ADVERTISEMENT

ಹರೆಯದ ಲೈಂಗಿಕ ಒತ್ತಡ ನಿಭಾಯಿಸುವ ಸುರಕ್ಷಿತ ಮಾರ್ಗವೇನು?

ನಡಹಳ್ಳಿ ವಂಸತ್‌
Published 29 ಜನವರಿ 2021, 19:30 IST
Last Updated 29 ಜನವರಿ 2021, 19:30 IST
ನಡಹಳ್ಳಿ ವಸಂತ್‌
ನಡಹಳ್ಳಿ ವಸಂತ್‌   

ನಾನು ಸಾಕಷ್ಟು ವರ್ಷಗಳಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಇದರಿಂದ ನನಗೆ ಶೀಘ್ರಸ್ಖಲನವಾಗುತ್ತಿದೆ. ಶಿಶ್ನ ಚಿಕ್ಕದಾಗಿದೆ, ಉದ್ರೇಕವಾಗುತ್ತಿಲ್ಲ. ಮುಂದಿನ ದಾಂಪತ್ಯ ಜೀವನಕ್ಕೆ ತೊಂದರೆಯಾಗುತ್ತದೆಯೇ? ಮಕ್ಕಳಾಗಬಹುದೇ? ದೈಹಿಕವಾಗಿ ದುರ್ಬಲನಾಗಿದ್ದೇನೆ. ದಿನವಿಡೀ ಸುಸ್ತಾಗಿ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಂಡಿದ್ದೇನೆ. ಕೂದಲು ಉದುರುತ್ತಿದೆ. ಹಸ್ತಮೈಥುನದಿಂದ ಮೂಲವ್ಯಾಧಿ ಮುಂತಾದ ಕಾಯಿಲೆಗಳು ಬರುತ್ತವೆಯೇ? ಎಷ್ಟು ಸಾರಿ ಹಸ್ತಮೈಥುನ ಮಾಡುವುದು ಆರೋಗ್ಯಕರ? ಇದರಿಂದ ಹೊರಬರುವುದು ಹೇಗೆ?
-ಹೆಸರು, ಊರು ಬೇಡ

ಇದೇ ರೀತಿಯ 15 ಪ್ರಶ್ನೆಗಳು ನನ್ನ ಮುಂದಿದೆ. ಹದಿಹರೆಯದ ಲೈಂಗಿಕತೆಯ ಬಗ್ಗೆ ಹಿಂದೊಮ್ಮೆ ದೀರ್ಘವಾಗಿ ಬರೆಯಲಾಗಿತ್ತು. ನಮ್ಮ ಯುವ ಸ್ನೇಹಿತರ ಆತಂಕ, ತಪ್ಪು ತಿಳಿವಳಿಕೆಗಳನ್ನು ದೂರಮಾಡಲು ಮತ್ತೊಮ್ಮೆ ವಿವರಿಸಲಾಗಿದೆ.

ಸುಮಾರು 14-15 ವರ್ಷಗಳಿಗೆ ಪ್ರಕೃತಿಯ ದೃಷ್ಟಿಯಲ್ಲಿ ನೀವೆಲ್ಲಾ ವಂಶಾಭಿವೃದ್ಧಿಗೆ ಸಿದ್ಧವಾಗುತ್ತೀರಿ. ಪ್ರಕೃತಿ ಹಾರ್ಮೋನ್‌ಗಳ ಮೂಲಕ ನಿಮ್ಮ ದೇಹವನ್ನು ಸಿದ್ಧಪಡಿಸುವುದಲ್ಲದೆ ಮನಸ್ಸಿನಲ್ಲಿ ಲೈಂಗಿಕ ಆಕರ್ಷಣೆಯನ್ನೂ ಹುಟ್ಟಿಸುತ್ತದೆ. ನೂರಾರು ವರ್ಷಗಳ ಹಿಂದೆ ಈ ವಯಸ್ಸಿಗೆ ಮದುವೆ ಮಾಡುತ್ತಿದ್ದರು. ಆದರೆ ಇವತ್ತಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪರಿಸ್ಥಿತಿಗಳಲ್ಲಿ ಇದು ಸಾಧ್ಯವಿಲ್ಲ. ಹಾಗಾಗಿ ಮದುವೆಯಾಗುವವರೆಗೆ ಕಾಮದ ಒತ್ತಡವನ್ನು ತಣಿಸಿಕೊಳ್ಳಲು ಹಸ್ತಮೈಥುನ ಆರೋಗ್ಯಕರ ಮಾರ್ಗ. ಪ್ರಪಂಚದೆಲ್ಲೆಡೆ ನಡೆಸಿದ ಸಂಶೋಧನೆ ಸಮೀಕ್ಷೆಗಳ ಪ್ರಕಾರ ಶೇ 75ಕ್ಕಿಂತ ಹೆಚ್ಚಿನ ಸ್ತ್ರೀ– ಪುರುಷರು ಹಸ್ತಮೈಥುನಕ್ಕೆ ಮೊರೆಹೋಗುತ್ತಾರೆ. ವಿವಾಹಿತರು ಹಾಗೂ ಸಂಗಾತಿಯನ್ನು ಕಳೆದುಕೊಂಡಿರುವವರಲ್ಲಿಯೂ ಇದು ಸಾಮಾನ್ಯವಾಗಿ ಕಂಡುಬರುತ್ತದೆ.

ADVERTISEMENT

ವಿಜ್ಞಾನ ಬೆಳೆಯುವ ಮೊದಲು ಪುರುಷನ ವೀರ್ಯಾಣುಗಳಿಂದ ಮಾತ್ರ ಮಕ್ಕಳಾಗುತ್ತವೆ ಎಂದು ನಂಬಲಾಗಿತ್ತು. ಇನ್ನೊಂದು ಜೀವವನ್ನು ಸೃಷ್ಟಿಸುವಷ್ಟು ಶಕ್ತಿಯುತವಾದ ವೀರ್ಯಾಣುಗಳನ್ನು ಹಸ್ತಮೈಥುನದಿಂದ ಹೊರಹಾಕಿದರೆ ನಾನಾ ತೊಂದರೆಗಳಾಗುತ್ತವೆ ಎಂದು ಹೇಳಲಾಗುತ್ತಿತ್ತು. ಇದೇ ತಪ್ಪು ತಿಳಿವಳಿಕೆಗಳು ಈಗಲೂ ಮುಂದುವರಿದಿವೆ.

ವೈಜ್ಞಾನಿಕ ಸತ್ಯಗಳು ಹೀಗಿವೆ.
* ಮಕ್ಕಳಾಗುವುದರಲ್ಲಿ ಸ್ತ್ರೀಯರ ಅಂಡಾಣು ಕೂಡ ಸಮಾನವಾದ ಪಾತ್ರವಹಿಸುತ್ತದೆ. ಅಂಡಾಣುಗಳು ಒಂದು ತಿಂಗಳು ಮಾತ್ರ ಜೀವಂತವಾಗಿದ್ದು ನಂತರ ಹೊಸದೊಂದು ಉತ್ಪತ್ತಿಯಾಗುತ್ತದೆ. ಹಾಗೆಯೇ ಹಸ್ತಮೈಥುನದಿಂದ ಹೊರಹೋಗದಿದ್ದರೂ ನಿರ್ದಿಷ್ಟ ಅವಧಿಯ ನಂತರ ಪುರುಷರ ವೀರ್ಯಾಣುಗಳು ದೇಹದ ಒಳಗಡೆಯೇ ನಾಶವಾಗಿ ಹೊಸದು ಉತ್ಪತ್ತಿಯಾಗುತ್ತದೆ. ಅಂದರೆ ಹಸ್ತಮೈಥುನಕ್ಕೂ ಮಕ್ಕಳಾಗುವುದಕ್ಕೂ ಸಂಬಂಧವೇ ಇರುವುದಿಲ್ಲ.

* ಅಂಡಾಣುಗಳು ನಿರ್ಜೀವವಾಗಿ ಹೊರಹೋದಾಗ ಸ್ತ್ರೀಯರೇನೂ ದುರ್ಬಲರಾಗುವುದಿಲ್ಲ. ಹಾಗಿದ್ದರೆ ವೀರ್ಯಾಣುವನ್ನು ಕಳೆದುಕೊಂಡು ಪುರುಷರು ಹೇಗೆ ದುರ್ಬಲರಾಗುತ್ತಾರೆ? ಮದುವೆಯಾದ ಮೇಲೆ ಸಂಗಾತಿಯೊಡನೆ ಸಂಭೋಗದಲ್ಲಿ ವೀರ್ಯಾಣುಗಳು ಹೊರಹೋದಾಗ ಪುರುಷರು ದುರ್ಬಲರಾಗದೆ, ಹೊಸ ಉತ್ಸಾಹವನ್ನು ಪಡೆಯುವುದು ಹೇಗೆ ಸಾಧ್ಯ? ತಪ್ಪು ತಿಳಿವಳಿಕೆಗಳಿಂದ ಬಂದಿರುವ ಭಯ, ಆತಂಕಗಳು ನಿಮ್ಮನ್ನು ದೈಹಿಕವಾಗಿ ದುರ್ಬಲರನ್ನಾಗಿ ಮಾಡಿದೆಯೇ ಹೊರತು ಹಸ್ತಮೈಥುನ ಹಾನಿಮಾಡಿಲ್ಲ. ಸದೃಢವಾದ ದೇಹಕ್ಕಾಗಿ ಒಳ್ಳೆಯ ಆಹಾರ, ವ್ಯಾಯಾಮ ಮುಂತಾದ ಮಾನಸಿಕ ಸಮಾಧಾನಗಳ ಮೂಲಕ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಿ.

* ಶೀಘ್ರಸ್ಖಲನ ಮತ್ತು ನಿಮಿರು ದೌರ್ಬಲ್ಯಗಳು ಕೂಡ ಆತಂಕದ ಪರಿಣಾಮಗಳು. ಮದುವೆಯಾದ ಮೇಲೆ ಇಂತಹ ಸಮಸ್ಯೆಗಳಿದ್ದರೆ ತಜ್ಞರನ್ನು ಭೇಟಿಯಾಗಿ.

* ದೇಹದ ಬಣ್ಣ, ಆಕಾರಗಳಂತೆ ಲೈಂಗಿಕ ಅಂಗಾಂಗಗಳ ಆಕಾರವೂ ಅನುವಂಶಿಕವಾದದ್ದು. ಹೆಚ್ಚಾಗಿ ಕೆಲಸ ಮಾಡಿದರೆ ಬೆರಳುಗಳು ಚಿಕ್ಕದಾಗಬಹುದೇ? ಅಥವಾ ಬೆರಳುಗಳ ಉದ್ದ, ದಪ್ಪಗಳನ್ನು ಔಷಧಿಯಿಂದ ಬದಲಾಯಿಸಬಹುದೇ? ಸಂಗಾತಿಯೊಡನೆ ನಡೆಸುವ ಸಂಭೋಗದಿಂದ ಶಿಶ್ನದ ಆಕಾರ ಬದಲಾಗುವುದಿಲ್ಲವೆಂದರೆ ಹಸ್ತಮೈಥುನದಿಂದ ಹೇಗಾಗುತ್ತದೆ? ಇವೆಲ್ಲಾ ನಕಲಿ ಔಷಧ ತಯಾರಕರ ವ್ಯಾಪಾರದ ತಂತ್ರಗಳು ಎನ್ನುವುದನ್ನು ಮರೆಯಬೇಡಿ.

* ಲೈಂಗಿಕ ಸುಖವನ್ನು ಹಂಚಿಕೊಳ್ಳಲು ಸಂಗಾತಿ ಇರುವುದಿಲ್ಲ ಎನ್ನುವುದರ ಹೊರತಾಗಿ ದೇಹದ ದೃಷ್ಟಿಕೋನದಿಂದ ಸಂಭೋಗಕ್ಕೂ ಹಸ್ತಮೈಥುನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಸಂಭೋಗ ಮಾಡಿದಾಗ ಮೂಲವ್ಯಾಧಿಯಾಗುವುದಿಲ್ಲ, ಕೂದಲು ಉದುರುವುದಿಲ್ಲ, ಇತರ ತೊಂದರೆಗಳಾಗುವುದಿಲ್ಲ ಎಂದಾದರೆ ಹಸ್ತಮೈಥುನದಿಂದ ಹೇಗಾಗಲು ಸಾಧ್ಯ? ಕ್ರಿಸ್ತಪೂರ್ವದ ಕಾಲದಿಂದಲೂ ಮಾನವರು ಹಸ್ತಮೈಥುನ ಮಾಡುತ್ತಿದ್ದರು ಎನ್ನುವುದಕ್ಕೆ ಪುರಾವೆಗಳಿವೆ. ಹಸ್ತಮೈಥುನದಿಂದ ದೈಹಿಕವಾಗಿ ದೌರ್ಬಲ್ಯವಾಗಿ ಕಾಯಿಲೆಗಳು ಬರುವಂತಿದ್ದರೆ ಮನುಕುಲ ಯಾವಾಗಲೋ ನಾಶವಾಗಿ ಹೋಗಬೇಕಿತ್ತಲ್ಲವೇ?

* ಹಸ್ತಮೈಥುನವನ್ನು ಎಷ್ಟು ಸಾರಿ ಮಾಡಬಹುದು ಎನ್ನುವುದು ಕೂಡ ಮುಖ್ಯವಲ್ಲ. ಆದರೆ ಹಸ್ತಮೈಥುನ ನಿಮ್ಮ ಬೇಸರ, ಏಕಾಂಗಿತನ, ಕೀಳರಿಮೆಗಳನ್ನು ಮರೆಯುವ ಸಾಧನವಾದಾಗ ನಿಮ್ಮ ಗೊಂದಲವನ್ನು ಹೆಚ್ಚಿಸುತ್ತದೆ. ಅದರಿಂದ ಸಿಗುವ ಸುಖಕ್ಕಿಂತ ಹೆಚ್ಚಾಗಿ ಪಾಪಪ್ರಜ್ಞೆ ಕಾಡುಬಹುದು. ಹಾಗಾಗಿ ನಿಮ್ಮ ಬೇಸರ, ಕೀಳರಿಮೆಗಳನ್ನು ಪರಿಹರಿಸಿಕೊಳ್ಳಲು ಇತರ ದಾರಿಗಳನ್ನು ಹುಡುಕಿ. ಕಾಮಾಪೇಕ್ಷೆ ತೀವ್ರವಾದಾಗ ಮಾತ್ರ ಹಸ್ತಮೈಥುನದ ಮೂಲಕ ತಣಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.