ADVERTISEMENT

ಅನಾಥರ ಪಾಲಿನ ಅರಮನೆ

ಕಲಾ ಹೆಗಡೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಅದೊಂದು ಕುಗ್ರಾಮ. ಅಲ್ಲೊಂದು ಚಿಕ್ಕ ಗುಡಿಸಲು. ಆದರೆ ಈ ಚಿಕ್ಕ ಮನೆಯಲ್ಲಿದೆ ದೊಡ್ಡದಾದ ಮನಸ್ಸು. ಇದು ಆ ಗುಡಿಸಿಲಿನ ಸನಿಹ ಹೋದರಷ್ಟೇ ತಿಳಿಯಲು ಸಾಧ್ಯ. ಕಾರಣ, ಇಲ್ಲಿದ್ದಾರೆ ಸುಮಾರು 20 ಜನ ಅನಾಥರು. ಈಗಾಗಲೇ 250ಕ್ಕೂ ಅನಾಥರಿಗೆ ರಕ್ಷಣೆ ನೀಡಿದೆ ಈ ತಾಣ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಚಿಕ್ಕಜೇನಿಯಲ್ಲಿನ ಬೆಳ್ಳಿಸರ ಎಂಬ ಕುಗ್ರಾಮದಲ್ಲಿನ ಮನೆಯ ಚಿತ್ರಣ ಇದು. ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ರಿಪ್ಪನ್‌ಪೇಟೆಯಿಂದ ಸುಮಾರು 7 ಕಿ. ಮೀ. ದೂರದಲ್ಲಿ ಹೆದ್ದಾರಿ ಸನಿಹದಲ್ಲೇ ಇರುವ ಈ `ಪದ್ಮಶ್ರಿ ಅನಾಥಾಶ್ರಮ'ದ ಅನಾಥರ ಬಂಧು ಪ್ರಭಾಕರ ನಾಯಕ. ಹಾವು ಹಿಡಿಯುವುದು ಇವರ ಕಾಯಕ. ಜೊತೆಗೆ ಕೂಲಿ. ಅವುಗಳಿಂದ ಬಂದ ಅಷ್ಟಿಷ್ಟು ಸಂಪಾದನೆಯಲ್ಲಿಯೇ ಅನಾಥರ ಸೇವೆ ಮಾಡುತ್ತಿದ್ದಾರೆ ಪ್ರಭಾಕರ.

ನೋವಿನ ಕಥೆಯೇ ಪ್ರೇರಣೆ
12ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಬದುಕಿಗಾಗಿ ಮುಂಬೈ ಮಹಾನಗರಿ ಸೇರಿದ್ದರು ಪ್ರಭಾಕರ. ಅಲ್ಲಿ ಅವರಿಗೆ ಸಿಕ್ಕಿದ್ದು ಶೌಚಾಲಯ ಮತ್ತು ಸ್ನಾನ ಗ್ರಹ ಸ್ವಚ್ಛಗೊಳಿಸುವ ಕಾರ್ಯ. ನಂತರ ಆಟೊ ಚಾಲನೆ, ಹೋಟೆಲ್ ಅಡುಗೆ ಇತ್ಯಾದಿ... ಈ ಮಹಾನಗರಿಯ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ವಿವಿಧ ಓಣಿಗಳಲ್ಲಿ ಭಿಕ್ಷುಕರು ಮತ್ತು ಅನಾಥರ ಸಾಲಿನಲ್ಲಿ ಮಲಗಿ ರಾತ್ರಿ ಕಳೆಯುತ್ತಿದ್ದ ಅವರಿಗೆ ಸುತ್ತ ಮುತ್ತಲಿನವರ ಸಂಕಷ್ಟ ಕಂಡರು. ಇದೇ ಇವರಿಗೆ ಅನಾಥಾಶ್ರಮ ನಿರ್ಮಿಸಬೇಕೆಂಬುದಕ್ಕೆ ಪ್ರೇರಣೆ ಆಯಿತು. ಜನ ಸೇವೆ ಮಾಡುವ ಅವರ ಮಹತ್ವಾಕಾಂಕ್ಷೆಯ ಪ್ರತಿಫಲವೇ ಅವರ ಗುಡಿಸಲು ಇಂದು ಅನಾಥರ ಪಾಲಿಗೆ ಅರಮನೆಯಾಗಿದೆ.

ಮುಂಬೈನಿಂದ ಹಿಂತಿರುಗಿ ಬಂದು ತನ್ನ ತಾಯಿಯೊಂದಿಗೆ ಬೆಳ್ಳಿಸರ ಎಂಬ ನಿರ್ಜನ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿ ಬದುಕು ಆರಂಭಿಸಿದರು ಪ್ರಭಾಕರ. ಸ್ವಂತ ಆದಾಯವಿರಲಿಲ್ಲ. ಹಾವು ಹಿಡಿಯುವ ವೃತ್ತಿ ನಡೆಸಿದರು. ಅದರಿಂದ ಸಿಗುವ ಬಿಡಿಗಾಸನ್ನು ಪ್ರತಿನಿತ್ಯ ಅನಾಥರಿಗೆ ಊಟ, ಉಪಹಾರ ಸೇರಿದಂತೆ ಇತರ ವ್ಯವಸ್ಥೆ ಮಾಡುತ್ತಿದ್ದಾರೆ. 28ರ ಪ್ರಾಯದಲ್ಲೇ ಅನಾಥರ ಆರೈಕೆಗೆ ತೊಡಗಿದ ಇವರಿಗೆ ಪತ್ನಿ ಸುಜಾತ ಮತ್ತು ತಾಯಿ ಶಾಂತಮ್ಮ ಸಾಥ್ ನೀಡುತ್ತಿದ್ದಾರೆ. ಯೌವನದ ದಿನಗಳಲ್ಲಿ ಪುಟ್ಟ ಸಂಸಾರ, ಐಶಾರಾಮಿ ಬದುಕು ಸಾಗಿಸುವ ಅದೆಷ್ಟೋ ಜನರ ನಡುವೆ ಪ್ರಭಾಕರ ಭಿನ್ನವಾಗಿ ಕಾಣುತ್ತಾರೆ.

ಅನಾಥರ ಸೇವೆ
ಅಡಿಕೆ ಹಾಳೆಯಿಂದ ಮಾಡಿದ ತಟ್ಟಿ (ಗೋಡೆ)ಗಳ ಗುಡಿಸಿಲಿನಲ್ಲಿ ಹರಕು ಕಂಬಳಿ, ಗೋಣಿ ಚೀಲದ ಮೇಲೆ ಮಲಗಿ ರೋಗ ಪೀಡಿತ ಅನಾಥರಿಗೆ ಮಲಗಲು ಮಂಚ, ಹಾಸಿಗೆ, ದಿಂಬುಗಳನ್ನು ವ್ಯವಸ್ಥೆ ಮಾಡಿ ಹಗಲು ರಾತ್ರಿ ಕಾಳಜಿಯಿಂದ ಆರೈಕೆ ಮಾಡುತ್ತಾರೆ. ಜಾತಿ, ಮತ, ಕುಲಗೋತ್ರಗಳ ಪರಿಚಯವಿಲ್ಲದ ಬಾಲಕರು, ವೃದ್ಧರು, ಅಂಗವಿಕಲರು, ಬಸುರಿ-ಬಾಣಂತಿಯರು ಇವರ ಗುಡಿಸಲಿನ ಸದಸ್ಯರು.

ಕೇವಲ ಹಾವು ಹಿಡಿಯುವ ವೃತ್ತಿ ನಡೆಸಿ 20 ಜನ ಅನಾಥರ ಹೊಟ್ಟೆ ತುಂಬುವುದು ಅಸಾಧ್ಯದ ಮಾತಾಗಿದ್ದು, ಅವರ ಜೊತೆ ನೂರಾರು ಕೈಗಳು ಸಹಾಯ ಚಾಚಬೇಕಾಗಿದೆ.  ಅನಾಥರ ಕೈಂಕರ್ಯದಲ್ಲಿ ಅರ್ಪಿಸಿಕೊಂಡ ಪ್ರಭಾಕರ ಅವರಿಗೆ ಹನಿ ಹನಿಯೂ ಹಳ್ಳವೆಂಬಂತೆ ಸಮಾಜದ ದಾನಿಗಳ ನೆರವು ಅಗತ್ಯ. ಆರ್ಥಿಕ ನೆರವು ನೀಡ ಬಯಸುವವರು ಪ್ರಭಾಕರ್ ಅವರ ಮೊಬೈಲ್ ಸಂಖ್ಯೆ 9008640558, 9731991852.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.