ADVERTISEMENT

ಬೇಸಿಗೆ ಬಂತು, ಚರ್ಮ ಜೋಪಾನ!

Summer-Skin story

ಮಂಜುಶ್ರೀ ಎಂ.ಕಡಕೋಳ
Published 10 ಮಾರ್ಚ್ 2019, 19:38 IST
Last Updated 10 ಮಾರ್ಚ್ 2019, 19:38 IST
ಬೇಸಿಗೆಯಲ್ಲಿ ಚರ್ಮ ರಕ್ಷಣೆಗೆ ಅಲೊವೆರಾ
ಬೇಸಿಗೆಯಲ್ಲಿ ಚರ್ಮ ರಕ್ಷಣೆಗೆ ಅಲೊವೆರಾ   

ಟೈಟ್ ಜೀನ್ಸ್ ಪ್ಯಾಂಟ್–ಟೀಶರ್ಟ್ ಅಂದ್ರೆ ಹೆಣ್ಮಕ್ಕಳಿಗೂ ಇಷ್ಟ. ಬೇಸಿಗೆ, ಚಳಿ, ಮಳೆಗಾಲ ಕಾಲ ಯಾವುದೇ ಇರಲಿ ಅದೇ ಉಡುಪು ಬೇಕು. ಕಚೇರಿಯ ಮೀಟಿಂಗ್‌ನಲ್ಲಿ ಕುಳಿತಿದ್ದಾಗ ತೊಡೆ ಸಂದಿಯ ನಡುವೆ ಕಡಿತ ಮೂಡಿಸುವ ಕಿರಿ ಕಿರಿ ಅವರಿಗಷ್ಟೇ ಗೊತ್ತು. ಮೀಟಿಂಗ್ ಮುಗಿಸಿ ವಾಷ್‌ರೂಂಗೆ ಹೋದಾಗಲೇ ಫಜೀತಿ ಗೊತ್ತಾಗೋದು. ಅದು ಫಂಗಲ್ (ಶಿಲೀಂಧ್ರ) ಸೋಂಕು!

ಬೇಸಿಗೆ ಬಿಸಿಲನ್ನಷ್ಟೇ ಹೊತ್ತು ತರುವುದಿಲ್ಲ ಜತೆಗೆ ಚರ್ಮದ ಕಾಯಿಲೆ/ಸೋಂಕುಗಳನ್ನೂ ತರುತ್ತದೆ ಅನ್ನುತ್ತಾರೆ ಚರ್ಮರೋಗ ತಜ್ಞರು. ನಗರದ ತಾಪಮಾನ ಈಗಾಗಲೇ 37 ಡಿಗ್ರಿ ತಲುಪಿರುವುದರಿಂದ ಮೈಯಲ್ಲಿ ಬೆವರು ಬರುವುದು ಸಾಮಾನ್ಯ. ಬೆವರಿನಲ್ಲಿರುವ ತೇವಾಂಶವೇ ಚರ್ಮದ ತುರಿಕೆ, ಫಂಗಲ್ ಸೋಂಕಿಗೆ ಮುಖ್ಯ ಕಾರಣ. ಇದರ ಜತೆಗೆ ಔಷಧಿಯಲ್ಲಿರುವ ಸ್ಟಿರಾಯ್ಡ್‌ ಸೇವನೆಯಿಂದಲೂ ಫಂಗಲ್ ಉಂಟಾಗಬಹುದು ಎನ್ನುತ್ತಾರೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಉಮಾಶಂಕರ್ ನಾಗರಾಜು.

ಬೇಸಿಗೆಯಲ್ಲಿ ಹೊರಗಡೆ ತಿರುಗಾಡುವವರಷ್ಟೇ ಅಲ್ಲ, ಮನೆಯೊಳ ಗಿದ್ದವರಲ್ಲೂ ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಿಗೆ ಸೆಖೆ ಗುಳ್ಳೆ, ಫಂಗಲ್ ಸೋಂಕು ಉಂಟಾಗುವುದನ್ನು ತಳ್ಳಿಹಾಕುವಂತಿಲ್ಲ. ಫಂಗಲ್ ಅನ್ನು ರಿಂಗ್ ವರ್ಮ್ ಅಂತಲೂ ಕರೆಯುತ್ತಾರೆ. ತೊಡೆಸಂದಿ, ಎದೆಯ ಕೆಳಭಾಗದಲ್ಲಿ, ಕಂಕುಳ ಕೆಳ ಭಾಗದಲ್ಲಿ ಉಂಟಾಗುವ ಬೆವರು–ತೇವಾಂಶದಿಂದ ಇದು ಬರುತ್ತದೆ. ಸ್ನಾನ ಆದ ತಕ್ಷಣ ಮೈಯನ್ನು ಸರಿಯಾಗಿ ಒರೆಸಿಕೊಳ್ಳಬೇಕು. ತ್ವಚೆಯಲ್ಲಿ ತೇವಾಂಶ ಇರಕೂಡದು. ಕೆಲವರಿಗೆ ಸ್ಟಿರಾಯ್ಡ್‌ನಿಂದಲೂ ಫಂಗಲ್ ಆಗುತ್ತದೆ. ತಜ್ಞ ಚರ್ಮವೈದ್ಯರ ಸಲಹೆ ಪಡೆಯದೇ ಮೆಡಿಕಲ್ ಶಾಪ್‌ಗಳಲ್ಲಿ ಕೇಳಿ ಪಡೆದು ಬಳಸುವ ಮುಲಾಮು, ಗುಳಿಗೆಗಳಲ್ಲಿ ಸ್ಟಿರಾಯ್ಡ್ ಇರಬಹುದು. ಅದರ ಸೇವೆನಯಿಂದ ಫಂಗಲ್ ಸೋಂಕು ಬರುತ್ತದೆ. ಇದು ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚು ಎನ್ನುವುದು ಅವರ ವಿಶ್ಲೇಷಣೆ.

ADVERTISEMENT

ಬಂಗು

ಬೇಸಿಗೆಯಲ್ಲಿ ಕೆಲವರಿಗೆ ಮುಖದಲ್ಲಿ ಬಂಗು ಕಾಣಿಸಿಕೊಳ್ಳುತ್ತದೆ. ಅಂಥವರು ಚರ್ಮರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯಬೇಕು. ಕೆಲ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲೂ, ಮತ್ತೆ ಕೆಲವರಲ್ಲಿ ವಂಶವಾಹಿನಿ ಕಾರಣಕ್ಕೂ ಬಂಗು ಕಾಣಿಸಿಕೊಳ್ಳಬಹುದು.

ಸನ್‌ಸ್ಕ್ರೀನ್ ಬಳಸಿ

ಬೇಸಿಗೆಯಲ್ಲಿ ಬೆಳಿಗ್ಗೆ ಸನ್‌ಸ್ಕ್ರೀನ್ ಲೋಷನ್ ಹಚ್ಚಿದರೆ ಸಾಕು ಸಂಜೆಯವರೆಗೂ ತ್ವಚೆಯನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ ಎಂದು ಭಾವಿಸುತ್ತಾರೆ. ಇದು ತಪ್ಪು. ಸನ್‌ಸ್ಕ್ರೀನ್ ಅನ್ನು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರೂ ಹೊತ್ತು ಹಚ್ಚಿಕೊಳ್ಳುವುದು ಉತ್ತಮ. ಒಮ್ಮೆ ಹಚ್ಚಿದ ಸನ್‌ಸ್ಕ್ರೀನ್‌ನ ಪ್ರಭಾವ ಬರೀ ಮೂರು ಗಂಟೆಗಳ ಕಾಲ ಇರುತ್ತದೆ. ಎಸ್‌ಪಿಎಫ್ ಪ್ರಮಾಣ 25ಕ್ಕಿಂತ ಹೆಚ್ಚಿರುವ ಸನ್‌ಸ್ಕ್ರೀನ್ ಲೋಷನ್ ಚರ್ಮಕ್ಕೆ ಒಳಿತು.

ಮಹಿಳೆಯರಷ್ಟೇ ಅಲ್ಲ ಪುರುಷರೂ ಸನ್‌ಸ್ಕ್ರೀನ್ ಹಚ್ಚಿಕೊಳ್ಳಬಹುದು. ಇದರಿಂದ ಚರ್ಮಬೇಗ ಸುಕ್ಕಾಗುವುದನ್ನು ತಡೆಯಬಹುದು. ಬಿಸಿಲಿಗೆ ಮೈಯೊಡ್ಡಬೇಕಾಗಿ ಬಂದಾಗ ತಪ್ಪದೇ ಟೋಪಿ, ಸನ್‌ಗ್ಲಾಸ್, ತುಂಬುತೋಳಿನ ಹತ್ತಿ ಉಡುಪುಗಳನ್ನು ಧರಿಸಿ. ಜಾಸ್ತಿ ಬೆವರುಂಟಾದಾಗ ಸ್ನಾನ ಮಾಡಿ. ಇದು ದೇಹಕ್ಕಷ್ಟೆ ಅಲ್ಲ ಮನಸಿಗೂ ಉಲ್ಲಾಸಕರ.

ಮಕ್ಕಳು–ಹಿರಿಯರು ಜೋಪಾನ

ಬೇಸಿಗೆಯಲ್ಲಿ ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚಿನ ಆಹಾರ ಸೇವಿಸಲು ಆಗದು. ಅಂಥ ಸಂದರ್ಭಗಳಲ್ಲಿ ಒತ್ತಾಯ ಮಾಡದೇ ಅವರಿಗೆ ದ್ರವಾಹಾರಗಳನ್ನು ಹೆಚ್ಚು ಕೊಡಿ. ಬೇಸಿಗೆ ಶಿಬಿರ, ಪಿಕ್‌ನಿಕ್ ಅಂತ ಮಕ್ಕಳು ಹೆಚ್ಚು ಹೊರಗಡೆ ಕಾಲ ಕಳೆಯುವುದು ಸಹಜ. ಅಂಥ ಸಂದರ್ಭದಲ್ಲಿ ತಪ್ಪದೇ ಸನ್‌ಸ್ಕ್ರೀನ್ ಬಳಸಿ. ಎರಡು ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗೆ ಸನ್‌ಸ್ಕ್ರೀನ್ ಲೋಷನ್ ಹಚ್ಚಬಹುದು. ಹಿರಿಯರಿಗೆ ಬಿಸಿಲಿನಲ್ಲಿ ತಿರುಗಾಡಲು ಬಿಡದಿರಿ. ಅವರಿರುವ ಸ್ಥಳದಲ್ಲಿ ಗಾಳಿಯಾಡುವಂತಿರಲಿ. ಬಿಸಿಲಿನ ತಾಪ ತಾಳದೇ ಕೆಲವರಿಗೆ ಸೂರ್ಯಾಘಾತ (ಸನ್‌ಸ್ಕ್ರೋಕ್) ಆಗುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ನಿರ್ಜಲೀಕರಣ ಆಗದಂತೆ ಎಚ್ಚರ ವಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.