ADVERTISEMENT

ಅಪ್ಪಂದಿರ `ಕೆರೆಬೇಟೆ' ಮಕ್ಕಳಿಗೆ ಜಾತ್ರೆ

ಸಂಧ್ಯಾ ಹೆಗಡೆ
Published 15 ಜೂನ್ 2019, 8:58 IST
Last Updated 15 ಜೂನ್ 2019, 8:58 IST
   

'ಕೇಳ್ರಪ್ಪೋ ಕೇಳ್ರಿ ನಾಳೆ ಬೆಡಸಗಾಂವ ಕೆರೆಬ್ಯಾಟಿ ಐತಿ. ಒಂದು ಖೂನಿಗೆ ಬರೀ 50 ರೂಪಾಯ್' ಹೀಗೆಂದು ಪಂಚೆ ಉಟ್ಟು ತಲೆಗೆ ರುಮಾಲು ಸುತ್ತಿದ್ದ ವ್ಯಕ್ತಿಯೊಬ್ಬ ಡಂಗುರ ಬಾರಿಸುತ್ತ ದಾಸನಕೊಪ್ಪ ಸಂತೆಯಲ್ಲಿ ಕೂಗುತ್ತಿದ್ದ. ಹುರುಳಿಕಾಯಿ ಆರಿಸುತ್ತ ಕುಳಿತಿದ್ದ ರೈತನೊಬ್ಬ ಥಟ್ಟನೆ ಎದ್ದು ನಿಂತು ಈ ಧ್ವನಿಯನ್ನೇ ಆಲಿಸಿ `ಓ ಬೆಡಸಗಾಂವ ಕೆರೆಬೇಟೆನಾ?' ಎಂದು ಸಂಭ್ರಮಿಸಿ ನಕ್ಕ.

ಡಂಗುರ ಬಾರಿಸುವವ ಮುಂದೆ ಸಾಗಿದಂತೆ ಸಂತೆಯಲ್ಲಿದ್ದ ಹಳ್ಳಿಗರೆಲ್ಲ ಒಮ್ಮೆ ಅತ್ತಕಡೆ ಕಿವಿಗೊಟ್ಟು ಪರಸ್ಪರ ಪಿಸುಗುಟ್ಟಿಕೊಂಡು ತಮ್ಮ ಕೆಲಸದಲ್ಲಿ ನಿರತರಾದರು.ಕೆರೆಬೇಟೆಗೆ ಹೋಗಬೇಕೆಂಬ ಕುತೂಹಲ ಇಮ್ಮಡಿಸಿತು. ಮರುದಿನ 12 ಗಂಟೆಗೆ ಸರಿಯಾಗಿ ಬೆಡಸಗಾಂವ ಕೆರೆ ದಡ ತಲುಪಿದ್ದಾಯಿತು. ಅಷ್ಟರಲ್ಲೇ ಅಲ್ಲಿ ಸಾವಿರಾರು ಜನ ಜಮಾಯಿಸಿದ್ದರು. ಎಲ್ಲರ ಕೈಯಲ್ಲಿ ಬಿದಿರಿನಿಂದ ಹೆಣೆದ ಒಂದು ಖೂನಿ, ಮೀನು ಹಿಡಿಯುವ ಗಾಳ, ಬಗಲಲ್ಲಿ ಒಂದು ಜೋಳಿಗೆ ಇವಿಷ್ಟಿದ್ದವು.

ಊರಿನ ಮುಖಂಡ ಮುಂದೆ ಬಂದು ಕೆರೆಯ ದಡದಲ್ಲಿರುವ ಭೂತಪ್ಪ ದೇವರಿಗೆ ಪೂಜೆ ಸಲ್ಲಿಸಿದ. ಎಲ್ಲರೂ ಆರತಿ, ಪ್ರಸಾದ ಸ್ವೀಕರಿಸಿದರು. ಸಂಭ್ರಮಕ್ಕೆ ಪಾರವೇ ಇಲ್ಲ, ಒಮ್ಮೆಲೇ ನೂರಾರು ಜನ ಕೆರೆಗೆ ಧುಮ್ಮಿಕ್ಕಿದರು. ಕೈಯಲ್ಲಿದ್ದ ಖೂನಿಯನ್ನು ನೀರಿನಾಳಕ್ಕೆ ಶರವೇಗದಲ್ಲಿ ಬೀಸುತ್ತ ವಿಸ್ತಾರವಾದ ಕೆರೆಯಲ್ಲಿ ಮುಂದೆ ಮುಂದೆ ಸಾಗುತ್ತಿದ್ದ ಬೇಟೆಗಾರರನ್ನು ನೋಡಲು ದಡದಲ್ಲಿ ನಿಂತಿದ್ದವರಿಗೆ ಸಂಭ್ರಮ. ಖೂನಿಗೆ ಸಿಕ್ಕ ಜಲಚರಗಳನ್ನೆಲ್ಲ ಜೋಳಿಗೆಗೆ ಇಳಿಸಿ ಕೆಸರಿನ ಮಧ್ಯೆ ಮತ್ತೆ ಸರ‌್ರನೆ ಖೂನಿ ಬೀಸಿ ಬಲಿ ಪಡೆಯಲು ಸಿದ್ಧವಾಗುತ್ತಿದ್ದರು ಬೇಟೆಗಾರರು.

ADVERTISEMENT

ಈ ಅಪ್ಪಂದಿರ ಖೂನಿಯಲ್ಲಿ ಎಷ್ಟು ಮೀನುಗಳು ಸೆರೆ ಸಿಕ್ಕವು ಎಂದು ಬಾಯಲ್ಲಿ ನೀರೂರಿಸುತ್ತ ದಂಡೆಯ ಮೇಲೆ ನಿಂತಿದ್ದ ಮಕ್ಕಳು, `ನನ್ನ ಅಪ್ಪನಿಗೇ ಹೆಚ್ಚು ಮೀನು ಸಿಕ್ಕಿದೆ' ಎಂದು ತಮ್ಮಲ್ಲೇ ಸ್ಪರ್ಧೆ ಮಾಡಿಕೊಳ್ಳುತ್ತಿದ್ದರು. ಹೀಗೆ ಮೂರು ತಾಸು ನಿರಂತರ ಕೆರೆಯಲ್ಲಿ ಜಲಕ್ರೀಡೆ ನಡೆಯಿತು. ಒಬ್ಬೊಬ್ಬರೇ ಕೆರೆ ದಂಡೆಗೆ ಬಂದು ಜೋಳಿಗೆಯಲ್ಲಿದ್ದ ಮೀನು, ಆಮೆಗಳ ಲೆಕ್ಕ ಹಾಕುತ್ತಿದ್ದರು. ಕೆರೆ ಬಹುತೇಕ ಖಾಲಿ ಆಯಿತೆಂದು ಅರಿತ ಕೊನೆಯ ಯಜಮಾನನೂ ಭಾರವಾದ ಚೀಲ ಹೊತ್ತು ದಡಕ್ಕೆ ಬಂದ. ಜೊಂಡು ಬೆಳೆದು ನಿಂತಿದ್ದ ಕರೆ ನೀರು ಶುಭ್ರವಾಗಿ ಕಾಣುತ್ತಿತ್ತು. ಆದರೆ ಮೀನು ಮೂಡಿಸುವ ಪುಟ್ಟ ಅಲೆಗಳು ಮಾಯವಾಗಿ ಕರೆ ನೀರು ಶಾಂತವಾಗಿತ್ತು.

ಬೇಸಿಗೆಯ ಸಾಮೂಹಿಕ ಜಲಕ್ರೀಡೆ

ಕೆರೆಬೇಟೆ ಅಪ್ಪಟ ಗ್ರಾಮೀಣ ಜಲಕ್ರೀಡೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಪೂರ್ವಭಾಗದ ಬನವಾಸಿ ಹೋಬಳಿಯಲ್ಲಿ ಕೆರೆಬೇಟೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾದಾಗ ಹೆಚ್ಚಿನ ಕೆರೆಗಳಲ್ಲೆಲ್ಲ ಈ ಕೆರೆಬೇಟೆ ಹಬ್ಬ ನಡೆಯುತ್ತದೆ. ಕೆರೆಯ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳುವ ಹಾಗೂ ಕೆರೆಯಲ್ಲಿ ಸಿಗುವ ಸಿಹಿ ನೀರಿನ ಮೀನುಗಳನ್ನು ಹಂಚಿ ತಿನ್ನುವ ಉದ್ದೇಶದಿಂದ ಅನಾದಿಕಾಲದಲ್ಲಿ ಹುಟ್ಟಿಕೊಂಡ ಕೆರೆಬೇಟೆ ಹಬ್ಬ ಇಂದಿಗೂ ಅನೇಕ ಹಳ್ಳಿಗಳಲ್ಲಿ ತನ್ನ ಸಂಭ್ರಮ ಉಳಿಸಿಕೊಂಡು ಬಂದಿದೆ.

ಕೆರೆಬೇಟೆ ಹಬ್ಬಕ್ಕೆ ಕೆರೆ ಸುತ್ತಲಿನ ಮೂರು ನಾಲ್ಕು ಗ್ರಾಮಗಳ ಜನರು ಸೇರುತ್ತಾರೆ. ಕೆರೆಬೇಟೆಗೆ ಎರಡು ದಿನ ಮುಂಚಿತವಾಗಿ ಸಂತೆಯಲ್ಲಿ ಡಂಗುರ ಸಾರಿ ಅಥವಾ ಊರಿನ ತಳವಾರನ ಮೂಲಕ ಪ್ರತಿ ಮನೆಗೆ ಸಂದೇಶ ರವಾನೆಯಾಗುತ್ತದೆ. ಇತ್ತೀಚೆಗೆ ಕರಪತ್ರ ಹಂಚಿ ಹಬ್ಬಕ್ಕೆ ಕರೆಯುವ ಪದ್ಧತಿಯೂ ಬಂದಿದೆ. ನಿಗದಿಯಾದ ದಿನದಂದು ಅಂದಿನ ಕೃಷಿ ಕಾಯಕ ಬಿಟ್ಟು ಊರಿನ ರೈತರೆಲ್ಲ ಕೆರೆ ಬಳಿ ಸೇರುತ್ತಾರೆ. ಬನವಾಸಿ ಭಾಗದ ಪ್ರತಿ ಮನೆಯಲ್ಲೂ ಕೆರೆಬೇಟೆಗೆ ಬಳಸುವ ಖೂನಿ ಇದೆ. ಬಿದಿರಿನ ಕಡ್ಡಿ ಹೆಣೆದು ಸಿದ್ಧಪಡಿಸಿದ ಒಂದೇ ಅಳತೆಯ ಖೂನಿಯನ್ನು ಕೆರೆಬೇಟೆ ಹಬ್ಬದ ದಿನ ನೀರಿಗಿಳಿಸುತ್ತಾರೆ.

ಈ ಬಿದಿರಿನ ಪಂಜರದಲ್ಲಿ ಕುಚ್ಚುಮೀನು, ಚೇಳುಮೀನು, ಹಾವುಮೀನು, ಮುರಗೋಡುಮೀನು ಹೀಗೆ ಆರೆಂಟು ಜಾತಿಯ ಮೀನು, ಕೂರ್ಮ ಸುಲಭದಲ್ಲಿ ಬಲಿ ಬೀಳುತ್ತವೆ. ಚೇಳುಮೀನು ತಿನ್ನಲು ಬಲುರುಚಿ. ಆದರೆ ಈ ಮೀನನ್ನು ಹಿಡಿಯಲು ಪರಿಣತಿಯುಳ್ಳವರು ಬೇಕು. ಚೇಳುಮೀನು ಕಚ್ಚಿದಾಗ ಜೀವಕ್ಕೆ ಅಪಾಯವಾದ ಸಂದರ್ಭಗಳೂ ಇವೆ. ಕೆಲವೊಮ್ಮೆ ನೀರಿನಲ್ಲಿರುವ ಹಾವು ಖೂನಿಯೊಳಗೆ ಸೇರಿಕೊಂಡು ಕಚ್ಚುವ ಅಪಾಯವೂ ಎದುರಾಗುತ್ತದೆ. ಆದರೆ ಸಾಮೂಹಿಕ ಜಲಕ್ರೀಡೆಯ ಖುಷಿಯಲ್ಲಿ ಇವೆಲ್ಲವೂ ಗೌಣ.

ಬನವಾಸಿ ಸಮೀಪದ ನೂರೂರು ಕೆರೆ 60 ಎಕರೆ ವಿಸ್ತೀರ್ಣದಲ್ಲಿದೆ. ನರೂರು ಕೆರೆಬೇಟೆಯೆಂದರೆ 2-3ಸಾವಿರ ಜನರು ಸೇರುವ ಪುಟ್ಟ ಜಾತ್ರೆ. ಸುತ್ತಣ ಗ್ರಾಮಸ್ಥರು ಮಾತ್ರವಲ್ಲ ಸೊರಬ, ಹಾನಗಲ್, ಶಿರಾಳಕೊಪ್ಪ ಭಾಗದ ಉತ್ಸಾಹಿಗಳು ದೌಡಾಯಿಸುತ್ತಾರೆ. ಪರ ಊರಿನಿಂದ ಬರುವವರು ಪ್ರತಿ ಖೂನಿಗೆ ನಿಗದಿಪಡಿಸಿದಷ್ಟು ಹಣಕೊಟ್ಟು ಕೆರೆಗೆ ಇಳಿಯಬೇಕು ಎಂಬ ಅಲಿಖಿತ ನಿಯಮವಿದೆ ಎನ್ನುತ್ತಾರೆ ಸ್ಥಳೀಯ ನಾಗಪ್ಪ ನಾಯ್ಕ.

ಇತ್ತೀಚಿನ ವರ್ಷಗಳಲ್ಲಿ ಕೆಲವಷ್ಟು ಕೆರೆಗಳಲ್ಲಿ ಬಲೆಬೀಸಿ ಮೀನು ಹಿಡಿಯುವ ಪದ್ಧತಿ ಬಂದಿದ್ದರಿಂದ ಕೆರೆಬೇಟೆ ಕಡಿಮೆಯಾಗಿದೆ. ಮತ್ತೆ ಕೆಲವಷ್ಟು ಕೆರೆಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಮೀನು ಸಾಕಣೆ ಟೆಂಡರ್ ನೀಡಿ ಆದಾಯ ಮಾಡಿಕೊಳ್ಳುತ್ತಿದೆ. ಇಂತಹ ಕೆರೆಗಳಲ್ಲಿ ಬೇಟೆಯಾಡಲು ಬೇಟೆಗಾರ ಟೆಂಡರ್‌ದಾರನಿಗೆ ಶುಲ್ಕ ಕೊಡಬೇಕು. ಅದೇನೇ ಇರಲಿ, ಕೆರೆಬೇಟೆ ಹಬ್ಬಗಳ ಸಂಖ್ಯೆ ತುಸು ಇಳಿಮುಖವಾದರೂ ಹಬ್ಬದ ಸಡಗರ ಮಾಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.