ADVERTISEMENT

ಮಳೆಗಾಲ ಅಲ್ವೇ, ಹುಷಾರು!

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 3:39 IST
Last Updated 26 ಜೂನ್ 2020, 3:39 IST
   

ಮುಂಗಾರು ಧಾರೆ ಮೈಮನಕ್ಕೆ ಪುಳಕ ಮೂಡಿಸುವ ಸಮಯವಿದು. ಕೊರೊನಾ ಸೋಂಕು, ಲಾಕ್‌ಡೌನ್‌ ಕಾರಣದಿಂದ ಈ ಸಲದ ಬೇಸಿಗೆಯ ಝಳ ಅಷ್ಟು ಅನುಭವಕ್ಕೆ ಬಂದಿಲ್ಲ; ಜೊತೆಗೆ ಆಗಾಗ ಕವಿದ ಮೋಡ, ಸುರಿದ ಮಳೆ ಇಳೆಯನ್ನು ತಂಪಾಗೇ ಇಟ್ಟಿತ್ತು. ಆದರೆ ಈಗ ಆರಂಭವಾಗಿರುವ ಬಿರುಸು ಮಳೆ, ಬಿಸಿಲು ಮತ್ತು ಮೋಡದ ನಡುವೆ ಸುರಿಯುವ ಸೋನೆ ಮಳೆ ಖುಷಿಯ ಜೊತೆಗೆ ಕಾಯಿಲೆಯನ್ನೂ ಹೊತ್ತು ತರುತ್ತದೆ.

ಹವಾಮಾನದಲ್ಲಾಗಿರುವ ಬದಲಾವಣೆ, ಆಹಾರ ಮತ್ತು ನೀರಿಗೆ ಸೇರುವ ಕಲ್ಮಶ, ನಿಂತ ಮಳೆ ನೀರಿನಲ್ಲಿ ಬೆಳೆಯುವ ಸೊಳ್ಳೆಗಳು ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತವೆ. ಹೆಚ್ಚುವ ತೇವಾಂಶವಿರುವ ವಾತಾವರಣ ರೋಗಕಾರಕ ಸೂಕ್ಷ್ಮಾಣು ಜೀವಿಗಳು ಹಾಗೂ ಕೀಟಗಳ ಹಾವಳಿ ಹೆಚ್ಚಾಗಲು ಕಾರಣ. ಇದು ಡೆಂಗೆ, ಮಲೇರಿಯ, ಟೈಫಾಯ್ಡ್‌, ವೈರಲ್‌ ಜ್ವರದಿಂದ ಹಿಡಿದು ಸಾಮಾನ್ಯ ನೆಗಡಿ, ಭೇದಿಯವರೆಗೂ ವಿವಿಧ ಕಾಯಿಲೆಗಳನ್ನು ಅಂಟಿಸುವ ಸಂಭವ ಹೆಚ್ಚು.

‘ಕೋವಿಡ್‌–19 ಜೊತೆ ಮಧ್ಯೆ ಮಧ್ಯೆ ಸುರಿದ ಮಳೆ ಮತ್ತು ಆರಂಭವಾದ ಮುಂಗಾರಿನಿಂದಾಗಿ ಇನ್‌ಫ್ಲೂಯೆಂಜಾ ಜ್ವರ, ಡೆಂಗೆ ಜಾಸ್ತಿಯಾಗಿದೆ. ನಮ್ಮ ಆಸ್ಪತ್ರೆಯಲ್ಲಿ ನಿತ್ಯ 15–20 ಇನ್‌ಫ್ಲೂಯೆಂಜಾ ಪ್ರಕರಣ ಹಾಗೂ 2–3 ಡೆಂಗೆ ಪ್ರಕರಣ ದಾಖಲಾಗುತ್ತಿವೆ. ಮಳೆ ಜಾಸ್ತಿಯಾದಂತೆ ಟೈಫಾಯ್ಡ್‌ ಪ್ರಕರಣಗಳೂ ಹೆಚ್ಚಾಗುವ ಸಂಭವವಿದೆ. ಕಲುಷಿತ ನೀರು, ಸರಿಯಾಗಿ ಬೇಯಿಸದ ಮಾಂಸ ಹಾಗೂ ಬೀದಿ ಬದಿ ಸ್ವಚ್ಛತೆಯಿಲ್ಲದ ಆಹಾರ ಸೇವನೆಯೊಂದ ಈ ಟೈಫಾಯ್ಡ್‌ ಬರುತ್ತದೆ’ ಎನ್ನುತ್ತಾರೆ ನಾರಾಯಣ ಹೆಲ್ತ್‌ ಸಿಟಿ ಕನ್ಸಲ್ಟೆಂಟ್‌ (ಆಂತರಿಕ ಔಷಧ) ಡಾ. ಮಹೇಶ್‌ಕುಮಾರ್‌.

ADVERTISEMENT

ಮುನ್ನೆಚ್ಚರಿಕೆಗಳು

* ಕಾಯಿಸಿದ ನೀರನ್ನು ಹೆಚ್ಚು ಕುಡಿಯಿರಿ. ಗಿಡಮೂಲಿಕೆಗಳ ಬಿಸಿ ಬಿಸಿ ಕಷಾಯ ಸೇವಿಸಿ.

* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಹಸಿ ತರಕಾರಿ, ಹಸಿ ಸೊಪ್ಪನ್ನು ಈ ಕಾಲದಲ್ಲಿ ಸೇವಿಸಬೇಡಿ. ಬೀದಿ ಬದಿ ಮಾರುವ ಆಹಾರ ತಿನ್ನಬೇಡಿ.

* ತರಕಾರಿ ಮತ್ತು ಹಣ್ಣುಗಳನ್ನು ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ತೊಳೆಯಿರಿ.

* ಮಳೆ ನೀರಿನಲ್ಲಿ ನೆನೆಯದಂತೆ ಎಚ್ಚರಿಕೆ ವಹಿಸಿ. ಮಳೆ ನೀರಿನಿಂದ ನೆಗಡಿ, ಜ್ವರ, ಚರ್ಮದ ಅಲರ್ಜಿ ಉಂಟಾಗಬಹುದು.

* ಆಕಸ್ಮಿಕವಾಗಿ ಮಳೆನೀರಿನಲ್ಲಿ ನೆಂದರೂ ಮನೆಗೆ ಬಂದ ಕೂಡಲೇ ಸ್ನಾನ ಮಾಡಿ. ಇದರಿಂದ ಕೊಳೆ ಹೋಗುವುದರ ಜೊತೆಗೆ, ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ.

* ಸೊಳ್ಳೆ ನಿರೋಧಕ ಕ್ರೀಂ ಮೈಗೆ ಲೇಪಿಸಿಕೊಳ್ಳಿ.

* ಸೊಳ್ಳೆ, ಮತ್ತಿತರ ಕೀಟಗಳ ಬಾಧೆಯಿಂದ ಮುಕ್ತಿ ಪಡೆಯಲು ಉದ್ದನೆಯ ತೋಳಿನ ಹಾಗೂ ಕಾಲು ಪೂರ್ತಿ ಮುಚ್ಚುವಂತಹ ಉಡುಪು ಧರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.