ಹುಬ್ಬಳ್ಳಿ: ‘ಮಹಿಳೆಯರಲ್ಲಿ ಅತಿಯಾಗಿ ಬಿಳಿ ಮುಟ್ಟು ಆಗುತ್ತಿದ್ದರೆ, ತುರಿಕೆ, ದುರ್ವಾಸನೆ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು‘ ಎಂದು ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಆ್ಯಂಡ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ರೆಡಿಯೇಷನ್ ಅಂಕೊಲಾಜಿಸ್ಟ್ ಡಾ. ಪೂರ್ಣಚಂದ್ರ ಎಸ್. ಹೇಳಿದರು.
ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಶುಕ್ರವಾರ ನಡೆದ ‘ಪ್ರಜಾವಾಣಿ’ ಫೇಸ್‌ಬುಕ್ ಸಂವಾದದಲ್ಲಿ ಅವರು ಮಾತನಾಡಿದರು.
ಅನಿಯಮಿತ ರಕ್ತಸ್ರಾವ, ಲೈಂಗಿಕ ಸಂಪರ್ಕ ಸಮಯದಲ್ಲಿ ರಕ್ತಸ್ರಾವ ಕಂಡುಬಂದರೆ, ಅತಿಯಾದ ಹೊಟ್ಟೆನೋವು, ಕೆಳಬೆನ್ನು ನೋವು, ಮೂತ್ರ ವಿಸರ್ಜಿಸುವಾಗ ತೊಂದರೆಯಾದರೆ ತಪಾಸಣೆ ಮಾಡಿಸಬೇಕು ಎಂದು ತಿಳಿಸಿದರು.
ಗರ್ಭಕಂಠದ ಕ್ಯಾನ್ಸರ್ 35ರಿಂದ 45 ವಯಸ್ಸಿನವರಲ್ಲಿ ಕಂಡುಬರುತ್ತದೆ. 30ರಿಂದ 60ವಯಸ್ಸಿನವರಲ್ಲೂ ಕಾಣಬಹುದು. ರೋಗ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಸೋಂಕು. ಈ ಸೋಂಕು ಇರುವ ಶೇ 10ರಿಂದ 15ರಷ್ಟು ಜನರಲ್ಲಿ ರೋಗ ಕಂಡುಬರುವ ಅವಕಾಶ ಇರುತ್ತದೆ. ಕ್ಯಾನ್ಸರ್ ರೋಗಿಗಳಲ್ಲಿ ತಪಾಸಣೆ ಮಾಡಿದಾಗ ಶೇ 70– 80ರಷ್ಟು ಜನರಲ್ಲಿ ಮಾತ್ರ ಕಂಡುಬರುತ್ತದೆ. ಜನನಾಂಗಗಳ ನೈರ್ಮಲ್ಯ ಕಾಪಾಡದೆ ಇರುವುದೂ ಮುಖ್ಯ ಕಾರಣವಾಗಿದೆ ಎಂದರು.
ಲೈಂಗಿಕ ಸಂಪರ್ಕದಿಂದ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಮೂಲಕ ಹರಡುತ್ತದೆ. 9ರಿಂದ 15 ವರ್ಷದ ಮಕ್ಕಳಿಗೆ ಎಚ್‌ಪಿವಿ ವ್ಯಾಕ್ಸಿನ್ ಕೊಡಲು ಸರ್ಕಾರ ತೀರ್ಮಾನಿಸಿದೆ. 15ರಿಂದ 26 ವರ್ಷದವರೂ ಲಸಿಕೆ ಪಡೆಯಬಹುದು. 9ರಿಂದ 15 ವಯೋಮಾನದವರಿಗೆ ಎರಡು ಡೋಸ್, 15–26 ವಯೋಮಾನದವರಿಗೆ ಮೂರು ಡೋಸ್ ತೆಗೆದುಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಯೋಜನೆ ಅನುಷ್ಠಾನಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಭಯ ಹೋಗಲಾಡಿಸಲು ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಯೋಗ, ಧ್ಯಾನ ರೋಗಿಗಳಲ್ಲಿನ ಒತ್ತಡ ನಿವಾರಣೆಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಕ್ಯಾನ್ಸರ್ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ಬಳಕೆಗೆ ಲಭ್ಯ
ಆಯುಷ್ಮಾನ್ ಕಾರ್ಡ್ ಇರುವ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಷ್ಟೇ ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ. ಆರ್ಥಿಕ ಸಮಸ್ಯೆಯಿಂದ ಭಯಗೊಂಡು ಚಿಕಿತ್ಸೆ ಪಡೆಯಲು ಹಿಂಜರಿಯುವ ಕ್ಯಾನ್ಸರ್ ರೋಗಿಗಳು ಆಯುಷ್ಮಾನ್ ಕಾರ್ಡ್ ಬಳಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬಹುದು.
ಚಿಕಿತ್ಸಾ ಕ್ರಮಗಳು
ದೈಹಿಕ ಪರೀಕ್ಷೆ, ಪಾಪ್‌ಸ್ಮಿಯರ್ ಪರೀಕ್ಷೆ, ಕ್ಯಾನ್ಸರ್ ಗಂಟು ತಪಾಸಣೆ ಮಾಡಲಾಗುತ್ತದೆ. ಬೇರೆ ಭಾಗದಲ್ಲಿ ಹರಡಿದೆಯಾ ಎಂದು ಪರೀಕ್ಷಿಸಲಾಗುತ್ತದೆ. ಎಂಆರ್‌ಎಂ ಸ್ಕ್ಯಾನ್ ಮಾಡಿ ತಪಾಸಣೆ ಮಾಡಲಾಗುತ್ತದೆ. ಕ್ಯಾನ್ಸರ್ ನಾಲ್ಕು ಹಂತದಲ್ಲಿರುತ್ತದೆ. ಅದರಲ್ಲಿ ಮೊದಲ ಹಂತದಲ್ಲಿದ್ದರೆ ಸರ್ಜರಿ ಮಾಡಲಾಗುತ್ತದೆ. ರೇಡಿಯೇಷನ್, ಕಿಮೋಥೆರಪಿ ಮಾಡಲಾಗುತ್ತದೆ.
ಸಂವಾದ ವೀಕ್ಷಣೆಗೆ: https://fb.watch/iat4R7liPr/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.