ADVERTISEMENT

ಫಿಟ್‌ನೆಸ್‌ನ ಹೊಸ ನೋಟಗಳು: ನಡಿಗೆ, ಸೈಕ್ಲಿಂಗ್‌ನಲ್ಲಿದೆ ಸ್ವಾಸ್ಥ್ಯ

ಡಾ.ನಿಸರ್ಗ
Published 20 ನವೆಂಬರ್ 2021, 22:15 IST
Last Updated 20 ನವೆಂಬರ್ 2021, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

(ಮನುಷ್ಯನ ದೇಹ ರಚನೆ ಕೂಡ ನಡಿಗೆಗೆ ಅನುಕೂಲಕರವಾಗಿಯೇ ಇದೆ. ಪ್ರತಿದಿನ ಸುಮಾರು 30ರಿಂದ 40 ನಿಮಿಷ ಮನುಷ್ಯ ನಡೆಯಲೇಬೇಕು. ನಡೆಯುವುದು ಎಂದರೆ ಅದು ವೇಗವಾದ (ಬ್ರಿಸ್ಕ್‌ ವಾಕ್‌) ನಡಿಗೆ ಆಗಿರಬೇಕು; ಬೆವರು ಸುರಿಯಬೇಕು.)

ಹೃದಯ ಸಂಬಂಧಿ ಕಾಯಿಲೆಗಳಿಂದ ಇತ್ತೀಚೆಗೆ ಯುವಕರೂ ಸಾವನ್ನಪ್ಪುತ್ತಿದ್ದಾರೆ. ಸಾವಿನ ಸುದ್ದಿ ಕೇಳಿದ ಕೂಡಲೇ, ‘ಅರೆ! ಎಷ್ಟು ಫಿಟ್‌ ಇದ್ದರು, ಜಿಮ್‌ಗೂ ಹೋಗುತ್ತಿದ್ದರು, ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡಿದ್ದರು. ಆದ್ರೂ ಸಾವು ಅವರನ್ನು ಇಷ್ಟು ಬೇಗ ತೆಗೆದುಕೊಂಡು ಹೋಯಿತಲ್ಲಾ’ ಎಂದೆಲ್ಲಾ ಅನ್ನಿಸುವುದು ಸಹಜ. ಕೆಲವೊಂದು ಸಾವು ನಮ್ಮನ್ನು ಹೈರಾಣ ಮಾಡಿಬಿಡುತ್ತವೆ. ಇಷ್ಟೊಂದು ವ್ಯಾಯಾಮ ಮಾಡಿ, ಡಯೆಟ್‌ ಮಾಡಿಯೂ ಸಾವು ಬರುವುದಾದರೆ, ಇದೆಂಥಾ ಬದುಕಪ್ಪಾ ಅಂತ ಅನ್ನಿಸಲೂ ಸಾಕು. ಸಾವನ್ನು ತಡೆಯುವುದು ನಮ್ಮ ಕೈಯಲ್ಲಿ ಇಲ್ಲದಿದ್ದರೂ ಮುಂದೂಡುವ ಪ್ರಯತ್ನವನ್ನಂತೂ ಬಿಡುವಂತಿಲ್ಲ.

‘ನಡಿಗೆಯು ಮನುಷ್ಯನಿಗೆ ನೀಡಬಹುದಾದ ಉತ್ತಮ ಚಿಕಿತ್ಸೆ’ ಎಂದು ನಾಲ್ಕನೇ ಶತಮಾನದಲ್ಲಿಯೇ ಹಿಪೊಕ್ರಟೀಸ್‌ ಹೇಳಿದ್ದಾನೆ. ಮನುಷ್ಯನ ದೇಹ ರಚನೆ ಕೂಡ ನಡಿಗೆಗೆ ಅನುಕೂಲಕರವಾಗಿಯೇ ಇದೆ. ಪ್ರತಿದಿನ ಸುಮಾರು 30ರಿಂದ 40 ನಿಮಿಷ ಮನುಷ್ಯ ನಡೆಯಲೇಬೇಕು. ನಡೆಯುವುದು ಎಂದರೆ ಅದು ವೇಗವಾದ (ಬ್ರಿಸ್ಕ್‌ ವಾಕ್‌) ನಡಿಗೆ ಆಗಿರಬೇಕು; ಬೆವರು ಸುರಿಯಬೇಕು. ಪಾರ್ಕ್‌ನಲ್ಲಿ ನಿಧಾನವಾಗಿ ಪಕ್ಕದವರೊಂದಿಗೆ ಮಾತನಾಡುತ್ತಾ ಅಥವಾ ಸಂಗೀತ ಕೇಳುತ್ತಾ ನಡೆಯುವುದರಿಂದ ಯಾವುದೇ ಉಪಯೋಗ ಇಲ್ಲ. ನಡಿಗೆ ನಮ್ಮ ಧ್ಯಾನವಾಗಿರಬೇಕು. ಮೈಮನಸ್ಸು ಎಲ್ಲದರ ಕೇಂದ್ರಬಿಂದು ನಡಿಗೆಯೇ ಆಗಿರಬೇಕು.

ADVERTISEMENT

ನಡಿಗೆಯಿಂದ ಕ್ಯಾನ್ಸರ್‌ನಂಥ ರೋಗಗಳು ನಮ್ಮನ್ನು ಬಾಧಿಸದಂತೆ ತಡೆಯಬಹುದು ಎಂದು ವಿಜ್ಞಾನ ಹೇಳುತ್ತದೆ. ಭಾರತದಲ್ಲಿ ಕಾಯಿಲೆಗಳ ರಾಜ ಎನಿಸಿಕೊಂಡಿರುವ ಮಧುಮೇಹದಂಥ ರೋಗಕ್ಕೆ ನಡಿಗೆ ಉತ್ತಮ ಮದ್ದು. ರೋಮನ್‌ನಲ್ಲಿ ಒಂದು ಗಾದೆ ಇದೆ. ‘ಸಮಸ್ಯೆಗೆ ಪರಿಹಾರ ಬೇಕೆಂದರೆ ಒಂದು ಸುತ್ತು ನಡಿ’ ಎಂಬುದಾಗಿ!

ಅಥೊರೊಸ್ಕೊರೋಸಿಸ್‌ ಎಂದರೆ ರಕ್ತನಾಳದಲ್ಲಿ ರಕ್ತಸಂಚಾರಕ್ಕೆ ತೊಡಕಾಗುವುದು. ಈ ಕಾಯಿಲೆಯು ಮನುಷ್ಯನ 20ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. ಮನುಷ್ಯನಿಗೆ ಸಾವು ತಂದುಕೊಡುವುದಕ್ಕೆ ವಯಸ್ಸಾಗುವ ಪ್ರಕ್ರಿಯೆಯಾಗಿ ಈ ರೋಗ ಬರುತ್ತದೆ. ಇದನ್ನು ಮುಂದೂಡಬೇಕು ಎನ್ನುವುದಾದರೆ, ನಡಿಗೆ ಬಹುಮುಖ್ಯವಾದುದು. ಜಿಮ್‌ನಿಂದ ಕೂಡ ಇದು ಸಾಧ್ಯ. ಹಾಗಂತ, ಫಿಟ್‌ನೆಸ್‌ ಫ್ರೀಕ್‌ ಎನ್ನುವವರಿಗೂ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ ಎನ್ನುವಂತಿಲ್ಲ. ಬಹಳ ಮಂದಿ ಯೋಗ ಗುರುಗಳಿಗೂ ನಾನು ಆಪರೇಷನ್‌ ಮಾಡಿದ್ದೇನೆ.

ನಡಿಗೆ ಜೊತೆಗೆ ಸೈಕ್ಲಿಂಗ್‌ ಮತ್ತು ಈಜು ಕೂಡ ಬಹಳ ಉಪಕಾರಿಯಾದುವು. ವಿದೇಶಗಳಲ್ಲಿ ಸೈಕ್ಲಿಂಗ್‌ ಮಾಡುತ್ತಾರೆ ಎಂದರೆ ಅವರಿಗೆ ಎಲ್ಲಿಲ್ಲದ ಗೌರವ ಸಿಗುತ್ತದೆ. ಅಷ್ಟೇ ಗೌರವ ಸೈಕಲ್‌ಗೂ ಕೂಡ. ರಸ್ತೆಯಲ್ಲಿ ಅವಕ್ಕಾಗಿಯೇ ಬೇರೆ ಪಥ ಇರುತ್ತದೆ; ರೈಲಿನ ಒಳಗೂ ಸೈಕಲ್‌ ನಿಲ್ಲಿಸಲು ಜಾಗ! ಭಾರತದಲ್ಲಿ ಸೈಕಲ್‌ ಅನ್ನುವುದು ಬಡತನದ, ಮುಜುಗರದ ಸಂಗತಿಯಾಗಿದೆ.

ನಮ್ಮ ಆಹಾರ ಹೇಗಿರುತ್ತದೆಯೋ ನಮ್ಮ ದೇಹ ಹಾಗಿರುತ್ತದೆ. ಸಕ್ಕರೆ ನಮ್ಮ ವೈರಿ. ಇದು ನಮಗೆ ಕೊಬ್ಬಿಗಿಂತ ದೊಡ್ಡ ವೈರಿ. ಇದರ ಸೇವನೆಯನ್ನು ಖಂಡಿತ ಕಡಿಮೆ ಮಾಡಬೇಕು. ಹೆಚ್ಚು ಹೆಚ್ಚು ಪ್ರೋಟೀನ್‌, ವಿಟಮಿನ್‌, ಮಿನರಲ್ಸ್‌– ಮೈಕ್ರೊ ನ್ಯೂಟ್ರಿಯಂಟ್ಸ್‌ ಇರುವ ಆಹಾರ ಪದಾರ್ಥ ಸೇವಿಸಬೇಕು.

ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ. ವಿ. ಸಿಂಧು ಅವರ ನಡಿಗೆ, ವರ್ಕ್‌ಔಟ್‌ ಎಷ್ಟು ಚಂದ ಇದೆ ಎಂದರೆ, ನಿದ್ದೆ ಮಾಡುವಾಗ ಅವರ ಹೃದಯ ಬಡಿತ 45ರಿಂದ 46ಕ್ಕೆ ಹೋಗುತ್ತದೆ. ಸಾಮಾನ್ಯವಾಗಿ 55ರಿಂದ 60 ಇರುತ್ತದೆ. ಇದರಿಂದ ಹೃದಯಕ್ಕೂ ಕೆಲಸ ಕಡಿಮೆ, ದೇಹಕ್ಕೂ ಒಳ್ಳೆಯದು. ಸಾಮಾನ್ಯವಾಗಿ ಎಲ್ಲರಲ್ಲೂ ಗುಡ್‌ ಕೊಲೆಸ್ಟ್ರಾಲ್‌ 40 ಇರುತ್ತದೆ. ಇದು, ಸಿಂಧುಗೆ 130ರಿಂದ 140 ಇದೆ. ಆದ್ದರಿಂದ ಅವರಿಗೆ ಹೃದಯ ಯಾವತ್ತೂ ತೊಂದರೆ ಕೊಡುವುದಿಲ್ಲ.

ತೀವ್ರತರ ವ್ಯಾಯಾಮ ಮಾಡಬಹುದು; ಆದರೆ, ಅದು ವಾರಕ್ಕೆ ಒಮ್ಮೆ ಇದ್ದರೆ ಒಳ್ಳೆಯದು. ದಿನವೂ ಅತಿಯಾದ ವ್ಯಾಯಾಮ ಒಳ್ಳೆಯದಲ್ಲ.

ಹಾಗಾದರೆ, ಇದಕ್ಕೆಲ್ಲಾ ಏನು ಪರಿಹಾರ? 45 ವರ್ಷ ಆದ ಹೆಂಗಸರು, 40 ವರ್ಷ ಮೇಲಾದ ಗಂಡಸರು ಆರು ತಿಂಗಳಿಗೊಮ್ಮೆ ಥ್ರೆಡ್‌ಮಿಲ್‌ ಟೆಸ್ಟ್‌ ಮಾಡಿಸಿಕೊಳ್ಳಲೇಬೇಕು. ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆ ಅಣ್ಣ-ತಮ್ಮ ಇದ್ದಂತೆ. ಮಧುಮೇಹ ಬರದಂತೆ ನೋಡಿಕೊಳ್ಳಬೇಕು, ಬಂದರೆ ನಿರ್ವಹಿಸಬೇಕು. ಆಗ ಹೃದಯ ಸಂಬಂಧಿ ತೊಂದರೆ ಬಾಧಿಸದು.

ಲೇಖಕ: ಹೃದ್ರೋಗತಜ್ಞ, ಕೆಐಎಂಎಸ್‌ ಆಸ್ಪತ್ರೆ, ಹೈದರಾಬಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.