
ಎಐ ಚಿತ್ರ
ಮಿದುಳಿಗೆ ರಕ್ತ ಪೂರೈಕೆಯ ಕೊರತೆ ಅಥವಾ ಮಿದುಳಿನ ರಕ್ತನಾಳಗಳು ಛಿದ್ರಗೊಂಡಾಗ ಸಂಭವಿಸುವ ತೀವ್ರ ಆರೋಗ್ಯ ಸಮಸ್ಯೆಯೇ ಸ್ಟ್ರೋಕ್ ಅಥವಾ ಪಾರ್ಶ್ವವಾಯು. ಇದನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿರುತ್ತದೆ.
ಅಕ್ಟೋಬರ್ 29 ಅನ್ನು ವಿಶ್ವ ಸ್ಟ್ರೋಕ್ ದಿನವಾಗಿ ಆಚರಣೆ ಮಾಡಲಾಗುತ್ತದೆ. ಸ್ಟ್ರೋಕ್‌ಗೆ ಮುನ್ನ ದೇಹ ಏನೆಲ್ಲಾ ಸೂಚನೆಗಳನ್ನು ಕೊಡುತ್ತದೆ.ಪಾರ್ಶ್ವವಾಯುವಿನ ಲಕ್ಷಣಗಳೇನು? ಎಂಬುದನ್ನು ನರವಿಜ್ಞಾನ ವಿಭಾಗದ ವೈದ್ಯರಾದ ಡಾ. ಲೋಕೆಶ್.ಬಿ ಅವರು ವಿವರಿಸಿದ್ದಾರೆ.
ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳು
ವ್ಯಕ್ತಿ ನಗುವಾಗ ಮುಖದ ಒಂದು ಭಾಗ ಕೆಳಗೆ ಇಳಿದಿರುವುದು, ಬಾಯಿಯ ಒಂದು ಬದಿ ತಿರುಚಿಕೊಂಡಂತೆ ಅಥವಾ ಕಣ್ಣು ಮುಚ್ಚದಿರುವುದು ಸ್ಟ್ರೋಕ್‌ನ ಪ್ರಮುಖ ಲಕ್ಷಣವಾಗಿದೆ.
ತೋಳುಗಳ ದುರ್ಬಲತೆ ಮತ್ತೊಂದು ಲಕ್ಷಣ. ವ್ಯಕ್ತಿಯ ಎರಡೂ ತೋಳುಗಳನ್ನು ಮೇಲೆ ಎತ್ತಲು ಹೇಳಿದಾಗ, ಒಂದು ತೋಳು ಕೆಳಗೆ ಜಾರಿ ಬೀಳುತ್ತದೆ ಅಥವಾ ಸರಿಯಾಗಿ ಎತ್ತಲು ಸಾಧ್ಯವಾಗುವುದಿಲ್ಲ.
ಮಾತನಾಡಲು ಕಷ್ಟಪಡುವುದು, ಅರ್ಥವಾಗದಂತೆ ಮಾತನಾಡುವುದು, ಮಾತುಗಳು ಅಸ್ಪಷ್ಟವಾಗುವುದು ಅಥವಾ ಸರಳ ವಾಕ್ಯಗಳನ್ನು ಪುನರಾವರ್ತಿಸಲು ಸಾಧ್ಯವಾಗದಿರುವುದು.
ಇತರರು ಹೇಳುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದು. ಹಠಾತ್ತನೆ ತೀವ್ರ ತಲೆನೋವು, ವಾಕರಿಕೆ, ವಾಂತಿ ಮತ್ತು ತಲೆ ತಿರುಗುವಿಕೆ ಸಹ ಸ್ಟ್ರೋಕ್‌ನ ಸಂಕೇತ.
ಹಠಾತ್ತನೆ ದೃಷ್ಟಿ ಸಮಸ್ಯೆ, ನಡೆಯುವಾಗ ಕಾಲು ತೊಡರುವುದು, ಎಡವಿ ಬೀಳುವುದು, ದೇಹ ಸಮನ್ವಯ ಕಳೆದುಕೊಳ್ಳುವುದು ಸ್ಟ್ರೋಕ್‌ನ ಲಕ್ಷಣವಾಗಿದೆ.
ದೇಹ ಹಠಾತ್ತನೆ ಮರಗಟ್ಟುವುದು ಅಥವಾ ಜುಮ್ಮೆನಿಸುವಿಕೆಯ ಅನುಭವವಾಗಬಹುದು.
ಕೆಲವು ಸಂದರ್ಭಗಳಲ್ಲಿ ಸ್ಟ್ರೋಕ್‌ಗೆ ಮುನ್ನ ಮಿನಿ ಸ್ಟ್ರೋಕ್ ಅಥವಾ ಟ್ರಾನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್ (ಟಿಐಎ) ಸಂಭವಿಸುತ್ತದೆ. ಇದು ಕೆಲವೇ ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ ಕಣ್ಮರೆಯಾಗುತ್ತದೆ. ಇದು ಸ್ಟ್ರೋಕ್ ಸಂಭವಿಸುವ ಎಚ್ಚರಿಕೆ.
ಹಠಾತ್ತನೆ ತೀವ್ರ ಗೊಂದಲ, ಯೋಚಿಸಲು ಕಷ್ಟವಾಗುವುದು, ಸ್ಮರಣೆ ಸಮಸ್ಯೆಗಳು ಮತ್ತು ಪರಿಚಿತ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗದಿರುವುದು.
ವೈದ್ಯರು ನಡೆಸುವ ಪರೀಕ್ಷೆ:
ಸ್ಟ್ರೋಕ್‌ನ ಲಕ್ಷಣಗಳನ್ನು ಗುರುತಿಸಲು ವೈದ್ಯರು ಎಫ್‌ಎಎಸ್‌ಟಿ ಪರೀಕ್ಷೆ ನಡೆಸುತ್ತಾರೆ.
ಎಫ್ ಎಂದರೆ ಫೇಸ್ (ಮುಖ) - ಮುಖದ ಒಂದು ಭಾಗ ಇಳಿದಿದೆಯೇ,
ಎ ಎಂದರೆ ಆರ್ಮ್ಸ್ (ತೋಳುಗಳು) - ಎರಡೂ ತೋಳುಗಳನ್ನು ಎತ್ತಲು ಸಾಧ್ಯವಾಗುತ್ತಿದೆಯೇ,
ಎಸ್ ಎಂದರೆ ಸ್ಪೀಚ್ (ಮಾತು) - ಮಾತಿನಲ್ಲಿ ತೊದಲು ಇದೆಯೇ,
ಟಿ ಎಂದರೆ ಟೈಮ್ (ಸಮಯ) - ಈ ಯಾವುದಾದರೂ ಲಕ್ಷಣ ಕಂಡರೆ ತಕ್ಷಣ ತುರ್ತು ವೈದ್ಯಕೀಯ ಸೇವೆಗೆ ಕರೆ ಮಾಡಿ. ಸ್ಟ್ರೋಕ್ ಚಿಕಿತ್ಸೆಯಲ್ಲಿಯೂ ಸಮಯವೇ ಅತ್ಯಂತ ನಿರ್ಣಾಯಕವಾಗಿದೆ. ಮೊದಲ ಮೂರರಿಂದ ನಾಲ್ಕೂವರೆ ಗಂಟೆಗಳಲ್ಲಿ ಚಿಕಿತ್ಸೆ ದೊರೆತರೆ ಮಿದುಳಿನ ಹಾನಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಸ್ಟ್ರೋಕ್ ತಡೆಗಟ್ಟುವಿಕೆ ಹೇಗೆ?
ಉತ್ತಮ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು.
ರಕ್ತದೊತ್ತಡ ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು.
ಧೂಮಪಾನ, ಮದ್ಯಪಾನದಿಂದ ದೂರವಿರುವುದು ಹಾಗೂ ಸಮತೋಲಿತ ಆಹಾರ ಸೇವಿಸುವುದು.
ನಿಯಮಿತ ವ್ಯಾಯಾಮ ಹಾಗೂ ಯೋಗ ಮಾಡುವುದು.
ಸ್ಟ್ರೋಕ್‌ನ ಸಂಕೇತಗಳನ್ನು ಗುರುತಿಸಿ ವೈದ್ಯರನ್ನು ಸಂಪರ್ಕಿಸುವುದು
(ಡಾ. ಲೋಕೆಶ್.ಬಿ, ನರವಿಜ್ಞಾನ ವಿಭಾಗ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.