ADVERTISEMENT

ಮಕ್ಕಳ ನೆಗಡಿಗೆ ಮನೆಮದ್ದು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:30 IST
Last Updated 30 ಆಗಸ್ಟ್ 2019, 19:30 IST
   

ಮಳೆಗಾಲದಲ್ಲಿ ದೊಡ್ಡವರ ಆರೋಗ್ಯ ಕಾಳಜಿ ವಹಿಸುವುದೇ ದೊಡ್ಡ ಕಷ್ಟ. ಹೀಗಿರುವಾಗ ಮಕ್ಕಳಿಗೆ ಉಂಟಾಗುವ ಹಲವಾರು ತೊಂದರೆಗಳ ಬಗ್ಗೆ ನಿಗಾ ಇಡುವುದು ಹರಸಾಹಸವೇ ಸರಿ. ಅದರಲ್ಲೂ ಮೂಗಿನಿಂದ ಸೋರುವ ನೆಗಡಿ, ಕೆಮ್ಮಿದ್ದರಂತೂ ಮಕ್ಕಳಿಗೆ ಊಟ– ತಿಂಡಿ ಮಾಡಿಸುವುದೇ ದೊಡ್ಡ ಕಷ್ಟವಾಗಿಬಿಡುತ್ತದೆ. ನೆಗಡಿ ಅಂತಹ ದೊಡ್ಡ ಸಮಸ್ಯೆ ಏನಲ್ಲ ಎಂದು ನಿರ್ಲಕ್ಷಿಸಿದರೆ ಅದು ಬ್ರಾಂಕೈಟಿಸ್‌ಗೆ ತಿರುಗಬಹುದು. ಹೀಗಾಗಿ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಅಮ್ಮಂದಿರ ತಲೆನೋವು. ಆದರೆ ಕೆಲವು ಸರಳ ಆಹಾರ ಮಗುವಿಗೆ ನೆಮ್ಮದಿ ನೀಡುವುದಲ್ಲದೇ, ಕಿರಿಕಿರಿಯೂ ತಪ್ಪುತ್ತದೆ. ಅಂತಹ ಕೆಲವು ಸೂಪರ್‌ ಆಹಾರಗಳು ಇಲ್ಲಿವೆ.

ಟೊಮೆಟೊ ಸೂಪ್‌

ಹುಷಾರು ತಪ್ಪಿದ ಮಗುವಿಗೆ ಇಂತಹ ಆಹಾರ ಔಷಧದಂತೆಯೂ ಕೆಲಸ ಮಾಡಬಲ್ಲದು. ಹೆಚ್ಚು ಹೆಚ್ಚು ನೀರು, ಸೂಪ್‌ ಕುಡಿದರೆ ನೆಗಡಿ ಬೇಗ ವಾಸಿಯಾಗುತ್ತದೆ ಎಂಬುದು ಗೊತ್ತಿರುವ ವಿಚಾರ. ಇದು ಮಗುವಿನ ವಿಷಯದಲ್ಲೂ ಕೆಲಸ ಮಾಡುತ್ತದೆ. ವಿಟಮಿನ್‌ ಸಿ ಅಧಿಕ ಪ್ರಮಾಣದಲ್ಲಿರುವ ಬಿಸಿ ಬಿಸಿ ಟೊಮೆಟೊ ಸೂಪ್‌ ಕುಡಿಸಿದರೆ ಚಿಕ್ಕ ಮಕ್ಕಳಿಗೆ ಬಹು ಬೇಗ ಗುಣವಾಗುತ್ತದೆ. ಟೊಮೆಟೊದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ವಿಫುಲ ಪ್ರಮಾಣದಲ್ಲಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ADVERTISEMENT

ಜೇನುತುಪ್ಪ ಮತ್ತು ಬಿಸಿ ನೀರು

ಜೇನುತುಪ್ಪದಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಹಾಗೆಯೇ ನೆಗಡಿಗೆ ಕೂಡ ಉಪಶಮನವಿದೆ. ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಕದಡಿ ನಿಮ್ಮ ಮಗುವಿಗೆ ಕುಡಿಯಲು ಕೊಡಿ. ಅದು ಕಫವನ್ನು ಕಡಿಮೆ ಮಾಡುವುದಲ್ಲದೇ ಗಂಟಲಿನ ಉರಿಯನ್ನು ಕೂಡ ಗಣಪಡಿಸುತ್ತದೆ. ಆದರೆ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಜೇನುತುಪ್ಪ ಕೊಡುವುದು ಬೇಡ.

ಶುಂಠಿ ಕಷಾಯ

ಸಾಮಾನ್ಯ ಥಂಡಿಗೆ ಅತ್ಯಂತ ಪರಿಣಾಮಕಾರಿ ಔಷಧವೆಂದರೆ ಶುಂಠಿ ಕಷಾಯ. ವೈರಸ್‌ ಅನ್ನು ನಿವಾರಿಸುವ ಈ ನೈಸರ್ಗಿಕ ಮದ್ದು ದೇಹದಲ್ಲಿ ಬೆವರು ಬರಿಸಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಇದು ಕಟ್ಟಿಕೊಂಡ ಮೂಗನ್ನು ನಿರಾಳವಾಗಿಸುವುದಲ್ಲದೇ ನೆಗಡಿಯ ಹಲವಾರು ಲಕ್ಷಣಗಳನ್ನು ಕಡಿಮೆ ಮಾಡಬಲ್ಲದು. ನೀರಿಗೆ ಶುಂಠಿಯ ಚೂರುಗಳನ್ನು ಹಾಕಿ ಕುದಿಸಿ. ಫಿಲ್ಟರ್‌ ಮಾಡಿ ಕುಡಿಯಲು ಕೊಡಿ. ಹಾಗೆಯೇ ಸಣ್ಣ ಚೂರನ್ನು ಕೂಡ ಅಗಿಯಲು ನೀಡಬಹುದು. ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ಇದು ಉತ್ತಮ ಔಷಧ.

ಶುಂಠಿ ಮತ್ತು ಬೆಳ್ಳುಳ್ಳಿ ಖಿಚಡಿ

ಅಕ್ಕಿ, ಹೆಸರುಬೇಳೆ ಮತ್ತು ಸಂಬಾರು ಪದಾರ್ಥಗಳನ್ನು ಸೇರಿಸಿ ಮಾಡುವ ಖಿಚಡಿಗೆ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ. ಇದು ಅತ್ಯಂತ ಆರೋಗ್ಯಕರ ಆಹಾರವಾಗಿದ್ದು ನೆಗಡಿಗೆ ರಾಮಬಾಣ. ಆದರೆ ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ಒಳಿತು.

ಈರುಳ್ಳಿ

ಇದು ನೈಸರ್ಗಿಕ ಆ್ಯಂಟಿ ಬಯೋಟಿಕ್‌ ಹಾಗೂ ಆ್ಯಂಟಿ ವೈರಲ್‌ ಗುಣಗಳನ್ನು ಹೊಂದಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸೂಕ್ಷ್ಮಾಣು ವಿರುದ್ಧ ಹೋರಾಡುವ ಗುಣವೂ ಇದಕ್ಕಿದೆ. ಹಸಿ ಈರುಳ್ಳಿ ರಸ ಕುಡಿಯಲು ಮಗು ನಿರಾಕರಿಸಿದರೆ ಅದನ್ನು ಸೂಪ್‌ ಅತವಾ ಸ್ಯಾಂಡ್‌ವಿಚ್‌ನಲ್ಲಿ ಸೇರಿಸಿ ತಿನ್ನಿಸಿ

ಅರಿಸಿನ ಮತ್ತು ಹಾಲು

ಮಗು ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ಬಿಸಿ ಹಾಲಿಗೆ ಅರಿಸಿನ ಸೇರಿಸಿ ಕುಡಿಯಲು ಕೊಡಿ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್‌ ಹಾಗೂ ಆ್ಯಂಟಿ ವೈರಲ್‌ ಗುಣಗಳಿದ್ದು, ಸರಾಗ ಉಸಿರಾಟಕ್ಕೂ ಅನುವು ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.