ADVERTISEMENT

ಬೊಜ್ಜಿದ್ದರೇಕೆ ಮಕ್ಕಳು ಆಗುವುದಿಲ್ಲ?

ಡಾ.ಎಸ್.ಎಸ್.ವಾಸನ್
Published 22 ಮಾರ್ಚ್ 2019, 19:45 IST
Last Updated 22 ಮಾರ್ಚ್ 2019, 19:45 IST
a
a   

ಸ್ಥೂಲಕಾಯ ಅಥವಾ ಬೊಜ್ಜಿನ ದೇಹದಲ್ಲಿ ಹಾರ್ಮೋನಿನ ಕಾರ್ಯವೈಖರಿ ಸರಾಗವಾಗಿರುವುದಿಲ್ಲ. ಸರಳವಾಗಿ ನಡೆಯುವುದಿಲ್ಲ. ಪುರುಷರಲ್ಲಿ ಮುಖ್ಯವಾಗಿ ಪುರುಷ ಹಾರ್ಮೋನು ಎನಿಸಿಕೊಂಡಿರುವ ಟೆಸ್ಟೊಸ್ಟಿರಾನ್‌ ಸೂಕ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಸಮರ್ಪಕವಾಗಿ ವೀರ್ಯಾಣುಗಳ ಉತ್ಪಾದನೆಯಾಗುವುದಿಲ್ಲ. ಸ್ತ್ರೀ ಹಾರ್ಮೋನ್‌ ಆಗಿರುವ ಈಸ್ಟ್ರೋಜನ್‌ ಉದ್ದೀಪಿಸಿದಂತಾಗುತ್ತದೆ. ಮೆದುಳಿನಲ್ಲಿ ಹಾರ್ಮೋನುಗಳ ವ್ಯತ್ಯಾಸವಾಗಲಾರಂಭಿಸುತ್ತದೆ.

ಪುರುಷರ ಫಲವಂತಿಕೆಯನ್ನು ತೀರ್ಮಾನಿಸುವ ಇನ್ನೊಂದು ಹಾರ್ಮೋನು ಲೆಪ್ಟಿನ್‌ ಮೇಲೆ ಸ್ಥೂಲಕಾಯಪರಿಣಾಮ ಬೀರುತ್ತದೆ. ಇದು ಹಸಿವು, ಶಕ್ತಿ ಹಾಗೂ ಚಯಾಪಚಯಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನು.

ಸಾಮಾನ್ಯವಾಗಿ ಲೆಪ್ಟಿನ್‌ ಯಾವ ಹಾರ್ಮೋನುಗಳನ್ನು ಯಾವಾಗ ಸ್ರವಿಸಬೇಕು ಎಂದು ಮೆದುಳಿಗೆ ತಿಳಿಸುವ ಕೆಲಸವನ್ನು ಮಾಡುತ್ತದೆ. ಸ್ಥೂಲಕಾಯದವರಲ್ಲಿ ಈ ಹಾರ್ಮೋನು ವಿಪರೀತವಾಗಿ ಸ್ರವಿಸಿ, ಮೆದುಳಿಗೆ ನೀಡುವ ನಿಯಂತ್ರಕ ಸಂದೇಶಗಳನ್ನು ಕಳುಹಿಸುವಲ್ಲಿ ಏರುಪೇರಾಗುತ್ತದೆ. ಹಾರ್ಮೋನುಗಳ ಬಿಡುಗಡೆಯಲ್ಲಿ, ಬಿಡುಗಡೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುವುದು ಇದೇ ಕಾರಣಗಳಿಂದ.

ADVERTISEMENT

ಇದಲ್ಲದೇ ಹೆಚ್ಚುವರಿ ಬೊಜ್ಜಿನಿಂದಾಗಿ ದೇಹದಲ್ಲಿ ವಿವಿಧ ಬಗೆಯ ಪ್ರೋಟೀನುಗಳ ಉತ್ಪಾದನೆ ಆರಂಭವಾಗುತ್ತದೆ. ಇದೆಲ್ಲವೂ ಆರೋಗ್ಯಕ್ಕೆ ಪೂರಕವಾಗಿರುವುದಿಲ್ಲ ಎಂಬುದು ಗಮನಾರ್ಹ. ಮೆದುಳಿಗೆ ಸೂಕ್ತವಾದ ಸಂದೇಶ ರವಾನೆಯಾಗದೆ ಸಾಕಷ್ಟು ವೀರ್ಯಾಣು ಅಥವಾ ವೀರ್ಯದ ಉತ್ಪಾದನೆ ಆಗುವುದಿಲ್ಲ.

ಮಧುಮೇಹವಿರುವ ಬೊಜ್ಜು ದೇಹದ ಪುರುಷರಲ್ಲಿ ಇನ್ಸುಲಿನ್‌ ಸಮರ್ಪಕವಾಗಿ ಸ್ರವಿಸುವುದಿಲ್ಲ. ಇದು ಸೂಕ್ತ ಸಂಖ್ಯೆಯ ವೀರ್ಯಾಣುಗಳ ಉತ್ಪಾದನೆಯಾಗುವಂತೆ, ಸಂದೇಶ ರವಾನಿಸುವಲ್ಲಿ ವಿಫಲವಾಗುತ್ತದೆ.

ವೀರ್ಯಾಣುವಿನ ಡಿಎನ್‌ಎಗೆ ಹಾನಿ

ಸ್ಥೂಲಕಾಯದಿಂದಾಗಿ ರಿ ಆ್ಯಕ್ಟಿವ್ ಆಕ್ಸಿಜನ್‌ ಸ್ಪಿಸೀಸ್‌ (ಆರ್‌ಒಎಸ್‌)ಗಳು ಹೆಚ್ಚುವುದರಿದ ವೀರ್ಯಾಣುವಿನ ಡಿಎನ್‌ಎಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿಖರವಾಗಿ ಸ್ಥೂಲಕಾಯದಿಂದಾಗಿ ವಂಶವಾಹಿಗಳ ರಚನೆಯಲ್ಲಿ ವ್ಯತ್ಯಾಸವಾಗುತ್ತದೆ ಎಂಬುದು ತಿಳಿದುಬಂದಿದೆಯೇ ಹೊರತು, ಯಾವ ಸಂರಚನೆಯಲ್ಲಿ ಹೇಗೆ ವ್ಯತ್ಯಾಸವಾಗುತ್ತದೆ ಎಂಬುದು ನಿರ್ದಿಷ್ಟವಾಗಿ ಹೇಳಲಾಗದು. ಆದರೆ ವೀರ್ಯಾಣುವಿನ ವಂಶವಾಹಿ ಜೋಡಣೆಗೆ ಹಾನಿಯುಂಟಾಗುವುದಂತೂ ನಿಜ.

ನಿಮಿರು ದೌರ್ಬಲ್ಯ/ಷಂಡತನ

ಬೊಜ್ಜಿರುವ ಪುರುಷರಲ್ಲಿ ಸಾಮಾನ್ಯವಾಗಿ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ನಿಮಿರು ದೌರ್ಬಲ್ಯ ಹಾಗೂ ಸ್ಥೂಲಕಾಯ ಪರಸ್ಪರ ಸಂಬಂಧ ಹೊಂದಿವೆ. ಹೊಟ್ಟೆಯ ಭಾಗದಲ್ಲಿ ಬೊಜ್ಜು ಶೇಖರಣೆಯಾಗಿದ್ದಲ್ಲಿ ವ್ಯಕ್ತಿಯ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಚ್ಚುವರಿ ಸ್ಥೂಲಕಾಯ, ರಕ್ತದ ಏರೊತ್ತಡ, ಬೇಡದ ಕೊಬ್ಬು, ಒಳ್ಳೆಯ ಕೊಬ್ಬುಗಳ ಪ್ರಮಾಣದಲ್ಲಿ ಏರಿಳಿತ ಇವೆಲ್ಲವೂ ನಿಮಿರು ದೌರ್ಬಲ್ಯಕ್ಕೆ ಮುಖ್ಯ ಕಾರಣಗಳಾಗಿವೆ.

ಇನ್ನೊಂದು ವಿಷಯ ಮರೆಯುವಂತಿಲ್ಲ, ಸ್ಥೂಲಕಾಯದವರಿಗೆ ನಿಮಿರು ದೌರ್ಬಲ್ಯ ಮಾನಸಿಕವಾಗಿಯೂ ಕಾಡುತ್ತದೆ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ತಮ್ಮ ದೇಹದಾಕಾರದ ಬಗೆಗೆ ಅವರಿಗೆ ಹಿಂಜರಿಕೆ ಇರುತ್ತದೆ. ಲೈಂಗಿಕವಾಗಿ ತಾವು ಯಾರನ್ನೂ ಆಕರ್ಷಿಸಲಾಗುವುದಿಲ್ಲ ಎಂದುಕೊಂಡಿರುತ್ತಾರೆ. ತಾವು ಯಾರನ್ನೂ ಮೆಚ್ಚಿಸಲಾಗುವುದಿಲ್ಲವೆಂದೂ ಭಾವಿಸುತ್ತಾರೆ. ಇವುಗಳ ಪರಿಣಾಮದಿಂದ ಅವರಲ್ಲಿ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ.

ವೀರ್ಯನಾಳಗಳ ಮೇಲೆ ಊತ

ಸ್ಥೂಲಕಾಯದವರಲ್ಲಿ ತೊಡೆ, ತೊಡೆ ಸಂದು ಹಾಗೂ ಜನನಾಂಗದ ತ್ರಿಕೋನ ಪ್ರದೇಶದಲ್ಲಿಯೂ ಬೊಜ್ಜು ಸಂಗ್ರಹವಾಗಿದ್ದಲ್ಲಿ ವೃಷಣ, ಶಿಷ್ನ ಹಾಗೂ ವೀರ್ಯನಾಳಗಳ ಮೇಲೆ ಒತ್ತಡ ಉಂಟು ಮಾಡುತ್ತವೆ. ಈ ಒತ್ತಡದಿಂದಾಗಿಯೂ ವೃಷಣಗಳ ಅಡಿಯಲ್ಲಿರುವ ವೀರ್ಯನಾಳದಲ್ಲಿ ಊತ ಕಂಡು ಬರುತ್ತದೆ. ವೀರ್ಯ ಉತ್ಪಾದನೆ, ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.