ADVERTISEMENT

ನಿಮ್ಮ ಹೆಜ್ಜೆ ಗುರುತೇನು?

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 13:13 IST
Last Updated 10 ಜುಲೈ 2018, 13:13 IST
ಬಿಗಿಯಾದ ಪಾದರಕ್ಷೆಯನ್ನು ಕಚೇರಿಯಲ್ಲಿ ಬಿಡುವಿನ ವೇಳೆ ಬದಲಾಯಿಸಿಬಿಡಿ
ಬಿಗಿಯಾದ ಪಾದರಕ್ಷೆಯನ್ನು ಕಚೇರಿಯಲ್ಲಿ ಬಿಡುವಿನ ವೇಳೆ ಬದಲಾಯಿಸಿಬಿಡಿ   

ನಮ್ಮ ದೇಹದ ತೂಕ ಎಷ್ಟೇ ಇರಲಿ. ಇಡೀ ದೇಹವನ್ನು ಹೊತ್ತುಕೊಳ್ಳುವುದು ನಮ್ಮ ಪಾದಗಳು. ಕಟ್ಟಡಕ್ಕೆ ಅಡಿಪಾಯವಿದ್ದಂತೆ ದೇಹವೆಂಬ ಕಟ್ಟಡಕ್ಕೆ ಪಾದಗಳೇ ಅಡಿಪಾಯಗಳು. ಈ ಕಾರಣಕ್ಕಾಗಿ ನಾವು ಪಾದಗಳ ಆರೋಗ್ಯ ಮತ್ತು ಸುರಕ್ಷೆಯ ಬಗ್ಗೆಯೂ ಗಮನಹರಿಸಬೇಕು. ಆದರೆ ವಾಸ್ತವವಾಗಿ, ದೇಹದ ಇತರ ಭಾಗಗಳಿಗೆ ಹೋಲಿಸಿದರೆಪಾದದ ಬಗ್ಗೆ ಕಾಳಜಿ ವಹಿಸುವುದು ಕಡಿಮೆ.ಮುಖ್ಯವಾಗಿ ಹೆಣ್ಣುಮಕ್ಕಳುಚಪ್ಪಲಿ, ಶೂಗಳ ಆಯ್ಕೆ ವೇಳೆ ಪಾದಗಳ ಸುರಕ್ಷೆಗಿಂತ ಫ್ಯಾಷನ್‌ ಮತ್ತು ಟ್ರೆಂಡ್‌ಗೆ ಆದ್ಯತೆ ನೀಡುವುದೇ ಹೆಚ್ಚು.

ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವ ಆತುರದಲ್ಲಿಪ್ರತಿ ನಿಮಿಷವನ್ನೂ ಲೆಕ್ಕಾಚಾರದಲ್ಲೇ ಕಳೆಯುವುದು ಈಗ ಎಲ್ಲರಿಗೂ ಅನಿವಾರ್ಯ. ಸ್ನಾನವೂ ಅವಸರದಲ್ಲೇ ಆಗುತ್ತದೆ. ಹೊರಡುವ ಗಡಿಬಿಡಿಯಲ್ಲಿ ಪಾದಕ್ಕೆ ಮಾಯಿಶ್ಚರೈಸರ್‌ ಅಥವಾ ಕೋಲ್ಡ್‌ ಕ್ರೀಂ ಹಚ್ಚಿಕೊಳ್ಳಲೂ ಪುರುಸೊತ್ತು ಸಿಗದೇ ಇರಬಹುದು. ವಾಸ್ತವವಾಗಿ, ಸಾವಧಾನದಿಂದ ಸ್ನಾನ ಮಾಡುವಾಗ ಮತ್ತು ಪಾದಗಳಿಗೆ ಕ್ರೀಂ ಹಚ್ಚಿಕೊಳ್ಳುವಾಗ ಸಣ್ಣದೊಂದು ಮಸಾಜ್‌ ಕೂಡಾ ಆಗಿಬಿಡುತ್ತದೆ. ಪಾದಗಳ ಆರೋಗ್ಯದ ದೃಷ್ಟಿಯಿಂದ ಈ ಮಸಾಜ್‌ ತುಂಬಾ ಅಗತ್ಯ.

ಎತ್ತರದ ಹಿಮ್ಮಡಿಯ ಚಪ್ಪಲಿ,ಶೂಗಳನ್ನು ಧರಿಸಿದಾಗ ಪಾದ ಮತ್ತು ಬೆರಳುಗಳನ್ನು ಇಕ್ಕಟ್ಟಿನಲ್ಲಿ ಹಿಡಿದಿಟ್ಟಂತಾಗಿರುತ್ತದೆ. ಜೊತೆಗೆ ಸಾಕ್ಸ್‌ ಕೂಡಾ ಧರಿಸಿರುತ್ತೀರಲ್ಲ? ಫ್ಯಾಷನ್‌ ಮೊರೆಹೋದ ಯುವತಿಯರು ಮಣಿಕಟ್ಟಿನವರೆಗಿನ ಇಲ್ಲವೇ ಮಂಡಿವರೆಗಿನ ಬಗೆ ಬಗೆಯ ಶೂಗಳನ್ನು ಧರಿಸುತ್ತಾರೆ.

ADVERTISEMENT

ಇಂತಹ ಸಂದರ್ಭಗಳಲ್ಲಿ ಪಾದಗಳಿಗೆ ಗಾಳಿಯಾಡುವುದಕ್ಕೆ ಅವಕಾಶ ಸಿಗದೆ ಊತ, ಕೆಂಪಗಾಗುವುದು, ನವೆ, ಉಗುರುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಕಿರಿದಾಗಿರುವ ಮೂತಿಯ ಚಪ್ಪಟೆ ಚಪ್ಪಲಿ ಅಥವಾ ಶೂ ಧರಿಸಿದಾಗಲೂ ಪಾದಕ್ಕೆ ಉಸಿರುಗಟ್ಟಿದಂತಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಉತ್ತಮ ಬ್ರ್ಯಾಂಡ್‌ಗಳ ಪಾದರಕ್ಷೆಗಳೂ ಅಂತಹ ವಿನ್ಯಾಸದಿಂದ ಕೂಡಿರುವುದಿದೆ. ಬೆಲೆ ಎಷ್ಟು, ಬ್ರ್ಯಾಂಡ್‌ ಯಾವುದು ಎಂಬುದಕ್ಕಿಂತ ಪಾದಗಳಿಗೆ ತನ್ಮೂಲಕ ಇಡೀ ದೇಹಕ್ಕೆ ಅದೆಷ್ಟು ಸ್ನೇಹಿಯಾಗಿರುತ್ತದೆ ಎಂಬುದನ್ನು ಗಮನಿಸಿ ಖರೀದಿಸುವುದು ಜಾಣತನ.

ಕೆಲವರು ಕಾಲಿನಲ್ಲೂ ಉದ್ದವಾದ ಉಗುರು ಬೆಳೆಸುತ್ತಾರೆ. ಹೆಬ್ಬೆರಳಿನ ಉಗುರನ್ನಷ್ಟೇ ಉದ್ದಕ್ಕೆ ಬಿಡುವವರೂ ಉಂಟು. ಆದರೆ ಉಗುರು ಬೆಳೆಸಿದಾಗ ಧರಿಸುವ ಚಪ್ಪಲಿ/ಶೂ ಸ್ವಲ್ಪ ಆರಾಮದಾಯಕವಾಗಿರಬೇಕು. ಇಲ್ಲದಿದ್ದರೆ ಉಗುರು ತುಂಡಾಗದಂತೆ ಕಾಳಜಿ ವಹಿಸುವ ಭರದಲ್ಲಿ ನಡೆಯುವಾಗ, ನಿಲ್ಲುವಾಗ ಮತ್ತು ಕುಳಿತುಕೊಳ್ಳುವಾಗ ಪಾದವನ್ನು ಶೂ ಒಳಗೇ ಕುಗ್ಗಿಸಿಕೊಳ್ಳುವುದುಂಟು. ದಿನದ ಏಳೆಂಟು ಗಂಟೆ ಹೀಗೆ ಮಾಡಿದರೆ ಪಾದ ಆರಾಮವಾಗಿರಲು ಸಾಧ್ಯವೇ?

ತೀರಾ ಚಪ್ಪಟೆಯಾದ ‘ಫ್ಲಿಪ್‌ ಫ್ಲಾಪ್‌’ನಂತಹ ಚಪ್ಪಲಿ/ಶೂ ಧರಿಸುವುದು ಪಾದಗಳಿಗೆ ಮತ್ತು ಮಂಡಿಗೆ ಉತ್ತಮ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ಫ್ಲಿಪ್‌ ಫಾಪ್‌ನಂತಹ ಪಾದರಕ್ಷೆಗಳು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ ಎಂಬುದು ವೈದ್ಯರ ಕಿವಿಮಾತು.

ಎತ್ತರದ ಹಿಮ್ಮಡಿಯ ಚಪ್ಪಲಿ ಧರಿಸುವುದು ಕೆಲವರಿಗೆ ವಸ್ತ್ರಸಂಹಿತೆ. ಹಾಗಿದ್ದಲ್ಲಿ, ತಮ್ಮ ಆಸನದಲ್ಲಿ ಕುಳಿತು ಕೆಲಸ ಮಾಡುವಷ್ಟು ಹೊತ್ತು ಸಾದಾ ಚಪ್ಪಲಿ ಅಥವಾ ಸ್ಲಿಪರ್‌ಗಳನ್ನು ಧರಿಸುವ ಅಭ್ಯಾಸ ಮಾಡಬಹುದು. ಮಧ್ಯಾಹ್ನ ಇಲ್ಲವೇ ಸಂಜೆ ಸಣ್ಣ ವಿರಾಮ ತೆಗೆದುಕೊಂಡು ಇಂತಹ ಚಪ್ಪಲಿ ಧರಿಸಿ ಕೆಲಹೊತ್ತು ನಡೆದಾಡಿದರೂ ಪಾದಗಳಿಗೆ ಆರಾಮವಾದೀತು.

ಒಟ್ಟಿನಲ್ಲಿ ದೇಹವೆಂಬ ಕಟ್ಟಡದ ಸ್ವಾಸ್ಥ್ಯದ ದೃಷ್ಟಿಯಿಂದ ಪಾದವೆಂಬ ತಳಪಾಯವನ್ನು ಅಲಕ್ಷಿಸುವುದು ಸೂಕ್ತವಲ್ಲ. ನೀವೇನಂತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.