ADVERTISEMENT

ಏನಾದ್ರೂ ಕೇಳ್ಬೋದು: ಮೋಸ ಹೋದ ಮಹಿಳೆಯ ಅಸಹಾಯಕತೆಗೆಲ್ಲಿದೆ ಪರಿಹಾರ?

ನಡಹಳ್ಳಿ ವಂಸತ್‌
Published 18 ಸೆಪ್ಟೆಂಬರ್ 2020, 19:31 IST
Last Updated 18 ಸೆಪ್ಟೆಂಬರ್ 2020, 19:31 IST
ನಡಹಳ್ಳಿ ವಸಂತ್‌
ನಡಹಳ್ಳಿ ವಸಂತ್‌   

ಆಯುರ್ವೇದ ವೈದ್ಯೆ. 2019ರಲ್ಲಿ ವಿಚ್ಛೇದನ ಪಡೆದುಕೊಂಡ ಮೇಲೆ ನನ್ನ ಪತಿ ಮತ್ತು ಅತ್ತೆ ನನ್ನನ್ನು ಪುಸಲಾಯಿಸಿ ಮತ್ತೆ ಪತಿಯೊಡನೆ ಒಟ್ಟಾಗಿ ಬದುಕುವಂತೆ ಮಾಡಿದರು. ಆಗ ನಾವಿಬ್ಬರೂ ದೈಹಿಕ ಸಂಬಂಧವನ್ನು ಮಾಡಿದ್ದೆವು. ಈಗ ಅವರ ತಂದೆ ಒಪ್ಪುತ್ತಿಲ್ಲವೆಂದು ಹೇಳಿ ನನ್ನನ್ನು ದೂರ ಮಾಡಿದ್ದಾರೆ. ಈ ನಡುವೆ ಪೋಷಕರ ಜೊತೆಗೂ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ನಾನು ಮಹಿಳಾ ಮತ್ತು ಮಕ್ಕಳ ಟ್ರಸ್ಟ್‌ನ ಆಶ್ರಯದಲ್ಲಿ ಇದ್ದೇನೆ. ಬಹಳ ನೋವಿನಲ್ಲಿದ್ದೇನೆ. ಸಹಾಯ ಮಾಡಿ.

⇒ಶಿಲ್ಪಾ, ಊರಿನ ಹೆಸರಿಲ್ಲ

ನೀವು ಎಲ್ಲರಿಂದಲೂ ಮೋಸಹೋಗಿ ಹತಾಶೆ, ಅಸಹಾಯಕತೆಯನ್ನು ಅನುಭವಿಸುತ್ತಿದ್ದೀರಲ್ಲವೇ? ಇವೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವುದನ್ನು ನಿಧಾನವಾಗಿ ಯೋಚಿಸಿ. ಸ್ವಂತ ನಿರ್ಧಾರವನ್ನೇ ತೆಗೆದುಕೊಳ್ಳಲಾಗದವನನ್ನು ಮದುವೆಯಾಗಿದ್ದು, ವಿಚ್ಛೇದನವಾದ ಮೇಲೆ ಪತಿ ಅತ್ತೆಯ ಮಾತುಗಳಿಂದ ಮೋಸಹೋಗಿದ್ದು, ಪತಿಯ ಮನೆಯವರನ್ನು ಖುಷಿಪಡಿಸಲು ಪೋಷಕರನ್ನು ದೂರಮಾಡಿಕೊಂಡಿದ್ದು- ಇವೆಲ್ಲವುಗಳಿಗೂ ನೀವು ಅವಕಾಶ ಮಾಡಿಕೊಟ್ಟಿದ್ದು ಹೇಗೆ ಗೊತ್ತೇ? ಪ್ರತಿ ಹಂತದಲ್ಲಿಯೂ ಸುತ್ತಲಿನವರಿಂದ ಒತ್ತಡಕ್ಕೆ ಒಳಗಾಗಿ ನಿಮ್ಮನ್ನು, ನಿಮ್ಮ ವ್ಯಕ್ತಿತ್ವದ ಘನತೆಯನ್ನು ರಕ್ಷಿಸಿಕೊಳ್ಳಲಿಲ್ಲ. ಈಗ ಸ್ವಂತಿಕೆ ಮತ್ತು ಗಟ್ಟಿತನವನ್ನು ಹೇಗೆ ಬೆಳೆಸಿಕೊಳ್ಳುವುದು ಎಂದು ಯೋಚಿಸಿ.

ADVERTISEMENT

ಮದುವೆಯಾದ ಮೇಲೆಯೂ ಅಪ್ಪನಿಗೆ ಹೆದುರುವ ಪತಿ ನಿಮಗೆ ಜೀವಮಾನವಿಡೀ ಸಾಂಗತ್ಯ ಕೊಡಲು ಯೋಗ್ಯನಲ್ಲ. ಅವನಿಂದ ದೂರವಾಗಿರುವುದು ನಿಮ್ಮೊಳಗಿನ ಒಂದು ಸ್ವಾವಲಂಬಿ ಸ್ವಾಭಿಮಾನದ ಹೆಣ್ಣನ್ನು ಗುರುತಿಸಲು ಅನುಕೂಲವೇ ಆಗಿದೆ. ನಿಮ್ಮನ್ನು ನೀವು ಹಳಿದುಕೊಳ್ಳುವ ಪ್ರವೃತ್ತಿಯನ್ನು ನಿಲ್ಲಿಸಿ ಒಂದು ಉದ್ಯೋಗವನ್ನು ಹುಡುಕಿಕೊಳ್ಳಿ. ಹೇಗೆ ಉತ್ತಮ ವೈದ್ಯಳಾಗಿ ಹೆಸರು ಮಾಡುವುದು ಎಂದು ಯೋಚಿಸಿ. ಸ್ವಾಭಿಮಾನಕ್ಕೆ ಧಕ್ಕೆಯಾಗುವ ಯಾವ ಸಂಬಂಧಗಳನ್ನೂ ಒಪ್ಪಿಕೊಳ್ಳಬೇಡಿ. ನಿಮ್ಮ ಬಗೆಗೆ ನೀವೇ ಹೆಮ್ಮೆಪಡುವುದು ಸಾಧ್ಯವಾದಾಗ ಅಸಹಾಕತೆ, ನೋವುಗಳಿಂದ ಹೊರಬರುತ್ತೀರಿ. ಮುಂದೆ ನಿಮ್ಮನ್ನು ಪ್ರೀತಿಸುವ, ಗೌರವಿಸುವ ಸಂಗಾತಿ ಸಿಕ್ಕಾಗ ಮಾತ್ರ ಮದುವೆಯಾಗುವ ಬಗೆಗೆ ಯೋಚಿಸಿ.

***

10ನೇ ತರಗತಿ ಓದುತ್ತಿದ್ದೇನೆ. ಸಿಟ್ಟನ್ನು ಹಿಡಿತದಲ್ಲಿಡಲು ಆಗುತ್ತಿಲ್ಲ. ಹಾಗಾಗಿ ಪೋಷಕರು ಬೇಸರ ಮಾಡಿಕೊಳ್ಳುತ್ತಾರೆ. ಸಲಹೆ ನೀಡಿ.

⇒ಪುಣ್ಯ, ಊರಿನ ಹೆಸರಿಲ್ಲ

ಮಗೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕಷ್ಟಗಳನ್ನು ಹೇಳಿಕೊಂಡು ಸಹಾಯವನ್ನು ಕೇಳುವ ನಿನ್ನ ಧೈರ್ಯ ಮತ್ತು ಪ್ರಾಮಾಣಿಕತೆ ಮೆಚ್ಚುಗೆಯಾಗಿದೆ. ಇವುಗಳನ್ನು ಹಾಗೆಯೇ ಉಳಿಸಿಕೊ. ನಿನಗೆ ಸರಳವಾದ ದಾರಿ ಹೇಳುತ್ತೇನೆ.

ಸಿಟ್ಟು ನೀನು ಕೂಗಾಡುವ ಬಹಳ ಮೊದಲೇ ಶುರುವಾಗಿರುತ್ತದೆ ಎನ್ನುವುದನ್ನು ಗುರುತಿಸುವುದನ್ನು ಕಲಿ. ಯಾವುದೇ ಸಂದರ್ಭದಲ್ಲಿ ಸಿಟ್ಟು ಏರಲು ಶುರುವಾಗುತ್ತಿದೆ ಅನ್ನಿಸಿದ ಕೂಡಲೇ ನಿನ್ನ ದೇಹ ಬಿಗಿಯಾಗುತ್ತಿರುವುದರ ಬಗೆಗೆ ಗಮನಿಸು. ಆಗ ಆಳವಾಗಿ ನಿಧಾನವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡು. ನಂತರ ನಿಧಾನವಾಗಿ ನಾನು ಈಗ ಸಿಟ್ಟುಮಾಡದೆ ಏನು ಉತ್ತರ ಹೇಳಬೇಕು ಎಂದು ಯೋಚಿಸಿ ಮಾತನಾಡು. ಆರಂಭದಲ್ಲಿ ಸ್ವಲ್ಪ ಕಷ್ಟವೆನ್ನಿಸುತ್ತದೆ. ಅಭ್ಯಾಸ ಮಾಡಿದರೆ ಕೆಲವೇ ವಾರಗಳಲ್ಲಿ ನಿನಗೆ ದೇಹ, ಮನಸ್ಸಿನ ಮೇಲೆ ಹಿಡಿತ ಸಿಗುತ್ತದೆ. ಶುಭವಾಗಲಿ.

***

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.