ADVERTISEMENT

ಗೈನಿಕ್‌ ಸಮಸ್ಯೆ: ಕ್ಲಿನಿಕ್‌ಗೆ ತೆರಳಲು ಅವಿವಾಹಿತ ಯುವತಿಯರಲ್ಲಿ ಮುಜುಗರವೇಕೆ?

ಸುಧಾ ಹೆಗಡೆ
Published 8 ಸೆಪ್ಟೆಂಬರ್ 2020, 7:19 IST
Last Updated 8 ಸೆಪ್ಟೆಂಬರ್ 2020, 7:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಸಿಓಡಿ (ಪಾಲಿಸಿಸ್ಟಿಕ್‌ ಓವೇರಿಯನ್‌ ಡಿಸಾರ್ಡರ್‌)ಯಿಂದ ಬಳಲುತ್ತಿದ್ದ ಕಾಲೇಜಿನ ಪ್ರಾಧ್ಯಾಪಕಿ ನಿಶಾ ವರ್ಧನ್‌ ಅಲ್ಟ್ರಾಸೌಂಡ್‌ ಮಾಡಿಸಲು ಹೋದಾಗ ಆದ ಅನುಭವವನ್ನು ಈಗಲೂ ಸಿಟ್ಟಿನಿಂದಲೇ ಬಿಚ್ಚಿಡುತ್ತಾಳೆ. ‘ವಿವರ ಬರೆದುಕೊಳ್ಳುತ್ತಿದ್ದ ಸಹಾಯಕಿ ‘ಮದುವೆಯಾಗಿದೆಯೇ?’ ಎಂದಾಗ ಇಲ್ಲವೆಂದೆ. ಒಂಥರ ಮುಖ ಮಾಡಿ ಮುಜುಗುರ ಹುಟ್ಟಿಸಿಬಿಟ್ಟಳು. ಇನ್ನು ಅಲ್ಟ್ರಾಸೌಂಡ್‌ ಮಾಡುವವರಂತೂ ಈಕೆ ಒಬ್ಬಳೇ ಇಲ್ಯಾಕೆ ಬಂದಿದ್ದಾಳೆ ಅಂತ ಒಂದು ರೀತಿಯ ಕುಹಕದಿಂದಲೇ ವರ್ತಿಸಿದರು’ ಎನ್ನುವ ನಿಶಾ, ‘ಅವಿವಾಹಿತ ಯುವತಿ ಜನನಾಂಗ ವ್ಯೂಹ, ಸಂತಾನೋತ್ಪತ್ತಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ತೆರಳಬಾರದೇ?’ ಎಂಬ ಪ್ರಶ್ನೆ ಮುಂದಿಡುತ್ತಾಳೆ.

ಇದು ಒಬ್ಬಳು ನಿಶಾಳ ಸಮಸ್ಯೆಯಲ್ಲ. ಎಷ್ಟೋ ಮಂದಿ ಅವಿವಾಹಿತ ಯುವತಿಯರು, ಉದ್ಯೋಗಕ್ಕೆಂದು ಪೋಷಕರಿಂದ ದೂರವಾಗಿ ಬೇರೆ ನಗರಗಳಲ್ಲಿ ಪಿ.ಜಿಗಳಲ್ಲಿ ವಾಸಿಸುವವರು ಇಂತಹ ಸಮಸ್ಯೆ ಬಂದಾಗ ಪ್ರಸೂತಿ ತಜ್ಞರ ಬಳಿ, ಅಲ್ಟ್ರಾಸೌಂಡ್‌ ಕೇಂದ್ರಗಳಿಗೆ ತೆರಳಲು ಹಿಂಜರಿಯುವುದು ಇದೇ ಕಾರಣಕ್ಕೆ. ಕೌಟುಂಬಿಕ ಆರೋಗ್ಯದ ಕುರಿತು ಹಯ್ಯಾ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ಇದು ಬಹಿರಂಗವಾಗಿದೆ.

ಅವಮಾನವೇಕೆ?

ADVERTISEMENT

ಈಗಂತೂ ಯುವಜನರಲ್ಲಿ ಲೈಂಗಿಕತೆ ಕುರಿತಂತೆ ಮಡಿವಂತಿಕೆ ಕಡಿಮೆಯಾಗಿದೆ. ಆದರೆ ಅವಿವಾಹಿತ ಯುವತಿ ಲೈಂಗಿಕ ಸಮಸ್ಯೆ ಕಾರಣಕ್ಕೆ ತಜ್ಞ ವೈದ್ಯರ ಬಳಿ ಧೈರ್ಯ ಮಾಡಿ ತೆರಳಿದರೂ ಅವಮಾನ ಎದುರಿಸಬೇಕಾಗುತ್ತದೆ. ‘ನನಗೆ ಕಳೆದ ಒಂದು ವರ್ಷದಿಂದ ಸ್ನೇಹಿತನ ಜೊತೆ ಒಡನಾಟವಿದೆ. ಏನೋ ಸಮಸ್ಯೆಯಿಂದ ವೈದ್ಯರ ಬಳಿ ತೆರಳಿದಾಗ ಲೈಂಗಿಕವಾಗಿ ಸಕ್ರಿಯಳಾಗಿದ್ದೇನೆ ಎಂದು ಹೇಳಿದ್ದೇ ತಡ, ಯಾವುದೋ ಲೋಕದಿಂದ ಬಂದವಳಂತೆ ನನ್ನನ್ನು ನೋಡಿದರು, ವಿವಾಹಪೂರ್ವ ಲೈಂಗಿಕ ಸಂಪರ್ಕದ ವಿರುದ್ಧ ಗಂಟೆಗಟ್ಟಲೆ ಉಚಿತ ಸಲಹೆ ನೀಡಿದರು, ಅದು ಸುರಕ್ಷತೆ ಕುರಿತ ಸಲಹೆಯಾದರೆ ಓಕೆ. ಆದರೆ ಅದು ತಪ್ಪು ಎಂಬಂತೆ ಬಿಂಬಿಸಿಬಿಟ್ಟರು’ ಎಂದು ಯುವತಿಯೊಬ್ಬಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಳು.

ಇಂತಹ ಕೆಟ್ಟ ಅನುಭವಗಳು ಬೇಡವೆಂದು ಹೆಚ್ಚು ಹಣ ತೆತ್ತು ನಕಲಿ ವೈದ್ಯರ ಬಳಿ ಹೋಗುವುದು, ಅಂತರ್ಜಾಲದಲ್ಲಿ ಮಾಹಿತಿಗೆ ತಡಕಾಡಿ ತಾವೇ ಓವರ್‌ ದಿ ಕೌಂಟರ್‌ ಔಷಧಿ ತೆಗೆದುಕೊಂಡು ಅಪಾಯಕ್ಕೆ ಒಳಗಾದ ಸಾಕಷ್ಟು ಪ್ರಕರಣಗಳಿವೆ.

ಲೈಂಗಿಕ ಆರೋಗ್ಯದ ಬಗ್ಗೆ ಯುವಜನತೆಗೆ ಮಾಹಿತಿ ನೀಡುವಂತಹ ಹಲವು ಸಂಸ್ಥೆಗಳು ಹುಟ್ಟಿಕೊಂಡಿವೆ. ‘ಸುರಕ್ಷಿತ ಲೈಂಗಿಕ ಚಟುವಟಿಕೆ’ ಕುರಿತೂ ತಿಳಿವಳಿಕೆ ನೀಡುತ್ತಿವೆ. ಇದರಿಂದ ಲೈಂಗಿಕ ಕ್ರಿಯೆಯ ಮೂಲಕ ಹರಡುವ ಎಚ್‌ಐವಿಯಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಅದೇ ರೀತಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಗೂ ಸೂಕ್ತ ಅರಿವು ಮೂಡಿಸಬೇಕಾಗಿದೆ. ಅವಿವಾಹಿತ ಯುವತಿಯರು ಸಮಸ್ಯೆ ಹೊತ್ತು ಬಂದರೆ ಇತರ ಮಹಿಳೆಯರಂತೆ ಅವರಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ. ವಿವಾಹಕ್ಕೆ ಮುನ್ನದ ಲೈಂಗಿಕ ಚಟುವಟಿಕೆ ಅಪರಾಧವೇನಲ್ಲ. ಆದರೆ ಸುರಕ್ಷಿತವಾಗಿರಬೇಕು ಅಷ್ಟೆ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌.

ಆದರೆ ಲೈಂಗಿಕ ಸಂಪರ್ಕದಿಂದ ಬರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು. ಗರ್ಭಪಾತದಂತಹ ಪ್ರಕರಣಗಳಲ್ಲಿ ಎಲ್ಲಾ ವಿವರಗಳನ್ನೂ ಕಲೆ ಹಾಕಬೇಕಾಗುತ್ತದೆ. ಇಲ್ಲದಿದ್ದರೆ ಹೆಚ್ಚು ಕಡಿಮೆಯಾಗಿ ಕೋರ್ಟ್‌, ಪೊಲೀಸ್‌ ಎಂದು ಅಲೆಯಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಸೂಕ್ಷ್ಮವಾದ ಪ್ರಕರಣಗಳಲ್ಲಿ ಇಂತಹ ಮಾತನ್ನು ಒಪ್ಪಬಹುದು. ಆದರೆ ಮುಟ್ಟಿನ ಸಮಸ್ಯೆ, ಲೈಂಗಿಕ ಅಂಗಾಂಗಗಳ ತೊಂದರೆಗೆ ಸಂಬಂಧಿಸಿದಂತೆ ವೈದ್ಯರು, ಅಲ್ಟ್ರಾಸೌಂಡ್‌ನಂತಹ ಕೇಂದ್ರಗಳಿಗೆ ಒಂಟಿಯಾಗಿ ತೆರಳುವ ಅವಿವಾಹಿತ ಯುವತಿಯರಿಗೆ ಯಾವುದೇ ಅವಮಾನವಾಗದಂತೆ ಸಮಸ್ಯೆ ನಿವಾರಿಸಬೇಕಾದ ವಾತಾವರಣವೂ ಮೂಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.