಕ್ಕಳ ತಜ್ಞರು.

ಲಕ್ಷಣಗಳು

ಮಗು ಕನಿಷ್ಠ ಎರಡು ತಾಸುಗಳ ಕಾಲ ಮೂತ್ರ ಹಿಡಿದಿಟ್ಟುಕೊಳ್ಳುತ್ತದೆ. ಅಂದರೆ ಅದರ ಮೂತ್ರಪಿಂಡದ ಸ್ನಾಯುಗಳು ಬೆಳವಣಿಗೆ ಹೊಂದಿದ್ದು, ಮೂತ್ರವನ್ನು ಹಿಡಿದಿಟ್ಟುಕೊಳ್ಳುವಷ್ಟು ಬಲಿಷ್ಠವಾಗಿವೆ ಎಂದರ್ಥ.

ಮಗು ಸ್ವತಂತ್ರವಾಗಿ ಓಡಾಡುವುದು, ಓಡುವುದು ಮಾಡುತ್ತದೆ. ಜೊತೆಗೆ ಹಾಕಿಕೊಂಡ ಚಣ್ಣ ಅಥವಾ ಪ್ಯಾಂಟ್‌ ಅನ್ನು ಮೇಲೆ, ಕೆಳಗೆ ಎಳೆಯುತ್ತದೆ.

ತಾನೇ ಊಟ ಮಾಡಲು ಉತ್ಸಾಹ ತೋರಿಸುವುದು, ಉಡುಪು ಬದಲಾಯಿಸಲು ಯತ್ನಿಸುವುದು. ಅಂದರೆ ಹೊಸ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ ಹಾಗೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತೇನೆ ಎಂಬ ಸ್ವತಂತ್ರ ಮನೋಭಾವ ತೋರಿಸುತ್ತದೆ.

ಸಣ್ಣಪುಟ್ಟ ಸೂಚನೆಗಳನ್ನು ಅರ್ಥ ಮಾಡಿಕೊಂಡು ಅನುಸರಿಸುತ್ತದೆ.

ಮೂತ್ರ ಅಥವಾ ಮಲ ವಿಸರ್ಜನೆಗೆ ಅವಸರವಾದಾಗ ಲಕ್ಷಣಗಳನ್ನು ಅರಿತು ತಾಯಿಯ ಬಳಿ ಹೇಳುತ್ತದೆ.

ಡಯಾಪರ್‌ಗಳನ್ನು ತಿರಸ್ಕರಿಸಲು ಆರಂಭಿಸುತ್ತದೆ. ಅದು ಒದ್ದೆ, ಅಸಹ್ಯ ಎನ್ನಬಹುದು, ಕಿರಿಕಿರಿಯಾಗಿ ಎಳೆದುಹಾಕಲು ಯತ್ನಿಸಬಹುದು.

ಎಲ್ಲಾ ಮಕ್ಕಳು ಒಂದೇ ರೀತಿಯ ಲಕ್ಷಣಗಳನ್ನು ತೋರಿಸುತ್ತವೆ ಎಂದು ಅರ್ಥವಲ್ಲ. ಪೋಷಕರು ಮಗುವಿಗೆ ಈ ಬದಲಾವಣೆಗೆ ಪ್ರೇರೇಪಿಸಬೇಕು.

ಆಟದಿಂದ ಪಾಟಿ!

ಮಗು ಪಾಟಿ ಬಳಸುವುದಕ್ಕೆ ತರಬೇತಿ ನೀಡುವ ಮುನ್ನ ಅದನ್ನು ಮಗುವಿಗೆ ಕಾಣುವಂತೆ ಇಡುವುದು ಮುಖ್ಯ. ಅದು ಆಟವಾಡುವ ಜಾಗದಲ್ಲೋ, ಸ್ನಾನಗೃಹದ ಸಮೀಪದಲ್ಲೋ ಇಡಿ. ಅದರ ಮೇಲೆ ಮಗುವನ್ನು ಕೂರಿಸಿ, ಆಟಿಕೆಗಳನ್ನು ಕೊಡಿ. ಕ್ರಮೇಣ ಅದರ ಬಳಕೆ ಬಗ್ಗೆ ಬಾಲ ಭಾಷೆಯಲ್ಲಿ ಮಗುವಿಗೆ ಹೇಳಿ. ಈ ರೀತಿ ಮಾಡುವಾಗ ಆದಷ್ಟು ತಮಾಷೆಯಾಗಿ ಮಾತನಾಡಿ.

ಮಗುವಿಗೆ ಮೂತ್ರ ಅಥವಾ ಮಲ ವಿಸರ್ಜನೆಗೆ ಅವಸರವಾದಾಗ ಅದರ ಮುಖದ ಮೇಲೆ ಮೂಡುವ ಭಾವನೆ, ಅಭಿವ್ಯಕ್ತಿ, ಅದರ ನಡವಳಿಕೆಯಿಂದಲೇ ಸಾಮಾನ್ಯವಾಗಿ ತಿಳಿದುಕೊಳ್ಳಬಹುದು. ಆಗ ಮಗುವನ್ನು ಪಾಟಿ ಮೇಲೆ ಕೂರಿಸಿ. ಅದರಲ್ಲೇ ವಿಸರ್ಜನೆ ಮಾಡುವಂತೆ ಪ್ರೇರೇಪಿಸಿ. ಮಗು ನೀರು ಅಥವಾ ಹಾಲು ಕುಡಿದ ನಂತರ, ಊಟ ಮಾಡಿದ ನಂತರ ಅದರ ಮೇಲೆ ಕೂರಿಸಿ.

ಪ್ರತಿ ಬಾರಿ ಮಗು ಪಾಟಿಯಲ್ಲಿ ವಿಸರ್ಜನೆ ಮಾಡಿದಾಗ, ಕೂಡಲೇ ಶುಚಿ ಮಾಡಲು ಹೋಗಬೇಡಿ. ಮಗುವಿಗೆ ಮುದ್ದು ಮಾತಿನಲ್ಲಿ ‘ನೀನು ಜಾಣ. ಒಳ್ಳೆಯ ಕೆಲಸ ಮಾಡಿದ್ದೀಯ. ಪ್ರತಿ ಸಲವೂ ಇಲ್ಲಿಯೇ ಮಾಡಿದರೆ ನೀನು ಇನ್ನಷ್ಟು ಜಾಣನಾಗುತ್ತೀಯ’ ಎಂದು ಹೊಗಳಿ. ಇದರಿಂದ ಖಂಡಿತ ಆ ಮಗು ಮುಂದಿನ ಸಲ ಅಲ್ಲಿಯೇ ಮಾಡುವುದಾಗಿ ನಿಮಗೇ ಹೇಳುತ್ತದೆ, ನೋಡಿ.

ಈ ಪ್ರಕ್ರಿಯೆಗೆ ಅವಸರ ಬೇಡ. ಮಗು ಸಿಟ್ಟಾಗಿ, ಹಠ ಮಾಡಿದರೆ, ಪಾಟಿಯ ಮೇಲೆ ಕೂರಿಸಿದಾಗ ಮೂತ್ರ ಮಾಡದೆ ತಡೆ ಹಿಡಿದರೆ ನಿಮ್ಮ ಪ್ರಯತ್ನವನ್ನು ಅಲ್ಲಿಗೇ ನಿಲ್ಲಿಸಿ. ಮಗುವಿನ ಮೇಲೆ ಒತ್ತಡ ಹೇರುವುದು ಬೇಡ. ಒಂದೆರಡು ದಿನ ತಡೆದು ಮತ್ತೆ ನಿಮ್ಮ ಯತ್ನ ಮುಂದುವರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.