ADVERTISEMENT

ರಕ್ತದ ಕ್ಯಾನ್ಸರ್‌: ಇದೆ ಅತ್ಯಾಧುನಿಕ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 2:23 IST
Last Updated 4 ಫೆಬ್ರುವರಿ 2020, 2:23 IST
ಡಾ. ನೀತಿ ರೈಜಾದಾ
ಡಾ. ನೀತಿ ರೈಜಾದಾ   

ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಬ್ಲಡ್‌ ಕ್ಯಾನ್ಸರ್‌ ಅಂದಾಗ ಭಯಪಡುವವರೇ ಹೆಚ್ಚು. ಲುಕೇಮಿಯಾ ಇದು ರಕ್ತದ ಮತ್ತು ಮೂಳೆಯ ಕ್ಯಾನ್ಸರ್ ಆಗಿದೆ. ಬಿಳಿ ರಕ್ತಕಣಗಳ ಸಂಖ್ಯೆ ವಿಪರೀತ ಹೆಚ್ಚುವುದು ಇದರ ಲಕ್ಷಣ.

ರಕ್ತದ ಕ್ಯಾನ್ಸರ್‌ನಲ್ಲಿ ಲುಕೇಮಿಯಾ (ಬಿಳಿ ರಕ್ತ ಕಣಗಳದ್ದು), ಲಿಂಫೋಮಾ (ದುಗ್ಢರಸ ಗ್ರಂಥಿಗಳದ್ದು) ಅಥವಾ ಮೈಲೋಮಾಗಳು(ಮೂಳೆ ಕೊಬ್ಬಿನದ್ದು) ಸೇರಿರುತ್ತವೆ. ಸಾಮಾನ್ಯವಾಗಿ ಸ್ತನ, ಶ್ವಾಸಕೋಶ, ಪ್ರೊಸ್ಟೇಟ್ ಕ್ಯಾನ್ಸರ್‌ ಬಗ್ಗೆ ಕೇಳುತ್ತೇವೆ. ಆದರೆ, ಇದು ಮಾತ್ರ ಅಪರೂಪಕ್ಕೆ ಕಾಣಿಸಿಕೊಳ್ಳುವ ಕ್ಯಾನ್ಸರ್‌. ಆರಂಭದ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಗುಣಪಡಿಸುವುದು ಸುಲಭ.

ವ್ಯಕ್ತಿಗಳಲ್ಲಿ ರಕ್ತಸ್ರಾವ ಅಥವಾ ಏನಾದರೂ ಚಿಕ್ಕ ಗಾಯಗಳಿಂದಲೂ ಹೆಚ್ಚು ರಕ್ತಸ್ರಾವ, ಬೇಗ ಗಾಯವಾಗುವುದು ಪದೆ ಪದೇ ಸೋಂಕು, ಮೂಳೆ ನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡಬೇಕು. ಲುಕೇಮಿಯಾಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು ಇರುತ್ತವೆ. ರಕ್ತದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗಿರುವ ಮೂಲಕವೂ ಗುರುತಿಸಲಾಗುತ್ತದೆ. ಮೈಲೋಮಾ ಮೂತ್ರಪಿಂಡದ ವೈಫಲ್ಯದೊಂದಿಗೆ, ಕಡಿಮೆ ಕೆಂಪು ರಕ್ತದ ಕಣಗಳು ಅಥವಾ ಮೂಳೆಯ ಮುರಿತಗಳಲ್ಲಿ ಕಾಣಿಸಿಕೊಳ್ಳುತ್ತವೆ.

ADVERTISEMENT

ಲಿಂಫೋಮಾಗಳು ದುಗ್ಧ ಗ್ರಂಥಿಗಳ ಊತವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳಿಗೆ ಕಿಮೋಥೆರಪಿ ಮತ್ತು ಜೈವಿಕ ಚಿಕಿತ್ಸೆಗಳ ಮಿಶ್ರಣದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ರಕ್ತದ ಆಕರಕೋಶ ಹಾಗೂ ಅಸ್ಥಿಮಜ್ಜೆಯ ಕಸಿ ರಕ್ತದ ಕ್ಯಾನ್ಸರ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಟೋಲೋಗಸ್ (ರೋಗಿಯ ಸ್ವಂತ ಆಕರಕೋಶ) ಮತ್ತು ಅಲೋಜೆನಿಕ್ (ದಾನಿಯ ಆಕರಕೋಶ) ಕಸಿ ಕ್ರಮಗಳನ್ನು ಬಳಸಲಾಗುತ್ತದೆ.

ಈಗ ಅತ್ಯಾಧುನಿಕ ಚಿಕಿತ್ಸೆಗಳು ಬಂದಿವೆ. ರೋಗವನ್ನು ಅತಿ ಶೀಘ್ರದಲ್ಲೇ ಪತ್ತೆ ಮಾಡಬಹುದು ಹಾಗೂ ಚಿಕಿತ್ಸೆಗೆ ಉನ್ನತ ಹಂತದ ಮಾಲಿಕ್ಯೂಲಾರ್ ಡಯಾಗ್ನಾಸ್ಟಿಕ್ಸ್ ಇದೆ. ಇದಲ್ಲದೇ ಮಾನೋಕ್ಲೋನಲ್ ಆ್ಯಂಟಿಬಾಡಿ, ಇನ್‌ಬಿಟರ್‌ ಮತ್ತು ಸಣ್ಣ ಮಾಲಿಕ್ಯೂಲ್‍ಗಳು (ಜೈವಿಕ ಚಿಕಿತ್ಸೆಗಳು) ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತವೆ. ಜೊತೆಗೆ ಇವುಗಳಿಂದ ರೋಗಿಯ ಮೇಲೆ ಅಡ್ಡ ಪರಿಣಾಮ ಕಡಿಮೆ. ನೂತನ ಚಿಕಿತ್ಸೆಗಳಾದ ಕಾರ್-ಟಿ (ಸಿಮೆರಿಕ್ ಆಂಟಿಜೆನ್ ರಿಸೆಪ್ಟರ್-ಟಿ) ಸೆಲ್ ಥೆರಪಿಗಳನ್ನು ಲಿಂಫೊಬ್ಲಾಸ್ಟಿಕ್ ಲುಕೇಮಿಯಾ, ದೊಡ್ಡದಾದ ಬಿ– ಸೆಲ್ ಲಿಂಫೋಮಾ ಮತ್ತು ಮೈಲೋಮಾಗಳಿಗೆ ಬಳಸಲಾಗುತ್ತದೆ. ಆದರೆ, ಈ ಹಂತದಲ್ಲಿ ಈ ಚಿಕಿತ್ಸೆಗಳ ವೆಚ್ಚ ಬಹಳ ಹೆಚ್ಚಾಗಿರುತ್ತದೆ.

ಚಿಕಿತ್ಸೆ ನಂತರವೂ ಮಕ್ಕಳಲ್ಲಿ ಬೆಳವಣಿಗೆಯ ಸವಾಲುಗಳು ಮತ್ತು ವಯಸ್ಕರಲ್ಲಿ ಆಘಾತದ ನಂತರದ ಒತ್ತಡಗಳಿಗೆ ಪ್ರತ್ಯೇಕ ಆಯಾಮದ ಚಿಕಿತ್ಸೆಯ ಅಗತ್ಯವಿರುತ್ತದೆ.

(ಲೇಖಕಿ ವಿಕ್ರಮ್ ಆಸ್ಪತ್ರೆಯಲ್ಲಿವೈದ್ಯಕೀಯ ಕ್ಯಾನ್ಸರ್ ರೋಗಶಾಸ್ತ್ರ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.