ADVERTISEMENT

ಖುಷಿ ಹುಡುಕಿ ಹೊರಟಾಗ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 20:28 IST
Last Updated 4 ಜುಲೈ 2018, 20:28 IST

ಅದೇ ಕಂಪ್ಯೂಟರ್, ಅದೇ ಕೆಲಸ. ದಿನಗಳನ್ನು ಉರುಳಿಸಲು ನೂರಾರು ಕಸರತ್ತು. ಹಾಗೇ ಬಂದು ಓಡಿ ಹೋಗುವ ಹಬ್ಬ ಜಾತ್ರೆಗಳೆಲ್ಲ ಯಾಕೋ ಪೇಲವ. ಲೈಪು ಇಷ್ಟೇನೆ ಎನ್ನಿಸುವುದು ಸಾಮಾನ್ಯ. ಹೌದಾ? ಲೈಪು ಇಷ್ಟೇ ಎನ್ನುವುದು ಸರಿಯೇ?

ಹಲವಾರು ಯೋಚನೆಗಳು ಬೇಡವೆಂದರೂ ನುಗ್ಗಿ ಬರುವ ಸಮಯದಲ್ಲಿ ಗೆಳೆಯ ಸತೀಶ ಫೋನಾಯಿಸಿದ. ಪಾಪ! ಸಂಸಾರದ ತಾಪತ್ರಯದಲ್ಲಿ ನನ್ನಿಂದ ಸಹಾಯ ಕೇಳಿದ್ದೇ ಹೆಚ್ಚು. ಈಗಲೂ ಯಾವುದೇ ಸಹಾಯಕ್ಕಾಗಿ ಕರೆ ಮಾಡಿರಬಹುದು ಎಂದುಕೊಂಡು ಪೋನ್ ಪಿಕ್ ಮಾಡಿ ‘ಹೇಳಪ್ಪ ಏನಾಗಬೇಕಿತ್ತು ನನ್ನಿಂದ?’ ಎಂದೆ. ನನ್ನ ಮಾತಿನ ದಾಟಿ ಅವನಿಗೆ ಅರ್ಥವಾಯಿತು ಎನ್ನಿಸುತ್ತದೆ ಆದರೂ ‘ಕಾಲೇಜ್ ಮೈದಾನಕ್ಕೆ ಬರುವೆಯಾ. ಮಾತಾಡುವುದಿದೆ’ ಅಂದ. ‘ಇವ, ಮತ್ತೆ ಯಾವ ಕಥೆ ತಂದಿದಾನೋ’ ಎಂದು ಅಂದುಕೊಳ್ಳುತ್ತಲೇ ‘ಬರುತ್ತೇನೆ’ ಎನ್ನುತ್ತಾ ಕಾಲೇಜು ಮೈದಾನದ ಕಡೆಗೆ ಹೊರಟೆ.

ಸಂಜೆಯ ವೇಳೆಯಾದ್ದರಿಂದ ಮೈದಾನ ಲವಲವಿಕೆಯಿಂದ ಕೂಡಿತ್ತು. ಹುಡುಗರು ಆಟವಾಡುವುದರಲ್ಲಿ ತಲ್ಲೀನರಾಗಿದ್ದರು. ಕೆಲವರು ಓಟದಲ್ಲಿ, ಇನ್ನೂ ಕೆಲವರು ಹರಟೆಯಲ್ಲಿ ತೊಡಗಿದ್ದರು. ಮತ್ತೆ ಕೆಲವರು ಮೊಬೈಲ್ ಫೋನ್‌ನಲ್ಲಿ ಬಿಜಿಯಾಗಿದ್ದರು.

ADVERTISEMENT

ಸತೀಶ ತನ್ನ 6 ವರ್ಷದ ಮಗನನ್ನು ಕರೆದುಕೊಂಡು ಗ್ರೌಂಡ್‌ಗೆ ಬಂದ. ಮುಖ ಮಂಕಾಗಿತ್ತು. ಬಂದವನೇ, ‘ಹಾಯ್’ ಎಂದು ಹೇಳುತ್ತಾ ಪಕ್ಕದಲ್ಲಿ ಬಂದು ಕುಳಿತ.

‘ಯಾಕೋ ಹೀಗಿದಿಯಾ’ ಎಂದೆ‌. ‘ಏನ್ ಬಿಡಯ್ಯಾ... ಜೀವನ ಬೇಜಾರಾಗಿದೆ. ನೆಮ್ಮದಿ, ಖುಷಿ ಇಲ್ಲಾದರೂ ಸಿಗುತ್ತಾ ಅಂತ ಬಂದೆ’ ಎಂದ.

ಹಾಗೇ ಮಾತನಾಡುತ್ತಿದ್ದಾಗ ಅವನ ಮಗ ವಿಶಾಲವಾದ ಮೈದಾನದಲ್ಲಿ ಚೆಂಡಿನೊಂದಿಗೆ ಆಡಲು ಶುರುಮಾಡಿದ. ಅವನ ಆಟ ನೋಡುತ್ತಾ ನೋಡುತ್ತಾ ಸತೀಶನೊಂದಿಗಿನ ಮಾತಿಗೆ ವಿರಾಮಕೊಟ್ಟು, ನಾನು ಅವನೊಡನೆ ಆಡಲು ಶುರುಮಾಡಿದೆ. ನನ್ನ ಮನಸ್ಸು ಮಗುವಾಗತೊಡಗಿತು.

ನಮ್ಮ ಆಟ ನೋಡುತ್ತಾ ಸತೀಶನೂ ನಮ್ಮೊಂದಿಗೆ ಆಟದಲ್ಲಿ ಸೇರಿಕೊಂಡ ಸುಮಾರು ಒಂದು ಗಂಟೆಯವರೆಗಿನ ಆಟ ಮೊಬೈಲ್, ಟಿವಿ ಕೊಡದಿರುವ ಖುಷಿ ಕೊಟ್ಟಿತು. ದೇಹ ದಣಿಯಿತು ಬೆವರು ಹರಿಯಿತು. ಮನಸ್ಸು ಹಗುರಾಯಿತು.

ಆಧುನಿಕ ಜೀವನಶೈಲಿಯಲ್ಲಿ ನಾವಿಂದು ಮಾನಸಿಕವಾಗಿ ಒಂಟಿಯಾಗಿ ಬದುಕುತ್ತಿದ್ದೇವೆ. ಖುಷಿಯನ್ನು ಹುಡುಕಿಕೊಂಡು ಎತ್ತೆತ್ತಲೋ ಸಾಗುತ್ತಿದ್ದೇವೆ. ಸತೀಶ ಹಾಗೂ ನಾನು ಗೆಳೆಯರಾದರೂ ನಮ್ಮ ಸ್ನೇಹದ ಸಮಯವೆಲ್ಲ ಹೆಚ್ಚು ಸಮಯ ಮೊಬೈಲ್‌ನಲ್ಲಿ ಕಳೆಯುತ್ತೇವೆ. ಸತೀಶನ ಮಗನದ್ದು ಆಡುವ ವಯಸ್ಸು. ಆದರೆ, ಶಾಲೆಯಿಂದ ಬಂದಕೂಡಲೇ ಆತನೂ ಮನೆಯಲ್ಲೇ ಬಂಧಿಯಾಗುತ್ತಾನೆ. ನಾವೆಲ್ಲ ಆ ‘ಬಂದಿಖಾನೆ’ಯಿಂದ ಹೊರಬಂದು ಸ್ವಲ್ಪ ಹೊತ್ತು ಬೆರೆತಾಗ, ಖುಷಿ ಅಲ್ಲಿಯೇ ದೊರೆಯುತ್ತದೆ. ನನಗೆ ಆಗಿದ್ದೂ ಹಾಗೆಯೇ. ಖುಷಿಯನ್ನು ಹುಡುಕಿಕೊಂಡು ಹೊರಟ ನನಗೆ ಖುಷಿ ನಮ್ಮವರಿಂದಲೇ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.