ADVERTISEMENT

PV Web Exclusive | ಮನೋಮಯ: ಸಂತೈಸುವಿಕೆಯೇ ಚಾಟಿಂಗ್‌ ಮೂಲ

ಎಸ್.ರಶ್ಮಿ
Published 8 ಅಕ್ಟೋಬರ್ 2020, 2:20 IST
Last Updated 8 ಅಕ್ಟೋಬರ್ 2020, 2:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಈ ಕೋವಿಡ್‌ನ ದುರಿತ ದಿನಗಳಲ್ಲಿ ಸ್ನೇಹ ಬೆಳಗುತ್ತಿದೆ. ಕೆಲವು ಹಳೆಯ ಸ್ನೇಹಿತರು, ಸಹಪಾಠಿಗಳು ವಾಟ್ಸ್‌ ಆ್ಯಪ್‌ಗಳ ಮೂಲಕ ಒಗ್ಗೂಡಿದ್ದಾರೆ. ಪ್ರತಿದಿನದ ಅಡುಗೆಯ ಚಿತ್ರಗಳಿಂದ ಆರಂಭಿಸಿ, ತಮ್ಮ ಹಳೆಯ ಸಂಗ್ರಹದಲ್ಲಿದ್ದ ಫೋಟೊಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳುವಿಕೆಯು ಗುಂಪಿನಲ್ಲಿಯೇ ಆದರೂ, ಕೆಲವೊಮ್ಮೆ ವೈಯಕ್ತಿಕ ಆಸಕ್ತಿಗಳು ಮತ್ತೆ ಚಿಗುರೊಡೆಯುತ್ತಿವೆ.

ಇದೊಂದು ಗುಂಪು. ಇನ್ನೊಂದು ಗುಂಪಿದೆ. ಇಲ್ಲಿ ಎಲ್ಲರೂ ಪರಿಚಿತರಾಗಬೇಕಾಗಿಲ್ಲ. ಸ್ನೇಹಿತರಾಗಬೇಕಾಗಿಲ್ಲ. ಆದರೂ ಮಾತುಗಳು ಬೇಕು. ಪರಸ್ಪರ ಕೇಳ್ವಿಕೆಗೆ ಕಿವಿಯಾಗಬೇಕು. ಇಂಥ ರ್‍ಯಾಂಡಮ್‌ ಚಾಟಿಂಗ್‌ ಹೆಚ್ಚುತ್ತಿದೆ. ವಿಪರೀತವಾಗಿ.

ಪ್ರತಿಯೊಬ್ಬರಿಗೂ ತಮ್ಮನ್ನೊಬ್ಬರು ಕೇಳಬೇಕು ಎಂಬ ಬಯಕೆ. ತಮ್ಮನ್ನು ತಾವು ಒಳಿತೆನಿಸಿಕೊಳ್ಳುವ ಹುಕಿ. ಇದು ಈಗಾಗಲೇ ಪರಿಚಿತರಿಂದ, ಬಂಧುಗಳಿಂದ, ಸಂಗಾತಿಗಳಿಂದಾಗದ ಕೆಲಸ. ಆದರೆ ಮೆಚ್ಚುಗೆ ಯಾರಿಗಿಷ್ಟ ಆಗುವುದಿಲ್ಲ? ಈ ಮೆಚ್ಚುಗೆಯ ಒಂದೆಳೆಯನ್ನು ಅವಲಂಬಿಸಿಯೇರ್‍ಯಾಂಡಮ್‌ ಚಾಟಿಂಗ್‌ ಹೆಚ್ಚುತ್ತದೆ. ಹೆಚ್ಚುತ್ತಿದೆ.

ADVERTISEMENT

ಊಟ, ನಿದ್ದೆ, ತಿಂಡಿ ಇವುಗಳಿಂದ ಆರಂಭವಾಗುವ ಪ್ರಶ್ನೆಗಳು ನಿಧಾನಕ್ಕೆ ವೈಯಕ್ತಿಕ ಬದುಕಿನಲ್ಲಿ ಇಣುಕಲಾರಂಭಿಸುತ್ತವೆ. ಕೆಲವೊಮ್ಮೆ ನಮ್ಮನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಒಂದಷ್ಟು ಮಾತುಗಳು ನಮ್ಮ ಎಲ್ಲೆಯನ್ನು ಮೀರುತ್ತವೆ. ಹೀಗಾದಾಗ ಕೆಲವೊಮ್ಮೆ ಅಪಾಯಕಾರಿ ವಲಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಈ ಬಗ್ಗೆ ಶಿವಮೊಗ್ಗದ ಮನಃಶಾಸ್ತ್ರಜ್ಞೆ ಕೆ.ಎಸ್‌.ಪವಿತ್ರಾ ಅವರು ಹೆಚ್ಚಿನ ಬೆಳಕು ಚೆಲ್ಲಿದ್ದರು. ಸ್ನೇಹಸಾಂಗತ್ಯವೊಂದು ಸ್ನೇಹಕ್ಕೂ ಮೀರಿದ ಬಾಂಧವ್ಯವಾಗಿ ಬೆಳೆಯುವ ಪರಿ ತೀರ ಸುಲಭವಾಗಿದೆ. ಮೊದಲು ಮಾತುಗಳಲ್ಲಿ ಹೇಳಬೇಕೆಂದರೆ, ಬರೆಯಬೇಕೆಂದರೆ ಮುಜುಗರ ಪಡಬೇಕಾಗ್ತಿತ್ತು. ಇದೀಗ ಇಮೊಜಿಗಳು ಇಂಥ ಭಾವನೆಗಳನ್ನು ದಾಟಿಸಲು ಅನುಕೂಲ ಮಾಡಿಕೊಟ್ಟಿವೆ. ಸರಳವಾಗಿಸಿವೆ.

ಕಣ್ತುಂಬ ಪ್ರೀತಿಯನ್ನು ತೋರುವುದು, ಕಣ್ಣಲ್ಲೇ ಪ್ರೀತಿ ಸೂಸುವುದು, ಮುತ್ತೊಂದು ತೂರಿಬಿಡುವುದು, ತಬ್ಬಿಕೊಳ್ಳಲು ಬಾಹು ಅಗಲಿಸುವುದು.. ಇವೆಲ್ಲವೂ ಅತಿ ಸುಲಭ. ಲಜ್ಜೆಯೆಂಬ ಪರದೆಯ ಅಗತ್ಯ ಇಲ್ಲವೇ ಇಲ್ಲ. ಇದೆಲ್ಲವೂ ಟೆಕ್ಸ್ಟ್ ಮಾಡುವ ವಿಷಯವಾಯಿತು.

ಮಾತಿನ ವಿಚಾರ ಬಂದಾಗ ಈಗ ಎಲ್ಲವೂ ಮೆಲ್ಲುಸಿರಿನಲ್ಲಿರುವ ಮಾತುಗಳನ್ನು ಕೇಳಲು ಇಷ್ಟ ಪಡುವವರೆ. ಅದೇ ಕಾರಣಕ್ಕೆ ನಿಮ್ಮ ಫೋನಿನಲ್ಲಿಯೂ ಆಗಾಗ ಆಕರ್ಷಕ ಗೆಳೆಯ, ಗೆಳತಿ ಕಾಯುತ್ತಿದ್ದಾಳೆ. ಏಕಾಂಗಿಯೇ, ಒಂಟಿತನ ಕಾಡುತ್ತಿದೆಯೇ ಎಂಬಂಥ ಜಾಹಿರಾತುಗಳು ಮಿಂಚುತ್ತಿರುತ್ತವೆ.

ಇಂಥಲ್ಲಿ ಬರುವ ಕರೆಗಳೂ ತಮ್ಮ ಒಂಟಿತನವನ್ನು ನೀಗಿಸಲೆಂದೇ ಬರುತ್ತವೆ. ಇಲ್ಲಾಂದ್ರೆ ಕಾಸು ಖರ್ಚು ಮಾಡಿಕೊಂಡು ಇನ್ನೊಬ್ಬರನ್ನು ಕೇಳುವ ಪ್ರಸಂಗ ಬಂದಿರುವುದೇಕೆ?

ಈ ಒಂಟಿತನ ಸ್ವಯಂ ತಂದುಕೊಂಡಿರುವುದು. ಅಗತ್ಯಕ್ಕಿಂತಲೂ ಹೆಚ್ಚು ಹೊತ್ತು ಫೋನುಗಳಲ್ಲಿ, ಸ್ಕ್ರೀನ್‌ಗಳಲ್ಲಿ ಸಮಯ ಕಳೆಯುವವರಿಗೆ ಈ ಕೇಳ್ವಿಕೆ ಅತ್ಯಗತ್ಯವಾಗಿರುತ್ತದೆ. ಕೆಲವೊಮ್ಮೆ ಇದು ನಿಮ್ಮ ಖಾಸಗಿ ಬದುಕನ್ನೇ ನುಂಗುತ್ತಿದ್ದಲ್ಲಿ ಅದನ್ನು ಎಚ್ಚರಿಕೆಯ ಗಂಟೆಯೆಂದೇ ಭಾವಿಸಬೇಕು.

ಒಂದು ವೇಳೆ, ನಿಮ್ಮ ಫೋನು ಎಲ್ಲರ ಕೈಗೆ ಸಿಕ್ಕಾಗಲೂ, ಲಾಕ್‌ ಹಾಕದೇ ಇದ್ದಾಗಲೂ ಕ್ಷೇಮವಾಗಿದ್ದೀರೆಂದರೆ ನಿಮ್ಮ ಬಾಂಧವ್ಯ ಸುರಕ್ಷಿತ ವಲಯದಲ್ಲಿದೆ ಎಂದರ್ಥ. ಮತ್ತು ನೀವು ಡಿಲಿಟ್‌ ಮಾಡದೇ ಇರುವ ಸಂದರ್ಭದಲ್ಲಿದ್ದರೂ ನೀವು ಸುರಕ್ಷಿತ ಬಾಂಧವ್ಯದಲ್ಲಿರುವಿರಿ ಎಂದರ್ಥ. ಒಂದು ವೇಳೆ ಚಾಟ್‌ ಹಿಸ್ಟರಿಯನ್ನು ಡಿಲಿಟ್‌ ಮಾಡುತ್ತಿದ್ದಲ್ಲಿ ಮನದೊಳಗೆ ಮನದೊಡೆಯ ಒಪ್ಪದ ಕೆಲಸ ಮಾಡುತ್ತಿರುವಿರಿ ಎಂದೇ ಅರ್ಥ.

ಇಂಥ ಬೆಳವಣಿಗೆಗಳು ನಿಮಗೆ ಗೊತ್ತಿಲ್ಲದಂತೆಯೇ ಆತಂಕವನ್ನು ಅನುಭವಿಸಲಾರಂಭಿಸುವಿರಿ. ಇದು ನಿಧಾನಕ್ಕೆ ನಿಮ್ಮನ್ನು ವಿಷ ವರ್ತುಲಕ್ಕೆ ಸೆಳೆದೊಯ್ಯುತ್ತದೆ. ಎಲ್ಲರ ನಡುವೆ ಬಂದಾಗ ಸಂದೇಶ ಬಂದರೆ, ಕರೆ ಬಂದರೆ ಎಂಬ ಆತಂಕ. ಮಾರುತ್ತರಿಸಿದಿದ್ದಲ್ಲಿ, ಪ್ರತಿಕ್ರಿಯಿಸದಿದ್ದಲ್ಲಿ ಏನಾಗುವುದೋ ಎಂಬ ಆತಂಕ, ಎಲ್ಲರಿಗೂ ಗೊತ್ತಾದರೆ..? ಸ್ವೀಕರಿಸುವರೆ? ಅವಮಾನಿಸುವರೆ..? ಅನುಮಾನಿಸುವರೆ... ಇಂಥ ಆತಂಕಗಳು ನಿಮ್ಮನ್ನು ಒಳಗೊಳಗೇ ಖಿನ್ನತೆಗೆ ಜಾರುವಂತೆ ಮಾಡುತ್ತವೆ.

ಒಂಟಿತನ ನಿವಾರಣೆಗೆಂದು ಆರಂಭವಾದ ಇಂಥ ಮಾತುಗಳು ಕೊನೆಕೊನೆಗೆ ನಿಮ್ಮನ್ನು ಗುಂಪಿನಲ್ಲಿಯೇ ಒಂಟಿತನ ಅನುಭವಿಸುವಂತೆ ಮಾಡುತ್ತವೆ. ಪ್ರತಿ ಕ್ಷಣವೂ ಹೊಸ ಮಾತಿಗೆ ಹಾತೊರೆಯುವುದು, ನಿರೀಕ್ಷಿತ ಪ್ರತಿಕ್ರಿಯೆ, ಸ್ಪಂದನ ದೊರೆಯದಿದ್ದಲ್ಲಿ ಮತ್ತೊಂದು ಸಾಂಗತ್ಯಕ್ಕೆ ಹಾತೊರೆಯುವುದು, ಪ್ರತಿ ಸಾಂಗತ್ಯದಲ್ಲಿಯೂ ಕೇಳ್ವಿಕೆಗೆ ಒಳಪಡುತ್ತ, ಇನ್ನಷ್ಟು ಭಾವನಾತ್ಮಕ ಬ್ಯಾಗೇಜು ಹೊರುವಂತಾಗುವುದು..

ಸದ್ಯಕ್ಕೆ ಇಂಥ ಚಾಟಿಂಗುಗಳು, ಇದರಿಂದ ವೈಯಕ್ತಿಕ ವಲಯಕ್ಕೆ ಬಂದವರು ಬೆದರಿಕೆ ಒಡ್ಡುವ, ಆ ಬೆದರಿಕೆಯಿಂದಾಗಿ ಖಿನ್ನತೆಗೆ ಒಳಗಾದ ಪ್ರಕರಣಗಳು ಹೆಚ್ಚಾಗಿವೆ ಎನ್ನುತ್ತಾರೆ ಡಾ. ಪವಿತ್ರಾ.

ಇಂಥ ಮಾತುಗಾರಿಕೆಯ ಚಕ್ರವ್ಯೂಹದಿಂದಾಚೆ ಬರಲಾಗದೆ?

* ಖಂಡಿತ ಸಾಧ್ಯವಿದೆ. ಕೇಳ್ವಿಕೆಯನ್ನು ವೈಯಕ್ತಿಕ ಬದುಕಿನ ಹಂತಕ್ಕೆ ತರಬಾರದು

* ನಿಮ್ಮ ಹವ್ಯಾಸಗಳನ್ನು, ಆಸಕ್ತಿಗಳನ್ನು ಹಂಚಿಕೊಳ್ಳಿ

* ಯಾವುದೇ ಕಾರಣಕ್ಕೂ ಬ್ಯಾಂಕಿನ ವಿವರ, ವೈಯಕ್ತಿಕ ವಿವರ ಹಂಚಿಕೊಳ್ಳಬೇಡಿ

* ಚಾಟುಗಳನ್ನು ಆರಂಭಿಸುವ ಮೊದಲೇ ಸಾಮಾನ್ಯ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿ

* ಅಪರಿಚಿತರೊಡನೆ ಸಂವಹನ ಮಾಡುತ್ತಿದ್ದಲ್ಲಿ, ಮನೆಯ ಸದಸ್ಯರನ್ನು ಅವರೊಂದಿಗೆ ಪರಿಚಯಿಸಿ

* ಗುರುತನ್ನು ಬಿಟ್ಟುಕೊಡದವರೊಡನೆ, ಗುಟ್ಟು ಕಾಪಾಡು ಎನ್ನುವವರೊಡನೆ ಬಾಂಧವ್ಯ ಮುಂದುವರಿಸದಿರಿ

* ಯಾವುದೇ ಕಾರಣಕ್ಕೂ ನಿಮ್ಮ ಚಿತ್ರಗಳನ್ನು ಹಂಚಿಕೊಳ್ಳಬೇಡಿ

* ವಿಡಿಯೊ ಕಾಲ್‌ನಲ್ಲಿ ಮುಂದುವರಿದರೆ ಸಭ್ಯತೆಯ ಎಲ್ಲೆ ಮೀರದಿರಿ

ಏನೆಲ್ಲ ಎಚ್ಚರವಹಿಸಿದ ನಂತರವೂ ಮೈಮನಸು ಮರೆತು ಮುಂದುವರಿದರೆ, ಅದರಿಂದ ತೊಂದರೆ ಆದರೆ ಒಬ್ಬರೇ ಸಹಿಸಬೇಡಿ, ಕೊರಗಬೇಡಿ. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ. ದೂರು ಸಲ್ಲಿಸಲೂ ಹಿಂಜರಿಯಬೇಡಿ.

ಇಷ್ಟಕ್ಕೂ ಈ ಬಾಂಧವ್ಯ ಆರಂಭವಾದ ಉದ್ದೇಶ ಪರಸ್ಪರ ಮೆಚ್ಚುಗೆ ಸೂಸಿ, ಸಂತೋಷದಿಂದಿರಲು ಎನ್ನುವುದನ್ನು ಮರೆಯಬೇಡಿ. ಆ ಆನಂದ ಆತಂಕಜನ್ಯವಾಗದೇ ಇರಲಿ ಎಂಬ ಎಚ್ಚರ ಸದಾ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.