ADVERTISEMENT

PV Web Exclusive: ಸಂಬಂಧದ ಅರ್ಥಕ್ಕೆ ಹೊಸ ಪರಿಭಾಷೆ ಬರೆದ ಕೊರೊನಾ

ರೇಷ್ಮಾ
Published 5 ಸೆಪ್ಟೆಂಬರ್ 2020, 5:03 IST
Last Updated 5 ಸೆಪ್ಟೆಂಬರ್ 2020, 5:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನನಗೆ ಮೊದಲಿನಿಂದಲೂ ಪಪ್ಪಾ, ಅಮ್ಮಾ, ತಂಗಿ ಇಷ್ಟೇ ನನ್ನ ಲೋಕವಾಗಿತ್ತು. ಹುಟ್ಟಿದಾಗಿನಿಂದ ಮನೆಯಲ್ಲಿ ಜನರನ್ನು ನೋಡಿದ್ದೇ ಕಡಿಮೆ. ನನ್ನ ಮನೆಯ ಅಕ್ಕ–ಪಕ್ಕ, ಸುತ್ತಮುತ್ತಲೆಲ್ಲಾ ನಮ್ಮ ಸಂಬಂಧಿಕರದ್ದೇ ಮನೆ. ಆದರೂ ಅಲ್ಲೂ ಅಷ್ಟೇ. ಎಲ್ಲೋ ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಮನೆ ತುಂಬಿದ್ದರೂ ಅದು ಕೇವಲ ಎರಡು ದಿನಕಷ್ಟೇ ಸೀಮಿತ. ಆದರೆ ನಾನು ಹುಟ್ಟಿದಾಗಿನಿಂದ ಇದೇ ಮೊದಲ ಬಾರಿ ನಮ್ಮ ಮನೆ ತುಂಬಿತ್ತು. ನಾಲ್ಕಾರು ತಿಂಗಳ ಕಾಲ ಮನೆಯಲ್ಲಿ ಜನವೋ ಜನ. ಸುತ್ತಮುತ್ತಲಿನ ಸಂಬಂಧಿಕರ ಮನೆಯಲ್ಲೂ ಅಷ್ಟೇ. ನಾನು ಎಂದೂ ನೋಡಿರದ ಸಂಬಂಧಿಕರ ಒಡನಾಟ ಸಿಕ್ಕಿತ್ತು. ಅದೊಂದು ಹೊಸ ಪ್ರಪಂಚ ಎನ್ನಿಸುವಂತಿತ್ತು. ಕಳೆದ ಈ ನಾಲ್ಕು ತಿಂಗಳು ನನಗೆ ನಿಜವಾಗಿಯೂ ಸ್ವರ್ಗದಂತಿತ್ತು. ಅದಕ್ಕೆ ನಾನು ಕೊರೊನಾಗೆ ಥ್ಯಾಂಕ್ಸ್ ಹೇಳುತ್ತೇನೆ. ಈಗ ಎಲ್ಲ ಮರಳಿ ಬೆಂಗಳೂರು, ಮುಂಬೈ ಎಂದು ಹೊರಡುತ್ತಿದ್ದಾರೆ. ಮತ್ತದೇ ಖಾಲಿ ಬೇಸರ. ಅವರೆಲ್ಲರನ್ನೂ ಮತ್ತೆ ನೋಡುತ್ತೇವೋ ಇಲ್ಲವೋ. ಆದರೆ ಈಗ ಅವರೆಲ್ಲರು ಮಕ್ಕಳೊಂದಿಗೆ ಕಾರ್ ಹತ್ತಿ ಹೊರಡುವಾಗ ಬೇಡವೆಂದರೂ ಕಣ್ಣೀರು ಬರುತ್ತದೆ. ನಿಜಕ್ಕೂ ಕೊರೊನಾ ಬಂದು ನನ್ನ ಮನೆಯನ್ನು ನಂದನವನ ಮಾಡಿತ್ತು’ ಎಂದು ಹೇಳುತ್ತಾ ಖುಷಿಯ ನಡುವೆ ಬೇಸರದ ಕಣ್ಣೀರು ಸುರಿಸಿದ್ದ ಗೆಳೆಯ ಸೂರಜ್‌.

ಅವನ ಮಾತು ಕೇಳುತ್ತಿದ್ದಾಗ ನನಗೂ ಹಾಗೇ ಅನ್ನಿಸಿತ್ತು. ಕೊರೊನಾ ಬಂದಿದ್ದಕ್ಕೆ ನಾವೆಲ್ಲರೂ ಪ್ರತಿದಿನ ಕಷ್ಟ ಅನುಭವಿಸುವಂತಾಗಿದೆ. ಹೊರಗಡೆ ಹೋಗಿ ಉಸಿರಾಡಲು ಕಷ್ಟವಾಗುವಂತಹ ಪರಿಸ್ಥಿತಿ. ಪ್ರತಿದಿನ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಹಾಕಿ ಕೈ ಉಜ್ಜುತ್ತಿರಬೇಕು. ಇದೆಲ್ಲಾ ಹಿಂಸೆಯೇ. ಆದರೆ ಇವೆಲ್ಲ ಬೇಸರದ ನಡುವೆ ಕೊರೊನಾ ಸಂಬಂಧವೆಂಬ ಸಂಭ್ರಮವನ್ನು ಹೊತ್ತು ತಂದಿತ್ತು. ಮಾತಿಲ್ಲದೆ, ನೋಡದೇ ದೂರವಾಗಿದ್ದ ಅದೆಷ್ಟೋ ಸಂಬಂಧಗಳನ್ನು ಕೊರೊನಾ ಒಂದು ಮಾಡಿತ್ತು.

‘ನನಗೆ ಮೊದಲಿನಿಂದಲೂ ಪಪ್ಪ, ಅಮ್ಮನ ಜೊತೆ ಒಬ್ಬಳೇ ಇದ್ದೂ ಇದ್ದು ಅಭ್ಯಾಸ ಆಗಿತ್ತು. ಮನೆಗೆ ಯಾರಾದರೂ ಬಂದರೆ ಹಿಂಸೆ ಎನ್ನಿಸುತ್ತಿತ್ತು. ಸಂಬಂಧಿಕರ ಬಳಿ ನಾನು ಅಷ್ಟಾಗಿ ಬೆರೆಯುತ್ತಿರಲಿಲ್ಲ. ನಮ್ಮ ಅಮ್ಮ, ಅಪ್ಪ ಕೂಡ ಅಷ್ಟೇ. ಆ ಕಾರಣಕ್ಕೆ ನಮ್ಮ ಮನೆಗೆ ಯಾರೂ ಬರುತ್ತಿರಲಿಲ್ಲ. ಕೊರೊನಾ ಬಂದ ಮೇಲೆ ನಮ್ಮ ಸಂಬಂಧಿಕರ ಮನೆಯಲೆಲ್ಲಾ ಜನ ತುಂಬಿದ್ದರು. ದೂರದೂರುಗಳಿಂದ ಬಂದ ಅವರೆಲ್ಲ ಒಂದಾಗಿ ಊಟ ಮಾಡುವುದು, ಮಕ್ಕಳೆಲ್ಲಾ ಸೇರಿ ಆಟವಾಡುವುದು, ಒಟ್ಟಾಗಿ ಹಪ್ಪಳ, ಸಂಡಿಗೆ ಮಾಡುವುದು ಇದನ್ನೆಲ್ಲಾ ನೋಡಿದಾಗ ನನಗೆ ಹೊಟ್ಟೆ ಉರಿಯುತ್ತಿತ್ತು. ಛೇ, ನಮ್ಮ ಮನೆಗೆ ಬರುವವರು ಯಾರೂ ಇಲ್ಲವಲ್ಲ ಎಂದು ಬೇಸರ ಮಾಡಿಕೊಂಡಿದ್ದೆ. ಸಂಬಂಧವೆಂದರೆ ಏನು ಎಂಬುದು ಅವರನ್ನು ನೋಡಿದ ಮೇಲೆ ಅರಿವಾಗಿತ್ತು. ಕೊರೊನಾ ಬಂದಿಲ್ಲ ಎಂದರೆ ನಾನು ಹೀಗೆ ಸಾಯುವವರೆಗೂ ಅಂತರ್ಮುಖಿಯಾಗಿಯೇ ಬದುಕುತ್ತಿದ್ದೆನೋ ಏನೋ’ ಎಂಬ ಬೇಸರದ ನುಡಿ ಕಾಲೇಜಿನಲ್ಲಿ ಓದುತ್ತಿರುವ ಅಂಜಲಿಯದ್ದು.

ADVERTISEMENT

ಹೀಗೆ ಕೊರೊನಾ ಒಬ್ಬೊಬ್ಬರಿಗೆ ಒಂದೊಂದು ರೀತಿ ಸಂಬಂಧದ ಮೌಲ್ಯ ಅರಿಯುವಂತೆ ಮಾಡಿದೆ. ಕೊರೊನಾ ಯಾಕಾದರು ಬಂತೋ ಎಂದು ಅವಲತ್ತುಕೊಂಡವರಲ್ಲಿ ಕೊರೊನಾ ಎಂಬುದು ಸಂಬಂಧದ ಗುಟ್ಟನ್ನು ಅರಿಯುವಂತೆ ಮಾಡುತ್ತದೆ ಎಂಬ ಸುಳಿವೂ ಇದ್ದಂತಿರಲಿಲ್ಲ.

ಕುಟುಂಬದ ಬಂಧನಕ್ಕೆ ನಾಂದಿ

ಹುಟ್ಟಿದ ಊರಿನ ಮುಖ ಕಾಣದೇ ದುಬೈ, ಅಮೆರಿಕ, ಬೆಂಗಳೂರು, ಮುಂಬೈ ಎಂದು ಬದುಕು ಕಟ್ಟಿಕೊಂಡಿದ್ದ ಮಂದಿಯೆಲ್ಲಾ ಕೊರೊನಾ ಬಂದ ಮೇಲೆ ಊರಿನ ಕದ ತಟ್ಟಿದ್ದರು. ಊರು ಎಂದರೆ ಕೆಸರು, ಮಣ್ಣು ಎಂದು ಅಸಹ್ಯ ಮಾಡುತ್ತಿದ್ದ ಹೆಣ್ಣುಮಕ್ಕಳು ಕೆಸರು ಗದ್ದೆಯಲ್ಲಿ ಇಳಿದು ನಾಟಿ ಮಾಡಿ ಸಂಭ್ರಮಿಸಿದ್ದರು. ಮದುವೆಯಂತಹ ಸಮಾರಂಭದಲ್ಲಿ ಎಲ್ಲರೂ ಒಂದಾಗಿ ಊಟ ಮಾಡುವಂತೆ ಮನೆ ಮಂದಿಯೆಲ್ಲಾ ಅಂಗಳದಲ್ಲೋ, ಟೆರೆಸ್‌ ಮೇಲೋ ಒಂದಾಗಿ ಕುಳಿತು ಕೈ ತಾಯಿಯದ್ದೋ, ಅಜ್ಜಿಯದ್ದೋ ಕೈ ತುತ್ತು ತಿಂದು ಸಂಭ್ರಮಿಸಿದ್ದರು. ಅದರಲ್ಲೂ ಹಳ್ಳಿ ಮನೆ, ಸಂಬಂಧಿಕರ ಬಗ್ಗೆ ಅಸಡ್ಡೆಯ ಮಾತುಗಳನ್ನಾಡುತ್ತಾ ತಿರುಗುತ್ತಿದ್ದ ಮಂದಿಗೆ ಹಳ್ಳಿ ಹಾಗೂ ಅಲ್ಲಿರುವ ಸಂಬಂಧಿಕರೇ ಕೊರೊನಾ ಸಮಯದಲ್ಲಿ ಹೆಚ್ಚು ಹಿಡಿಸಿದ್ದರು.

ಪ್ರೀತಿ–ಪ್ರೇಮದ ಸಂಬಂಧದಲ್ಲೂ ಬದಲಾವಣೆ

ಮಿಲೇನಿಯಲ್ ಯುಗದ ಯುವಕ–ಯುವತಿಯರಿಗೆ ಪ್ರೀತಿ–ಪ್ರೇಮವೆಲ್ಲಾ ಇಂದು ಬಂದು ನಾಳೆ ಹೋಗುವಂತಹದ್ದು. ಅವರಲ್ಲಿ ಪ್ರೀತಿ–ಪ್ರೇಮದ ಸಂಬಂಧದಲ್ಲಿ ಬದ್ಧತೆ ಕಡಿಮೆ. ಅದರಲ್ಲೂ ಮದುವೆ ಎಂದರೆ ಏನೋ ಅಲರ್ಜಿ. ಜೀವನಪೂರ್ತಿ ಒಂದೇ ಸಂಬಂಧಕ್ಕೆ ಅಂಟಿ ಕೂರುವುದು ಅವರಿಗೆ ಇಷ್ಟವಾದಾಗ ಮಾತು. ಆ ಕಾರಣಕ್ಕೆ ಸಹಜೀವನದಂತಹ ಪದ್ಧತಿಯನ್ನು ಪಾಲಿಸುವವರೇ ಅನೇಕರು. ಆದರೆ ಈ ಕೊರೊನಾ ಅಂತಹ ಮನೋಭಾವ ಹೊಂದಿದವರಲ್ಲೂ ಬದಲಾವಣೆ ತಂದಿದೆ. ಜೀವನಕ್ಕೆ ಶಾಶ್ವತ ಸಂಗಾತಿ ಬೇಕು. ಶಾಶ್ವತ ಸಂಬಂಧ ಬೇಕು ಎನ್ನುವ ಮನೋಭಾವ ಮೂಡುವಂತೆ ಮಾಡಿದೆ. ಒಂಟಿಜೀವನ ಅಥವಾ ಅಲ್ಪಕಾಲದ ಸಂಬಂಧವನ್ನು ಬಿಟ್ಟು ಶಾಶ್ವತ ಸಂಬಂಧವನ್ನು ಹೊಂದುವತ್ತ ಮನಸ್ಸು ಮಾಡುತ್ತಿದ್ದಾರೆ. ಜೊತೆಗೆ ಮದುವೆಯೇ ಬೇಡ ಒಂಟಿಯಾಗಿರುತ್ತೇನೆ ಎಂದು ಪಣ ತೊಟ್ಟವರು ಕೂಡ ಮದುವೆ ಎಂಬ ಮೂರಕ್ಷರದ ಬಂಧನಕ್ಕೆ ಒಳಗಾಗುವ ಮನಸ್ಸು ಮಾಡಿದ್ದಾರೆ.

ಹೊಂದಾಣಿಕೆ ಕಲಿಸಿದ ಕೊರೊನಾ

ಸಂಬಂಧಗಳ ಉಳಿವಿನಲ್ಲಿ ಹೊಂದಾಣಿಕೆಯ ಪಾತ್ರ ಮಹತ್ವದ್ದು. ಆದರೆ ಇತ್ತೀಚೆಗೆ ಅನೇಕ ಸಂಬಂಧಗಳು ಹೊಂದಾಣಿಕೆಯ ಕಾರಣದಿಂದ ದೂರವಾಗುತ್ತಿವೆ. ಜೊತೆಗೆ ಹೊಂದಾಣಿಕೆ ಇಲ್ಲದ ಕಾರಣ ಅದೆಷ್ಟೋ ಮಂದಿ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಂಡಿದ್ದೂ ಇದೆ. ಆದರೆ ಕೊರೊನಾ ಬಂದ ಮೇಲೆ ಬದುಕು ಹೊಂದಾಣಿಕೆಯನ್ನು ಕಲಿಸಿದೆ. ಹೊಸತನ್ನು ಹುಡುಕುವುದು ಮರೆತು ಇರುವುದರಲ್ಲೇ ಜೀವನ ಸಾಗಿಸು ಎಂಬ ಪಾಠವನ್ನು ಕಲಿಸಿದೆ.

ಒಟ್ಟಾರೆ ಕೊರೊನಾ ಬಂದು ಆರೋಗ್ಯ ಕೆಡಿಸಿ, ನೆಮ್ಮದಿ ಕೆಡಿಸಿದೆ, ಬದುಕಿನ ಭಯ ಹುಟ್ಟಿಸಿದೆ ಎಂಬುದೆಲ್ಲಾ ಎಷ್ಟು ನಿಜವೋ ಮನುಷ್ಯನಿಗೆ ಸಂಬಂಧಗಳ ಮೌಲ್ಯವನ್ನು ಅರಿಯುವಂತೆ ಮಾಡಿದ್ದೂ ಅಷ್ಟೇ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.