ADVERTISEMENT

ಅಂಗಳದಿ ಅರಳಿದ ಅಂದದ ರಂಗೋಲಿ

ಎ.ಎಸ್.ಹೂಲಗೇರಿ
Published 24 ನವೆಂಬರ್ 2014, 14:30 IST
Last Updated 24 ನವೆಂಬರ್ 2014, 14:30 IST
ಅಂಗಳದಿ ಅರಳಿದ ಅಂದದ ರಂಗೋಲಿ
ಅಂಗಳದಿ ಅರಳಿದ ಅಂದದ ರಂಗೋಲಿ   

ಮೈಲುಗಟ್ಟಲೆ ಜನಸಾಗರ. ಝಗಮಗಿಸುವ ದೀಪಾಲಂಕಾರ, ಕಿವಿಗಡಚಿಕ್ಕುವ ಚಲನಚಿತ್ರ ಗೀತೆಗಳು. ಇವೆಲ್ಲದರ ಮಧ್ಯೆ ಅಂಗಳದಲ್ಲಿ ಅರಳಿದ ಮನಸೆಳೆವ ರಂಗೋಲಿಗಳು...

ಇದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಪ್ರತಿವರ್ಷ ಕಾರ್ತಿಕೋತ್ಸವದ ಸಂದರ್ಭದಲ್ಲಿ ಕಾಣುವ ದೃಶ್ಯ. ಈ ಸಮಯದಲ್ಲಿ ಪಂಚದೇವರುಗಳು ರಥಾರೂಢರಾಗಿ ನಗರದ ಬೀದಿಗಳಲ್ಲಿ ಬರುವಾಗ ರಸ್ತೆಯುದ್ದಕ್ಕೂ ತಳಿರು ತೋರಣ ಹಾಗೂ ರಂಗೋಲಿಗಳಿಂದ ಶೃಂಗರಿಸಲಾಗುತ್ತದೆ.

ಅಂಬಾರಕೊಡ್ಲ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಮನೆಯಂಗಳದ ಮುಂದೆ ರಂಗೋಲಿ ಬಿಡಿಸುವವರ ದಂಡೇ ನೆರೆದಿರುತ್ತದೆ. ನೀರು ಚಿಮುಕಿಸಿ ನೆಲ ತೊಳೆದು ಬಣ್ಣದ ಹುಡಿಯಿಂದ, ಚುಕ್ಕಿಯಿಂದ, ರೇಖೆಗಳಿಂದ, ಧಾನ್ಯಗಳಿಂದ, ಹೂವುಗಳಿಂದ ಹೀಗೆ ವಿಧವಿಧವಾದ ಆಕರ್ಷಕ ರಂಗೋಲಿ ಬಿಡಿಸಿರುತ್ತಾರೆ. ಈ ರಂಗು ರಂಗಿನ ರಂಗೋಲಿಗಳು ಇಲ್ಲಿಂದ ಹಾದು ಹೋಗುವ ಒಂಚದೇವರುಗಳಿಗೆ ಸ್ವಾಗತ ಕೋರಲು ಸಜ್ಜಾಗಿರುತ್ತವೆ.

ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಕೆಲವು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಲು ಬಣ್ಣದ ಪುಡಿಯಿಂದ, ಪೇಂಟಿನಿಂದ ಚಿತ್ರ ಬಿಡಿಸಿ ಕಲೆಗೆ ಜೀವ ತುಂಬಿರುತ್ತಾರೆ.

ಹಲವು ಕಲಾವಿದರ ಕೈಯಲ್ಲಿ ವಿವಿಧ ಕ್ಷೇತ್ರಗಳ ಖ್ಯಾತನಾಮರ, ಚಿತ್ರನಟರ ಮುಖಾರವಿಂದಗಳು ಮತ್ತು ಇತರ ಸೃಜನಾತ್ಮಕತೆಯ ಚಿತ್ರಗಳು ಅರಳಿಕೊಂಡಿರುತ್ತವೆ. ಇಂತಹ ಪ್ರತಿ ರಚನೆಗಳು ಕನ್ನಡಿಯಲ್ಲಿ ಪಡಿಮೂಡಿದಷ್ಟೇ ನೈಜತೆಯಿಂದ ಕೂಡಿರುತ್ತವೆ. ಅಂಗಳದಲ್ಲಿ ಅರಳಿದ ರಂಗೋಲಿಗಳನ್ನು ವೀಕ್ಷಿಸಲು ಸಾವಿರಾರು ಜನ ಮಧ್ಯರಾತ್ರಿಯವರೆಗೂ ತಿರುಗಾಡುತ್ತಾರೆ. ಎಲ್ಲವನ್ನು ವೀಕ್ಷಿಸಿ ಮರಳುವಾಗ ಆಯಾಸವಾದರೂ ಮನಸ್ಸು ಖುಷಿಯಲ್ಲಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.