ADVERTISEMENT

ಗಣೇಶೋತ್ಸವ ಆಚರಣೆ ಪರಿಷ್ಕೃತ ಮಾರ್ಗಸೂಚಿ; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ಅವಕಾಶ

ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 7:56 IST
Last Updated 18 ಆಗಸ್ಟ್ 2020, 7:56 IST
ಗಣೇಶ ಮೂರ್ತಿ ಅಂತಿಮ ಸಿದ್ಧತೆಯಲ್ಲಿರುವ ಕಲಾವಿದ–ಸಾಂದರ್ಭಿಕ ಚಿತ್ರ
ಗಣೇಶ ಮೂರ್ತಿ ಅಂತಿಮ ಸಿದ್ಧತೆಯಲ್ಲಿರುವ ಕಲಾವಿದ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಹರಡುವುದನ್ನು ತಡೆಯುವುದು ಹಾಗೂ ಜನರಿಗೆ ಹಬ್ಬದ ಸಡಗರದ ಆಚರಣೆಗೂ ಅಡ್ಡಿಯಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಮಂಗಳವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

'ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಲು ಮತ್ತೊಮ್ಮೆ ವಿನಯಪೂರ್ವಕ ವಿನಂತಿ' ಎಂದು ಮುಖ್ಯಮಂತ್ರಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾರ್ಗಸೂಚಿ ಹಂಚಿಕೊಳ್ಳಲಾಗಿದೆ.

ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನದೊಳಗೆ, ಮನೆಗಳಲ್ಲಿ ಅಥವಾ ಸರ್ಕಾರಿ/ ಖಾಸಗಿ / ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ADVERTISEMENT

ಗಣೇಶೋತ್ಸವ ಆಚರಿಸಲು ಪರಿಷ್ಕೃತ ಮಾರ್ಗಸೂಚಿಗಳು:

* ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತಹ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು.

* ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆ ಮಾಡುವಂತಿಲ್ಲ. ಅದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.

* ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನದೊಳಗೆ, ಮನೆಗಳಲ್ಲಿ ಅಥವಾ ಸರ್ಕಾರಿ/ ಖಾಸಗಿ / ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು.

* ಗಣೇಶೋತ್ಸವ ಸಮಿತಿಗಳು/ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್‌ ಕಾರ್ಪೊರೇಷನ್‌ ಅಥವಾ ಸ್ಥಳೀಯ ಆಡಳಿತದಿಂದ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ಒಂದು ವಾರ್ಡ್‌ಗೆ ಅಥವಾ ಒಂದು ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಪ್ರೋತ್ಸಾಹಿಸುವುದು.

* ಆಚರಣೆಗಳಲ್ಲಿ ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಗಮನಿಸುವುದು.

* ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ/ ಸಂಗೀತ/ ನೃತ್ಯ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ.

* ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು.

* ಸರ್ಕಾರಿ ಅಥವಾ ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಸಮೀಪದ ಮಾರ್ಗಗಳ ಮೂಲಕ ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತ ಅಥವಾ ಹತ್ತಿರದ ಸ್ಥಳೀಯ ಸಂಸ್ಥೆಗಳ ಇಲ್ಲವೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.