
‘ವಿಷಮ ಶೀತಜ್ವರ’ ಎಂದು ಕರೆಯಲ್ಪಡುವ ‘ಟೈಫಾಯ್ಡ್’ ಜ್ವರ ಎಲ್ಲೆಲ್ಲಾ ನೈರ್ಮಲ್ಯವನ್ನು ಕಡೆಗಣಿಸಲಾಗಿದೆಯೋ ಅಲ್ಲೆಲ್ಲಾ ಈ ಕಾಯಿಲೆಯ ಹಾವಳಿ ಕಂಡುಬರುತ್ತದೆ. ‘ಸಾಲ್ಮೋನೆಲ್ಲ ಟೈಫಿ’ ಎಂಬ ಹೆಸರಿನ ಸೂಕ್ಷ್ಮಜೀವಿ, ಸಣ್ಣಕರುಳಿನಲ್ಲಿ ಬೆಳೆದು ಮಲದ ಮೂಲಕ ವಿಸರ್ಜನೆ ಹೊಂದಿ, ಭೂಮಿಯನ್ನು, ನೀರನ್ನು ಸೇರಿ ಮತ್ತೆ ಆಹಾರ, ನೀರು, ಪಾನೀಯಗಳ ಮೂಲಕ ಶರೀರವನ್ನು ಸೇರಿ ಕಾಯಿಲೆಯನ್ನು ತರುತ್ತದೆ. ವಾತಾವರಣವನ್ನು ಸೇರಿದ ಈ ಸೂಕ್ಷ್ಮಜೀವಿಯು ತಂಪು ವಾತಾವರಣವಿರುವಲ್ಲಿ, ನೀರಿನಲ್ಲಿ, ಧೂಳಿನಲ್ಲಿ, ಮಂಜುಗಡ್ಡೆಯಲ್ಲಿ, ಹಾಲಿನಲ್ಲಿ, ಹಾಲಿನ ಅಂಶವಿರುವ ವಸ್ತುಗಳಲ್ಲಿ, ಕೊಳಚೆನೀರಿನಲ್ಲಿ ಅನೇಕ ತಿಂಗಳುಗಳ ಕಾಲ ಜೀವಂತ ಇರುವ ಕಾರಣ ಕಾಯಿಲೆ ಹರಡಲು ಕಾರಣವೂ ಆಗುತ್ತದೆ, ಸುಲಭವೂ ಆಗುತ್ತದೆ.
ಶರೀರವನ್ನು ಪ್ರವೇಶಿಸಿದ ಈ ಸೂಕ್ಷ್ಮಜೀವಿ ಕರುಳಿನಲ್ಲಿ ಬೆಳೆಯುತ್ತದೆ; ಮಾತ್ರವಲ್ಲ, ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತದೆ. ಆದರೆ ಇದು ಸಾಧ್ಯವಾಗುವುದು ಮಾನವನ ದೇಹದ ಒಳಗೆ ಮಾತ್ರ. ಕರುಳಿನ ಗೋಡೆಯ ಮೂಲಕ ರಕ್ತನಾಳವನ್ನು ಪ್ರವೇಶಿಸಿ ಯಕೃತ್ ಗುಲ್ಮಾ ಪಿತ್ತಕೋಶಗಳನ್ನು ಪ್ರವೇಶಿಸುತ್ತದೆ. ಈ ಬ್ಯಾಕ್ಟೀರಿಯವನ್ನು ಬಿಳಿರಕ್ತಕಣಗಳು ನುಂಗಿ ಹೋರಾಡುತ್ತವೆ. ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿ 1-3 ವಾರಗಳಲ್ಲಿ ಕಾಯಿಲೆಯ ಸೂಚನೆಗಳು ಪ್ರಾರಂಭವಾಗುತ್ತವೆ. ನಿಧಾನವಾಗಿ ಏರುವ ಜ್ವರ, ಸಣ್ಣನೆಯ ತಲೆನೋವು, ಹೊಟ್ಟೆನೋವು, ವಿಪರೀತ ಸುಸ್ತು, ಹಸಿವು ಕಡಿಮೆಯಾಗುವುದು ಬೇಧಿ ಅಥವಾ ಮಲಬದ್ಧತೆಗಳು ಕಾಣಿಸಿಕೊಳ್ಳುತ್ತವೆ.
ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಈ ಕೆಲವು ಅಂಶಗಳು ಟೈಫಾಯ್ಡ್ ಕಾಯಿಲೆಯ ಸೂಚನೆಯನ್ನು ಕೊಡಬಹುದು. ನಾಡಿ ಬಡಿತವು ಏರಿದ ದೇಹದ ಉಷ್ಣತೆಗೆ ಅನುಗುಣವಾಗಿ ಹೆಚ್ಚಾಗಿರುವುದಿಲ್ಲ. ಯಕೃತ್ತು ಮತ್ತು ಗುಲ್ಮವು ಸಹ ಸ್ಥಿತಿಗಿಂತ ದೊಡ್ಡದಾಗಿರುತದೆ. ರಕ್ತಪರೀಕ್ಷೆಯನ್ನು ನಡೆಸಿದಾಗ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚಾಗಿರುವುದಿಲ್ಲ. (ದೇಹದಲ್ಲಿ ನಂಜು ಉಂಟಾದಾಗ ಬಿಳಿರಕ್ತಕಣಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ.) ವೈಡಾಲ್ ಪರೀಕ್ಷೆಯಲ್ಲಿ. H ಮತ್ತು O 1:160ಗಿಂತ ಹೆಚ್ಚು ಎಂದು ತೋರಿಸಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕದೆ ಇದ್ದಾಗ ಸಣ್ಣಕರುಳಿನಲ್ಲಿ ಹುಣ್ಣು ಆಗಿ, ಮಲದಲ್ಲಿ ರಕ್ತವೂ ಕಾಣಿಸಿಕೊಳ್ಳಬಹುದು. ವಿಪರೀತ ಹಂತದಲ್ಲಿ ಸಣ್ಣ ಕರುಳಿನಲ್ಲಿ ರಂಧ್ರವಾಗಿ ಹೊಟ್ಟೆಯ ಪೂರ್ತಿ ನಂಜು ವ್ಯಾಪಿಸಬಹುದು.
ಚಿಕಿತ್ಸೆ:
ಅದೃಷ್ಟವಶಾತ್ ನಮ್ಮಲ್ಲಿ ಟೈಫಾಯ್ಡ್ ಕಾಯಿಲೆಯನ್ನು ಗುಣ ಮಾಡುವ ಉತ್ತಮ ಜೀವಪ್ರತಿರೋಧಕಗಳು (ಆ್ಯಂಟಿಬಯೋಟಿಕ್ಸ್) ಲಭ್ಯವಿವೆ. ಹಾಗಾಗಿ ಈ ಕಾಯಿಲೆಯಿಂದ ವಿಪರೀತ ಪರಿಣಾಮಗಳು ಆಗುವುದನ್ನು ಹೆಚ್ಚಿನ ಮಟ್ಟಿಗೆ ತಡೆಹಿಡಿಯಲಾಗಿದೆ. 1- 2 ವಾರಗಳ ಕಾಲ ವಾರಗಳ ಕಾಲ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ರೋಗಿಗೆ ಕೊಡಬೇಕಾಗುತ್ತದೆ.
ಜ್ವರ ಕಡಿಮೆಯಾಗಲು ಕೆಲವೊಮ್ಮೆ ಒಂದು ವಾರವೂ ಹಿಡಿಯಬಹುದು. ವಾಂತಿ, ಹೊಟ್ಟೆನೋವು ಇದ್ದಾಗ ಮಾತ್ರೆಗಳನ್ನು ಸೇವಿಸಲು ಸಾಧ್ಯವಾಗದೇ ಇದ್ದರೆ ಆಗ, ಚುಚ್ಚುಮದ್ದಿನ ಮೂಲಕ ಆ್ಯಂಟಿಬಯೋಟಿಕನ್ನು ಕೊಡಬೇಕಾದ ಅಗತ್ಯ ಉಂಟಾಗಬಹುದು. ಅಪರೂಪ ಸಂದರ್ಭಗಳಲ್ಲಿ, ಕರುಳಿನ ಹುಣ್ಣು ಒಡೆದು ರಂಧ್ರವಾದಾಗ, ಕರುಳಿನ ನೀರು ಹೊಟ್ಟೆಯಲ್ಲಿ ಸೋರಿ ಹೋಗಿ ‘ಪೆರಿಟೋನೈಟಿಸ್’ ಎಂಬ ಅಪಾಯಕಾರಿ ಹಂತ ತಲುಪಬಹುದು.
ಏನು ಮಾಡಬೇಕು?
ವೈದ್ಯರ ಸಲಹೆ ಮೇರೆಗೆ, ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು.
ಜ್ವರ, ಹೊಟ್ಟೆನೋವು ಕಡಿಮೆಯಾಗುವವರೆಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಬೇಕು.
ಕರುಳಿನಲ್ಲಿ ಹುಣ್ಣು ಆಗುವ ಸಾಧ್ಯತೆ ಇರುವುದರಿಂದ ಆಹಾರದಲ್ಲಿ ಪಥ್ಯ ಅತಿ ಮುಖ್ಯ. ಹೆಚ್ಚು ಸುಲಭವಾಗಿ ಜೀರ್ಣವಾಗುವ ಲಘು ಆಹಾರ, ದ್ರವ ಆಹಾರ, ಪ್ರೋಟೀನ್ ಇರುವ, ಕಡಿಮೆ ಕೊಬ್ಬು ಇರುವ ಆಹಾರವನ್ನು ಸೇವಿಸಬೇಕು.
ಎಣ್ಣೆ, ಕೊಬ್ಬು, ಮಸಾಲೆ ಭರಿತ ಆಹಾರಗಳನ್ನು ಸೇವಿಸದೆ ಇರುವುದು.
ಶೌಚಾಲಯವನ್ನು ಬಳಸಿದ ನಂತರ ಮತ್ತು ಆಹಾರ ತಿನ್ನುವ ಮೊದಲು ಕನಿಷ್ಠ 30 ಸೆಕೆಂಡುಗಳ ಕಾಲ ಕೈಯನ್ನು ಚೆನ್ನಾಗಿ ತೊಳೆಯುವುದು.
ಕಾಯಿಲೆ ಬಂದವರಿಂದ ಇತರರಿಗೆ ಕಾಯಿಲೆ ಹರಡುವ ಸಾಧ್ಯತೆಗಳಿರುವುದರಿಂದ, ಇತರರು ಸೇವಿಸುವ ಆಹಾರಗಳನ್ನು ಮುಟ್ಟಬಾರದು. ಆದರೆ ಕಾಯಿಲೆಯಿಂದ ಗುಣಮುಖರಾದರೂ, ಈ ಬ್ಯಾಕ್ಟೀರಿಯವನ್ನು ಶರೀರದಿಂದ ಮಲದ ಮೂಲಕ ವಿಸರ್ಜನೆ ಮಾಡುವ ವಾಹಕರನ್ನು, ಪತ್ತೆ ಹಚ್ಚುವುದಾಗಲಿ ಅವರಿಂದ ಕಾಯಿಲೆ ಹರಡುವುದನ್ನು ತಡೆಯುವುದಕ್ಕಾಗಲಿ ನಮ್ಮಲ್ಲಿ ಕ್ರಮಗಳಿಲ್ಲ.
ಶೌಚಾಲಯದ ವ್ಯವಸ್ಥೆ, ಶುದ್ಧ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ ಇವುಗಳು ಕ್ರಮಬದ್ಧವಾಗಿ ಆಗುವವರೆಗೆ ನಾವು ನೀವು ಎಲ್ಲರೂ ಟೈಫಾಯಿಡ್ ಕಾಯಿಲೆಯಿಂದ ಒಂದಲ್ಲ ಒಂದು ಬಾರಿ ಖಂಡಿತವಾಗಿ ಬಳಲುತ್ತೇವೆ.
ತಡೆಗಟ್ಟುವುದು ಹೇಗೆ?
ಟೈಫಾಯ್ಡ್ ಹೆಚ್ಚು ಇರುವ ಊರಿಗೆ, ನೈರ್ಮಲ್ಯ ಕಡಿಮೆ ಇರುವ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ, ಹೋಗುವ ಒಂದು ವಾರಕ್ಕೆ ಮೊದಲು ಲಸಿಕೆಗಳನ್ನು ತೆಗೆದುಕೊಳ್ಳಬಹುದು.
ವೈಯಕ್ತಿಕ ಹಂತದಲ್ಲಿ
ಶುದ್ಧಗೊಳಿಸಿದ, ಕುದಿಸಿದ ನೀರನ್ನು ಮಾತ್ರ ಸೇವಿಸುವುದು.
ಬೀದಿ ಬದಿಯ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು; ಮಂಜುಗಡ್ಡೆ, ಐಸ್ ಕ್ರೀಂಗಳ ಶುದ್ಧತೆಯ ಬಗ್ಗೆ ಜಾಗ್ರತೆಯನ್ನು ವಹಿಸುವುದು.
ಆಹಾರವನ್ನು ತಿನ್ನುವ ಮೊದಲು ಮತ್ತು ಶೌಚದ ನಂತರ ಕೈಯನ್ನು ಶುದ್ಧಗೊಳಿಸಿಕೊಳ್ಳುವುದು.
ಹಣ್ಣುಗಳನ್ನು ಸೊಪ್ಪು ತರಕಾರಿಗಳನ್ನು ಚೆನ್ನಾಗಿ ತೊಳೆದು ತಿನ್ನುವುದು.
ಸಾರ್ವಜನಿಕವಾಗಿ
ತ್ಯಾಜ್ಯವಸ್ತುಗಳ ವಿಲೇವಾರಿಯಲ್ಲಿ ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳುವುದು.
ನೀರಿನ ಸಂಸ್ಕರಣೆ.
ಆಹಾರಪೂರೈಕೆಯಲ್ಲಿ ಮಾಲಿನ್ಯವಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು.
ಲಸಿಕೆಯ ಪೂರೈಕೆ.
ಹೋಟೆಲ್–ಹಾಸ್ಟೆಲ್‌ಗಳಂಥ ಸ್ಥಳಗಳಲ್ಲಿ ಆಹಾರವನ್ನು ತಯಾರಿಸುವವರಿಗೆ ನೈರ್ಮಲ್ಯದ ಬಗ್ಗೆ ನಿಗಾ ವಹಿಸುವುದು.
ಜನರಿಗೆ ಕಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.