ADVERTISEMENT

ಕೋವಿಡ್‌ಗೆ ರೆಮ್‌ಡೆಸಿವಿರ್ ಪರಿಣಾಮಕಾರಿ ಎನ್ನಲು ಪುರಾವೆಯಿಲ್ಲ: ಡಬ್ಲ್ಯುಎಚ್‌ಒ

ರಾಯಿಟರ್ಸ್
Published 20 ನವೆಂಬರ್ 2020, 4:56 IST
Last Updated 20 ನವೆಂಬರ್ 2020, 4:56 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ಜಿನೇವಾ: ಕೋವಿಡ್‌ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಗಿಲ್ಯಾಡ್ಸ್‌ನ ರೆಮ್‌ಡೆಸಿವಿರ್ ಔಷಧಿ ನೀಡಲು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ತಿಳಿಸಿದೆ. ರೆಮ್‌ಡೆಸಿವಿರ್ ನೀಡುವಿಕೆಯಿಂದ ಸೋಂಕಿತರು ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ ಹಾಗೂ ವೆಂಟಿಲೇಟರ್‌ ಅಗತ್ಯವನ್ನು ಅದು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಡಬ್ಲ್ಯುಎಚ್‌ಒ ತಂಡ ಹೇಳಿದೆ.

ಕೋವಿಡ್‌ಗೆ ಚಿಕಿತ್ಸೆ ನೀಡುವಲ್ಲಿ ರೆಮ್‌ಡೆಸಿವಿರ್ ಪರಿಣಾಮಕಾರಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಅದರಿಂದಾಗಿ ಈ ಔಷಧಿ ವಿಶ್ವದ ಗಮನ ಸೆಳೆದಿತ್ತು. ಈಗ ಡಬ್ಲ್ಯುಎಚ್‌ಒ ತಂಡ ನೀಡಿರುವ ಹೇಳಿಕೆಯಿಂದಾಗಿ ಗಿಲ್ಯಾಡ್ಸ್‌ಗೆ ಹಿನ್ನಡೆಯಾಗಿದೆ.

ಅಕ್ಟೋಬರ್ ಕೊನೆಯ ವೇಳೆಗೆ ಗಿಲ್ಯಾಡ್ಸ್‌ 2020ನೇ ವರ್ಷದಲ್ಲಿನ ಆದಾಯ ನಿರೀಕ್ಷೆಯನ್ನು ಕಡಿತಗೊಳಿಸಿತ್ತು. ನಿರೀಕ್ಷೆಗಿಂತ ಕಡಿಮೆ ಬೇಡಿಕೆ ಮತ್ತು ರೆಮ್‌ಡೆಸಿವಿರ್ ಮಾರಾಟದಲ್ಲಿನ ಸವಾಲುಗಳನ್ನು ಉಲ್ಲೇಖಿಸಿ ಕಂಪನಿಯು ಈ ಕ್ರಮ ಕೈಗೊಂಡಿತ್ತು.

ಸದ್ಯ ಕೋವಿಡ್‌ ಚಿಕಿತ್ಸೆಯಲ್ಲಿ ಬಳಸಲು ವಿಶ್ವದಾದ್ಯಂತ ಅನುಮೋದನೆ ಪಡೆದಿರುವ ಎರಡು ಔಷಧಿಗಳಲ್ಲಿ ರೆಮ್‌ಡೆಸಿವಿರ್ ಒಂದಾಗಿದೆ. ಆದರೆ, ಡಬ್ಲ್ಯುಎಚ್‌ಒ ಕಳೆದ ತಿಂಗಳು ನಡೆಸಿದ ದೊಡ್ಡ ಪ್ರಮಾಣದ ಪ್ರಯೋಗದಲ್ಲಿ, ರೆಮ್‌ಡೆಸಿವಿರ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.