ADVERTISEMENT

ಜಂಕ್‌ಫುಡ್‌ಗೆ ಬೈ ಹೇಳಿ: ಆರೋಗ್ಯ ಕಾಪಾಡಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 9:50 IST
Last Updated 14 ಸೆಪ್ಟೆಂಬರ್ 2019, 9:50 IST
   

ಯಾವುದನ್ನು ಇಂದಿನ ಯುವಕ/ ಯುವತಿಯರು ಶೋಕಿ ಹೆಸರಿನಲ್ಲಿ ತಿನ್ನುತ್ತಿದ್ದಾರೋ ಮತ್ತು ಮಕ್ಕಳಿಗೆ ಪ್ರೀತಿ ಹೆಸರಿನಲ್ಲಿ ನಾವು ಕೊಡಿಸುತ್ತಿದ್ದೇವೆಯೋ ಅಂತಹ ಶುಗರ್ ಕ್ಯಾಂಡಿ, ಚಿಪ್ಸ್‌, ಪಿಜ್ಜಾ, ಬರ್ಗರ್, ಮೃದು ಪಾನೀಯಗಳು, ಸ್ಯಾಂಡ್‌ವಿಚ್, ಸಿಹಿತಿನಿಸುಗಳು, ಪೇಸ್ಟ್ರೀಸ್‌ ಇವೆಲ್ಲಾ ಜಂಕ್‌ಫುಡ್‌ಗಳೇ. ಜಂಕ್ ಪದಕ್ಕೆ ಕನ್ನಡದಲ್ಲಿ ಕಚಡಾ, ಕಸಕಡ್ಡಿ, ಬಿಸಾಡಿದ್ದು ಹೀಗೆ ವಿವಿಧ ಅರ್ಥಗಳಿವೆ. ಇವುಗಳನ್ನು ಯಾಕೆ ಹಾಗೆ ಕರೆಯುತ್ತೇವೆ ಎಂದರೆ ಈ ಜಂಕ್‌ಫುಡ್‌ನಲ್ಲಿ ಯಾವುದೇ ಪೌಷ್ಟಿಕಾಂಶಗಳು ಇರುವುದಿಲ್ಲ. ಇದರಲ್ಲಿ ನಾರಿನ ಅಂಶ, ಪ್ರೊಟೀನ್, ವಿಟಮಿನ್ ಹಾಗೂ ಖನಿಜಗಳು ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಅಲ್ಲದೆ ಸಕ್ಕರೆ ಅಥವಾ ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಹೆಚ್ಚು ಕ್ಯಾಲೊರಿಯನ್ನು ಹೊಂದಿರುತ್ತದೆ.

ಫಾಸ್ಟ್‌ಫುಡ್ ಎಲ್ಲವೂ ಜಂಕ್‌ಫುಡ್‌ ಅಲ್ಲ, ಜಂಕ್‌ಫುಡ್‌ ಎಲ್ಲವೂ ಫಾಸ್ಟ್‌ಫುಡ್ ಅಲ್ಲ. ಬಹಳಷ್ಟು ವೇಳೆ ಜಂಕ್‌ಫುಡ್‌ ಅನ್ನು ಫಾಸ್ಟ್‌ಫುಡ್‌ ತರಹ ಬೇಗ ಸಿದ್ಧಪಡಿಸಿಕೊಡಲಾಗುತ್ತದೆ. ಜಂಕ್ ಎಂದರೆ ಆಹಾರದ ಗುಣಮಟ್ಟ ಕಡಿಮೆ ಇರುವುದು, ಯಾವುದೇ ಪೌಷ್ಟಿಕಾಂಶಗಳಿಲ್ಲದ, ಅಡ್ಡಪರಿಣಾಮಗಳನ್ನು ಉಂಟು ಮಾಡುವ ‘ಕಸ’ ಎಂದೇ ಅರ್ಥ.

ಜಂಕ್‌ಫುಡ್‌ ಏಕೆ ಬೇಡ?

ADVERTISEMENT

ಇವುಗಳನ್ನು ಹೆಚ್ಚು ಸೇವಿಸುವುದಕ್ಕೆ ಮುಖ್ಯ ಕಾರಣ ಇದು ಬಹಳ ರುಚಿಯಾಗಿರುತ್ತದೆ ಎಂದು. ಆದರೆ ಅದರಲ್ಲಿರುವ ಅತೀ ಹೆಚ್ಚಿನ ಸೋಡಿಯಂನಿಂದಾಗಿ ಬಿ.ಪಿ. ಹೆಚ್ಚಾಗುತ್ತದೆ. ತೂಕ ಹೆಚ್ಚುತ್ತದೆ. ಯಕೃತ್, ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ಇದರಲ್ಲಿ ಸಂತೃಪ್ತ ಕೊಬ್ಬು, ಕೊಲೆಸ್ಟರಾಲ್ ಹೆಚ್ಚಿರುತ್ತದೆ. ಹೃದಯದ ತೊಂದರೆಯನ್ನು ಹೆಚ್ಚಿಸುತ್ತದೆ. ಬ್ರೆಡ್‌, ಟೊಮೆಟೊ, ಚಿಪ್ಸ್‌ ಇವುಗಳಲ್ಲಿ ಸಂಸ್ಕರಿಸಿದ ಕಾರ್ಬೊಹೈಡ್ರೇಟ್ ಹೆಚ್ಚಾಗಿದ್ದು, ಇವು ಮಧುಮೇಹವಿರುವವರ ಜೀವಕಣಗಳು ಇನ್ಸುಲಿನ್‌ಗೆ ಪ್ರತಿಕ್ರಿಯಿಸದಂತೆ ಮಾಡುತ್ತವೆ. ಯಕೃತ್‌ನಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.

15 ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ಬರ್ಗರ್ ತಿನ್ನಲು ಆಸೆಪಟ್ಟರೆ ಪರವಾಗಿಲ್ಲ. ಆದರೆ ಹೆಚ್ಚು ಹೆಚ್ಚು ತಿಂದರೆ ಹೃದಯದ ತೊಂದರೆ, ಮಧುಮೇಹ ಉಂಟಾಗುತ್ತದೆ.

ಮೆದುಳಿನ ಮೇಲೆ ಪರಿಣಾಮ

ಬೊಜ್ಜು ಬರಲು ಜಂಕ್‌ಫುಡ್‌ ಬಹುಮುಖ್ಯ ಕಾರಣ. ಇದರಿಂದಾಗಿ ಮಧುಮೇಹ ಬರುವ ಸಾಧ್ಯತೆಗಳಿವೆ. ಸಂಶೋಧನೆಗಳ ಪ್ರಕಾರ ಜಂಕ್‌ಫುಡ್ ನಮ್ಮ ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಜಂಕ್‌ಫುಡ್ ತಿನ್ನುವುದರಿಂದ ಇನ್ಸುಲಿನ್ ಹೆಚ್ಚಾಗಿ ಉತ್ಪತ್ತಿಯಾಗಿ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮರೆವಿನ ಕಾಯಿಲೆ ಉಂಟಾಗುತ್ತದೆ. ಬಿ.ಪಿ. ಹಾಗೂ ಕೊಲೆಸ್ಟರಾಲ್ ಹೆಚ್ಚಾಗಿ ಮೆದುಳಿಗೆ ರಕ್ತ ಸಂಚಾರ ವ್ಯತ್ಯಯ ಮಾಡುವುದಲ್ಲದೆ, ಇನ್ಸುಲಿನ್‌ಗೆ ಮೆದುಳಿನ ಕಣಗಳು ಸಮರ್ಪಕವಾಗಿ ಸ್ಪಂದಿಸುವುದಿಲ್ಲ ಎಂದು ಅಧ್ಯಯನಗಳು ತಿಳಿಸುತ್ತವೆ.

ಅತಿಯಾದ ಕೊಬ್ಬು ಹಾಗೂ ಸಕ್ಕರೆಯ ಪ್ರಮಾಣದಿಂದ ವ್ಯಕ್ತಿಯ ಇನ್ಸುಲಿನ್ ಮಟ್ಟ ಹೆಚ್ಚಾಗಿ ಮಾಂಸಖಂಡಗಳ ಹಾಗೂ ಯಕೃತ್ತಿನ ಜೀವಕಣಗಳು, ಹಾರ್ಮೋನ್‌ಗೆ ಸ್ಪಂದಿಸದಂತೆ ಮಾಡುತ್ತವೆ. ಮೆದುಳಿನ ಯೋಚಿಸುವ ಶಕ್ತಿ ಹಾಗೂ ಸೃಜನಾತ್ಮಕತೆಯ ಶಕ್ತಿ ಕಡಿಮೆಯಾಗುತ್ತದೆ.

ಜಂಕ್‌ಫುಡ್‌ನಲ್ಲಿ ಹೆಚ್ಚು ಕ್ಯಾಲೊರಿಗಳಿದ್ದರೂ ನಮ್ಮ ದೇಹಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗುವುದಿಲ್ಲ. ಹಾಗಾಗಿ ಇದನ್ನು ‘ಖಾಲಿ ಕ್ಯಾಲೊರಿ’ ಎನ್ನುತ್ತೇವೆ. ಇದರಲ್ಲಿರುವ ಕ್ಯಾಲೊರಿಗಳು ಸಕ್ಕರೆ ಮತ್ತು ಕೊಬ್ಬಿನಿಂದ ಬಂದಂತವುಗಳು. ಹಾಗಾಗಿ ಇವು ಬೊಜ್ಜು ಉಂಟು ಮಾಡಿ ದೇಹದ ತೂಕವನ್ನು ಹೆಚ್ಚಿಸುತ್ತವೆ.

ಜಂಕ್‌ಫುಡ್‌ ನೀರನ್ನು ದೇಹದಲ್ಲಿ ಹಿಡಿದಿಡುವುದರಿಂದ ನಾವು ಊದಿಕೊಂಡಂತಹ ಅನುಭವ ನಮಗಾಗುತ್ತದೆ. ಇದರಿಂದ ಚಟುವಟಿಕೆ ಇಲ್ಲದಂತಾಗಿ ನಿಃಶ್ಯಕ್ತಿ ಉಂಟಾಗುತ್ತದೆ.

ಜಂಕ್‌ಫುಡ್‌ ಅನ್ನು ನಾವು ಏಕೆ ಅಷ್ಟೊಂದು ಬಯಸುತ್ತೇವೆ? ನಾಲಿಗೆಗೆ ಸಿಗುವ ರುಚಿ! ಕೊಬ್ಬು ಮತ್ತು ಸಕ್ಕರೆ ಅಂಶಗಳು ಮೆದುಳಿನಲ್ಲಿ ಮಾದಕ ವಸ್ತುಗಳು ಉಂಟು ಮಾಡುವಂತಹ ವ್ಯಸನವನ್ನು ಉಂಟು ಮಾಡುತ್ತವೆ. ಸೊಪ್ಪಿಗೆ ನಾವೆಷ್ಟು ವ್ಯಸನಕ್ಕೊಳಗಾಗಿದ್ದೇವೆ? ಆದರೆ ಐಸ್‌ಕ್ರೀಮ್, ಚಿಪ್ಸ್, ಸೋಡಾ ಇವುಗಳ ಹೆಸರು ಹೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ.

ಜಂಕ್‌ಫುಡ್‌ನಿಂದ ದೂರವಿರುವುದು ಹೇಗೆ?

ಆರೋಗ್ಯದ ಬಗ್ಗೆ, ತಮ್ಮ ದೇಹದ ಬಗ್ಗೆ ಹೆಚ್ಚಿನ ಕಾಳಜಿ ಇರುವ ಜನ ಈ ಜಂಕ್‌ಫುಡ್‌ ಮುಟ್ಟುವುದೇ ಇಲ್ಲ ಎಂಬ ಸತ್ಯ ನಿಮಗೆ ತಿಳಿದಿದೆಯೇ?

ಜಂಕ್‌ಫುಡ್ ಹೆಚ್ಚು ತಿನ್ನಲು ಇದು ಅಗ್ಗವಾಗಿ ಸಿಗುವಂತಹುದು. ಹೆಚ್ಚು ರುಚಿಕರ ಎಂಬುದು ಒಂದು ಕಾರಣ. ಇಷ್ಟು ದಿನ ನಾವು ಜಂಕ್‌ಫುಡ್‌ ತಿಂದೂ ತಿಂದೂ ನಮ್ಮ ನಾಲಿಗೆ, ದೇಹ ಒಗ್ಗಿ ಹೋಗಿರುವುದು ಜಂಕ್‌ಫುಡ್ ಬಿಡದಿರುವುದಕ್ಕೆ ಮುಖ್ಯ ಕಾರಣ.

ಇಂತಹ ಕಸದ ಪದಾರ್ಥವನ್ನು ನಾವು ತಂದೆ–ತಾಯಿಯರು ಮಕ್ಕಳಿಗೆ ಕೊಡಿಸುವುದನ್ನು ಮೊದಲು ಬಿಡಬೇಕು. ಇದಕ್ಕೂ ಮುನ್ನ ನಾವು ಬಿಡಬೇಕು. ಮೃದು ಪಾನೀಯಗಳಲ್ಲಿ ಕ್ರಿಮಿನಾಶಕಗಳನ್ನು ಬಳಸುತ್ತಾರೆ. ಇದರ ಬದಲು ಹಣ್ಣು, ಎಳನೀರು ಸೇವಿಸುವುದು ಉತ್ತಮ. ಈ ವಿಷಯದಲ್ಲೂ ನಾವು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾಗುತ್ತದೆ.

ಪ್ರತಿದಿನ ಬೆಳಿಗ್ಗೆ ಎದ್ದಕೂಡಲೇ ಈ ಜಂಕ್‌ಫುಡ್‌ಗಳನ್ನು ತಿನ್ನುವುದಿಲ್ಲ ಎಂದು 10 ಬಾರಿ ಹೇಳಿಕೊಳ್ಳಿ. ಹಾಗೊಂದು ವೇಳೆ ತಿಂದರೆ ಆ ತಪ್ಪಿಗೆ 4.5 ಕಿ.ಮೀ. ನಡಿಗೆ ಮಾಡಿ. ಎಂದಿಗಿಂತ ಹೆಚ್ಚು ವ್ಯಾಯಾಮ ಮಾಡಿ. ಟಿ.ವಿ. ನೋಡುವಾಗ ಜಾಹೀರಾತು ಬಂದಾಗ ಗಮನ ಬೇರೆಡೆಗೆ ತಿರುಗಿಸಿ.ಇವೆಲ್ಲಾ ಒಂದೇ ರಾತ್ರಿಯಲ್ಲಿ ಆಗುವಂತಹುದಲ್ಲ. ಇದನ್ನು ಸಾಧಿಸಲಿಕ್ಕೆ ಧೃಡ ನಿರ್ಧಾರ, ಛಲ, ಆತ್ಮವಿಶ್ವಾಸ ಬೇಕು.

ಜಂಕ್‌ಫುಡ್‌ಗೆ ಬದಲಾಗಿ..

* ಚಾಕೊಲೇಟ್ ಕ್ಯಾಂಡಿಬಾರ್‌ಗೆ ಬದಲಾಗಿ ಕಲ್ಲುಸಕ್ಕರೆ ಬಳಸಿ.

* ಚಿಪ್ಸ್‌ಗೆ ಬದಲಾಗಿ ಸಾಧಾರಣ (ಬೆಣ್ಣೆ ರಹಿತ) ಪಾಪ್‌ ಕಾರ್ನ್ ತಿಂದು ನೋಡಿ.

* ಚಿಪ್ಸ್‌ಗೆ ಬದಲಾಗಿ ಬೇಯಿಸಿದ ತರಕಾರಿ ತಿನ್ನಿ

* ಡ್ರೈ ಫ್ರೂಟ್ಸ್ ತಿನ್ನಿ.

* ಐಸ್‌ಕ್ರೀಮ್‌ಗೆ ಬದಲಾಗಿ ಫ್ರೂಟ್ ಸಲಾಡ್ ತಿನ್ನಿ.

* ಸೋಡಾ ಬೇಕೆನಿಸಿದಾಗ ನೀರು ಅಥವಾ ನಿಂಬೆಹಣ್ಣಿನ ಪಾನಕ ನಿಧಾನವಾಗಿ ಕುಡಿಯುತ್ತಾ ಆನಂದಿಸಿ.

* ಕೇಕ್‌, ಕುಕ್ಕೀಸ್‌ಗೆ ಬದಲು ತಾಜಾ ಹಣ್ಣು ತಿನ್ನಿ.

* ಕ್ಯಾಂಡಿಗೆ ಬದಲಾಗಿ ಒಣದ್ರಾಕ್ಷಿ ತಿನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.