ADVERTISEMENT

‘ಎಲ್ಲರಿಗೂ ಮಧುಮೇಹ ಕಾಳಜಿ ಸಿಗಲಿ’ ಈ ವರ್ಷದ ಮಧುಮೇಹ ದಿನದ ಘೋಷಣೆ

‘ಮಧ್ಯಾಹ್ನ ನಿದ್ದೆ ಬಿಡಿ; ರಾತ್ರಿ ನಿದ್ದೆ ಮಾಡಿ’

ಕೃಷ್ಣಿ ಶಿರೂರ
Published 14 ನವೆಂಬರ್ 2021, 7:45 IST
Last Updated 14 ನವೆಂಬರ್ 2021, 7:45 IST
ವಿಶ್ವ ಮಧುಮೇಹ ದಿನ (ಪ್ರಾತಿನಿಧಿಕ ಚಿತ್ರ)
ವಿಶ್ವ ಮಧುಮೇಹ ದಿನ (ಪ್ರಾತಿನಿಧಿಕ ಚಿತ್ರ)   

ಹುಬ್ಬಳ್ಳಿ: ಸಿಹಿಮೂತ್ರ ಕಾಯಿಲೆ, ಸಕ್ಕರೆ ಕಾಯಿಲೆ, ಶುಗರ್‌ ಎಂಬೆಲ್ಲ ಹೆಸರಿನಲ್ಲಿ ಕರೆಯಲ್ಪಡುವ ಮಧುಮೇಹದಿಂದ ಬಳಲುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ವರದಿಯೊಂದರ ಪ್ರಕಾರ ವಿಶ್ವದಲ್ಲಿ 42.50 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿ ಭಾರತದ ಪಾಲು ಕಾಲು ಭಾಗದಷ್ಟಿದೆ ಎಂಬುದು ಆತಂಕಕಾರಿ ಸಂಗತಿ. ಅಂದರೆ 7.20 ಕೋಟಿ ಮಂದಿ ರೋಗಿಗಳು ಭಾರತದಲ್ಲೇ ಇದ್ದಾರೆ.

ವಿಶ್ವ ಮಧುಮೇಹ ದಿನದ ಈ ವರ್ಷದ ಥೀಮ್‌ ಎಲ್ಲರಿಗೂ ಮಧುಮೇಹ ಕಾಳಜಿ ಸಿಗಲಿ (Access to Diabitic Care) ಎಂಬುದಾಗಿದೆ.

ಈ ರೋಗದಿಂದ ಬಳಲುವವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹಾಗೂ ಕಾಯಿಲೆ ಬರದಂತೆ ಕಾಳಜಿ ಹೊಂದಲು ಆಹಾರ ಕ್ರಮ ಮತ್ತು ಜೀವನ ಕ್ರಮವನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಆಯುರ್ವೇದ ತಜ್ಞ ಡಾ.ಶರದ್‌ ಕುಲಕರ್ಣಿ.

ADVERTISEMENT

ಮಧುಮೇಹ ಬಂದವರು, ಬರದಂತೆ ನೋಡಿಕೊಳ್ಳುವವರಿಗೆಲ್ಲ ಯಾವೆಲ್ಲ ಆಹಾರ ಸೇವಿಸಬೇಕು, ಯಾವ ಹಣ್ಣು, ತರಕಾರಿಗಳನ್ನು ತಿನ್ನಬೇಕು ಎಂಬ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಅವುಗಳಿಗೆಲ್ಲ ಪರಿಹಾರ ಎಂಬಂತೆ ಡಾ. ಶರದ್‌ ಕುಲಕರ್ಣಿನೀಡಿರುವ ಸಲಹೆಗಳು ಇಲ್ಲಿವೆ.

ಆಹಾರ ಕ್ರಮಕ್ಕೆ ಬಂದರೆ ಮಧುಮೇಹ ರೋಗಿ ದಿನವೊಂದಕ್ಕೆ 100–120 ಗ್ರಾಂ ಹಣ್ಣುಗಳನ್ನು ಸೇವಿಸಬಹುದು. ರಕ್ತದಲ್ಲಿ ಸಕ್ಕರೆ ಮಟ್ಟ ವೃದ್ಧಿಸುವ ಹಣ್ಣುಗಳಾದ ಬಾಳೆಹಣ್ಣು, ಮಾವು, ದ್ರಾಕ್ಷಿಗಳನ್ನು ದೂರವಿಡುವುದು ಉತ್ತಮ. ಹಣ್ಣಿನ ಜ್ಯೂಸ್‌ ದೂರವಿಡುವುದು ಉತ್ತಮ. ಸಿಹಿ ತಿನಿಸುಗಳನ್ನು, ಪಾಲಿಸ್‌ ಮಾಡಿದ ಅಕ್ಕಿಯ ಅನ್ನ, ಮೈದಾ ವರ್ಜಿಸಬೇಕು. ನಾರಿನಂಶವುಳ್ಳ ಹಣ್ಣು, ತರಕಾರಿಗಳನ್ನು ತಿನ್ನಬಹುದು. ಹಾಗಲಕಾಯಿ, ತೊಂಡೆಕಾಯಿ, ಮೂಲಂಗಿ, ಈರುಳ್ಳಿ, ಟೊಮೆಟೊ, ಸೌತೆಕಾಯಿ, ಅರಿಸಿನ, ತರಕಾರಿ ಸೊಪ್ಪುಗಳು ಆಹಾರದಲ್ಲಿರಬೇಕು. ಶಾಕಾಹಾರಿಗಳು ಬೇಳೆ ಕಾಳುಗಳನ್ನು, ಮಾಂಸಾಹಾರಿಗಳು ಮೊಟ್ಟೆಗಳನ್ನು ಸೇವಿಸಬಹುದು. ಜೇನುತುಪ್ಪ, ಬೆಲ್ಲವನ್ನು ತಿನ್ನದಿರುವುದು ಉತ್ತಮ. ಮೊಸರಿನ ಬದಲು ಮಜ್ಜಿಗೆ ಸೇವನೆ ಉತ್ತಮ. ಕರಿದ ಪದಾರ್ಥಗಳು, ಫಾಸ್ಟ್‌ ಫುಡ್‌, ಜಂಕ್‌ ಫುಡ್‌ಗಳನ್ನು ತಿನ್ನಲೇ ಬಾರದು. ಕರಿದ ಎಣ್ಣೆಯಲ್ಲಿ ಮತ್ತೆ ಕರಿದ ಪದಾರ್ಥಗಳನ್ನು ಯಾವ ಕಾರಣಕ್ಕೂ ಸೇವಿಸಬಾರದು. ಉಪ್ಪಿನಕಾಯಿ, ಉಪ್ಪು, ಹುಳಿಯನ್ನು ಮಿತವಾಗಿ ಸೇವಿಸುವುದು ಉತ್ತಮ.

ತುಪ್ಪದ ಸೇವನೆ, ದಿನಕ್ಕೆ 2 ಬಾದಾಮಿ, 2 ವಾಲ್‌ನಟ್‌, 2 ಗೋಡಂಬಿ ತಿನ್ನುವ ರೂಢಿ ಆರೋಗ್ಯ ವೃದ್ಧಿಗೆ ದಾರಿಯಾಗಲಿದೆ.

ಇನ್ನು ಜೀವನ ಕ್ರಮಕ್ಕೆ ಬಂದರೆ, ಡಿಜಿಟಲ್‌ ಉಪಕರಣಗಳಿಗೆ ಅತಿಯಾಗಿ ಒಗ್ಗಿಕೊಳ್ಳದಿರುವುದು ತುಂಬಾ ಅಗತ್ಯ. ಮೊಬೈಲ್‌ ಫೋನ್‌, ಟಿವಿ, ಕಂಪ್ಯೂಟರ್ ಎದುರು ತಾಸುಗಟ್ಟಲೆ ನಿರಂತರವಾಗಿ ಕೂತೇ ಇರುವ ಬದಲು ದೈಹಿಕವಾಗಿ ಚಲನೆ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ದಿನ 40 ನಿಮಿಷವಾದರೂ ವಾಕಿಂಗ್‌, 15 ನಿಮಿಷ ಪ್ರಾಣಾಯಾಮ ಜೀವನದ ಭಾಗವಾಗಿಸಿಕೊಳ್ಳಬೇಕು. ಇದರ ಹೊರತಾಗಿ ಯೋಗ, ಸೈಕ್ಲಿಂಗ್‌, ಜಾಗಿಂಗ್‌ ಕೂಡ ಮಾಡಬಹುದು.

ರೋಗಿಗಳು ಮನೆಯಲ್ಲೇ ಪದೇ ಪದೇ ತಪಾಸಣೆ ಮಾಡಿಕೊಳ್ಳುವುದನ್ನು ಬಿಟ್ಟು ಪ್ರತಿ2–3 ತಿಂಗಳಿಗೊಮ್ಮೆ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಮಧುಮೇಹವಿಲ್ಲದವರು ಪ್ರತಿ ಆರು ತಿಂಗಳಿ ಗೊಮ್ಮೆ ಪರೀಕ್ಷಿಸಿಕೊಳ್ಳಬಹುದು. ಮಧುಮೇಹವನ್ನು ನಿರ್ಲಕ್ಷಿಸಿದಲ್ಲಿ ನರ, ಕಿಡ್ನಿ ಹಾಗೂ ಕಣ್ಣಿಗೆ ತೊಂದರೆ ಯಾಗಬಹುದು ಎಂಬ ಎಚ್ಚರಿಕೆಯ ಮಾತು ಶರದ್‌ ಕುಲಕರ್ಣಿ ಅವರದ್ದು.

ಮಧುಮೇಹ ನಿಯಂತ್ರಣದಲ್ಲಿಡಲು ಹಾಗೂ ರೋಗ ಬಾರದಂತೆ ನೋಡಿಕೊಳ್ಳಲು ಮಧ್ಯಾಹ್ನ ನಿದ್ದೆ ಮಾಡುವ ರೂಢಿ ತಪ್ಪಿಸಬೇಕು. ರಾತ್ರಿ ಮಾತ್ರ ಚೆನ್ನಾಗಿ ನಿದ್ದೆ ಮಾಡಬೇಕು ಎಂಬುದು ಡಾ.ಶರದ್‌ ಕುಲಕರ್ಣಿ ಹೇಳುವ ಕಿವಿಮಾತು.

ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
‘ನೆಲ್ಲಿಕಾಯಿ ಪುಡಿ 100 ಗ್ರಾಂ, ಹಾಗಲಕಾಯಿ ಪುಡಿ 100 ಗ್ರಾಂ, ನೇರಳೆ ಹಣ್ಣಿನ ಬೀಜದ ಪುಡಿ 100 ಗ್ರಾಂ, ಮೆಂತೆ ಪುಡಿ 100 ಗ್ರಾಂ, ಕರಿಬೇವಿನ ಪುಡಿ 100 ಗ್ರಾಂ, ಅರಿಸಿನ ಪುಡಿ 50 ಗ್ರಾಂ ತೆಗೆದುಕೊಂಡು ಮಿಶ್ರಣ ಮಾಡಿ, 1 ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚದಷ್ಟು ಮಿಶ್ರಣ ಸೇರಿಸಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಬರದಂತೆ ತಡೆಯಬಹುದು’ ಎನ್ನುತ್ತಾರೆ ಡಾ. ಶರದ್‌ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.