ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಎಂಜಲು ಪರೀಕ್ಷೆ ಹೆಚ್ಚು ಜನಪ್ರಿಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:31 IST
Last Updated 18 ಡಿಸೆಂಬರ್ 2020, 19:31 IST
 ಎಂಜಲು ಪರೀಕ್ಷೆ
ಎಂಜಲು ಪರೀಕ್ಷೆ    

ಕೋವಿಡ್‌–19 ಶುರುವಾದಾಗ ದ್ರವವನ್ನು ಮೂಗಿನ ಮೂಲಕ ತೆಗೆದು ಪರೀಕ್ಷೆಗೆ ಒಳಪಡಿಸುವುದು ಕೊರೊನಾ ಸೋಂಕು ಪತ್ತೆಗೆ ಅತ್ಯಂತ ನಿಖರವಾದ ತಪಾಸಣಾ ಪದ್ಧತಿಯಾಗಿತ್ತು. ಆದರೆ ಈ ಬಿಕ್ಕಟ್ಟು ಮುಂದುವರಿದಂತೆ ಎಂಜಲು ತೆಗೆದು ಪರೀಕ್ಷೆಗೆ ಒಳಪಡಿಸುವ ಪದ್ಧತಿ ಜನಪ್ರಿಯವಾಗುತ್ತಿದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ ಕೋವಿಡ್‌–19ಗೆ ಕಾರಣವಾಗುವ ಸಾರ್ಸ್‌– ಕೋವ್‌–2 ವೈರಸ್‌ ಪತ್ತೆ ಹಚ್ಚಲು ಎಂಜಲಿನ ಮಾದರಿ ಕೂಡ ಸೂಕ್ತ. ಅಧ್ಯಯನದಲ್ಲಿ ಪಾಲ್ಗೊಂಡ ಅಮೆರಿಕದ ಯೇಲ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನ ವಿಜ್ಞಾನಿ ಆ್ಯನ್‌ ವೈಲಿ ಪ್ರಕಾರ ಕೆಲವರು ಮೂಗಿನ ಮೂಲಕ ದ್ರವ ತೆಗೆಸಲು ಹೆದರುತ್ತಾರೆ. ಹೀಗಾಗಿ ಈ ವಿಷಯದಲ್ಲಿ ಇನ್ನೊಂದು ಆಯ್ಕೆ ಇದ್ದರೆ ಸೂಕ್ತವೆಂದು ಎಂಜಲಿನ ಮಾದರಿಯ ಬಗ್ಗೆ ಅಧ್ಯಯನ ನಡೆಸಲಾಯಿತು.

ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ವರದಿಯ ಪ್ರಕಾರ ಮೂಗಿನ ಮೂಲಕ ತೆಗೆದ
ದ್ರವ ಹಾಗೂ ಬಾಯಿಯಲ್ಲಿರುವ ಎಂಜಲು– ಈ ಎರಡೂ ಮಾದರಿಯನ್ನು ತಪಾಸಣೆ ಮಾಡಿ ಫಲಿತಾಂಶವನ್ನು ತಾಳೆ ಹಾಕಿದಾಗ ಅಂತಹ ವ್ಯತ್ಯಾಸವೇನೂ ಕಂಡುಬಂದಿಲ್ಲ.

ADVERTISEMENT

ಹಾಗೆ ನೋಡಿದರೆ ಎಂಜಲಿನಲ್ಲಿ ಸಾರ್ಸ್‌– ಕೋವ್‌–2 ಜೆನೆಟಿಕ್‌ ಅಂಶ ಹೆಚ್ಚಿನ ಪ್ರಮಾಣದಲ್ಲಿತ್ತು. ಜೊತೆಗೆ ಸೋಂಕು ಪತ್ತೆಯಾದ 10 ದಿನಗಳ ನಂತರವೂ ಎಂಜಲಿನಲ್ಲಿ ಈ ಅಂಶ ಅಧಿಕ ಪ್ರಮಾಣದಲ್ಲಿರುವದನ್ನು ನಿಖರವಾಗಿ ಪತ್ತೆ ಮಾಡಲಾಯಿತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಇತ್ತೀಚೆಗೆ ನ್ಯೂಯಾರ್ಕ್‌ನ ಮೆಮೋರಿಯಲ್‌ ಸ್ಲೋವನ್‌ ಕೆಟ್ಟರಿಂಗ್‌ ಕ್ಯಾನ್ಸರ್‌ ಸೆಂಟರ್‌ ಕೂಡ ಇಂತಹುದೇ ಅಧ್ಯಯನ ನಡೆಸಿತ್ತು. ಅಂದರೆ ಎಂಜಲು ಮತ್ತು ಮೂಗಿನ ಮೂಲಕ ತೆಗೆದ ದ್ರವದ ಪರೀಕ್ಷೆ ನಡೆಸಿ ಫಲಿತಾಂಶವನ್ನು ತಾಳೆ ಹಾಕಿ ಎಂಜಲು ಮಾದರಿ ಕೂಡ ಪರೀಕ್ಷೆ ನಡೆಸಲು ಸಾಕು ಎಂದು ಹೇಳಿತ್ತು. ಇದರ ವರದಿ ಜರ್ನಲ್‌ ಆಫ್ ಮಾಲಿಕ್ಯುಲರ್‌ ಡಯಾಗ್ನಸ್ಟಿಕ್ಸ್‌ನಲ್ಲಿ ಪ್ರಕಟವಾಗಿದೆ.

ಹಾಗೆಯೇ ಮಾದರಿಯನ್ನು ಸಂಗ್ರಹಿಸಿ ವಾತಾವರಣದ ಉಷ್ಣಾಂಶದಲ್ಲಿಟ್ಟ ಎಂಟು ತಾಸುಗಳ ನಂತರವೂ ಮಾದರಿಯಲ್ಲಿರವ ವೈರಸ್‌ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಬರುವುದಿಲ್ಲ ಎಂದು ಕೂಡ ಅಧ್ಯಯನ ಹೇಳಿದೆ.

ಮೂಗಿನ ಮೂಲಕ ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಲು ಹೆದರುವವರು ತಾವೇ ಸ್ವತಃ ಎಂಜಲಿನ ಮಾದರಿ ನೀಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಕೋವಿಡ್‌–19 ಪರೀಕ್ಷೆಯಲ್ಲಿ ಇರುವ ಈ ಸವಾಲಿಗೆ ಇನ್ನೊಂದು ಆಯ್ಕೆಯಿರುವುದರಿಂದ ತಪಾಸಣೆಗೆ ಯಾವುದೇ ಹಿಂಜರಿಕೆಯಿಲ್ಲದೇ ಮುಂದೆ ಬರಬಹುದು. ಹಾಗೆಯೇ ಸಂಗ್ರಹದ ವೆಚ್ಚ ಮತ್ತು ಸಂಗ್ರಹಿಸಲು ತಗಲುವ ಸಮಯದಲ್ಲಿ ಕೂಡ ಉಳಿತಾಯ ಮಾಡಬಹುದು.

ಅದರಲ್ಲೂ ವೃದ್ಧರಿಗೆ ಮತ್ತು ಮಕ್ಕಳಿಗೆ ಈ ಪರೀಕ್ಷೆ ಅನುಕೂಲಕರ. ಅಮೆರಿಕ ಮತ್ತು ಯೂರೋಪ್‌ನ ಕೆಲವು ದೇಶಗಳಲ್ಲಿ ಈಗಾಗಲೇ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಮುಂದಿನ ಜನವರಿಯಲ್ಲಿ ಎಲ್ಲಾ ಕಡೆ ಆರಂಭಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.