ADVERTISEMENT

ಸಿಸೇರಿಯನ್‌ ಹೆರಿಗೆಗೆ ಹಲವು ಆಯಾಮಗಳು

ಸುಶೀಲಾ ಡೋಣೂರ
Published 28 ಜನವರಿ 2022, 19:30 IST
Last Updated 28 ಜನವರಿ 2022, 19:30 IST
ಡಾ. ಚಂದ್ರಿಕಾ ಆನಂದ್
ಡಾ. ಚಂದ್ರಿಕಾ ಆನಂದ್   

ಹೆರಿಗೆ– ಇಡೀ ಮನುಕುಲದ ಅಂತರಾಳವನ್ನು ಕಲಕುವ ಪದವಿದು. ಹೆಣ್ಣಿನ ಜೀವಮಾನದ ಮಹತ್ವದ ಘಟ್ಟವಾದರೂ, ಅವಳೊಬ್ಬಳನ್ನೇ ಅಲ್ಲದೆ, ಆ ಇಡೀ ಕುಟುಂಬಕ್ಕೆ ಸಂತಸವನ್ನೂ ಆತಂಕವನ್ನೂ ಒಟ್ಟೊಟ್ಟಿಗೆ ತರುವ ಗಳಿಗೆ. ಹೆರಿಗೆಯ ದಿನ ಹತ್ತಿರ ಬರುತ್ತಿದ್ದಂತೆ ಅವಳನ್ನೂ, ಅವಳ ಕುಟುಂಬವನ್ನೂ ಕಾಡುವ ಪ್ರಶ್ನೆಯೆಂದರೆ ಹೆರಿಗೆ ‘ಸಿಸೇರಿಯನ್’ ಅಥವಾ ‘ನಾರ್ಮಲ್’ ಎನ್ನುವುದು. ಇದೇ ಒಂದೆರಡು ದಶಕಗಳ ಹಿಂದೆ ‘ಸಿಸೇರಿಯನ್’ ಎಂದರೆ ಜನ ಬೆಚ್ಚುವುದಿತ್ತು. ಏನೊ ತೊಡಕು ಸಂಭವಿಸಿದಾಗ ಮಾತ್ರ ‘ಸಿಸೇರಿಯನ್’ ಅನಿವಾರ್ಯವಾಗುತ್ತಿತ್ತು. ಆದರೆ ಈಗ ಹೆರಿಗೆ ಎಂದರೆ ‘ಸಿಸೇರಿಯನ್’ ಎನ್ನುವಷ್ಟು ಸಾಮಾನ್ಯವಾಗಿದೆ.

‘ಒಂಬತ್ತು ತಿಂಗಳು ತುಂಬಿದರೂ ಹೆರಿಗೆ ನೋವು ಕಾಣಿಸಿಕೊಳ್ಳಲಿಲ್ಲ. ನಾನೂ ಹೆರಿಗೆ ನೋವು ಸಹಿಸಲು ಮಾನಸಿಕವಾಗಿ ಸಿದ್ಧಳಿರಲಿಲ್ಲ. ವೈದ್ಯರಿಗೆ ಇಷ್ಟು ಹೇಳುವುದೇ ಸಾಕಿತ್ತು. ತಕ್ಷಣವೇ ಸಿಸೇರಿಯನ್‌ಗೆ ತಯಾರಿ ನಡೆಸಿದರು. ಹೆರಿಗೆ ನೋವು ಅನುಭವಕ್ಕೆ ಬರುವ ಮುನ್ನವೆ ನನ್ನ ಹೆರಿಗೆ ಮುಗಿದು ಹೋಗಿತ್ತು’ – ಭದ್ರಾವತಿಯ ಕಲ್ಯಾಣಿಯವರ ಅನುಭವದ ನುಡಿಗಳಿವು.

‘ನಾನು ಮತ್ತು ನಮ್ಮನೆಯವರು ನಾರ್ಮಲ್ ಡೆಲಿವರಿಯೇ ಆಗಬೇಕೆಂದು ಹಟ ಹಿಡಿದಿದ್ದೆವು. ಹೆರಿಗೆ ನೋವು ಶುರುವಾದಾಗ ಅಮ್ಮ (ವೈದ್ಯರ ಅನುಮತಿ ಪಡೆದು) ಲೇಬರ್‌ ವಾರ್ಡ್‌ಗೆ ಬಂದು, ನನ್ನಲ್ಲಿ ಮಾನಸಿಕ ಸ್ಥೈರ್ಯ ತುಂಬಿದರು. ಮೈಯಲ್ಲಿನ ಅಷ್ಟೂ ಮೂಳೆಗಳು ಒಟ್ಟಿಗೇ ಮುರಿದು ಹೋಗುತ್ತಿರುವ ಅನುಭವ. ಸಹಿಸುವುದು ನಿಜಕ್ಕೂ ಕಷ್ಟ. ಆದರೆ ಹೆರಿಗೆಯಾದ ಮೇಲೆ ಆ ನೋವಿನ ನೆನಪೂ ಇರಲಿಲ್ಲ’ ಎಂದು ಹೇಳುತ್ತಾರೆ ಬೆಂಗಳೂರಿನ ದೀಪ್ತಿ.

ADVERTISEMENT

ನಿಜ, ತುರ್ತು ಸಂದರ್ಭಗಳಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ತಗ್ಗಿಸುವುದಕ್ಕಾಗಿ ಸಿಸೇರಿಯನ್‌ ಅನಿವಾರ್ಯ. ಇದಕ್ಕಾಗಿ ನಡೆಸುವ ಶೇ 10 ರಿಂದ 15ರಷ್ಟು ಸಿಸೇರಿಯನ್ ಅಗತ್ಯ ಮತ್ತು ಅನಿವಾರ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಇತ್ತೀಚೆಗೆ ಸಿಸೇರಿಯನ್ ವೈದ್ಯರ, ಗರ್ಭಿಣಿಯರ ಆಯ್ಕೆಯೂ ಆಗುತ್ತಿದೆ. ಈ ಕಾರಣಕ್ಕೆ ಇದರಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ವರ್ಷ ವರ್ಷ ಈ ಪ್ರಮಾಣ ಏಕೆ ಹೆಚ್ಚುತ್ತಿದೆ ಎನ್ನುವುದಕ್ಕೆ ಒಂದೇ ಉತ್ತರವಿಲ್ಲ. ಸಿಸೇರಿಯನ್ ಹೆರಿಗೆಯ ಹಿಂದೆ ಸಾಕಷ್ಟು ವೈಯಕ್ತಿಕ, ಮಾನಸಿಕ, ಶಾರೀರಿಕ ಕಾರಣಗಳೂ ಅಡಕವಾಗಿವೆ.

ಭಾವನಾತ್ಮಕ ಅನಿವಾರ್ಯ

ಇತ್ತೀಚೆಗೆ ಮಹಿಳೆಯರಲ್ಲಿ ಸಹನಾಶಕ್ತಿ ಕಡಿಮೆಯಾಗುತ್ತಾ, ಸಣ್ಣ ನೋವನ್ನೂ ಸಹಿಸದಷ್ಟು ಸೂಕ್ಷ್ಮವಾಗುತ್ತಿದ್ದಾರೆ. ಕಲ್ಯಾಣಿ ಹೇಳಿದಂತೆ, ಹೆರಿಗೆ ನೋವು ತಡೆಯಲು ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ. ಹೀಗಾಗಿ ಗಂಟೆಗಳ ಹೆರಿಗೆಯ ನೋವಿಗಿಂತ ಕೆಲ ಕ್ಷಣಗಳಲ್ಲಿ ಮುಗಿದು ಹೋಗುವ ಸಿಸೇರಿಯನ್ ಆದ್ಯತೆಯಾಗುತ್ತಿದೆ. ಶಿಶುವಿಗೆ ಏನಾದರೂ ತೊಂದರೆಯಾದರೆ ಎಂಬ ಆತಂಕ, ಇಂಥ ‘ಮುಹೂರ್ತ’ದಲ್ಲೇ ಮಗು ಜನಿಸಿದರೆ ಒಳ್ಳೆಯದೆಂಬ ನಂಬಿಕೆ... ಹೀಗೆ ಅನೇಕ ಕಾರಣಗಳು ಸಿಸೇರಿಯನ್‌ಗೆ ಅವಸರಿಸುವಂತೆ ಮಾಡುತ್ತಿವೆ. ಬದಲಾದ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ದೇಹದ ಕಾರ್ಯಕ್ಷಮತೆಯಲ್ಲಿನ ಬದಲಾವಣೆ... ಇವೂ ಸಾಮಾನ್ಯ ಹೆರಿಗೆಗೆ ಸವಾಲಾಗುತ್ತಿದೆ.

ಯಾವಾಗ ಅಗತ್ಯ...

‘ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್‌ ಪ್ರಮಾಣ ಹೆಚ್ಚಿದೆ ಎನ್ನುವುದು ನಿಜ. ಇದರಲ್ಲಿ ವೈದ್ಯರ ಹಾಗೂ ಆಸ್ಪತ್ರೆಗಳ ಪಾತ್ರವೇನು, ತಾಯಿ ಹಾಗೂ ಅವಳ ಕುಟುಂಬದವರ ಆಸಕ್ತಿ ಎಷ್ಟು ಎನ್ನುವುದನ್ನು ಪ್ರತ್ಯೇಕವಾಗಿ ನೋಡಬೇಕಾಗುತ್ತದೆ. ಅಪಾಯದ ಗರ್ಭಧಾರಣೆ, ಗರ್ಭಿಣಿಯ ವಯೋಮಾನ, ಗರ್ಭಾವಸ್ಥೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಅತಿ ಬೊಜ್ಜು, ಪ್ರೀ-ಎಕ್ಲಾಂಪ್ಸಿಯಾ(ಪಿಇ)ದಂತಹ ಸಂದರ್ಭಗಳಲ್ಲಿ ಸಿಸೇರಿಯನ್‌ ಅನಿವಾರ್ಯ’ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ
ಡಾ. ಚಂದ್ರಿಕಾ ಆನಂದ್.

ಸಾಮಾನ್ಯ ಹೆರಿಗೆಯ ಭಯ

ಸಾಮಾನ್ಯ ಹೆರಿಗೆ ಅಸಾಧ್ಯ ನೋವು ತರುತ್ತದೆ, ಶ್ರೋಣಿಯ ಹಾನಿಗೆ ಕಾರಣವಾಗುತ್ತದೆ, ಸಾಮಾನ್ಯ ಹೆರಿಗೆಯ ನಂತರ ಲೈಂಗಿಕ ಜೀವನ ಮೊದಲಿನಂತಿರದು ಎನ್ನುವ ನಂಬಿಕೆಗಳು ಗರ್ಭಿಣಿಯರ ಭಯಕ್ಕೆ ಕಾರಣ. ಅನೇಕ ಮಹಿಳೆಯರಲ್ಲಿ ಸಿಸೇರಿಯನ್ ಹೆಚ್ಚು ಸುರಕ್ಷಿತವೆನ್ನುವ ನಂಬಿಕೆ ಇದೆ. ಏಕಕಾಲಕ್ಕೆ ಕುಟುಂಬ ಯೋಜನೆ ಅಥವಾ ಟ್ಯೂಬೆಕ್ಟಮಿ(ಸಂತಾನ ನಿರೋಧ) ಶಸ್ತ್ರಚಿಕಿತ್ಸೆಯಂತಹ ಆಯ್ಕೆಗೆ ಹೋಗಬಹುದು ಎನ್ನುವ ಕಾರಣಕ್ಕೆ ಸಿಸೇರಿಯನ್ ಅನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ. ಅನುಭವವಿಲ್ಲದ ಕೆಲ ವೈದ್ಯರಲ್ಲಿಯೂ ಸಾಮಾನ್ಯ ಹೆರಿಗೆ ಮಾಡಿಸುವಾಗ ಉಂಟಾಗಬಹುದಾದ ತೊಡಕುಗಳ ಭಯವಿರುತ್ತದೆ. ಅಂಥವರು ಸಿಸೇರಿಯನ್‌ಗೆ ಹೆಚ್ಚು ಒತ್ತು ಕೊಡುತ್ತಾರೆ. ಆರ್ಥಿಕ ಪ್ರೋತ್ಸಾಹದ ಆಸೆ, ಹೆರಿಗೆ ಮಾಡಿಸುವುದರಲ್ಲಿ ಅನುಭವದ ಕೊರತೆ ಮುಂತಾದ ಕಾರಣಗಳಿಂದಾಗಿ ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿಸುವುದರತ್ತ ಹೆಚ್ಚು ಒಲವು ತೋರುವುದುಂಟು ಎನ್ನುತ್ತಾರೆ ಡಾ. ಚಂದ್ರಿಕಾ.

ತಡೆಯುವ ಬಗೆ ಹೇಗೆ?

ಹೆರಿಗೆ ಕೇವಲ ವೈದ್ಯಕೀಯ ಪ್ರಕ್ರಿಯೆಯಲ್ಲ, ಅದೊಂದು ಭಾವನಾತ್ಮಕ ಅನುಭವ ಎನ್ನುವುದನ್ನು ವೈದ್ಯರೂ ಅರ್ಥಮಾಡಿಕೊಳ್ಳಬೇಕು, ಗರ್ಭಿಣಿಯರಿಗೂ ಅರ್ಥಮಾಡಿಸಬೇಕು.

ಸಿಸೇರಿಯನ್ ತೊಡಕುಗಳ ಬಗ್ಗೆ ಗರ್ಭಿಣಿ ಮತ್ತು ಅವರ ಕುಟುಂಬಕ್ಕೆ ಮಾಹಿತಿ ಹಾಗೂ ಜ್ಞಾನವನ್ನು ನೀಡಬೇಕು.

ಆರೋಗ್ಯಪೂರ್ಣ ಹೆರಿಗೆಗೆ ಗರ್ಭಿಣಿ ಮತ್ತು ಅವಳ ಸಂಗಾತಿಯನ್ನು ಪ್ರೋತ್ಸಾಹಿಸಬೇಕು.

ಎರಡೂ ಪ್ರಕಾರದ ಹೆರಿಗೆಗಳಿಗೆ ಏಕರೂಪದ ಶುಲ್ಕಗಳನ್ನು ನಿರ್ಧರಿಸಬೇಕು.

ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ವೈದ್ಯರಿಗೆ ಹಣಕಾಸಿನ ಪ್ರೋತ್ಸಾಹ ನೀಡಲಾಗುತ್ತದೆ. ಇದನ್ನು ನಿಲ್ಲಿಸಬೇಕು.

ಇನ್‌ಸ್ಟ್ರುಮೆಂಟಲ್‌ ಹೆರಿಗೆಗಳನ್ನು ನಿರ್ವಹಿಸಲು ಯುವ ವೈದ್ಯರಿಗೆ ಸೂಕ್ತ ತರಬೇತಿ ನೀಡಬೇಕು

ಹೆರಿಗೆಯ ತೊಡಕುಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳೀಕೃತಗೊಳಿಸಬೇಕು.

ಪ್ರತಿಕೂಲ ಪರಿಣಾಮ ಹೆಚ್ಚು

ಸಿಸೇರಿಯನ್ ಪ್ರಕ್ರಿಯೆಯಲ್ಲಿಯೂ ತೊಡಕುಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ಹೆರಿಗೆಗೆ ಹೋಲಿಸಿದರೆ ಈ ಪ್ರಕ್ರಿಯೆಯಿಂದ ದೀರ್ಘಾವಧಿಯ ಪ್ರತಿಕೂಲ ಪರಿಣಾಮಗಳು ಹೆಚ್ಚು. ಇದರಲ್ಲಿ ತಾಯಿಯ ಮರಣ ಮತ್ತು ತೀವ್ರತರವಾದ ಕಾಯಿಲೆಯ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ರಕ್ತಸ್ರಾವ, ನೋವು, ಅರಿವಳಿಕೆ ಸಮಸ್ಯೆಗಳು, ಗಾಯದ ಸೋಂಕು, ಚೇತರಿಕೆಯಲ್ಲಿ ವಿಳಂಬ, ಬೆನ್ನು ನೋವು ಸೇರಿದಂತೆ ಅನೇಕಸಮಸ್ಯೆಗಳುಕಾಣಿಸಿಕೊಳ್ಳಬಹುದು. ಅಷ್ಟಕ್ಕೂ, ಯಾರಿಗೆ ಯಾವ ಹೆರಿಗೆ ಸೂಕ್ತ ಎನ್ನುವುದನ್ನು ಅಂತಿಮವಾಗಿ ತೀರ್ಮಾನಿಸಬೇಕಾಗುವುದು ವೈದ್ಯರೆ. ಅವರು ಪೂರ್ವಗ್ರಹಗಳಿಗೆ ಬಲಿಯಾಗದೆ, ಒತ್ತಡಗಳಿಗೆ ಮಣಿಯದೆ ತಾಯಿ–ಮಗುವಿನ ಒಟ್ಟಾರೆ ಆರೋಗ್ಯ ಮತ್ತು ಸೌಖ್ಯವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಂಡರೆ ಮಾತ್ರ ಈ ವಲಯದಲ್ಲಿ ಬದಲಾವಣೆ ತರಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.