ADVERTISEMENT

ಹ್ಯಾಪಿ ಮಾರ್ನಿಂಗ್ಸ್: ಸೊಗದ ಬೆಳಗಿಗೆ..

​ಪ್ರಜಾವಾಣಿ ವಾರ್ತೆ
Published 31 ಮೇ 2025, 0:31 IST
Last Updated 31 ಮೇ 2025, 0:31 IST
<div class="paragraphs"><p>ಹ್ಯಾಪಿ ಮಾರ್ನಿಂಗ್ಸ್: ಸೊಗದ ಬೆಳಗಿಗೆ..</p></div>

ಹ್ಯಾಪಿ ಮಾರ್ನಿಂಗ್ಸ್: ಸೊಗದ ಬೆಳಗಿಗೆ..

   

ಬೆಳಗಿನ ಧಾವಂತ ಬಹುತೇಕ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರಿಗೆ ಸಾಮಾನ್ಯ.  ಅದರಲ್ಲಿಯೂ ಮಕ್ಕಳಿಗೆ ರಜೆ ಮುಗಿಯುತ್ತಾ ಬಂತು. ಹೊರಗೆ ದುಡಿಯುವವರಿಗೆ ವಾರಾಂತ್ಯ ಬರುತ್ತಿದ್ದಂತೆ ‘ಸೋ.. ಮವಾರ’ ಎಂದು ಹುರುಪಿಲ್ಲದ ಮಂಡೇ ಬ್ಲ್ಯೂಸ್‌ನ ಜಾಲದೊಳಗೆ ಸಿಲುಕಿಕೊಳ್ಳುವುದರ ಜತೆಗೆ ಧಾವಂತದ  ಬೆಳಗುಗಳು ಎದುರು ನೋಡುತ್ತಿರುತ್ತವೆ. 

ಗುರಿಯ ಹಿಂದೆ ಓಡುತ್ತಿರುವ ಜೀವನ, ಆಫೀಸ್‌, ಮನೆ, ಸ್ನೇಹಿತರು, ಮಕ್ಕಳು, ಸಂಬಂಧಿಕರು  ಹೀಗೆ ಎಲ್ಲದರ ನಡುವೆ ಒಮ್ಮೊಮ್ಮೆ ಹದವರಿತ  ಕೇಸರಿಭಾತ್‌ನಂತೆಯೂ, ಕೆಲವೊಮ್ಮೆ ಹದ ತಪ್ಪಿದ ಉಪ್ಪಿಟ್ಟಿನಂತೆಯೂ ಅನಿಸುವುದೆಲ್ಲ ಸಹಜ. ಕೈತುಂಬಾ ಕೆಲಸ, ಹೊಸ ಆಲೋಚನೆಗಳ ನಡುವೆ ಹುರುಪನ್ನು ದಕ್ಕಿಸಿಕೊಳ್ಳುವುದು ಹೇಗೆ? ಪ್ರೇರಣೆ ಪಡೆಯುವುದು ಹೇಗೆ? 

ADVERTISEMENT

ಹ್ಯಾಪಿ ಮಾರ್ನಿಂಗ್ಸ್‌ ಎಂದರೇನು?

ಧಾವಂತದ ಬೆಳಗುಗಳೆಲ್ಲ ಸಾವಧಾನದ ಬೆಳಗಿನಂತಾಗಲು ಏನು ಮಾಡಬಹುದು. ಕೆಲಸಕ್ಕೆ ಹೊರಗೆ ಹೋಗುವವರು,   ಮುಖ್ಯವಾಗಿ ವರ್ಕ್ ಫ್ರಮ್ ಹೋಂ ಮಾಡುವವರು, ಮನೆಯನ್ನು ನಿಭಾಯಿಸುವ ಗೃಹಿಣಿಯರು ಎಲ್ಲರ ಪಾತ್ರವೂ ಇದ್ದೆ ಇರುತ್ತದೆ. ವಾರಾಂತ್ಯದಲ್ಲಿಯೇ ಮುಂದಿನ ವಾರದ ದಿನಚರಿಯನ್ನು ಮನೆಯವರಲ್ಲ ಕುಳಿತು ವಾರದ ಅಡುಗೆ ಸಾಮಗ್ರಿ‌, ಹಣ್ಣು- ತರಕಾರಿ, ಗಾಡಿಗಳಿಗೆ ಪೆಟ್ರೋಲ್/ ಏರ್ ತುಂಬಿಸುವುದು, ಹಣಕಾಸಿನ ಬಜೆಟ್ ಹಾಕಿಕೊಳ್ಳುವುದು ಒಂದೆಡೆಯಾದರೆ, ಬೆಳಗಾಗುತ್ತಲೇ ಅಣಿಯಾಗಬೇಕಾದ ಮರುದಿನದ ತಿಂಡಿ- ಊಟದ ಮೆನು ಮೊದಲೇ ಮನೆಮಂದಿಯೊಡನೆ ತೀರ್ಮಾನಿಸುವುದು ಒಳಿತು. ಅದಕ್ಕೆ ತಕ್ಕಂತೆ ಹಿಟ್ಟು ಕಲಸುವುದು/ರುಬ್ಬುವುದು, ತರಕಾರಿ ಹೆಚ್ಚಿಟ್ಟುಕೊಳ್ಳವುದು ಗೃಹಿಣಿಯ ಅರ್ಧ ತಲೆನೋವು ಕಳೆದಂತೆ.

ಮಕ್ಕಳ ನಿರ್ವಹಣೆ ವಿಷಯ ಬಂದಾಗ ಅವರುಗಳ ಹೋಮ್ ವರ್ಕ್ ಮುಗಿಸಿ ಮರುದಿನದ ಪಾಠದ ಕಡೆ ಗಮನ ಹರಿಸಿ, ಸ್ಕೂಲ್ ಡೈರಿಗೆ ಸಹಿ, ಟೈಮ್ ಟೇಬಲ್ ಪ್ರಕಾರ ಪುಸ್ತಕಗಳ ಜೋಡಣೆ, ಸಮವಸ್ತ್ರ ಅಥವಾ ಅಂದು ಧರಿಸುವ ಬಟ್ಟೆಗಳ ಆಯ್ಕೆ, ಇಸ್ತ್ರಿ, ಟೈ, ಬೆಲ್ಟ್, ಐ ಡಿ ಕಾರ್ಡ್, ಪಾಲಿಷ್ ಮಾಡಿದ ಶೂಸ್, ಲಂಚ್ ಬಾಕ್ಸ್, ನೀರಿನ ಬಾಟಲಿ, ನಾಪ್ಕಿನ್, ಲಂಚ್ ಬ್ಯಾಗ್ ಇತ್ಯಾದಿ ಸಿದ್ಧಗೊಳಿಸುವುದರ ಜತೆಗೆ ರಾತ್ರಿಯೇ ತಲೆಗೆ ಎಣ್ಣೆ ಹಚ್ಚುವುದು, ಕೂದಲಿನ ಸಿಕ್ಕುಬಿಡಿಸಿ ಒಮ್ಮೆ ತಲೆ ಬಾಚಿಕೊಂಡಲ್ಲಿ ಮರುದಿನ ಹೇರ್ ಸ್ಟೈಲ್ ಬೇಗನೆ ರೆಡಿಯಾಗುತ್ತೆ.

ಬೆಳೆಯುವ ಮಕ್ಕಳಿಗೆ ಶುಚಿತ್ವದ ಮಹತ್ವ ತಿಳಿಸಬೇಕು. ಮನೆಯಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ತಿಂದ ಚಾಕೊಲೇಟ್ ಬಿಸ್ಕತ್ ಪೊಟ್ಟಣಗಳ ಪೇಪರ್ ಹಣ್ಣುಗಳ ಬೀಜ, ಸಿಪ್ಪೆ, ನಾರು ಕಂಡಕಂಡಲ್ಲಿ ಎಸೆಯುವುದನ್ನು ತಪ್ಪಿಸಿ. 

ಬದಲಾಯಿಸಿದ ಬಟ್ಟೆ ಇಟ್ಟಲ್ಲೇ ಇರಿಸಿದ್ದರೆ, ನಯವಾಗಿ ತಿಳಿಹೇಳಿ. ನಮ್ಮ ಪರಿಸರ ಸ್ವಚ್ಚತೆಯ ಬಗ್ಗೆ ಜಾಗ್ರತೆ ಮೂಡಿಸಬೇಕು. ಪರಿಚಿತರು, ಸ್ನೇಹಿತರು ಮನೆಗೆ ಬಂದಾಗ ಅಥವಾ ಎದುರುಸಿಕ್ಕು ನಕ್ಕು ಮಾತನಾಡಿಸಿದಾಗ ಮುಖ ತಿರುಗಿಸುವುದರ ಬದಲು ನಗುತ್ತ ‘ನಮಸ್ತೆ’ ಎಂದು ಹೇಳುವ ಸಭ್ಯತೆಯನ್ನು ಕಲಿಸಿ. ಒಂದು ಪದದ ಉತ್ತರಗಳಾದ ಬೇಕು, ಬೇಡ, ಇಲ್ಲ, ಹೌದು, ಇತ್ಯಾದಿಗಳನ್ನು ಸೌಮ್ಯವಾಗಿ ಬೇಕು ಅಮ್ಮ ಬೇಡ ಅಮ್ಮ ಇಲ್ಲ ಅಮ್ಮ ಹೌದು ಅಮ್ಮ. ಹೀಗೆ ಯಾರಿಗೆ ಉತ್ತರಿಸುವರೋ ಅವರನ್ನು ಉದ್ದೇಶಿಸಿ ಹೇಳುವುದನ್ನು ಕಲಿಸಿ.

ಸಂಬಂಧಗಳನ್ನು ಬಾಯ್ತುಂಬ ಗುರುತಿಸಿ ಹೇಳಲು ತಿಳಿಸಿ ಉದಾಹರಣೆಗೆ ಅಜ್ಜ, ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಮಾವ ಇತ್ಯಾದಿ. ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಚಿಕ್ಕಂದಿನಿಂದಲೇ ಶುರುವಾಗಲಿ.

ಮನೆಗೆಲಸವನ್ನು ಲಿಂಗಭೇಧವಿಲ್ಲದೆ ಎಲ್ಲರೂ ಹಂಚಿಕೊಂಡು, ಮಕ್ಕಳಿಗೆ ಅವರವರ ವಯಸ್ಸಿಗೆ ತಕ್ಕಂತೆ ಸ್ವಲ್ಪ ಸ್ವಲ್ಪವಾಗಿ ಕೆಲಸ ಹಚ್ಚಿ ಹುರಿದುಂಬಿಸಿ. ಮುಂದಾಲೋಚನೆ ಇಟ್ಟುಕೊಂಡು ಯೋಜನಾಬದ್ಧರಾಗಿದ್ದರೆ ಸಾವಧಾನದ ಬೆಳಗನ್ನು ನಿತ್ಯ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.