ADVERTISEMENT

ಏನಿದು ಸಿ–ಸೆಕ್ಷನ್ ಹೆರಿಗೆ.. ಯಾರಿಗೆ? ಯಾವಾಗ?

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 0:23 IST
Last Updated 14 ಅಕ್ಟೋಬರ್ 2025, 0:23 IST
<div class="paragraphs"><p>ಏನಿದು ಸಿ–ಸೆಕ್ಷನ್ ಹೆರಿಗೆ.. ಯಾರಿಗೆ? ಯಾವಾಗ?</p></div>

ಏನಿದು ಸಿ–ಸೆಕ್ಷನ್ ಹೆರಿಗೆ.. ಯಾರಿಗೆ? ಯಾವಾಗ?

   

ಹೆಣ್ಣುಮಕ್ಕಳ ಜೀವನದಲ್ಲಿ ಮದುವೆ, ಬಸಿರು, ಬಾಣಂತನ ಇತ್ಯಾದಿಗಳಿಗೆ ಇನ್ನಿಲ್ಲದ ಮಹತ್ವ. ಸೃಷ್ಟಿಕ್ರಿಯೆ ನಿರಂತರವಾಗಿ ಸಾಗಲು ಬದುಕಿನ ಈ ಆಯಾಮ ಕೂಡ ಮುಖ್ಯ. ಭಾರತೀಯ ಕುಟುಂಬಗಳಲ್ಲಂತೂ ಮದುವೆ- ಹೆರಿಗೆ- ನವಜಾತ ಶಿಶುವಿನ ಆರೈಕೆಗಳು ಮೊದಲಿನಿಂದಲೂ ಸಂಭ್ರಮಾಚರಣೆಯ ಭಾಗಗಳೇ ಆಗಿವೆ.

ಹಿಂದಿನ ಕಾಲದಲ್ಲಿ ಬಹುತೇಕ ಹೆರಿಗೆಗಳು ಮನೆಯಲ್ಲಿಯೇ ಆಗುತ್ತಿದ್ದವು. ಆಗ ಈಗಿನಂತೆ ಗಲ್ಲಿಗೊಂದು ಆಸ್ಪತ್ರೆ, ತಜ್ಞವೈದ್ಯರ ಲಭ್ಯತೆ ಇರಲಿಲ್ಲ. ಹಾಗಾಗಿ ಅದೊಂದು ಆರೋಗ್ಯಸಮಸ್ಯೆ ಎನಿಸದೇ ಮನೆಯ ಇನ್ನಿತರ ನಿತ್ಯಕರ್ಮಗಳಂತೆ ಹೆರಿಗೆ ಕೂಡ ನಡೆದುಹೋಗುತ್ತಿತ್ತು. ಅನೇಕ ಬಾರಿ ಹೆರಿಗೆ ಸಸೂತ್ರವಾಗಿ ಆದರೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತಿದ್ದವು.

ADVERTISEMENT

ತಾಯಿಗೋ ಅಥವಾ ನವಜಾತ ಶಿಶುವಿಗೋ ಸೋಂಕು ತಗುಲಿ ಆಸ್ಪತ್ರೆ ಹುಡುಕಿಕೊಂಡು ಹೋಗುವ ಪ್ರಸಂಗ ಬರುತ್ತಿತ್ತು. ಕೆಲವೊಮ್ಮೆ ಸೋಂಕು ಮಾರಣಾಂತಿಕವೂ ಆಗುತ್ತಿತ್ತು. ಆದರೆ ಕ್ರಮೇಣ ಸಾಮಾಜಿಕ ಸ್ತರದಲ್ಲಿ ಏಳಿಗೆಯಾದಂತೆ ಆರೋಗ್ಯ ಸೌಲಭ್ಯಗಳೂ ಹೆಚ್ಚಿ ಬಹುತೇಕ ಹೆರಿಗೆಗಳು ಆಸ್ಪತ್ರೆಯಲ್ಲೇ ಜರುಗತೊಡಗಿದವು. ಈಗ ವೈದ್ಯರ ಜೊತೆ ದಾದಿಯರೂ ಕೂಡ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ
ಪರಿಣಿತರಾಗಿದ್ದಾರೆ. ಜೊತೆಗೆ ಆರೋಗ್ಯ ಕಾರ್ಯಕರ್ತೆಯರೂ ಮನೆ-ಮನೆಗೆ ಭೇಟಿ ನೀಡಿ ಗರ್ಭಿಣಿ ಸ್ತ್ರೀಯರ ತಪಾಸಣೆ ಮಾಡುವುದರಿಂದ, ವರ್ಧಕಮಾತ್ರೆಗಳನ್ನು ನೀಡುವುದರಿಂದ ಪ್ರಸೂತಿಸಂಬಂಧಿ ಸಾವು-ನೋವುಗಳು ಈಗ ಸಾಕಷ್ಟು ಕಡಿಮೆಯಾಗಿವೆ.

ಆದಾಗ್ಯೂ ಕೆಲ ಸಂದರ್ಭಗಳಲ್ಲಿ ಹೆರಿಗೆ ಸಹಜವಾಗಿ ಆಗದಿದ್ದಾಗ ಶಸ್ತ್ರಚಿಕಿತ್ಸೆಯ ಮೂಲಕ ಶಿಶುವನ್ನು ತಾಯಿಯ ಗರ್ಭದಿಂದ ಹೊರತೆಗೆಯಬೇಕಾಗಿ ಬರುತ್ತದೆ. ಇದನ್ನು ಸೂಕ್ತ ತರಬೇತಿ ಪಡೆದ ವೈದ್ಯ- ದಾದಿಯರ ತಂಡವೇ ಮಾಡಬೇಕು. ಈ ಶಸ್ತ್ರಚಿಕಿತ್ಸೆ ‘ಸಿಸೇರಿಯನ್ ಸೆಕ್ಷನ್’ ಎಂದೇ ಎಲ್ಲೆಡೆ ಪ್ರಸಿದ್ಧಿಯಾಗಿದೆ.

ಈಗ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ಸಿಸೇರಿಯನ್ ಹೆರಿಗೆ ಮಾಡುವ ಸೌಲಭ್ಯವಿರುತ್ತದೆ. ಸಿಸೇರಿಯನ್ ಸೆಕ್ಷನ್ ಸಾವಿರಾರು ವರ್ಷಗಳ ಹಿಂದಿನಿಂದಲೇ ಆರಂಭವಾಗಿರಬಹುದೆಂದು ಇತಿಹಾಸ ಹೇಳುತ್ತದೆ. ಮೃತ ಗರ್ಭಿಣಿಯನ್ನು ಹಾಗೆಯೇ ಸಮಾಧಿ ಮಾಡಬಾರದು ಎಂದು ಆಕೆಯ ಗರ್ಭವನ್ನು ಸೀಳಿ ಮಗುವನ್ನು ಹೊರತೆಗೆಯುವ ಪದ್ಧತಿ ಪ್ರಾಚೀನ ಕಾಲದಲ್ಲಿತ್ತು. ಅದೇ ಕ್ರಮೇಣ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ನಾಂದಿ ಹಾಡಿತು. ರೋಮಿನ ಅಧಿಪತಿ ಜ್ಯೂಲಿಯಸ್ ಸೀಸರ್ ಜನಿಸಿದ್ದು ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದಲೇ ಎಂದೂ ಕೂಡ ಹೇಳುತ್ತಾರೆ. ಆದರೆ ಈ ಘಟನೆಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದರೆ 19ನೇ ಶತಮಾನದ ವೇಳೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ನಿಯಮಿತವಾಗಿ ಮಾಡುತ್ತಿದ್ದರು ಎನ್ನುವುದಕ್ಕೆ ಅನೇಕ ಸಾಕ್ಷ್ಯಾಧಾರಗಳಿವೆ.

ಪ್ರಸೂತಿಶಾಸ್ತ್ರದಲ್ಲಿ ಸಿಸೇರಿಯನ್ ಸೆಕ್ಷನ್ ಒಂದು ಪ್ರಮುಖ ಶಸ್ತ್ರಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಶಿಶು ಯೋನಿದ್ವಾರದಿಂದ ಹೊರಬರಲು ತೊಂದರೆ ಉಂಟಾದಾಗ ಈ ಶಸ್ತ್ರಚಿಕಿತ್ಸೆಯ ಮುಖಾಂತರ ಶಿಶುವನ್ನು ಹೊರತೆಗೆಯಬೇಕಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಮುಖ್ಯವಾಗಿ ಗರ್ಭದಲ್ಲಿರುವ ಶಿಶುವಿನ ಹೃದಯಬಡಿತದಲ್ಲಿ ಹಠಾತ್ತನೆ ಏರುಪೇರು ಉಂಟಾದಾಗ, ಪ್ರಸವಸಮಯದಲ್ಲಿ ಶಿಶುವಿನ ತಲೆ, ಹೊಕ್ಕುಳಬಳ್ಳಿ ಅಥವಾ ಅಂಗ ತೊಡಕು ಹಾಕಿಕೊಂಡಾಗ, ಗರ್ಭದ ಚೀಲ ಒಡೆದು ಮಲಮಿಶ್ರಿತ ನೀರು ಹೊರಬಂದಾಗ ತಕ್ಷಣವೇ
ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಶಿಶುವನ್ನು ಹೊರತೆಗೆಯಬೇಕಾಗುತ್ತದೆ.

ಗರ್ಭಿಣಿಯ ಎತ್ತರ ಕಡಿಮೆ ಇದ್ದು ಅಥವಾ ಶ್ರೋಣಿಯ ಮೂಳೆ ಅಥವಾ ಅವಯವಗಳಲ್ಲಿ ಏನಾದರೂ ಊನ ಇದ್ದರೆ ಶಿಶುವಿನ ತಲೆ ದ್ವಾರದ ಮೂಲಕ ಹೊರಬರಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಹಿಂದೆ ಆದ ಶಸ್ತ್ರಚಿಕಿತ್ಸೆಗಳು, ಜರಾಯುವಿನ (ಪ್ಲಾಸೆಂಟಾ) ತೊಂದರೆಗಳು ಕೂಡ ದ್ವಾರದ ಅಗಲವನ್ನು ಕಡಿಮೆ ಮಾಡುತ್ತವೆ. ಇಂಥ ಸಂದರ್ಭಗಳಲ್ಲಿ ಕೂಡ ಸಿಸೇರಿಯನ್ ಶಸ್ತ್ರಚಿಕಿತ್ಸೆಯೇ ಪರಿಹಾರ. ಒಮ್ಮೊಮ್ಮೆ ಪ್ರಸವದ ಸಮಯದಲ್ಲಿ ಗರ್ಭಕೋಶ ತಕ್ಕಮಟ್ಟಿಗೆ ಸಂಕೋಚನಗೊಂಡು ಶಿಶುವನ್ನು ಹೊರದೂಡುವುದಿಲ್ಲ. ಆಗ ಕೆಲ ಇಂಜೆಕ್ಷನ್‌ಗಳನ್ನು ನೀಡಿ ಗರ್ಭಕೋಶದ ಸಂಕೋಚನವನ್ನು ಬಲಪಡಿಸಬಹುದು. ಆದರೂ ಶಿಶು ಹೊರಬರದಿದ್ದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ.

ವಿರಳ ಸಂದರ್ಭಗಳಲ್ಲಿ ಗರ್ಭಿಣಿಗೆ ರಕ್ತದೊತ್ತಡ ಹೆಚ್ಚಾಗಿ ಅಪಸ್ಮಾರ, ರಕ್ತಸ್ರಾವ ಇನ್ನಿತರ ಪ್ರಾಣಾಂತಿಕ ಸಮಸ್ಯೆಗಳು ಉಂಟಾಗುತ್ತವೆ. ಆಗ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮುಖಾಂತರ ಶಿಶುವನ್ನು ತಕ್ಷಣ ಹೊರತೆಗೆಯುವುದರಿಂದ ತಾಯಿ ಹಾಗೂ ಮಗುವಿನ ಪ್ರಾಣ ಉಳಿಸಬಹುದು.

ಈ ಎಲ್ಲ ಸಮಸ್ಯೆಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ 3P, ಅಂದರೆ ಪವರ್ (ಗರ್ಭಕೋಶದ ಸಂಕೋಚನ), ಪ್ಯಾಸೇಜ್ (ಗರ್ಭದ್ವಾರ) ಮತ್ತು ಪ್ಯಾಸೆಂಜರ್ (ಶಿಶು) ಎಂದು ವಿಂಗಡಿಸುತ್ತಾರೆ. ಇವುಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಮೊದಲೇ ಊಹಿಸಬಹುದು. ಇನ್ನು ಕೆಲವು ಪ್ರಸವದ ಸಮಯದಲ್ಲೇ ಕಾಣಿಸುತ್ತವೆ. ಹಾಗಾಗಿ ಯಾವ ಗರ್ಭಿಣಿಗೆ ಸಹಜ ಹೆರಿಗೆ ಯಾಗಬಹುದು, ಯಾರಿಗೆ ಸಿಸೇರಿಯನ್ ಹೆರಿಗೆ ಬೇಕಾಗಬಹುದು ಎಂದು ಮೊದಲೇ ಹೇಳುವುದು ಕಷ್ಟ. ಕೆಲವೊಮ್ಮೆ ಮೊದಲ ಹೆರಿಗೆ ಸಹಜವಾಗೇ ಆಗಿ ಎರಡನೇ ಹೆರಿಗೆಯಲ್ಲಿ ಮೇಲೆ ತಿಳಿಸಿದ ಕೆಲ ತೊಂದರೆಗಳು ಕಾಣಿಸಿಕೊಂಡು ಅವರಿಗೆ ಸಿಸೇರಿಯನ್ ಬೇಕಾಗಬಹುದು.

ಸಿಸೇರಿಯನ್ ಶಸ್ತ್ರಚಿಕಿತ್ಸೆ ತುಂಬಾ ಕಷ್ಟಕರವೇನಲ್ಲ. ಆದರೆ ರೋಗಿ ಕೆಲದಿನಗಳವರೆಗೆ ಆಸ್ಪತ್ರೆಯಲ್ಲಿರಬೇಕಾಗುತ್ತೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಸುಸಜ್ಜಿತ ಶಸ್ತ್ರಚಿಕಿತ್ಸೆ ಕೊಠಡಿ, ತಜ್ಞ ವೈದ್ಯರು ಹಾಗೂ ಅರಿವಳಿಕೆಯ ಅವಶ್ಯಕತೆ ಇರುತ್ತದೆ. ಉಳಿದ ಶಸ್ತ್ರಚಿಕಿತ್ಸೆಗಳ ಹಾಗೆ ನೋವು ಮತ್ತು ಸೋಂಕಿನ ಸಾಧ್ಯತೆಗಳಿರುತ್ತವೆ. ಆದರೆ ಸೂಕ್ತ ಔಷಧಿಗಳಿಂದ ಇವುಗಳನ್ನು ತಡೆಗಟ್ಟಬಹುದು.
ಇಂದಿನ ಆಧುನಿಕ ಯುಗದಲ್ಲಿ ಯುವಜನರಲ್ಲಿ ಫಲವತ್ತತೆ ಕಡಿಮೆಯಾಗಿ ಗರ್ಭಧರಿಸಲು ಅನೇಕ ಚಿಕಿತ್ಸೆಗಳ ಅವಶ್ಯಕತೆ
ಉಂಟಾಗಿದೆ. ಅಲ್ಲದೆ ವಿದ್ಯಾಭ್ಯಾಸ, ದುಡಿಮೆ ಹಾಗೂ ಇನ್ನಿತರ ಜವಾಬ್ದಾರಿಗಳು ಮದುವೆ ಹಾಗೂ ಗರ್ಭಧಾರಣೆಯ ವಯಸ್ಸನ್ನು ಬಹಳಷ್ಟು ಮುಂದೂಡಿವೆ. ಇವೆಲ್ಲ ಮೇಲೆ ತಿಳಿಸಿದ 3Pಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಹೀಗಾಗಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ನಿಧಾನವಾಗಿ ಜಾಸ್ತಿಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.