ಸಾಂದರ್ಭಿಕ ಚಿತ್ರ
ಬೆಂಗಳೂರು: ಬೇಸಿಗೆ ಋತುವಿನಲ್ಲಿ ಬಿಸಿಲಿನ ತಾಪ ತಾಳಲಾರದೇ ಹೊರಬರುವ ಹಾವುಗಳು ಮನುಷ್ಯರನ್ನು ಕಚ್ಚುವ ಸಾಧ್ಯತೆ ಹೆಚ್ಚು. ಹೀಗಾಗಿ ಭಾರತ್ ಸೀರಮ್ ಮತ್ತು ವ್ಯಾಕ್ಸಿನೇಷನ್ ಸಂಸ್ಥೆ (ಬಿಎಸ್‌ವಿ) ಹಾವು ಕಡಿತ ಸಂಭವಿಸಿದರೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಾಗೂ ಚಿಕಿತ್ಸೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದತ್ತಾಂಶದ ಪ್ರಕಾರ 4.5–5.4 ಮಿಲಿಯನ್ (ಅಂದಾಜು 40 ರಿಂದ 50 ಲಕ್ಷ) ಜನರು ಜಗತ್ತಿನಾದ್ಯಂತ ವಾರ್ಷಿಕವಾಗಿ ಹಾವುಗಳಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾವಿನ ಕಡಿತದಿಂದ ಸಾವುಗಳಾಗುತ್ತವೆ.
ಇನ್ನು, ಹಾವು ಕಡಿತದಿಂದ ಹೆಚ್ಚಾಗಿ ಬಹು-ಅಂಗಾಂಗ ವೈಫಲ್ಯ ಉಂಟುಮಾಡಬಹುದು, ರಕ್ತಸ್ರಾವ, ಪಾರ್ಶ್ವವಾಯು, ಸ್ನಾಯು ನಷ್ಟ, ಹೃದಯಾಘಾತ, ತೀವ್ರವಾದ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಹಾದಿ ಮಾಡಿಕೊಡಲಿದೆ. ಕೆಲವು ಪ್ರಕರಣದಲ್ಲಿ ಸಾವು ಸಂಭವಿಸಬಹುದು. ಹೀಗಾಗಿ ಹಾವು ಕಡಿತವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಹಾವು ಕಡಿತ ತಕ್ಷಣ ಏನು ಮಾಡಬೇಕು?
* ಹಾವು ಕಡಿದ ಕೂಡಲೇ ಗಾಬರಿಯಾಗದೇ, ನಿಮ್ಮ ಚಲನವಲನ ನಿರ್ಭಂದಿಸಿ.
* ಹಾವು ಕಚ್ಚಿದ ಸ್ಥಳದಲ್ಲಿ ಯಾವುದೇ ಆಭರಣ ಅಥವಾ ಬಿಗಿಯಾದ ಬಟ್ಟೆ ಇದ್ದರೆ ಕೂಡಲೇ ತೆಗೆದು ಹಾಕಿ ಎದೆ ಭಾಗದಡಿ ಹಾವು ಕಚ್ಚಿದ್ದರೆ, ಆ ವ್ಯಕ್ತಿಯನ್ನು ಮಲಗಿಸಬೇಕು. ವಿಷ ಹರಡುವುದನ್ನು ತಡೆಯಲು ವ್ಯಕ್ತಿಯನ್ನು ಶಾಂತವಾಗಿರಿಸಬೇಕು.
* ಗಾಯವನ್ನು ಸ್ವಚ್ಛವಾದ ಬ್ಯಾಂಡೇಜ್‌ನಿಂದ ಮುಚ್ಚಿ ಮತ್ತು ದೇಹಕ್ಕೆ ವಿಷ ಏರದಂತೆ ಆ ಸ್ಥಳಕ್ಕಿಂತ ಮೇಲೆ ದಾರದಿಂದ ಬಿಗಿಯಾಗಿ ಕಟ್ಟಿ. ಒಂದು ವೇಳೆ ಹಾವು ನಿಮ್ಮ ಕಾಲಿಗೆ ಕಚ್ಚಿದರೆ, ನೀವು ನಿಮ್ಮ ಬೂಟುಗಳನ್ನು ತೆಗೆದು ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ಹೋಗಬೇಕು
ಏನು ಮಾಡಬಾರದು...
* ಯಾವುದೇ ಸ್ವಯಂ ಔಷಧ ಮಾಡಿಕೊಳ್ಳುವುದು ಒಳ್ಳೆಯದಲ್ಲ.
* ಹಾವು ಕಚ್ಚಿದ ಗಾಯವನ್ನು ಕತ್ತರಿಸಲು ಪ್ರಯತ್ನಿಸಬೇಡಿ ಹಾಗೂ ವಿಷ ಹೀರಲು ಸಹ ಪ್ರಯತ್ನಿಸಬೇಡಿ. ಒಂದು ವೇಳೆ ವಿಷ ಹೀರುವುದರಿಂದ ಹೀರುವ ವ್ಯಕ್ತಿಗೂ ವಿಷ ದೇಹ ಸೇರಬಹುದು. ಹೀಗಾಗಿ ವಿಷ ಹೀರುವ ಬದಲು, ಆ ಜಾಗಕ್ಕಿಂತ ಸ್ವಲ್ಪ ಮೆಲ್ಭಾಗ ಗಟ್ಟಿಯಾಗಿ ಕಟ್ಟಿ, ಕೂಡಲೇ ವೈದ್ಯರ ಬಳಿ ಕರೆದೊಯ್ಯಿರಿ
* ನೀರಿನಲ್ಲಿ ತೊಳೆಯಬೇಡಿ,
* ಗಾಯಕ್ಕೆ ಐಸ್ ಹಚ್ಚಬೇಡಿ, ಕೆಫೀನ್ ಅಥವಾ ಆಲ್ಕೋಹಾಲ್ ಇರುವ ಯಾವುದನ್ನೂ ನೀಡಬೇಡಿ,
* ವ್ಯಕ್ತಿಯನ್ನು ಓಡಾಡಲು ಬಿಡಬೇಡಿ, ಕೂಡಲೇ ಆತನನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಿರಿ.
ಚಿಕಿತ್ಸೆ ಏನು?
ಸಾಮಾನ್ಯವಾಗಿ ಹಾವು ಕಡಿತಕ್ಕೆ ಆಂಟಿವೆನಮ್ ಚುಚ್ಚುಮದ್ದು ನೀಡಲಾಗುತ್ತದೆ. ಇದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಿದೆ. ಈ ಚುಚ್ಚುಮದ್ದಿನಿಂದ ಜೀವ ಉಳಿಸುವುದಲ್ಲದೆ, ಹಾವಿನ ವಿಷದಲ್ಲಿನ ನೆಕ್ರೋಟಿಕ್ ಇತರ ವಿಷಗಳಿಂದ ಉಂಟಾಗುವ ರೋಗಿಗಳ ನೋವನ್ನು ಕಡಿಮೆ ಮಾಡುತ್ತದೆ. ಈ ಚುಚ್ಚುಮದ್ದು ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಹಾವು ಕಡಿದ ಕೂಡಲೇ ನೀವು ಸ್ವಯಂ ಆರೈಕೆ ಮಾಡದೇ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.