ADVERTISEMENT

ಆರೋಗ್ಯಪೂರ್ಣ ಜೀವನಶೈಲಿ ಅಗತ್ಯ: ಡಾ.ಅನುರಾಗ್‌ ಶೆಟ್ಟಿ ಸಲಹೆ

ವಿಶ್ವ ಪಿತ್ತಜನಕಾಂಗ ದಿನ: ಡಾ.ಅನುರಾಗ್‌ ಶೆಟ್ಟಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 16:10 IST
Last Updated 19 ಏಪ್ರಿಲ್ 2022, 16:10 IST
ಡಾ. ಅನುರಾಗ್‌ ಶೆಟ್ಟಿ
ಡಾ. ಅನುರಾಗ್‌ ಶೆಟ್ಟಿ   

ಮಂಗಳೂರು: ಮಾನವ ದೇಹದಲ್ಲಿ ಪಿತ್ತಜನಕಾಂಗ ಅಥವಾ ಯಕೃತ್‌ ದೇಹದ ಅತ್ಯಂತ ದೊಡ್ಡ ಅಂಗವಾಗಿದ್ದು, ಸುಮಾರು 1.5 ಕೆ.ಜಿ. ತೂಕವಿರುತ್ತದೆ. ಇದು ನಾವು ಬದುಕುಳಿಯಲು ಅಗತ್ಯವಿರುವ ಸುಮಾರು 500 ಪ್ರಮುಖ ಕಾರ್ಯಗಳನ್ನು ಮಾಡುತ್ತದೆ. ಆರೋಗ್ಯವಂತ ಪಿತ್ತಜನಕಾಂಗಕ್ಕಾಗಿ ಆರೋಗ್ಯಪೂರ್ಣ ಜೀವನ ಶೈಲಿ ಅಗತ್ಯವಾಗಿದೆ ಎಂದು ನಗರದ ಕೆಎಂಸಿ ಆಸ್ಪತ್ರೆಯ ಪಚನಾಂಗರೋಗಶಾಸ್ತ್ರ ಸಲಹಾತಜ್ಞ ಡಾ. ಅನುರಾಗ್ ಶೆಟ್ಟಿ ಸಲಹೆ ನೀಡಿದ್ದಾರೆ.

ವಿಶ್ವ ಪಿತ್ತಜನಕಾಂಗ ದಿನಾಚರಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಪಿತ್ತಜನಕಾಂಗದ ಕೆಲವು ಪ್ರಮುಖ ಕಾರ್ಯಗಳೆಂದರೆ ಆಲ್ಕೋಹಾಲ್ ಮತ್ತು ಇತರ ವಿಷ ಪದಾರ್ಥಗಳನ್ನು ರಕ್ತದಿಂದ ತೆರವುಗೊಳಿಸುವುದು. ಔಷಧ ಚಯಾಪಚಯ, ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಮಟ್ಟವನ್ನು ನಿಯಂತ್ರಿಸುವುದು, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಸಂಶ್ಲೇಷಣೆ, ರಕ್ತ ಹೆಪ್ಪುಗಟ್ಟುವ ಪ್ರೋಟೀನ್‌ಗಳ ಉತ್ಪಾದನೆ, ವಿಟಮಿನ್‌ಗಳ ದಾಸ್ತಾನು ಇತ್ಯಾದಿ ಎಂದು ವಿವರಿಸಿದ್ದಾರೆ.

ಜಗತ್ತಿನೆಲ್ಲೆಡೆ ಪ್ರತಿ ವರ್ಷ 20 ಲಕ್ಷ ಸಾವುಗಳಿಗೆ ಪಿತ್ತಜನಕಾಂಗದ ರೋಗಗಳು ಕಾರಣವಾಗುತ್ತದೆ. ಈ ಸಾವುಗಳಲ್ಲಿ ಶೇ 18.5 ರಷ್ಟು ಭಾರತದಲ್ಲಿ ಸಂಭವಿಸುತ್ತವೆ. ಯಕೃತ್ತಿನ ಕಾಯಿಲೆಗಳು ಪ್ರತಿ 5 ಭಾರತೀಯರಲ್ಲಿ ಒಬ್ಬರ ಪರಿಣಾಮ ಬೀರುತ್ತವೆ. ಆದರೂ, ಆರೋಗ್ಯವಂತ ಜೀವನಶೈಲಿಯನ್ನು ಅನುಸರಿಸುವ ಮೂಲಕ ಪಿತ್ತಜನಕಾಂಗದ ಕಾಯಿಲೆಯ ಬಹುತೇಕ ಕಾರಣಗಳನ್ನು ತಡೆಯಬಹುದು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಆಲ್ಕೋಹಾಲ್ ಸೇವನೆಗೆ ಮಿತಿ ಇರಲಿ:

ಪಿತ್ತಜನಕಾಂಗದ ಕಾಯಿಲೆಗಳಿಗೆ ಆಲ್ಕೋಹಾಲ್ ಪ್ರಮುಖ ಕಾರಣವಾಗಿದೆ. ನಿಗದಿತ ಆಲ್ಕೋಹಾಲ್ ಸೇವನೆ (ಪುರುಷರಿಗೆ 120 ಮಿ.ಲೀ. ಮತ್ತು ಮಹಿಳೆಯರಿಗೆ 60 ಮಿ.ಲೀ.) ಪಿತ್ತಜನಕಾಂಗದ ಜೀವಕೋಶಗಳಿಗೆ ಹಾನಿ ಉಂಟು ಮಾಡುತ್ತದೆ. ಅಲ್ಲದೇ ಪಿತ್ತಜನಕಾಂಗದ ಊತ ಮತ್ತು ಯಕೃತ್ತಿನಲ್ಲಿ ಗಾಯಗಳಿಗೆ (ಸಿರೋಸಿಸ್) ದಾರಿ ಮಾಡಿಕೊಡಬಹುದು ಎಂದು ಎಚ್ಚರಿಸಿದ್ದಾರೆ.

ಆರೋಗ್ಯಪೂರ್ಣ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ನಿತ್ಯ ಕನಿಷ್ಠ 30 ನಿಮಿಷಗಳ ವೇಗದ ನಡಿಗೆಯಂತಹ ಏರೋಬಿಕ್ ವ್ಯಾಯಾಮ ಫ್ಯಾಟಿ ಲಿವರ್(ಪಿತ್ತಜನಕಾಂಗದಲ್ಲಿ ಕೊಬ್ಬು ಸೇರಿಕೊಳ್ಳುವುದು) ತೊಂದರೆಯಿಂದ ರಕ್ಷಣೆ ನೀಡಬಲ್ಲದು.

ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳ ಸೇವನೆ ತಪ್ಪಿಸಬೇಕು. ನಾರಿನಂಶ (ಫೈಬರ್) ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಕರಿದ ಆಹಾರ, ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಅಥವಾ ಜಂಕ್ ಫುಡ್‌ಗಳನ್ನು ಕಡಿಮೆ ಮಾಡಿ. ಹೆಚ್ಚಿನ ಕ್ಯಾಲರಿಯ ಊಟ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು (ಮೈದಾ, ಬಿಳಿ ಬ್ರೆಡ್, ಬಿಳಿ ಅಕ್ಕಿ/ಪಾಸ್ಟಾ ನೂಡಲ್ಸ್) ಮತ್ತು ಸಕ್ಕರೆಗಳನ್ನು ದೂರವಿಡಿ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ನಾರಿನ ಅಂಶಗಳಿಂದ ಸಮೃದ್ಧ ಆಹಾರವನ್ನು ಹೆಚ್ಚಾಗಿ ಸೇರಿಸಿಕೊಳ್ಳಿ. ಕೆಂಪು ಮಾಂಸಕ್ಕಿಂತಲೂ ಮೀನು ಮತ್ತು ಬಿಳಿ ಮಾಂಸಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ದೇಹದ ತೂಕವನ್ನು ನೋಡಿಕೊಳ್ಳಿ:

ಅತಿಯಾದ ತೂಕ ಅಥವಾ ನಿಮ್ಮ ಹೊಟ್ಟೆ ಮತ್ತು ಸೊಂಟದ ಸುತ್ತ ಕೊಬ್ಬು ಸೇರಿಕೊಳ್ಳುವುದು ಫ್ಯಾಟಿ ಲಿವರ್ ರೋಗದ ಅಪಾಯ ಹೆಚ್ಚಿಸುತ್ತದೆ. ಆಹಾರ ಮತ್ತು ವ್ಯಾಯಾಮದ ಮೂಲಕ ತೂಕವನ್ನು ನಿಯಂತ್ರಣದಲ್ಲಿಡಿ. ಬಿಎಂಐ ಅನ್ನು 18.5 ಮತ್ತು 22.9 ನಡುವೆ ನಿರ್ವಹಿಸಲು ಪ್ರಯತ್ನಿಸಿ ಎಂದು ಡಾ. ಅನುರಾಗ್‌ ಶೆಟ್ಟಿ ತಿಳಿಸಿದ್ದಾರೆ.

ವೈದ್ಯರ ಸೂಚನೆ ಇಲ್ಲದ ಸಾಂಪ್ರದಾಯಿಕ ಕೆಲವು ಔಷಧಗಳು ಮತ್ತು ಲಭ್ಯವಿರುವ ಪೂರಕ ಆಹಾರಗಳಲ್ಲಿ ಭಾರಲೋಹಗಳು, ವಿಷ ಪದಾರ್ಥಗಳು ಇತರೆ ಅಂಶಗಳು ಇರಬಹುದು. ಅವು ಪಿತ್ತ ಜನಕಾಂಗಕ್ಕೆ ಕುತ್ತು ತರುತ್ತವೆ. ಅಂಥ ಔಷಧಗಳ ಸೇವನೆ ಆರಂಭಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.