ಯುಗಾದಿ ರಾಶಿಭವಿಷ್ಯ 2025: ವಿಶ್ವಾವಸು ಸಂವತ್ಸರದಲ್ಲಿ ಯಾವ ರಾಶಿಯವರ ಭವಿಷ್ಯ ಏನು?
ಎಲ್ಲರಿಗೂ ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಶುಭಾಶಯಗಳು. ವಿಶ್ವಾವಸು ಎಂದರೆ ವಿಶ್ವಾಸ ನಂಬಿಕೆ ಹೆಚ್ಚಾಗುವುದು ಎಂದರ್ಥ.
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 29 ಮಾರ್ಚ್ 2025, 14:33 IST
Last Updated 29 ಮಾರ್ಚ್ 2025, 14:33 IST
2025ರ ಯುಗಾದಿ ವರ್ಷ ಭವಿಷ್ಯ
ಮೇಷ
ಆದಾಯ ಕಡಿಮೆ, ಖರ್ಚು ಹೆಚ್ಚಾಗಿರುತ್ತದೆ; ಹೀಗಾಗಿ ಖರ್ಚಿಗೆ ಕಡಿವಾಣ ಹಾಕಲೇಬೇಕು. ಗುರು ವೃಷಭದಲ್ಲಿ ಇರುವವರೆಗೆ ಆದಾಯ ಪರವಾಗಿಲ್ಲ; ಸ್ಥಿರಾಸ್ತಿಯನ್ನೂ ಹೊಂದುವ ಯೋಗವಿದೆ. ಸರ್ಕಾರಿ ಕೆಲಸ–ಕಾರ್ಯಗಳಲ್ಲಿ ನಿಧಾನಗತಿ ಕಾಣುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಶತ್ರುಗಳ ಧ್ವಂಸ ಆಗುತ್ತದೆ. ಹೈನುಗಾರಿಕೆಯಲ್ಲಿ ಸಾಮಾನ್ಯ ಪ್ರಗತಿ. ಸಂಗಾತಿಯಿಂದ ಅಲ್ಪಸಹಾಯ ದೊರೆಯುತ್ತದೆ. ಆಭರಣ ವ್ಯಾಪಾರಿಗಳಿಗೆ ಹಿನ್ನಡೆ. ಹಿರಿಯರಿಂದ ಬರಬೇಕಾದ ಆಸ್ತಿ ನಿಧಾನವಾಗಬಹುದು. ವೃತ್ತಿಯಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಗುರುಹಿರಿಯರೊಂದಿಗೆ ಘರ್ಷಣೆ ಬೇಡ. ಆದಾಯ 2, ವ್ಯಯ 14; ಆರೋಗ್ಯ 3, ಅನಾರೋಗ್ಯ 0; ರಾಜಪೂಜಾ 5, ರಾಜಕೋಪ 6; ಸುಖ 3, ದುಃಖ 3 ಸುಬ್ರಹ್ಮಣ್ಯ, ಶನೈಶ್ಚರ ಮಂತ್ರವನ್ನು ಪಠಿಸಿರಿ.
ವೃಷಭ
ಆದಾಯಕ್ಕಿಂತ ಖರ್ಚು ಕಡಿಮೆ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಸುಖ, ದುಃಖಕ್ಕಿಂತ ಹೆಚ್ಚಿಗೆ ಇರುತ್ತದೆ. ವೃತ್ತಿಯ ಪ್ರಗತಿಯಲ್ಲಿ ಸಲ್ಪ ಏರಿಕೆ ಆಗುತ್ತದೆ. ದೊಡ್ಡಮಟ್ಟದ ಹೂಡಿಕೆ ಖಂಡಿತ ಬೇಡ. ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ವಿವಾಹ ಸಂಬಂಧ ಪ್ರಾಪ್ತಿಯಾಗುವ ಸಾಧ್ಯತೆಗಳಿವೆ. ಸಂಶೋಧಕರಿಗೆ ಈಗ ತಮ್ಮ ಸಾಮರ್ಥ್ಯವನ್ನು ತೋರಿಸುವ ಅವಕಾಶವಿರುತ್ತದೆ. ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ವಾಹನಚಾಲನೆಯಲ್ಲಿ ಎಚ್ಚರಿಕೆ ಇರಲಿ. ಸಂಸಾರದ ತೊಂದರೆಗಳು ನಿವಾರಣೆಯಾಗುತ್ತವೆ. ಸಂಗಾತಿಯ ಸಂಪಾದನೆಯಲ್ಲಿ ಏರಿಕೆಯನ್ನು ಕಾಣಬಹುದು. ಹಳೆಯ ಹೂಡಿಕೆಗಳಿಂದ ಈಗ ಲಾಭ. ಆಸ್ತಿಕಲಹಗಳು ಅಂತ್ಯವಾಗುತ್ತವೆ. ಕೋರ್ಟುಕಚೇರಿಗಳಲ್ಲಿ ಜಯದ ಹಾದಿ ಇರುತ್ತದೆ. ಹಣ್ಣು–ತರಕಾರಿಗಳನ್ನು ಬೆಳೆಯುವವರಿಗೆ ಲಾಭ. ಆದಾಯ 11, ವ್ಯಯ 5; ಆರೋಗ್ಯ 0, ಅನಾರೋಗ್ಯ 4; ರಾಜಪೂಜಾ 4, ರಾಜಕೋಪ 2; ಸುಖ 6, ದುಃಖ 3 ರಂಗನಾಥಸ್ವಾಮಿಯ ಆರಾಧನೆಯನ್ನು ಮಾಡಿರಿ.
ಮಿಥುನ
ಆದಾಯ ಉತ್ತಮವಾಗಿದ್ದು ಖರ್ಚು ಕಡಿಮೆ ಇರುತ್ತದೆ. ಅನಾರೋಗ್ಯ ಸ್ವಲ್ಪ ಜಾಸ್ತಿ ಆಗಬಹುದು. ದುಃಖಕ್ಕಿಂತಲೂ ಸುಖ ಜಾಸ್ತಿ ಇರುತ್ತದೆ. ಸಮಾಜದಿಂದ ಗೌರವ. ವೃತ್ತಿಯಲ್ಲಿ ಪ್ರಗತಿ ಇದೆ. ಹಿರಿಯರ ಜೊತೆ ಕಲಹ ಬೇಡ. ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಬಹುದು. ಹೆಚ್ಚಿನ ಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಉದ್ಯೋಗ ಕಾಯಂ ಆಗುವ ಸಾಧ್ಯತೆ. ಯುಗಾದಿ ನಂತರ ವಿವಾಹ ಸಂಬಂಧದ ಸಾಧ್ಯತೆ. ಆರೋಗ್ಯದಲ್ಲಿ ಹೆಚ್ಚಿನ ಅನುಕೂಲವಿರುತ್ತದೆ. ಅನಿರೀಕ್ಷಿತ ಧನಲಾಭ. ಉದ್ದಿಮೆದಾರರಿಗೆ ಹೆಚ್ಚಿನ ಅನುಕೂಲವಿರುತ್ತದೆ. ವಕೀಲರಿಗೆ ಕೋರ್ಟಿನಲ್ಲಿ ಹೆಚ್ಚಿನ ಪ್ರಗತಿ. ವಾಹನಯೋಗ ಮತ್ತು ಸಾಲಬಾಧೆ ನಿವಾರಣೆ ಆಗುತ್ತದೆ. ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಬರುವ ಸಾಧ್ಯತೆಗಳಿವೆ. ಚಲನಚಿತ್ರ ಕ್ಷೇತ್ರದವರಿಗೆ ಹೆಚ್ಚಿನ ಅನುಕೂಲ. ಚರ್ಮವ್ಯಾಧಿ ಕಾಡಬಹುದು. ತೀರ್ಥಯಾತ್ರೆಯ ಯೋಗವಿದೆ. ದೊಡ್ಡ ಹೂಡಿಕೆ ಮಾಡುವಾಗ ಪೂರ್ವಾಪರ ವಿಚಾರಿಸಿರಿ. ಆದಾಯ 14, ವ್ಯಯ 2; ಆರೋಗ್ಯ 2, ಅನಾರೋಗ್ಯ 5; ರಾಜಪೂಜಾ 1, ರಾಜಕೋಪ 2; ಸುಖ 6, ದುಃಖ 3 ಗುರುಧ್ಯಾನ, ಶನೈಶ್ಚರ ಧ್ಯಾನ, ಗಣೇಶನ ಧ್ಯಾನ ಮಾಡಿರಿ.
ಕರ್ಕಾಟಕ
ಉದ್ಯೋಗದಲ್ಲಿ ಪ್ರಗತಿ. ಸಾಲಬಾಧೆಯ ನಿವಾರಣೆ. ಭೂಮಿಯ ವ್ಯವಹಾರ ಮಾಡುವವರಿಗೆ ಉತ್ತಮ ಕಮಿಷನ್ ದೊರೆಯುತ್ತದೆ. ಕೆಲವರಿಗೆ ವಿದೇಶದಿಂದ ಧನಾಗಮನ ಆಗುವ ಸಾಧ್ಯತೆ. ವಿದೇಶಿ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಬಹುದು. ಗಣ್ಯವ್ಯಕ್ತಿಗಳ ಸಂಪರ್ಕ ಸಿಗುತ್ತದೆ. ಆಹಾರ ಪದಾರ್ಥಗಳನ್ನು ಮಾರುವವರಿಗೆ, ಉದ್ಯಮಿಗಳಿಗೆ, ಮನೆಯನ್ನು ಮಾರುವವರಿಗೆ, ತಂಪು ಪಾನೀಯ ರೂಪದ ಆಹಾರವಸ್ತುಗಳನ್ನು ಮಾರುವವರಿಗೆ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಲೇವಾದೇವಿದಾರರಿಗೆ ಹಳೇ ಬಾಕಿ ವಸೂಲಿಯಾಗುವ ಸಾಧ್ಯತೆ. ಪ್ರಮುಖ ಒಪ್ಪಂದ ಮಾಡಿಕೊಳ್ಳುವಾಗ ಸಾಕಷ್ಟು ವಿವೇಚನೆ ಇರಲಿ. ಮಕ್ಕಳಿಂದ ನಿರೀಕ್ಷಿತ ಸಹಕಾರ ಇರುವುದಿಲ್ಲ. ಆದಾಯ 14, ವ್ಯಯ 8; ಆರೋಗ್ಯ 6, ಅನಾರೋಗ್ಯ 5; ರಾಜಪೂಜಾ 6, ರಾಜಕೋಪ 3, ಸುಖ 3, ದುಃಖ 3 ದಕ್ಷಿಣಾಮೂರ್ತಿ ಸ್ತೋತ್ರ ಮತ್ತು ಶನೈಶ್ಚರ ಸ್ತೋತ್ರಗಳನ್ನು ಪಠಿಸಿರಿ.
ಸಿಂಹ
ಗುರುವಿನ ಪ್ರಭಾವ ಬಹಳ ಇರುತ್ತದೆ. ಬಯಸಿದ ಕೆಲಸಗಳಲ್ಲಿ ಯಶಸ್ಸು. ಗಂಡಹೆಂಡಿರಲ್ಲಿ ಮತ್ತು ಪ್ರೇಮಿಗಳಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಹಣದ ಮೂಲ ಸರಿಯಾಗಿದ್ದರೆ, ಅದನ್ನು ಉಳಿಸಿಕೊಂಡು ಬೆಳೆಸಿರಿ. ಬಂಧುಮಿತ್ರಗಳಿಂದ ಸಹಕಾರ ದೊರೆಯುತ್ತದೆ. ಸಾರ್ವಜನಿಕ ವಲಯದಲ್ಲಿ ಮನ್ನಣೆ. ವಾಹನಯೋಗ. ಮನೆ ಕಟ್ಟುವ ಸಾಧ್ಯತೆಯೂ ಇದೆ. ದುಡುಕಿನ ನಿರ್ಧಾರಗಳು ಬೇಡ. ಕೋರ್ಟ್–ಕಚೇರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಮಧ್ಯಸ್ಥಿಕೆಯನ್ನು ವಹಿಸುವುದು, ಜಾಮೀನು ಕೊಡುವುದು ಖಂಡಿತ ಬೇಡ. ಕರ್ತವ್ಯದಲ್ಲಿ ಶ್ರದ್ಧೆ ಇರಲಿ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ. ಆಹಾರ ಮತ್ತು ತಂಪು ಪಾನೀಯಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ವಿದ್ಯಾರ್ಥಿಗಳಿಗೆ ಅಭಿವೃದ್ಧಿ. ಸಂಶೋಧಕರಿಗೆ ಹೆಚ್ಚಿನ ಪ್ರಗತಿ. ಕೆಲವರಿಗೆ ಕಾಯಂ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕೆಲವರಿಗೆ ರಾಜಕೀಯ ಪ್ರವೇಶ ಸಿಗುತ್ತದೆ. ಆದಾಯ 11, ವ್ಯಯ 11; ಆರೋಗ್ಯ 4, ಅನಾರೋಗ್ಯ 4; ರಾಜಪೂಜಾ 2, ರಾಜಕೋಪ 6; ಸುಖ 3, ದುಃಖ 3 ಈಶ್ವರನ ಧ್ಯಾನ, ಶನೈಶ್ಚರನ ಧ್ಯಾನ, ಆಂಜನೇಯನ ಧ್ಯಾನ ಮಾಡಿರಿ.
ಕನ್ಯಾ
ಆದಾಯಕ್ಕಿಂತ ಖರ್ಚು ಬಹಳ ಕಡಿಮೆ ಇರುತ್ತದೆ. ಅನಾರೋಗ್ಯ ಸ್ವಲ್ಪ ಹೆಚ್ಚು. ಸಮಾಜದಿಂದ ಸಿಗುವ ಗೌರವಕ್ಕಿಂತಲೂ ದೂರುಗಳು ಹೆಚ್ಚಾಗುತ್ತವೆ. ಸುಖ ಹೆಚ್ಚಿಗೆ ಇದ್ದು, ದುಃಖ ಕಡಿಮೆ ಇರುತ್ತದೆ. ಒಳ್ಳೆಯ ಸಂಪಾದನೆಯ ಯೋಗವಿದೆ. ಬಂದ ಹಣವನ್ನು ಸರಿಯಾಗಿ ಉಳಿಸಿಕೊಳ್ಳಿ. ಹಿರಿಯರಿಂದ ಸಹಾಯ ಇರುತ್ತದೆ. ಪಿತ್ರಾರ್ಜಿತ ಆಸ್ತಿ ಬರುವ ಯೋಗವಿದೆ. ಕೆಲವು ಹಳೆಯ ತೊಂದರೆ ನಿವಾರಣೆಯಾಗುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳುವ ಯೋಗವಿದೆ. ಕೆಲಸಗಳಲ್ಲಿ ಮುನ್ನಡೆ. ವ್ಯಾಪಾರ ವ್ಯವಹಾರಗಳ ಬಗ್ಗೆ ಎಚ್ಚರ ಇರಲಿ. ಇತರರ ಬಗ್ಗೆ ಹಗುರವಾದ ಮಾತುಗಳು ಖಂಡಿತ ಬೇಡ. ಮನೆಯಲ್ಲಿ ದೈವಕಾರ್ಯಗಳ ಸಾಧ್ಯತೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ಅನವಶ್ಯಕ ಪ್ರಯಾಣಗಳಾಗಬಹುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ಆರೋಗ್ಯದ ಕಡೆ ಗಮನ ಹೆಚ್ಚಿರಲಿ. ಆಸ್ತಿ ಸಂಬಂಧದ ಕಲಹಗಳು ಪರಿಹಾರವಾಗುತ್ತವೆ. ಕನ್ನಡಕ ವ್ಯಾಪಾರಿಗಳಿಗೆ ಮತ್ತು ಟೈಲರ್‌ಗಳಿಗೆ ಉತ್ತಮ ಸಂಪಾದನೆ. ಕೃಷಿಕರಿಗೆ ಉತ್ತಮ ಬೆಳೆಯಿಂದ ಲಾಭ. ಆದಾಯ 14, ವ್ಯಯ 2; ಆರೋಗ್ಯ 2, ಅನಾರೋಗ್ಯ 5; ರಾಜಪೂಜಾ 1, ರಾಜಕೋಪ 2; ಸುಖ 6, ದುಃಖ 3 ಆಂಜನೇಯ, ಶ್ರೀರಾಮ ಮತ್ತು ಶನೈಶ್ಚರ ಧ್ಯಾನ ಮಾಡಿರಿ.
ತುಲಾ
ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ಇರಲಿ. ಗುರುಬಲ ಇರುತ್ತದೆ. ತಾಯಿಯಿಂದ ಹೆಚ್ಚು ಅನುಕೂಲ ದೊರೆಯುತ್ತದೆ. ದೀರ್ಘಕಾಲೀನ ಅನಾರೋಗ್ಯ ಪರಿಹಾರವಾಗುತ್ತದೆ. ಕುಟುಂಬದಲ್ಲಿ ಹೊಂದಾಣಿಕೆ ಇರುತ್ತದೆ. ಮನೆಯಲ್ಲಿ ದೈವಕಾರ್ಯಗಳಾಗುವ ಸಾಧ್ಯತೆಗಳಿವೆ. ಈ ಹಿಂದೆ ನಿಂತಿದ್ದ ಕೆಲಸಗಳು ಈಗ ಪುನರಾರಂಭವಾಗುತ್ತವೆ. ಹಣದ ಹರಿವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಶತ್ರುಗಳ ನಾಶವಾಗುತ್ತದೆ. ಹೊಸ ಹೊಸ ಯೋಜನೆಗಳನ್ನು ಕಾರ್ಯಗತ ಮಾಡಬಹುದು. ಕೃಷಿಕರಿಗೆ ಲಾಭ. ಸ್ಥಿರಾಸ್ತಿ ವ್ಯಾಪಾರಿಗಳಿಗೆ ಲಾಭ ಹೆಚ್ಚು. ಸರ್ಕಾರದ ಕೆಲಸಗಳಲ್ಲಿ ಜಯ ಲಭಿಸುತ್ತದೆ. ಸ್ತ್ರೀಯರಿಂದ ಅಪವಾದ ಬರಬಹುದು, ಎಚ್ಚರ. ಸಂಸಾರದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳಿ. ಕೆಲವರಿಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆಯುವ ಯೋಗವಿದೆ. ಪಾಲುದಾರರ ವಿಷಯದಲ್ಲಿ ಎಚ್ಚರ ವಹಿಸಿರಿ. ನಿಮ್ಮ ಮಕ್ಕಳಿಂದ ಸಮಾಧಾನ ದೊರೆಯುತ್ತದೆ. ವಿದೇಶ ಪ್ರವಾಸದ ಯೋಗ ಬರಬಹುದು. ಆದಾಯ 11, ವ್ಯಯ 5; ಆರೋಗ್ಯ 0, ಅನಾರೋಗ್ಯ 4; ರಾಜಪೂಜಾ 4, ರಾಜಕೋಪ 2; ಸುಖ 6, ದುಃಖ 3 ಶಿವ ಧ್ಯಾನ ಮತ್ತು ಬ್ರಹ್ಮ ಧ್ಯಾನವನ್ನು ಮಾಡಿರಿ.
ವೃಶ್ಚಿಕ
ಖರ್ಚು ಹೆಚ್ಚು ಇರಲಿದ್ದು, ಅದಕ್ಕೆ ಕಡಿವಾಣ ಹಾಕಿರಿ. ಆರೋಗ್ಯದಲ್ಲಿ ತೊಂದರೆ ಇಲ್ಲ. ಸಮಾಜದಲ್ಲಿ ಗೌರವ ದೊರೆಯುತ್ತದೆ. ಸುಖ ದುಃಖಗಳು ಸಮನಾಗಿರುತ್ತವೆ. ಕುಟುಂಬದ ವಿಚಾರದಲ್ಲಿ ಎಚ್ಚರ ವಹಿಸಿರಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸದ ಒತ್ತಡ. ವ್ಯಾಪಾರ–ವಹಿವಾಟಗಳಿಗೆ ಸ್ವಲ್ಪ ನಿಯಂತ್ರಣ ಹಾಕಿರಿ. ಗುರುದಶೆ ನಡೆಯುತ್ತಿರುವವರಿಗೆ ಹೆಚ್ಚಿನ ಅನುಕೂಲ. ಹೊಸ ಯೋಜನೆಗಳಿಗೆ ಚಾಲನೆ ಕೊಡಬಹುದು. ಅನಿರೀಕ್ಷಿತ ಧನಾಗಮನದ ಸಾಧ್ಯತೆ. ಕೃಷಿ ಮತ್ತು ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ. ಯಂತ್ರೋಪಕರಣಗಳ ವ್ಯಾಪಾರ ಮಾಡುವವರಿಗೆ ಯಶಸ್ಸು. ರಾಸಾಯನಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭ. ಗುತ್ತಿಗೆದಾರರ ಮನೆಗಳಿಗೆ ಹಣದ ಆಗಮನ. ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಿದೆ. ಸಂಶೋಧಕರಿಗೆ ಪ್ರಶಸ್ತಿಗಳ ಯೋಗ. ಹೊಟ್ಟೆಯ ಸಮಸ್ಯೆಗಳು ಕೆಲವರನ್ನು ಬಾಧಿಸಬಹುದು. ಆದಾಯ 2, ವ್ಯಯ 14; ಆರೋಗ್ಯ 3, ಅನಾರೋಗ್ಯ 0; ರಾಜಪೂಜಾ 5, ರಾಜಕೋಪ 6; ಸುಖ 3, ದುಃಖ 3 ಸುಬ್ರಹ್ಮಣ್ಯ, ನರಸಿಂಹ ಮತ್ತು ಗುರುಗಳ ಆರಾಧನೆಯನ್ನು ಮಾಡಿರಿ.
ಧನು
ಆದಾಯದಷ್ಟೇ ಖರ್ಚು ಇರುತ್ತದೆ. ಆರೋಗ್ಯ–ಅನಾರೋಗ್ಯ ಸಮನಾಗಿರುತ್ತದೆ. ಸಮಾಜ ಸ್ವಲ್ಪ ಹೆಚ್ಚು ಗೌರವವನ್ನು ಕೊಡುತ್ತದೆ. ಹಳೆಯ ಕಷ್ಟಗಳು ಪರಿಹಾರವಾಗಬಹುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ. ಗುರು ಮಿಥುನಕ್ಕೆ ಬಂದಾಗ ಕುಟುಂಬದಲ್ಲಿ ಹೊಂದಾಣಿಕೆ ಹೆಚ್ಚಾಗುತ್ತದೆ. ವಸ್ತ್ರಾಭರಣಗಳ ಸಂಗ್ರಹವಾಗುತ್ತದೆ. ಸಜ್ಜನರ ಸಹವಾಸ ದೊರೆಯುತ್ತದೆ. ಕಾರ್ಮಿಕರಿಂದ ಹೆಚ್ಚು ಅನುಕೂಲವಿರುತ್ತದೆ. ಯಾರನ್ನೂ ಅತಿಯಾಗಿ ನಂಬುವುದು ಬೇಡ. ದೈವಜನರಿಂದ ಹೆಚ್ಚು ಅನುಕೂಲ. ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ ಇರುತ್ತದೆ. ಉದ್ಯೋಗರಹಿತರಿಗೆ ಉದ್ಯೋಗ ದೊರೆಯುವ ಸಾಧ್ಯತೆ. ವ್ಯಾಪಾರದಲ್ಲಿ ಸ್ವಲ್ಪ ಅನುಕೂಲವಿದ್ದು, ಹೆಚ್ಚು ಸಂಪಾದನೆ ಆಗುತ್ತದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲವಿರುತ್ತದೆ ಆದಾಯ 5, ವ್ಯಯ 5; ಆರೋಗ್ಯ 1, ಅನಾರೋಗ್ಯ 1; ರಾಜಪೂಜಾ 4, ರಾಜಕೋಪ 2; ಸುಖ 6, ದುಃಖ 3 ಶನಿ, ಗುರು ಮತ್ತು ಸುಬ್ರಹ್ಮಣ್ಯ ಧ್ಯಾನ ಅಗತ್ಯ.
ಮಕರ
ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಇರುತ್ತದೆ. ಎಚ್ಚರ ವಹಿಸದಿದ್ದರೆ ಸಾಲಕ್ಕೆ ಹೋಗಬೇಕಾಗುತ್ತದೆ. ಅನಾರೋಗ್ಯ ಜಾಸ್ತಿ. ಸಮಾಜದಿಂದ ಅಪವಾದ ಹೆಚ್ಚು. ಸುಖ–ದುಃಖಗಳು ಸಮನಾಗಿರುತ್ತವೆ. ಸಾಡೆಸಾತಿ ಮುಗಿದಿರುತ್ತದೆ; ಹೀಗಾಗಿ ಜೀವನದಲ್ಲಿ ಪ್ರಗತಿ. ದೀರ್ಘಕಾಲಿನ ಸಮಸ್ಯೆಗಳು ಪರಿಹಾರವಾಗಬಹುದು. ಹೊಸ ಹೊಸ ಆಲೋಚನೆಗಳಿಗೆ ದಾರಿಯಾಗುತ್ತದೆ. ಪುಣ್ಯಕ್ಷೇತ್ರಗಳ ದರ್ಶನ, ಗುರುಹಿರಿಯರ ದರ್ಶನ ಪ್ರಾಪ್ತಿ. ಸಾರ್ವಜನಿಕ ಜೀವನ ಚೆನ್ನಾಗಿರುತ್ತದೆ. ಪತಿ–ಪತ್ನಿ ನಡುವೆ ಹೊಂದಾಣಿಕೆ ಏರ್ಪಡುತ್ತದೆ. ಸ್ಥಿರಾಸ್ತಿಯ ಯೋಗವಿದೆ. ಇಷ್ಟಾರ್ಥಗಳು ಸಿದ್ಧಿಸುವ ಕಾಲ. ಶತ್ರುಗಳು ನಿಮಗೆ ತಲೆಬಾಗುವರು. ಉದ್ಯೋಗದಲ್ಲಿ ಧನಲಾಭವಿರುತ್ತದೆ. ತೃತೀಯ ಶನಿಯಿಂದ ನಿಮಗೆ ಸ್ವಲ್ಪ ಲಾಭ. ಕೋರ್ಟ್ ಕಚೇರಿಗಳಲ್ಲಿ ಜಯವಿರುತ್ತದೆ. ವ್ಯಾಪಾರವನ್ನು ಸರಿಯಾಗಿ ನಡೆಸಿದಲ್ಲಿ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶವಿರುತ್ತದೆ. ವಾಹನ ದುರಸ್ತಿ ಮಾಡುವವರಿಗೆ ಅಧಿಕ ಲಾಭ. ಹೈನು ಮಾರಾಟಗಾರರಿಗೆ ಮತ್ತು ಬಟ್ಟೆ ವ್ಯಾಪಾರಿಗಳಿಗೆ ಲಾಭ ಹೆಚ್ಚು. ದಿನಸಿ ವ್ಯಾಪಾರಿಗಳಿಗೆ ಲಾಭ. ಆದಾಯ 8, ವ್ಯಯ 14; ಆರೋಗ್ಯ 2, ಅನಾರೋಗ್ಯ 3; ರಾಜಪೂಜಾ 5, ರಾಜಕೋಪ 6; ಸುಖ 3, ದುಃಖ 3 ಗೌರಿ, ದುರ್ಗೆ, ಲಕ್ಷ್ಮಿ ಮತ್ತು ನರಸಿಂಹನ ಧ್ಯಾನ ಮಾಡಿರಿ.
ಕುಂಭ
ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಇರುತ್ತದೆ. ಅನಾರೋಗ್ಯ ಸ್ವಲ್ಪ ಕಾಡಬಹುದು. ಸಮಾಜದಿಂದ ಹೆಚ್ಚಿಗೆ ಗೌರವ ಇರುತ್ತದೆ. ಸುಖ–ದುಃಖಗಳಲ್ಲಿ ಸುಖವೇ ಸ್ವಲ್ಪ ಹೆಚ್ಚಿರುತ್ತದೆ. ಮಾಡುವ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ಹಿರಿಯರು ದಾನ ಧರ್ಮ ಮಾಡುವರು. ಪೂಜ್ಯರ ದರ್ಶನ ಸಾಧ್ಯತೆ ಇದೆ. ರಾಜಕೀಯದಲ್ಲಿ ಇರುವವರಿಗೆ ಮತ್ತು ಸಂಘ ಸಂಸ್ಥೆಗಳಲ್ಲಿ ಇರುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ವ್ಯಾಪಾರದಲ್ಲಿ ಹೊಸ ರೀತಿಯ ಲಾಭವಿರುತ್ತದೆ. ಆಸ್ತಿ ಮಾಡುವ ಯೋಗವಿದೆ. ಸಾಡೇಸಾತಿಯ ಕಡೆಯ ಭಾಗ, ತಾಳ್ಮೆ ಇರಲಿ. ಕೆಲವೊಂದು ಆರಂಭಿಸಿದ ಕೆಲಸಗಳು ವೇಗವನ್ನು ಕಳೆದುಕೊಳ್ಳಬಹುದು. ಬರಬೇಕಾದ ಹಣ ಬರುವುದು ನಿಧಾನ. ಪ್ರೀತಿ–ಪ್ರೇಮದಲ್ಲಿ ಅಂತಹ ಯಶಸ್ಸು ಇರುವುದಿಲ್ಲ. ಸಾಧನೆ ಮಾಡುವವರಿಗೆ ಹೆಚ್ಚಿನ ಅನುಕೂಲ. ದೊಡ್ಡ ಬಂಡವಾಳ ಹೂಡಿಕೆ ಖಂಡಿತ ಬೇಡ. ಕೆಲವರಿಗೆ ಸ್ಥಾನಮಾನ ದೊರೆಯಲಿದೆ. ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡಿ. ಆದಾಯ 8, ವ್ಯಯ 14; ಆರೋಗ್ಯ 2, ಅನಾರೋಗ್ಯ 3; ರಾಜಪೂಜಾ 5, ರಾಜಕೋಪ 6; ಸುಖ 3, ದುಃಖ 3 ಶನೈಶ್ಚರ, ಗೌರಿ, ದುರ್ಗೆಯರ ಧ್ಯಾನ ಮಾಡಿರಿ.
ಮೀನ
ಆದಾಯ ವೆಚ್ಚಗಳು ಸಮನಾಗಿರುತ್ತವೆ. ಉದ್ಯೋಗದಲ್ಲಿ ಸ್ವಲ್ಪ ಅಭಿವೃದ್ಧಿ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಆಗುವ ಯೋಗ ಇದೆ. ವ್ಯಾಪಾರದಲ್ಲಿ ಸ್ವಲ್ಪ ಅಭಿವೃದ್ಧಿ ಇರುತ್ತದೆ. ಸ್ಥಿರಾಸ್ತಿಯನ್ನು ಖರೀದಿ ಮಾಡುವ ಯೋಗ. ಕುಟುಂಬದಲ್ಲಿನ ಜವಾಬ್ದಾರಿಗಳು ಹೆಚ್ಚಾಗುತ್ತವೆ. ದೈವವಿದ್ಯೆಯನ್ನು ಅನುಸರಿಸುವವರಿಗೆ ಲಾಭ ಹೆಚ್ಚುತ್ತದೆ. ಧಾರ್ಮಿಕ ಕೆಲಸಗಳಲ್ಲಿ ಅಭಿವೃದ್ಧಿ ಇರುತ್ತದೆ. ನವೆಂಬರ್ ನಂತರ ಆರೋಗ್ಯದಲ್ಲಿ ಏರುಪೇರಾದೀತು, ಎಚ್ಚರವಿರಲಿ. ಶನಿ–ಗುರುಗಳ ಪ್ರಭಾವದಿಂದ ಸರಿಯಾದ ಚಿಕಿತ್ಸೆಗಳು ದೊರೆಯುತ್ತವೆ. ದುಂದುವೆಚ್ಚ ಹೆಚ್ಚಾಗಬಹುದು ಎಚ್ಚರವಿರಲಿ. ಯಾರೊಂದಿಗೂ ವಾದ –ವಿವಾದ ಬೇಡ. ವೃತ್ತಿಯಲ್ಲಿ ಹೆಚ್ಚು ಶ್ರದ್ಧೆ ಬೇಕು. ದುಡಿದ ಹಣ ಉಳಿಸಿಕೊಳ್ಳುವುದು ಒಳ್ಳೆಯದು. ಆದಾಯ 5, ವ್ಯಯ 5; ಆರೋಗ್ಯ 1, ಅನಾರೋಗ್ಯ 1; ರಾಜಪೂಜಾ 4, ರಾಜಕೋಪ 2; ಸುಖ 6, ದುಃಖ 3 ಶನೈಶ್ಚರ, ದುರ್ಗೆ ಮತ್ತು ಸುಬ್ರಹ್ಮಣ್ಯನನ್ನು ಆರಾಧಿಸಿರಿ.