ADVERTISEMENT

ಸಮಾಧಾನ ಅಂಕಣ: ಮಗ ಚಟಗಳ ದಾಸ ಪರಿಹಾರವೇನು?

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 23:30 IST
Last Updated 9 ಮಾರ್ಚ್ 2025, 23:30 IST
   

ನನ್ನ ಮಗ ಮದ್ಯಪಾನ ಮತ್ತು ಧೂಮಪಾನಗಳ ದಾಸನಾಗಿದ್ದಾನೆ. ಎರಡು ಸಲ ಚಟ ನಿವಾರಣಾ ಕೇಂದ್ರಗಳಿಗೂ ಸೇರಿಸಿದ್ದೆ. ಅಲ್ಲಿಂದ ಬಂದ ಮೇಲೆ ಒಂದೆರಡು ತಿಂಗಳಷ್ಟೆ ಆರಾಮಾಗಿರುತ್ತಾನೆ. ಮತ್ತದೇ ಚಟಗಳು ಶುರುವಾಗುತ್ತವೆ.  ಏನು ಮಾಡಬೇಕು?

ಯುವಜನತೆಯನ್ನು ಕಾಡುತ್ತಿರುವ ಗಂಭೀರವಾದ ಸಮಸ್ಯೆ ಇದು. ಹದಿಹರೆಯದ ಮಕ್ಕಳು  ಕುತೂಹಲಕ್ಕಾಗಿ, ಗೆಳೆಯರ ಸಹವಾಸದಿಂದ ಹಾಗೂ ಮನೆಯಲ್ಲಿ ವ್ಯಸನಿಗಳಾದ ಹಿರಿಯರಿಂದ ಪ್ರೇರಣೆ ಪಡೆದು ಚಟ ಹತ್ತಿಸಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮಲ್ಲಿ ಮನೆ ಮಾಡಿರುವ  ಕೀಳರಿಮೆ, ಅವಮಾನ, ಭಯಗಳಿಂದ ಹೊರಬರುವ ಪ್ರಯತ್ನವಾಗಿ ಧೂಮಪಾನ ಮತ್ತು ಮದ್ಯಪಾನದ ಮೊರೆ ಹೋಗುತ್ತಾರೆ. ಹೀಗೆ ಮಾಡುವ ಮೂಲಕ ಸಂಗಡಿಗರ ಮುಂದೆ ಗೆದ್ದೆ ಎಂದೆಲ್ಲಾ ಸಂಭ್ರಮಿಸುತ್ತಾರೆ.

ತಂಬಾಕಿನಲ್ಲಿರುವ ನಿಕೋಟಿನ್​ಗಳು ಮಿದುಳಿನಲ್ಲಿ ಡೋಪಮೈನ್​ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ಉಲ್ಲಾಸ ಮೂಡಿಸುತ್ತದೆ. ಇದರಿಂದ ಹೆಚ್ಚು ಹೆಚ್ಚು ನಿಕೋಟಿನ್​ ಸೇವಿಸುವಂತೆ ಪ್ರೇರಣೆ ಸಿಗುತ್ತದೆ. ಕ್ರಮೇಣ ಚಟವಾಗಿ ರೂಪುಗೊಳ್ಳುತ್ತದೆ.  ಹಾಗೆಯೇ ವ್ಯಸನಿಗಳಾಗುತ್ತಾರೆ. ನಂತರ ಅದರಿಂದ ಹೊರಕ್ಕೆ ಬರಲಿಕ್ಕಾಗದೇ ಒದ್ದಾಡುತ್ತಾರೆ. 

ADVERTISEMENT

ಹವ್ಯಾಸಕ್ಕೆಂದು ಶುರುಮಾಡಿದ ಧೂಮಪಾನ ಕ್ರಮೇಣ ಅಭ್ಯಾಸವಾಗುತ್ತದೆ. ಆರಂಭದಲ್ಲಿ ಚಟವನ್ನಾಗಿಸಿಕೊಳ್ಳುವ ಇರಾದೆ ಅವರಿಗೆ ಇರುವುದಿಲ್ಲ. ಆದರೆ ಡೋಪಮೈನ್​ ಪ್ರಭಾವದಿಂದಾಗಿ ಬಿಡಲಿಕ್ಕಾಗದೇ ಸೋಲುತ್ತಾರೆ. ಅದು ಚಟವಾಗಿ ಮಾರ್ಪಡುತ್ತದೆ. ಅವರು ಅದನ್ನು ಬಿಡುವ ಪ್ರಯತ್ನವನ್ನೂ ಮಾಡುತ್ತಿರುತ್ತಾರೆ. ಬಿಡಲಾರದೇ ಒದ್ದಾಡುತ್ತಲೂ ಇರುತ್ತಾರೆ. ಹಾಗಾಗಿ ಅವರ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಇರುತ್ತದೆ. 

ನಿಮ್ಮ ಮಗ ಎಷ್ಟನೇ ವಯಸ್ಸಿಗೆ ಧೂಮಪಾನ ಮತ್ತು ಮದ್ಯಪಾನ ಮಾಡಿದ ಎಂದು ನಿಮಗೆ ಗೊತ್ತೆ?. ಮತ್ತೆ ಮತ್ತೆ ಅವನು ಅದರ ವಶವಾಗುತ್ತಿದ್ದಾನೆ ಎಂದರೆ ಅವನಿಗೆ ಮಾನಸಿಕವಾಗಿ ತೊಂದರೆ ಇದೆ ಎಂದು ಅರ್ಥೈಸಬಹುದು. ಯಾವುದೇ ಚಟವನ್ನಾಗಲೀ ಮೊದಲು ಬಿಡಬೇಕು ಎನ್ನುವ ಮನಸ್ಸು ಆ ವ್ಯಸನಿಗೆ ಇರಬೇಕು. ಅವನಿಗೆ ಮನಸ್ಸು ಇಲ್ಲದಿದ್ದರೆ, ಮೂರನೆಯವರ ಪ್ರಯತ್ನವು ಫಲಪ್ರದವಾಗುವುದು ಕಡಿಮೆ. ವ್ಯಸನವನ್ನು ಬಿಟ್ಟ ಕೆಲವು ದಿನಗಳಲ್ಲಿಯೇ ಅವನ ದೇಹದಲ್ಲಿ ನಿಕೋಟಿನ್​ ಅಂಶವು ಕಡಿಮೆಯಾಗುತ್ತದೆ. ಇದರಿಂದ ಖಿನ್ನತೆ, ಹತಾಶೆ, ಆತಂಕಗಳು ಶುರುವಾಗುತ್ತವೆ.  

ಚಟ ನಿವಾರಣಾ ಕೇಂದ್ರದಿಂದ ಹೊರಬಂದ ನಂತರ ಚಟ ಹತ್ತಿಸಿಕೊಳ್ಳುವುದು ಸಾಮನ್ಯ ಸಂಗತಿ. ಮನೆಯಲ್ಲಿಯೂ ಶಾಂತವಾದ, ಭರವಸೆಯ, ಗೌರವದ ವಾತಾವರಣ ಇರಬೇಕು. ಮನೆಯವರು ಅವನನ್ನು ವ್ಯಸನಿಯಂತೆ ನೋಡಬಾರದು. ಅವನು ಮತ್ತೆ ಮತ್ತೆ ವ್ಯಸನಮುಖಿಯಾಗುವ ಅವಕಾಶವನ್ನು ತಪ್ಪಿಸಬೇಕು. ವ್ಯಸನಿಗಳ ಸಹವಾಸದಿಂದ ಅವನನ್ನು ಹೊರಗೆ ಇಡಬೇಕು. ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳುವ ಅವಕಾಶವನ್ನು ಕೊಡಬೇಕು. ಅದರ ಬಗ್ಗೆ ಅವನಿಗೆ ಸಾಸಿವೆಯಷ್ಟದಾರೂ ಆಸಕ್ತಿ ಇರಬೇಕು. ಧ್ಯಾನ ಮಾಡಬೇಕು. ಆರೋಗ್ಯಕರವಾದ ಸತ್ವಯುತ ಆಹಾರವನ್ನು ಸೇವಿಸಬೇಕು. ನಿತ್ಯ ದೇಹವು ದಣಿಯುವಷ್ಟು ದೈಹಿಕ ಕಸರತ್ತು ಮಾಡಬೇಕು. ಎರಡು ಸಲ ಸ್ನಾನ ಮಾಡುವುದು ಒಳ್ಳೆಯದು.

ಯಾವ ಕಾರಣಕ್ಕೆ ಈ ಚಟ ಬಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರಂತೆ ಆ ತೊಂದರೆಯನ್ನು ಗುರುತಿಸಬೇಕು. ಚಟಗಳೆಲ್ಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮನಸ್ಸಿಗೆ ಸಂಬಂಧಿಸಿದ್ದು. ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು

ಡಾ.ಡಿ.ಎಂ. ಹೆಗಡೆ, ಸಮಾಲೋಚಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.