ADVERTISEMENT

ಅಮೃತಾಪುರದ ಈಶ್ವರ, ಶಾರದೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ತರೀಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದಲ್ಲಿ ಇರುವ ಹೊಯ್ಸಳರ ಕಾಲದ ಶ್ರೀ ಅಮೃತೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧ. ಇಲ್ಲಿನ ಕೆತ್ತನೆ ಶಿಲ್ಪಗಳಂತೂ ವಿಶಿಷ್ಟ.
ಹೊಯ್ಸಳರ ಅರಸರು ಕಟ್ಟಿಸಿದ್ದ ಈ ಭವ್ಯ ಶಿಲ್ಪಕಲೆಯ ದೇವಾಲಯದ ಹೊರ ಆವರಣದಲ್ಲಿ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ವರ್ಣಿಸುವ ದೃಶ್ಯಾವಳಿಗಳು ಗಮನ ಸೆಳೆಯುತ್ತವೆ.

ಸಾಮಾನ್ಯವಾಗಿ ಶಿವನ ಆಲಯಗಳಲ್ಲಿ ಶಾರದಾ ದೇವಿಯನ್ನು ಕಾಣಲು ಸಾಧ್ಯವಿಲ್ಲ. ಆದರೆ ಇಲ್ಲಿ ಶಿವನ ದೇವಾಲಯದಲ್ಲಿ ವಿದ್ಯಾಧಿದೇವತೆ ಶಾರದೆ ಇದ್ದಾಳೆ. ಆಕೆ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬುದು ಭಕ್ತರ ಅಚಲ ನಂಬಿಕೆ. ಹೀಗಾಗಿ ದೇವಿಯ ಸಮ್ಮುಖದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಬರುವ ಭಕ್ತರ ಸಂಖ್ಯೆ ಗಣನೀಯವಾಗಿದೆ.

ವಿರಳಾತಿ ವಿರಳ ಮತ್ತು ಅಪರೂಪ ವಿಶಿಷ್ಟ ಕೆತ್ತನೆಗಳ ಶಾರದೆ ಕ್ಷೇತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ಮಾದರಿಯ ವಿಗ್ರಹ ಬೇರೆಲ್ಲೂ ಇಲ್ಲ ಎಂದೂ ಹೇಳಲಾಗುತ್ತದೆ.
ದೇಗುಲದ ನಿರ್ಮಾಣದ ಹಿನ್ನೆಲೆ: ಹೊಯ್ಸಳ ಅರಸ ಎರಡನೇ ವೀರಬಲ್ಲಾಳನ ಮಹಾ ದಂಡನಾಯಕನಾಗಿದ್ದ ಅಮಿತೇಯ ನಾಯಕ ಅಪರಿಮಿತ ಶೂರ. ರಾಜನ ಪರಮಾಪ್ತ.

ರಾಜ ಈತನಿಗೆ ಪ್ರೀತಿಯಿಂದ `ಅಮೃತ ದಂಡನಾಯಕ~ ಎಂದು ನಾಮಕರಣ ಮಾಡಿದ್ದ.
`ಹೊಯ್ಸಳ~ರು ಮತ್ತು ಅವರ ಕಡುವೈರಿ  `ಗುರ್ಜರ~ರ ನಡುವೆ ಕ್ರಿ.ಶ. 1192ರಲ್ಲಿ ನಡೆದ ಘನ ಘೋರ ಕದನದಲ್ಲಿ ಅಮೃತ ದಂಡನಾಯಕ ಮೋಸದಿಂದ ಹತ್ಯೆಯಾಗುತ್ತಾನೆ. ಪರಮ ಸ್ನೇಹಿತನನ್ನು ಕಳೆದುಕೊಂಡ ಎರಡನೇ ವೀರಬಲ್ಲಾಳ ಆತನ ನೆನಪಿಗಾಗಿ ಪ್ರಸ್ತುತ ದೇವಾಲಯವನ್ನು ಕ್ರಿ.ಶ. 1196ರಲ್ಲಿ ನಿರ್ಮಿಸಿದನೆಂದು ಇಲ್ಲಿನ ಶಾಸನ ಹೇಳುತ್ತದೆ.

52 ಚಿತ್ತಾಕರ್ಷಕ ಕಂಬಗಳು, 42 ವೈವಿಧ್ಯಮಯ ಭುವನೇಶ್ವರಿಗಳು ಮತ್ತು 250 ವಿಶಿಷ್ಟ ಕೆತ್ತನೆಯ ಸಣ್ಣ ಗೋಪುರಗಳನ್ನೊಳಗೊಂಡ ದೇವಾಲಯವನ್ನು ನೆಲ ಮಟ್ಟದಲ್ಲಿ ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ.

ನೇಪಾಳದ ಗಂಡಕಿ ನದಿಯಿಂದ ತರಲಾದ ಅಗ್ನಿ ಸಾಲಿಗ್ರಾಮವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದರಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿಯನ್ನು ತುಂಬಲಾಗಿದೆ ಎಂದು ಶಾಸನದಲ್ಲಿ ವಿವರಿಸಲಾಗಿದೆ.

ಈ ಸಾಲಿಗ್ರಾಮದ ಮೇಲೆ ಪ್ರತಿ ವರ್ಷ ಮಕರ ಸಂಕ್ರಮಣದ ದಿನ ಮಾತ್ರ ಸೂರ್ಯನ ಕಿರಣ ಬೀಳುತ್ತದೆ. ಈ ಸೋಜಿಗವನ್ನು ಕಣ್ಣಾರೆ ಕಾಣಲು ಸಾವಿರಾರು ಆಸ್ತಿಕರು ಬರುತ್ತಾರೆ. ತ್ರಿಮೂರ್ತಿಗಳು ಇಲ್ಲಿರುವ ಕಾರಣವಾಗಿಯೇ ಶಾರದೆ, ಲಕ್ಷ್ಮಿ ಮತ್ತು ಪಾರ್ವತಿಯ ವಿಗ್ರಹಗಳೂ ಇಲ್ಲಿವೆ.

ಅಗ್ನಿ ಸಾಲಿಗ್ರಾಮ ಆಗಿರುವುದರಿಂದ ಇಲ್ಲಿನ ಶಿವಲಿಂಗಕ್ಕೆ ತ್ರಿಕಾಲ ಪೂಜೆ ನಡೆಯುತ್ತದೆ. ಸುಮಾರು ಎರಡು ನೂರು ವರ್ಷಗಳ ಹಿಂದೆ ಹಚ್ಚಿಡಲಾಗಿದ್ದ ನಂದಾದೀಪ ಇಂದಿಗೂ ಉರಿಯುತ್ತಿರುವುದು ಮತ್ತೊಂದು ಸೋಜಿಗ.

ಶಿವಮೊಗ್ಗದ ಕಡೆಯಿಂದ ಬರುವವರು ತರೀಕೆರೆಯಿಂದ ಹಳಿಯೂರು ಮೂಲಕ 10 ಕೀ.ಮಿ. ದೂರದ ಅಮೃತಾಪುರ ತಲುಪಬಹುದು. ಖಾಸಗಿ ಬಸ್ಸಿನ ಸೌಕರ್ಯವಿದೆ. ಆದರೆ ತಂಗಲು ವಸತಿ ಮತ್ತು ಊಟದ ವ್ಯವಸ್ಥೆ ಇರುವುದಿಲ್ಲ.

ದೇವಾಲಯದ ಇತಿಹಾಸ, ದೇವಾಲಯದ ಹೊರ ಆವರಣದಲ್ಲಿ ಕೆತ್ತನೆ ಮಾಡಿರುವ ಮಹಾಭಾರತ, ರಾಮಾಯಣ ಹಾಗೂ ಭಗವದ್ಗೀತೆಯ ದೃಶ್ಯಾವಳಿಯನ್ನು ಪ್ರವಾಸಿಗರಿಗೆ ವಿವರಿಸಲು ಕೇಂದ್ರ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಮಾರ್ಗದರ್ಶಿ ಸೇವೆ ಲಭ್ಯ.

ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡಿಸಲು ರೂ 30, ರುದ್ರಾಭಿಷೇಕಕ್ಕೆ ರೂ 30 ಮತ್ತು ಶಾಶ್ವತ ರುದ್ರಾಭಿಷೇಕಕ್ಕೆ 1 ಸಾವಿರ ರೂ, ಶಾರದಾದೇವಿಯ ಕುಂಕುಮಾರ್ಚನೆಗೆ ರೂ 30 ಮತ್ತು ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ರೂ 101 ನಿಗದಿಪಡಿಸಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.