ಪಾರ್ಶ್ವವಾಯು
(ಸಾಂದರ್ಭಿಕ ಚಿತ್ರ)
‘ಪಾರ್ಶ್ವವಾಯು’ ಅಥವಾ ‘ಸ್ಟ್ರೋಕ್’ ಒಂದು ವೈದ್ಯಕೀಯ ತುರ್ತುಪರಿಸ್ಥಿತಿ. ವಯಸ್ಸಾದಂತೆ ಇದರ ಸಂಭವ ಹೆಚ್ಚು. ಮಿದುಳಿನ ರಕ್ತಪೂರೈಕೆಯಲ್ಲಿ ವ್ಯತ್ಯಯವಾಗುವುದೇ ಪಾರ್ಶ್ವವಾಯುವಿಗೆ ಮುಖ್ಯ ಕಾರಣ.
ಮಿದುಳು ನಮ್ಮ ಶರೀರದ ಬಹಳ ಮುಖ್ಯ ಅಂಗಾಂಗ. ದೇಹದ ಎಲ್ಲ ಕ್ರಿಯೆಗಳನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೆಲವೇ ಕೆಲವು ಸೆಕೆಂಡುಗಳ ಕಾಲ ಅದರ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವಾದರೂ ವ್ಯಕ್ತಿಯು ಸಮಸ್ಯೆಯನ್ನು ಎದುರಿಸುತ್ತಾನೆ. ಮಿದುಳು ಇಡಿಯಾಗಿ ಶರೀರವನ್ನು ನಿಯಂತ್ರಿಸಿದರೂ ಅದರ ಬೇರೆ ಬೇರೆ ಭಾಗಗಳು ಶರೀರದ ವಿವಿಧ ಕ್ರಿಯೆಗಳನ್ನು ನಿಭಾಯಿಸಲು ರಚನೆ ಮತ್ತು ವಿನ್ಯಾಸವನ್ನು ಪಡೆದಿರುತ್ತವೆ. ಯಾವ ಭಾಗದ ಮಿದುಳಿನ ಕಾರ್ಯಕ್ಷಮತೆಯಲ್ಲಿ ವ್ಯತ್ಯಯ ಆಗುತ್ತದೆಯೋ, ಆ ಭಾಗವು ನಿಯಂತ್ರಿಸುವ ಶರೀರದ ಕ್ರಿಯೆಯನ್ನು ಸಮರ್ಪಕವಾಗಿ ನಡೆಸಲು ಆ ವ್ಯಕ್ತಿ ಅಸಮರ್ಥನಾಗುತ್ತಾನೆ. ಒಮ್ಮೊಮ್ಮೆ ಸಂಪೂರ್ಣವಾಗಿ ಆ ಕ್ರಿಯೆಯನ್ನು ಮಾಡಲು ಆಗದೆಯೇ ಹೋಗಬಹುದು.
ಕೆಲವೇ ಸೆಕೆಂಡುಗಳು ಕಾಲ ಮಿದುಳಿಗೆ ರಕ್ತದ ಮತ್ತು ಆ ಮೂಲಕ ಆಮ್ಲಜನಕದ ಪೂರೈಕೆ ಸ್ಥಗಿತವಾದರೂ ಅಲ್ಲಿನ ಜೀವಕೋಶಗಳು ಮರಣ ಹೊಂದುತ್ತವೆ. ಒಮ್ಮೆ ಮರಣ ಹೊಂದಿದ ಜೀವಕೋಶಗಳು ಮತ್ತೆ ಮೊದಲಿನ ಸ್ಥಿತಿಗೆ ಬರಲಾರವು.
ರಕ್ತದ ಪೂರೈಕೆ ಸ್ಥಗಿತ
ಮಿದುಳಿನ ರಕ್ತಪರಿಚಲನೆಯಲ್ಲಿ ಏರುಪೇರಾದಾಗ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಲ್ಲಿಯೂ ಕೊರತೆಯಾಗುತ್ತದೆ. ಶೇ. 85ರಷ್ಟು ಸಂದರ್ಭಗಳಲ್ಲಿ ಮಿದುಳಿನ ರಕ್ತನಾಳಗಳಲ್ಲಿ ತಡೆಯುಂಟಾಗುವುದರಿಂದ ಪೂರೈಕೆ ಸ್ಥಗಿತವಾಗುತ್ತದೆ. ಕೆಲವೊಮ್ಮೆ ರಕ್ತನಾಳಗಳಲ್ಲಿ ಬಿರುಕುಂಟಾಗಿ ರಕ್ತಸ್ರಾವವಾಗುವುದರಿಂದಲೂ ಪೂರೈಕೆ ಕ್ಷೀಣವಾಗುತ್ತದೆ. ರಕ್ತನಾಳಗಳಲ್ಲಿ ಕೊಬ್ಬಿನಾಂಶ ಶೇಖರವಾಗುವುದು ಅಲ್ಲಿ ತಡೆಯುಂಟಾಗಲು ಮುಖ್ಯ ಕಾರಣ. ಇನ್ನು ಕೆಲವು ಸಂದರ್ಭಗಳಲ್ಲಿ ದೇಹದ ಇತರ ಭಾಗದ ರಕ್ತಪರಿಚಲನೆಯಲ್ಲಿ ಹೆಪ್ಪುಗಟ್ಟಿದ ರಕ್ತವು ಮಿದುಳಿನ ರಕ್ತನಾಳಗಳತ್ತ ಚಲಿಸಿ ಬಂದು ಅಲ್ಲಿ ತಡೆಯುಂಟು ಮಾಡಬಹುದು.
ಅಪಾಯಕರ ಅಂಶಗಳು
ಅಧಿಕ ರಕ್ತದೊತ್ತಡ, ಮಧುಮೇಹ, ಹೆಚ್ಚಾದ ಕೊಬ್ಬಿನಾಂಶ, ಹೃದಯದ ಸಮಸ್ಯೆಗಳು, ಧೂಮಪಾನ, ಅತಿಯಾದ ಮದ್ಯಪಾನ, ಮಹಿಳೆಯರಲ್ಲಿ ಈಸ್ಟ್ರೋಜನ್ ಮಾತ್ರೆಗಳ ಧೀರ್ಘಕಾಲದ ಬಳಕೆ ಮೊದಲಾದ ಅಂಶಗಳು ಪಾರ್ಶ್ವವಾಯು ಸಂಭವವನ್ನು ಹೆಚ್ಚಿಸುತ್ತವೆ.
ಗುಣಲಕ್ಷಣಗಳು
ಸಾಮಾನ್ಯವಾಗಿ ಪಾರ್ಶ್ವವಾಯುವಿನ ಲಕ್ಷಣಗಳು ವ್ಯಕ್ತಿಯಲ್ಲಿ ಹಠಾತ್ ಕಾಣಿಸಿಕೊಳ್ಳುತ್ತವೆ. ಒಂದು ಅಥವಾ ಎರಡೂ ಕೈಗಳ ಅಥವಾ ಕಾಲುಗಳ ಸ್ನಾಯುಗಳಲ್ಲಿ ಬಲಹೀನತೆ, ಮಾತಿನಲ್ಲಿ ತೊದಲು ಅಥವ ಮಾತು ನಿಂತುಹೋಗುವುದು, ಕೈ ಅಥವಾ ಕಾಲುಗಳ ಸ್ಪರ್ಶ ಜ್ಞಾನದಲ್ಲಿ ವ್ಯತ್ಯಾಸ, ಮುಖದ ಸ್ನಾಯುಗಳು ದುರ್ಬಲವಾಗಿ ಬಾಯಿಯು ಒಂದೆಡೆ ಎಳೆದಲ್ಪಟ್ಟಂತೆ ಕಾಣುವುದು, ಕಣ್ಣುಗಳ ದೃಷ್ಟಿ ಕ್ಷೀಣವಾಗುವುದು, ದೇಹದ ಸಮತೋಲನ ತಪ್ಪಿದಂತಾಗುವುದು, ತಲೆಸುತ್ತು ಮತ್ತು ವಾಂತಿ, ಅಪರೂಪದ ಸಂದರ್ಭಗಳಲ್ಲಿ ಪ್ರಜ್ಞೆ ಇಲ್ಲದಂತಾಗುವುದು ಮೊದಲಾದುವು ಪಾರ್ಶ್ವವಾಯುವಿನ ಲಕ್ಷಣಗಳು. ಒಬ್ಬ ವ್ಯಕ್ತಿಯಲ್ಲಿಯೇ ಈ ಎಲ್ಲ ಲಕ್ಷಣಗಳೂ ಕಾಣಬೇಕೆಂದಿಲ್ಲ. ಮಿದುಳಿನ ಯಾವ ಭಾಗದಲ್ಲಿ ಜೀವಕೋಶಗಳು ನಿಷ್ಕ್ರಿಯವಾಗಿರುತ್ತವೆಯೋ ಆ ಭಾಗವು ನಿಯಂತ್ರಿಸುವ ಶರೀರದ ಕ್ರಿಯೆಯಲ್ಲಿ ಮಾತ್ರ ವ್ಯತ್ಯಾಸವನ್ನು ಕಾಣಬಹುದು. ಹಾಗಾಗಿ ಮೇಲಿನ ಯಾವುದೇ ಲಕ್ಷಣ ಕಂಡುಬಂದರೂ ನಿರ್ಲಕ್ಷ್ಯ ಮಾಡಬಾರದು.
ಸುವರ್ಣ ಸಮಯ
ಚಿಕಿತ್ಸೆಯನ್ನು ಆರಂಭಿಸುವ ಮೊದಲು ಇಂತಹ ಲಕ್ಷಣಗಳಿರುವ ವ್ಯಕ್ತಿಯನ್ನು ಒಂದಿಷ್ಟು ಪರೀಕ್ಷೆಗೆ ಒಳಪಡಿಸಿ ಕಾರಣವನ್ನು ದೃಢಪಡಿಸಿಕೊಳ್ಳುವುದು ಬಹಳ ಮುಖ್ಯ. ‘ಸಿಟಿ ಸ್ಕ್ಯಾನ್’ ಮತ್ತು ‘ಎಂ. ಆರ್. ಐ. ಸ್ಕ್ಯಾನ್’ ಪರೀಕ್ಷೆಗಳು ಈ ನಿಟ್ಟಿನಲ್ಲಿ ಸಹಕಾರಿ. ಇದರೊಂದಿಗೆ ಕಾರಣಗಳನ್ನು ಪತ್ತೆ ಮಾಡಲು ಪೂರಕವಾಗುವ ಇತರ ತಪಾಸಣೆಗಳನ್ನೂ ವೈದ್ಯರು ಸೂಚಿಸಬಹುದು. ಇಸಿಜಿ, ರಕ್ತದ ಸಕ್ಕರೆ ಅಂಶ, ಕೊಬ್ಬಿನಾಂಶದ ತಪಾಸಣೆ ಮತ್ತು ಮಿದುಳಿನ ರಕ್ತನಾಳಗಳ ಆ್ಯಂಜಿಯೋಗ್ರಾಮ್ ಕೂಡ ಕಾರಣಗಳನ್ನು ತಿಳಿಸಲು ಮತ್ತು ಮುಂದಿನ ಚಿಕಿತ್ಸೆ ಹಾಗೂ ಜೀವನ ಶೈಲಿಯ ಮಾರ್ಪಾಡನ್ನು ಸೂಚಿಸಲು ನೆರವಾಗುತ್ತವೆ.
ವ್ಯಕ್ತಿಯಲ್ಲಿ ಪಾರ್ಶ್ವವಾಯುವಿನ ಲಕ್ಷಣ ಕಂಡು ಬಂದ ಕೂಡಲೇ ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಅತ್ಯವಶ್ಯಕ. ಜೀವಕೋಶಗಳು ಮರಣ ಹೊಂದುವ ಪ್ರಕ್ರಿಯೆಯಲ್ಲಿರುವಾಗಲೇ ರಕ್ತನಾಳಗಳಲ್ಲಿನ ತಡೆಗೆ ಮುಖ್ಯ ಕಾರಣವಾದ ರಕ್ತದ ಹೆಪ್ಪನ್ನು ಕರಗಿಸುವ ಔಷಧಗಳ ತಕ್ಷಣ ಬಳಕೆಯಿಂದ ಜೀವಕೋಶಗಳನ್ನು ಅಪಾಯದಿಂದ ಪಾರು ಮಾಡಬಹುದು. ಆ ಮೂಲಕ ಮುಂದೆ ಆಗಬಹುದಾದ ಶಾಶ್ವತ ನ್ಯೂನತೆಗಳನ್ನು ತಡೆಗಟ್ಟಬಹುದು. ಹಾಗಾಗಿಯೇ ಗುಣಲಕ್ಷಣಗಳು ಕಂಡ ಸುಮಾರು ಒಂದು ತಾಸನ್ನು ‘ಸುವರ್ಣ ಸಮಯ’ ಎಂದು ಗುರುತಿಸುತ್ತೇವೆ. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆಯೇ ಕಾಲಿನ ಅಥವಾ ಕೈಗಳ ರಕ್ತನಾಳಗಳ ಮೂಲಕ ಒಂದು ನಾಳವನ್ನು ತೂರಿಸಿ ಮಿದುಳಿನ ರಕ್ತನಾಳದೊಳಗಿನ ಹೆಪ್ಪನ್ನು ಹೋಗಲಾಗಿಸಿ ಪರಿಚಲನೆಯನ್ನು ಸರಾಗ ಮಾಡುವ ಸೌಲಭ್ಯಗಳೂ ಕೆಲವು ಆಸ್ಪತ್ರೆಗಳಲ್ಲಿವೆ. ಈ ಚಿಕಿತ್ಸಾ ಕ್ರಮವನ್ನೂ ತಕ್ಷಣ ಮಾಡಿದರೆ ಜೀವಕೋಶಗಳ ಮರಣವನ್ನು ತಡೆದು ಮುಂದಿನ ಅಪಾಯಗಳಿಂದ ವ್ಯಕ್ತಿಯನ್ನು ಪಾರು ಮಾಡಬಹುದು.
ಎಚ್ಚರಿಕೆ
• ಮಧುಮೇಹಿಗಳು ಮತ್ತು ರಕ್ತದೊತ್ತಡದಿಂದ ಬಳಲುವವರು ನಿಯಮಿತವಾಗಿ ತಪಾಸಣೆ ಮತ್ತು ಚಿಕಿತ್ಸೆಯಿಂದ ಕ್ರಮವಾಗಿ ರಕ್ತದ ಸಕ್ಕರೆ ಅಂಶವನ್ನು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
• ಹೃದಯದ ಸಮಸ್ಯೆಯಿಂದ ಬಳಲುವವರು ನಿಯಮಿತವಾಗಿ ವೈದ್ಯರ ಸಲಹೆಯಂತೆ ಔಷಧೋಪಚಾರದಲ್ಲಿರಬೇಕು.
• ನಿಯಮಿತ ವ್ಯಾಯಾಮ ಮತ್ತು ಸಮರ್ಪಕ ಆಹಾರ ಕ್ರಮವನ್ನು ಅಳವಡಿಸಿಕೊಂಡು ಶರೀರದ ಕೊಬ್ಬಿನಾಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
• ಅನುವಂಶೀಯವಾಗಿ ಶರೀರದಲ್ಲಿ ಕೊಬ್ಬಿನಾಂಶ ಹೆಚ್ಚಿದ್ದರೆ ಅದಕ್ಕೆ ಸೂಕ್ತಚಿಕಿತ್ಸೆಯನ್ನು ತಪ್ಪದೆ ತೆಗೆದುಕೊಳ್ಳಬೇಕು.
• ಧೂಮಪಾನ ಮತ್ತು ಮದ್ಯಪಾನಗಳನ್ನು ವರ್ಜಿಸಬೇಕು.
• ಮಹಿಳೆಯರು ಈಸ್ಟ್ರೋಜನ್ ಮಾತ್ರೆಗಳ ದೀರ್ಘಕಾಲದ ಬಳಕೆಯ ಮುನ್ನ ವೈದ್ಯರ ಸಲಹೆಯನ್ನು ಪಡೆಯಬೇಕು.
.
ಪಾರ್ಶ್ವವಾಯು ಲಕ್ಷಣಗಳಿಂದ ಬಳಲುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮರೆಯದೆ ಆತನ ಹಳೆಯ ವೈದ್ಯಕೀಯ ದಾಖಲೆಗಳನ್ನು ಕೊಂಡೊಯ್ಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.