ADVERTISEMENT

ಎಲ್ಲಿಂದಲೋ ಬಂದವರು: ಇವರು ಕರ್ನಾಟಕದಲ್ಲಿರುವ ಬಾಂಗ್ಲಾ ನಿರಾಶ್ರಿತರು

ಸುದೇಶ ದೊಡ್ಡಪಾಳ್ಯ
Published 16 ಡಿಸೆಂಬರ್ 2019, 5:14 IST
Last Updated 16 ಡಿಸೆಂಬರ್ 2019, 5:14 IST
ಬಾಂಗ್ಲಾ ನಿರಾಶ್ರಿತರ ಬದುಕು
ಬಾಂಗ್ಲಾ ನಿರಾಶ್ರಿತರ ಬದುಕು   

ತಮ್ಮದಲ್ಲದ ತಪ್ಪಿಗಾಗಿ ದೇಶ ಬಿಟ್ಟವರು ಹೆಸರೇ ಗೊತ್ತಿಲ್ಲದ ಊರನ್ನು ತಮ್ಮದೆಂದು ಹೇಳಿಕೊಳ್ಳಬೇಕಾಯಿತು. ಅಪರಿಚಿತ ಪರಿಸರದಲ್ಲಿ ಹೊಸದಾಗಿ ಬೇರು ಬಿಟ್ಟು, ಸಾವಿರಾರು ಮೈಲು ದೂರದ ಹಳ್ಳಿಗಳಲ್ಲಿರುವ ಹಳೆಯ ಬೇರುಗಳನ್ನು ಹುಡುಕುವ ಬಾಂಗ್ಲಾದೇಶದ ನಿರಾಶ್ರಿತರ ನೋವು–ನಲಿವಿನ ಕಥನವನ್ನು ಸುದೇಶ ದೊಡ್ಡಪಾಳ್ಯ ಇಲ್ಲಿ ಅಕ್ಷರರೂಪಕ್ಕೆ ಇಳಿಸಿದ್ದಾರೆ.

ಮಳೆ ಇಲ್ಲದೆ ಬೆಂಗಾಡಿನಂತಿದ್ದ ಪ್ರದೇಶವನ್ನು ದಾಟಿ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿದಾಗ ಕಾರಿನ ಚಾಲಕ ಸೈಯ್ಯದ್‌ ‘ತುಂಗಭದ್ರಾ ಕಾಲುವೆ ಹರಿದ ಮೇಲೆ ಇಲ್ಲಿ ಎಷ್ಟು ಬದಲಾವಣೆ ಆಗಿದೆ ನೋಡಿ. ಕುಡಿಯುವ ನೀರಿಗೂ ಹಾಹಾಕಾರವಿದ್ದ ಇಲ್ಲಿನ ಒಣಭೂಮಿಯೆಲ್ಲಾ ಗದ್ದೆಯಾಗಿಹೋಗಿದೆ’ ಎಂದು ಭತ್ತದ ಪೈರಿನತ್ತ ಕೈ ತೋರಿಸಿ ಹೇಳಿದನು. ಮೊದಲ ಬಾರಿಗೆ ಸಿಂಧನೂರಿಗೆ ಹೋಗುತ್ತಿದ್ದ ನನಗೆ ಈ ಬದಲಾವಣೆಯನ್ನು ಗ್ರಹಿಸಲು ಸಾಧ್ಯವಿರಲಿಲ್ಲ.

ಆದರೆ ಇಲ್ಲಿಯ ಬದಲಾದ ಚಿತ್ರಗಳು ಸೈಯ್ಯದ್‌ ಅಚ್ಚರಿಗೆ ಪೂರಕವಾಗಿದ್ದಿರಬಹುದು. ಸಿ.ಡಿ ಪ್ಲೇಯರ್‌ಗಳನ್ನು ಅಳವಡಿಸಿಕೊಂಡು ಕನ್ನಡ ಚಿತ್ರಗೀತೆಗಳನ್ನು ಇಡೀ ಜಗತ್ತಿಗೆ ಉಚಿತವಾಗಿ ಬಿತ್ತರಿಸುತ್ತಾ ಓಡಾಡುತ್ತಿದ್ದ ನೂರಾರು ಟ್ರ್ಯಾಕ್ಟರ್‌ಗಳು, ಅವುಗಳ ಮೈಮೇಲೆ ಮನೆದೇವರು, ಮಾಲೀಕ, ಆತನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಹೆಸರು ಮತ್ತು ಊರಿನ ವಿಳಾಸವೆಲ್ಲ ನಮೂದಾಗಿತ್ತು. ಅಲ್ಲಿ ಸಮಾಜದ ಏಳಿಗೆಯ ಸಂಕೇತಗಳು ನಾನಾ ಬಗೆಯಲ್ಲಿ ಪ್ರತಿಫಲಿಸುತ್ತಿದ್ದವು. ರಸ್ತೆಗಳಲ್ಲಿ ಲೆಕ್ಕವಿಲ್ಲದಷ್ಟು ಮೋಟಾರು ಸೈಕಲ್‌ಗಳು ಗಡಿಬಿಡಿಯಿಂದ ಓಡಾಡುತ್ತಿದ್ದವು. ಸೈಯ್ಯದ್‌ ಗ್ರಹಿಸಿದಂತೆ ಸಿಂಧನೂರು ಬದಲಾವಣೆ ಕಂಡಿದ್ದರೆ ಸಂತೋಷದ ಸುದ್ದಿಯೇ.

ಸಿಂಧನೂರಿಗೆ ನಾನು ತೆರಳಿದ್ದು ಈ ಬದಲಾವಣೆಗಳನ್ನು ಗಮನಿಸಲು ಅಲ್ಲ. ನಲವತ್ತೈದು ವರ್ಷಗಳ ಹಿಂದೆ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಅಲ್ಲಿ ನೆಲೆ ಕಳೆದುಕೊಂಡು ಇಲ್ಲಿ ನೆಲೆ ನಿಂತಿರುವ ‘ಬಾಂಗ್ಲಾದೇಶ ನಿರಾಶ್ರಿತರು’ ಏನು ಮಾಡುತ್ತಿರಬಹುದೆಂಬ ಕುತೂಹಲದಿಂದ. ಅವರು ನೆಲೆಸಿದ್ದ ಕ್ಯಾಂಪಿನ ವಿಳಾಸವನ್ನು ಪತ್ತೆ ಮಾಡಲು ಸೈಯ್ಯದ್‌ ಅಲ್ಲಲ್ಲಿ ಕಾರು ನಿಲ್ಲಿಸಿ ನಾಲ್ಕಾರು ಜನರಲ್ಲಿ ವಿಚಾರಿಸುತ್ತಾ ಬಾಂಗ್ಲಾ ಕ್ಯಾಂಪ್‌ ತಲುಪಿದಾಗ ಖುಷಿಯಾಯಿತು. ವಿಭಿನ್ನವೆನಿಸುವ ಜೋಪಡಿಗಳು, ಅವುಗಳ ಚಾವಣಿಗೆ ಜೊಂಡಿನ ಕಲಾತ್ಮಕ ಹೊದಿಕೆ, ಮನೆಯಂಗಳದಲ್ಲಿ ಅಡ್ಡಾಡುತ್ತಿದ್ದ ಹತ್ತಾರು ಕೋಳಿಗಳು, ಕಂಬಕ್ಕೆ ಬಿಗಿದಿದ್ದ ಮೇಕೆ, ದನ, ಕುರಿಗಳು. ಇಡೀ ಕ್ಯಾಂಪನ್ನು ಸುತ್ತುವರಿದ ಭತ್ತದ ಪೈರು.

ಕುಪ್ಪಸ ಧರಿಸದೇ ಮೈಗೆ ಸೀರೆ ಸುತ್ತಿಕೊಂಡು ಓಡಾಡುತ್ತಿದ್ದ ವೃದ್ಧೆಯರು. ಕರಾವಳಿಯ ಮೀನುಗಾರರಂತೆ ನಿಲುವಂಗಿ ಇಲ್ಲದೆ ಸೊಂಟಕ್ಕೆ ಪಂಚೆ ಸುತ್ತಿಕೊಂಡ ವೃದ್ಧರು. ಒಟ್ಟಿನಲ್ಲಿ ಸಿಂಧನೂರಿಗೆ ಸಂಬಂಧಿಸಿಲ್ಲದ ‘ಸಂಸ್ಕೃತಿ’ ಅಲ್ಲಿ ಅನಾವರಣಗೊಂಡಿತ್ತು. ಪ್ರಶಾಂತ ಪರಿಸರದಲ್ಲಿ ಭತ್ತದ ಪೈರುಗಳನ್ನು ಸರಿಸುತ್ತಾ ನಮ್ಮತ್ತ ಬಂದ ಬಿಮಲ್‌ ಮಂಡಲ್‌ ಎನ್ನುವವರನ್ನು ‘ಈಗ ಸಿಂಧನೂರಿಗೆ ಚೆನ್ನಾಗಿ ಹೊಂದುಕೊಂಡಿದ್ದೀರಾ? ಬದುಕು ಹೇಗಿದೆ?’ ಎಂದು ಪ್ರಶ್ನಿಸಿದಾಗ ತುಸು ಹೊತ್ತು ಯೋಚಿಸಿ ಕಲಿತಿದ್ದ ಕನ್ನಡದಲ್ಲಿ ‘ಹೌದು, ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಚೆನ್ನಾಗಿದ್ದೇವೆ’ ಎಂದು ಮೌನವಾದರು. ನಾನು ನನ್ನ ವೃತ್ತಿಯ ಅನುಭವ ಮತ್ತು ಕೌಶಲವನ್ನೆಲ್ಲ ಬಳಸಿಕೊಂಡು ಅವರನ್ನು ನೆನಪಿನಾಳಕ್ಕೆ ಕರೆದೊಯ್ಯುವ ಹೊತ್ತಿಗೆ ಕೆಲವು ಗಂಟೆಗಳು ಕಳೆದಿದ್ದವು.

‘ಅದೊಂದು ಕರಾಳ ರಾತ್ರಿ. ಮನುಷ್ಯರ್‍ಯಾರಿಗೂ ಅಂತಹ ರಾತ್ರಿಗಳು ಬರಬಾರದು’ ಎಂದು ನಿಧಾನಕ್ಕೆ ನೆನಪಿನಂಗಳಕ್ಕೆ ಇಳಿದರು. ‘ಬಾಂಗ್ಲಾದೇಶ ವಿಮೋಚನಾ ಯುದ್ಧ ತೀವ್ರಗೊಂಡಿತ್ತು... ಯುದ್ಧಗಳೆಂದರೆ ನಿಮಗೆ ಎಷ್ಟು ವಿವರಿಸಿದರೂ ಅರ್ಥವಾಗುವುದಿಲ್ಲ... ಅದು ಕೇವಲ ಎರಡು ದೇಶಗಳ ಸೈನಿಕರ ನಡುವಿನ ಕಾದಾಟವಲ್ಲ. ಯಾವುದೋ ಮೂಲೆಯಲ್ಲಿ ಮುಗ್ಧವಾಗಿ ಕುಳಿತ ಜನರನ್ನೂ ಈ ಯುದ್ಧ ಬಿಡುವುದಿಲ್ಲ. ಜನರನ್ನು ದೋಚುವ ಗುಂಪುಗಳು, ಅತ್ಯಾಚಾರವೆಸಗುವ ಮಂದಿಯೆಲ್ಲಾ ಆಗ ಜಾಗೃತರಾಗುತ್ತಾರೆ. ಮಾನವೀಯ ಮೌಲ್ಯಗಳು ಇಲ್ಲವಾಗುವ ಕ್ಷಣವದು. ನಮ್ಮ ಸೋದರ, ಸೋದರಿಯರ, ನೆಂಟರ ಮನೆಗಳೆಲ್ಲಾ ಲೂಟಿಯಾದವು. ಪರಸ್ಪರ ಹೇಳಿಕೊಳ್ಳಲಾಗದಂತಹ ಘೋರ ಘಟನೆಗಳು ನಡೆದು ಹೋದವು.

ಮನೆಯಂಗಳದಿಂದ ಹೊರ ಬಂದವರತ್ತ ಸೈನಿಕರ ಗುಂಡು ಕತ್ತಲಲ್ಲೂ ಹಾರಿತ್ತು. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಿಡುಗಡೆಗೊಳ್ಳದಿದ್ದರೆ ನಾಳೆಯ ಕನಸೇ ಇಲ್ಲವೆನಿಸಿತ್ತು. ಆ ಸಂಜೆ ಮುಳುಗಿ ಕತ್ತಲು ಆವರಿಸತೊಡಗಿತು. ಭಾರತ ತಲುಪುವ ಯತ್ನಕ್ಕೆ ಸಿದ್ಧರಾದೆವು. ನೀರು ನಿಂತ ಗದ್ದೆಗಳಲ್ಲಿ ಕಾಲೂರುತ್ತಾ ಕತ್ತಲೆಯೊಳಗೆ ದಾರಿ ಹುಡುಕಿ ಹೊರಟಾಗ ಪರಿಸ್ಥಿತಿ ಭಯಾನಕವಾಗಿತ್ತು. ಅಂಬೆಗಾಲಿಡುತ್ತಿದ್ದ ಎಳೆಗೂಸುಗಳನ್ನು ಎತ್ತಿಕೊಂಡು, ಹಸುಗೂಸುಗಳು ಅಳುವ ಸದ್ದು ಯಾರಿಗೂ ಕೇಳದಂತೆ ಬಾಯಿಗೆ ಚಿಂದಿ ಬಟ್ಟೆಯನ್ನು ಭದ್ರವಾಗಿ ತುರುಕಿ ಸಾಗಿದೆವು’ ಹೀಗೆ ಬಿಮಲ್‌ ಮಂಡಲ್‌ ಹೇಳುತ್ತಿದ್ದರು. ಈ ವಿವರಗಳನ್ನು ಕೇಳಲು ನನಗೆ ಅಂಜಿಕೆಯಾಗತೊಡಗಿತು. ಆದರೆ ಭಾವೋದ್ವೇಗಕ್ಕೊಳಗಾದ ಬಿಮಲ್‌ ಮಾತು ಮುಂದುವರಿಸಿದರು.

‘ನಮ್ಮ ಕುಟುಂಬ ಭಾರತದ ಗಡಿಗೆ ಬಂದು ನಿಲ್ಲುವ ಹೊತ್ತಿಗೆ ಸಾವಿರಾರು ಕುಟುಂಬಗಳು ಅಲ್ಲಿ ಜಮಾಯಿಸಿದ್ದವು. ಎಲ್ಲರ ಕೈಯಲ್ಲೂ ಸಣ್ಣ ಪೆಟ್ಟಿಗೆ, ತಲೆ ಮೇಲೆ ಬಟ್ಟೆಗಂಟು ಇದ್ದವು. ನೋಂದಣಿ ಕೇಂದ್ರಗಳ ಮುಂದೆ ಸರತಿ ಸಾಲಲ್ಲಿ ನಿಂತು ಪಾಸ್‌ ಪಡೆದೆವು. ಇಷ್ಟರಲ್ಲಾಗಲೇ ಲಕ್ಷಾಂತರ ನಿರಾಶ್ರಿತರು ನಮ್ಮಂತೆಯೇ ಬಾಂಗ್ಲಾ ತೊರೆದು ಭಾರತಕ್ಕೆ ವಲಸೆ ಬಂದಿದ್ದರು. ಸ್ವಲ್ಪಕಾಲ ತಾತ್ಕಾಲಿಕ ಕ್ಯಾಂಪ್‌ವೊಂದರಲ್ಲಿ ಉಳಿದೆವು. ಕ್ಯಾಂಪ್‌ನ ಅಧಿಕಾರಿಗಳು ನಮ್ಮನ್ನು ಕರೆದು ಮೈಸೂರು ರಾಜ್ಯಕ್ಕೆ ಹೋಗುವಂತೆ ಕಟ್ಟಪ್ಪಣೆ ವಿಧಿಸಿದರು. ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಹಟ ಹಿಡಿದೆವು. ಅಧಿಕಾರಿಗಳು ನಮ್ಮ ಮಾತನ್ನು ಕಿವಿಮೇಲೆ ಹಾಕಿಕೊಳ್ಳಲೇ ಇಲ್ಲ. ಪ್ರಾಣಿಗಳಂತೆ ದರದರನೆ ಎಳೆದು ಲಾರಿಗೆ ತುಂಬಿದರು.

ನಾವು ಕೆಲವು ದಿನಗಳ ಪ್ರಯಾಣದ ನಂತರ ಸಿಂಧನೂರಿನಿಂದ ಹದಿನಾಲ್ಕು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಪ್ರದೇಶವನ್ನು ತಲುಪಿದೆವು. ಕಣ್ಣು ಹಾಯಿಸಿದಷ್ಟೂ ಕಪ್ಪುನೆಲ. ಜಾಲಿಗಿಡಗಳ ಜಂಗಲ್‌. ಹುಡುಕಿದರೂ ಹಸಿರು ಕಾಣಿಸುತ್ತಿರಲಿಲ್ಲ. ಅಂಥ ಪ್ರದೇಶದಲ್ಲಿ ನಮಗೆ ಶೆಡ್‌ಗಳು ಸಿದ್ಧವಾಗಿದ್ದವು’ ಇಷ್ಟು ಹೇಳುವ ಹೊತ್ತಿಗೆ ಬಿಮಲ್‌ ಮಂಡಲ್‌ ದುಗುಡಕ್ಕೆ ಒಳಗಾದರು. ಬಿಮಲ್‌ ಮಂಡಲ್‌ ಹುಟ್ಟಿದ್ದು, ಬಾಲ್ಯ ಕಳೆದದ್ದು, ಓದಿದ್ದು, ಯೌವನಕ್ಕೆ ಕಾಲಿಟ್ಟಿದ್ದು, ಕೃಷಿ ಮಾಡುವುದನ್ನು ಕಲಿತದ್ದು ಎಲ್ಲವೂ ಬಾಂಗ್ಲಾದಲ್ಲೇ. ಹೀಗಾಗಿ ಕ್ಯಾಂಪಿಗೆ ಬಂದ ಆರಂಭದ ದಿನಗಳಲ್ಲಿ ರಾತ್ರಿ ನಿದ್ರೆ ಬರುತ್ತಿರಲಿಲ್ಲ.

ಕಣ್ಣು ಮುಚ್ಚಿದರೆ ಸಾಕು; ತಾವು ಆಡಿ ಬೆಳೆದ ಕೇರಿ, ಈಜು ಕಲಿತ ಕೆರೆ, ಈಜಿನ ಖುಷಿ ಕೊಟ್ಟ ನದಿ, ಓದಿದ ಶಾಲೆ, ಬಾಲ್ಯದ ಗೆಳೆಯರು, ಅಕ್ಕರೆಯಿಂದ ಬೆಳೆಸಿದ ಮರ, ಗಿಡಗಳು, ಹಸು, ಎಮ್ಮೆಗಳು, ಪೂರ್ವಜರನ್ನು ಅಮರವಾಗಿಸುವ ಮನೆಗಳೆಲ್ಲವೂ ನೆನಪಾಗಿ ಮನಸ್ಸನ್ನು ಭಾರವಾಗಿಸುತ್ತಿದ್ದವು. ತಂದೆಗೆ ಗದ್ದೆಯಲ್ಲಿ ಬೆಳೆದು ನಿಂತಿದ್ದ ಭತ್ತ, ತಾಯಿಗೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು, ಎಮ್ಮೆಗಳು ನೆನಪಾಗಿ ಕಾಡತೊಡಗಿದವು. ತಂಗಿ, ತಮ್ಮನಿಗೆ ಹಿತ್ತಲಿನಲ್ಲಿ ಬೆಳೆದಿದ್ದ ಹೂವು, ಹಣ್ಣು, ತರಕಾರಿ ಗಿಡಗಳು ನೆನಪಾಗುತ್ತಿದ್ದವು. ಬಿಮಲ್‌ ಮಂಡಲ್‌ ಕುಟುಂಬದ ಪ್ರತಿಯೊಬ್ಬರ ಕಣ್ಣಲ್ಲೂ ನೆನಪು ಹೆಪ್ಪುಗಟ್ಟಿತ್ತು. ಆದರೂ ಇವರು ಕನ್ನಡದ ನೆಲದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಯಿತು.

ಬಿಮಲ್‌ ಮಂಡಲ್‌ ಕ್ಯಾಂಪ್‌ಗೆ ಬಂದ ಹೊಸತರಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಹೇಳುವ ಉತ್ಸಾಹ ತೋರಿಸಿದರು. ನಾನು ಮೈಯಲ್ಲ ಕಿವಿಯಾಗಿಸಿಕೊಂಡು ಕುಳಿತೆ. ‘ನಾವು ಸ್ಥಳೀಯರ ಹೊಲಕ್ಕೆ ಕೂಲಿಗೆ ಹೋದೆವು. ಮಧ್ಯಾಹ್ನ ಊಟದ ಸಮಯ. ಒಂದು ಗುಂಪು ನಮ್ಮದು. ಮತ್ತೊಂದು ಕನ್ನಡಿಗರದು. ನಮಗೆ ಉಪ್ಪು ಬೇಕಿತ್ತು. ನಾನು ಗುಂಪಿನಿಂದ ಎದ್ದವನು ಕೆಲವು ಹೆಜ್ಜೆಯಷ್ಟು ಸಮೀಪದಲ್ಲೇ ಇದ್ದ ಕನ್ನಡಿಗರ ಗುಂಪಿನತ್ತ ನಡೆದೆ. ನಾನು ಏನ್ನನ್ನೋ ಕೇಳಲು ಬಂದಿದ್ದೇನೆ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡರು. ನಾನು ಬಂಗಾಳಿಯಲ್ಲಿ ಉಪ್ಪು ಬೇಕು ಎಂದು ಕೇಳಿದೆ.

ಕನ್ನಡಿಗರಿಗೆ ನಾನು ಏನು ಕೇಳಿದೆ ಎನ್ನುವುದು ತಿಳಿಯಲಿಲ್ಲ. ನಾನು ಮತ್ತೆ ಉಪ್ಪು ಬೇಕು ಎಂದೆ. ಅವರು ತಮ್ಮ ಮುಂದೆ ಇದ್ದ ಪಾತ್ರೆಯನ್ನು ತೆಗೆದು ಪ್ರೀತಿಯಿಂದಲೇ ನನ್ನ ಕೈಗಿತ್ತರು. ನಾನು ನೋಡಿದೆ. ಅದರ ತುಂಬ ಮಜ್ಜಿಗೆ ಇತ್ತು! ನಾನು ಕೇಳಿದ್ದು ಉಪ್ಪು; ಅವರು ಕೊಟ್ಟಿದ್ದು ಮಜ್ಜಿಗೆ. ನನಗೆ ತುಂಬಾ ನಿರಾಶೆ ಆಯಿತು. ಆದರೂ ಅದನ್ನು ತೋರಿಸಿಕೊಳ್ಳದೆ ಮಜ್ಜಿಗೆ ಇದ್ದ ಪಾತ್ರೆಯನ್ನು ನಮ್ಮವರಿಗೆ ಕೊಟ್ಟೆ. ಎಲ್ಲರೂ ಹಂಚಿಕೊಂಡು ಕುಡಿಯುತ್ತಿದ್ದಾಗ ಕನ್ನಡಿಗರ ಮುಖದಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾದ ಭಾವವಿತ್ತು’ ಎಂದು ಬಿಮಲ್‌ ನೆನಪಿಸಿಕೊಂಡು ಜೋರಾಗಿ ನಕ್ಕರು. ನಾನು ಸಹ ಅವರೊಂದಿಗೆ ಸೇರಿಕೊಂಡೆ.

‘ನಾವು ಆರಂಭದ ದಿನಗಳಲ್ಲಿ ಅನುಭವಿಸಿದ ನೋವು, ಅವಮಾನ, ಸಂಕಟಗಳನ್ನು ನಿಮಗೆ ಹೇಗೆ ಅರ್ಥ ಮಾಡಿಸಲಿ?’ ಬಿಮಲ್‌ ಅಂತರ್ಮುಖಿಯಾದರು. ‘..... ಬಾಂಗ್ಲಾ ಪುಟ್ಟ ದೇಶವಾದರೂ ನೂರೈವತ್ತಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಹೀಗಾಗಿ ನದಿಗಳ ದೇಶ ಎನ್ನುವ ಖ್ಯಾತಿಯೂ ಇದೆ. ಆದರೆ ಇಲ್ಲಿ? ಮಳೆ ಬಂದರೆ ಮಾತ್ರ ನೀರು! ತಿನ್ನಲು ಮೀನು ಇಲ್ಲದಂತಹ ಸ್ಥಿತಿ. ನಿಮಗೆ ಗೊತ್ತಿರಬಹುದು; ನಮಗೆ ಊಟಕ್ಕೆ ಮೀನು ಇರಲೇಬೇಕು. ಅಲ್ಲಿ ಪ್ರತಿ ಮನೆಗೂ ಹೊಂಡ ಇರುತ್ತವೆ.

ಸಂಜೆ ಅಡುಗೆ ಹೊತ್ತಿಗೆ ಹೊಂಡ ಇಲ್ಲವೆ ನದಿಗೆ ಹೋಗಿ ಬಲೆ ಬೀಸಿ ಮೀನು ಹಿಡಿದು ತರುತ್ತಿದ್ದೆವು’ ಎಂದು ಬಿಮಲ್‌ ತಮ್ಮ ಪ್ರೀತಿಯ ಸೊನಾರ್‌ ಬಾಂಗ್ಲಾ (ಸುವರ್ಣ ಬಾಂಗ್ಲಾ)ವನ್ನು ನೆನೆದು ಕಣ್ಣು ತುಂಬಿಕೊಂಡರು. ಬಾಂಗ್ಲಾದಲ್ಲಿ ಭತ್ತ ಬೆಳೆಯುವುದು ಎಂದರೆ ಕಟಾವು ಮಾಡಿದ ಜಮೀನನ್ನು ಉಳುಮೆ ಮಾಡಿ ಪೈರನ್ನು ನಾಟಿ ಮಾಡುವುದಷ್ಟೆ. ಅಲ್ಲಿ ಇವರಿಗೆ ಕೃಷಿ ಶ್ರಮ ಎನ್ನುವುದಕ್ಕಿಂತ ಖುಷಿಯಾಗಿಯೇ ಇತ್ತು. ಅಲ್ಲಿಯ ಭೂಮಿ ಫಲಭರಿತವಾಗಿತ್ತು. ಏಕೆಂದರೆ ಅಲ್ಲಿ ವಿಪರೀತ ಮಳೆ. ನದಿಗಳು ಉಕ್ಕಿ ಹರಿಯುತ್ತವೆ. ಪ್ರವಾಹ ಹೊಸ ಮಣ್ಣನ್ನು ತಂದು ಗದ್ದೆಯಲ್ಲಿ ಬಿಟ್ಟು ಹೋಗುತ್ತದೆ. ಸುಮ್ಮನೆ

ಭೂಮಿಯನ್ನು ಕೆರೆದು ಬೀಜವನ್ನು ಎಸೆದು ಬಂದರೂ ಸಾಕು; ಫಸಲು ಖಾತ್ರಿ. ಆದರೆ ಇಲ್ಲಿನ ಕೃಷಿ ಪದ್ಧತಿಯೇ ಬೇರೆ. ಹೊಲವನ್ನು ಬಿತ್ತನೆಗೆ ಹದಗೊಳಿಸಬೇಕು. ಬಿತ್ತಬೇಕು. ಆಗಾಗ ಕಳೆ ತೆಗೆಯಬೇಕು. ಗೊಬ್ಬರ ಹಾಕಬೇಕು. ಕೀಟನಾಶಕ ಸಿಂಪಡಿಸಬೇಕು. ದಿನನಿತ್ಯ ಒಂದಿಲ್ಲೊಂದು ಕೆಲಸಕ್ಕಾಗಿ ಜಮೀನಿಗೆ ಹೋಗಲೇಬೇಕು. ಇಲ್ಲಿ ಬಿಮಲ್‌ಗೆ ಕೃಷಿ ಸವಾಲಾಗಿತ್ತು. ‘ನಮಗೆ ಒಣಭೂಮಿಯಲ್ಲಿ ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ. ಕೃಷಿ ಅಧಿಕಾರಿ ಬಂದರು. ಏನೇನು ಬೆಳೆಯಬಹುದು, ಎಷ್ಟು ಆದಾಯ ಗಳಿಸಬಹುದು ಎನ್ನುವ ಬಗ್ಗೆ ತಿಳಿಸಿಕೊಟ್ಟರು. ಎತ್ತುಗಳ ಕೊರಳಿಗೆ ನೊಗವಿಟ್ಟು ಹೊಲದಲ್ಲಿ ನೇಗಿಲು ಹೂಡಿ ಹತ್ತಿ ಬೀಜವನ್ನು ಬಿತ್ತಿದೆವು.

ಮೊದಲ ಬೆಳೆಯೇ ಕೈ ಕೊಟ್ಟಿತು. ಏತಕ್ಕಾದರೂ ಗೊತ್ತು ಗುರಿ ಇಲ್ಲದ ಊರಿಗೆ ಬಂದುಬಿಟ್ಟೆವೋ ಎಂದು ಪರಕೀಯ ಭಾವನೆಯಿಂದ ಕುಗ್ಗಿಹೋದೆವು. ಮತ್ತೆ ಕೃಷಿ ಅಧಿಕಾರಿ ಬಂದು ಧೈರ್ಯ ತುಂಬಿದರು. ಮತ್ತೆ ಹೊಲದತ್ತ ಮುಖ ಮಾಡಿದೆವು. ಎರಡು, ಮೂರನೇ ವರ್ಷವೂ ಬೆಳೆ ಲುಕ್ಸಾನು ಆಯಿತು. ಬ್ಯಾಂಕ್‌, ಸಹಕಾರ ಸಂಘ, ಲೇವಾದೇವಿಗಾರರ ಬಳಿ ಸಾಲ ಬೆಳೆಯಿತು. ಚಿಂತೆ ಹೆಚ್ಚಾಯಿತು. ಬಾಂಗ್ಲಾದೇಶಕ್ಕೆ ಓಡಿಹೋಗಬೇಕು ಎನ್ನುವ ಭಾವನೆ ಬಲವಾಯಿತು. ಆದರೆ ಅಲ್ಲಿನ ಭಯಾನಕ ಚಿತ್ರಗಳು ಧುತ್ತನೆ ಕಣ್ಮುಂದೆ ಬಂದವು. ಆ ಯೋಚನೆಯನ್ನು ಕೈ ಬಿಟ್ಟೆವು. ಅನುಭವ ಪಾಠ ಹೇಳಿಕೊಟ್ಟಿತು. ನಾಲ್ಕನೇ ವರ್ಷ ಅದ್ಭುತ ಎನ್ನುವಂತೆ ಹತ್ತಿ ಬೆಳೆದೆವು.

ಸಿಂಧನೂರು ಆಸುಪಾಸಿನ ರೈತರಿಗೆ ಸುದ್ದಿ ಮುಟ್ಟಿತು. ತೋಟ ನೋಡಲು ಸಾಲುಗಟ್ಟಿ ನಿಂತರು. ನಮ್ಮ ಅದೃಷ್ಟಕ್ಕೆ ತುಂಗಭದ್ರಾ ನಾಲೆ ಕ್ಯಾಂಪ್‌ನ ಸನಿಹವೇ ನಿರ್ಮಾಣವಾಯಿತು. ಭತ್ತ ಬೆಳೆಯಲು ಶುರು ಮಾಡಿದೆವು’ ಎನ್ನುತ್ತಾ ಬಿಮಲ್‌ ಹೊಸ ಜಾಗದಲ್ಲಿ ಬೇರು ಬಿಟ್ಟ ಕಥೆಯನ್ನು ಹೇಳಿದರು. ಇಷ್ಟರಲ್ಲಿ ಬಿಮಲ್‌ ಮಂಡಲ್‌ಗೆ ಮಾತು ಸಾಕೆನಿಸಿತು. ಪ್ರಸೇನ್‌ ರಪ್ಟಾನ್‌ ಎನ್ನುವವರನ್ನು ಪರಿಚಯಿಸಿದರು. ಪ್ರಸೇನ್‌ ಬಿ.ಟೆಕ್‌ ಪದವೀಧರ. ಸಿಂಧನೂರು ಕ್ಯಾಂಪ್‌ನಲ್ಲಿಯೇ ಹುಟ್ಟಿ, ಬೆಳೆದವರು. ಕನ್ನಡವನ್ನು ಸೊಗಸಾಗಿ ಮಾತನಾಡುತ್ತಾರೆ. ಹಲವಾರು ವರ್ಷಗಳಿಂದ ‘ಅಖಿಲ ಭಾರತ ಬಂಗಾಳಿ ನಿರಾಶ್ರಿತರ ಸಮನ್ವಯ ಸಮಿತಿ’ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಪ್ರಸೇನ್‌ ರಪ್ಟಾನ್‌ ನೀಡಿದ ಮಾಹಿತಿ ಪ್ರಕಾರ ಇಲ್ಲಿ ಒಟ್ಟು ಐದು ಕ್ಯಾಂಪ್‌ಗಳಿವೆ. ಮೊದಲ ಕ್ಯಾಂಪ್‌ನಲ್ಲಿ ಶ್ರೀಲಂಕಾ ಮತ್ತು ಬರ್ಮಾ ದೇಶದಿಂದ ಬಂದ 205 ತಮಿಳು ನಿರಾಶ್ರಿತರ ಕುಟುಂಬಗಳು ನೆಲೆಸಿವೆ. ಇವರ ಸಂಖ್ಯೆ ಎರಡೂವರೆ ಸಾವಿರದಷ್ಟಿದೆ. ಎರಡರಿಂದ ಐದರ ತನಕ ಬಂಗಾಳಿ ಕ್ಯಾಂಪ್‌ಗಳಿವೆ. ಆರಂಭದಲ್ಲಿ ಇಲ್ಲಿ 727 ಕುಟುಂಬಗಳು ನೆಲೆಸಿದವು. ನಾಲ್ಕು ಸಾವಿರ ಇದ್ದ ಜನಸಂಖ್ಯೆ ಈಗ ಹದಿನಾರು ಸಾವಿರ ಮೀರಿದೆ. ನಮಶೂದ್ರರು (ಬಂಗಾಳದಲ್ಲಿ ದಲಿತರನ್ನು ನಮಶೂದ್ರರು ಎಂದು ಕರೆಯಲಾಗುತ್ತದೆ) ಬಹುಸಂಖ್ಯಾತರು. ಬೆರಳೆಣಿಕೆಯಷ್ಟು ಕ್ಷತ್ರಿಯರು, ಬ್ರಾಹ್ಮಣರು, ವೈಶ್ಯರು ಇದ್ದಾರೆ. ಕೇಂದ್ರ ಸರ್ಕಾರವು 5,684 ಎಕರೆ ಖರೀದಿಸಿ ಪ್ರತಿ ಕುಟುಂಬಕ್ಕೂ ಐದು ಎಕರೆ ಭೂಮಿ, ಜೋಡಿ ಎತ್ತು ಮತ್ತು ಚಕ್ಕಡಿಯನ್ನು ನೀಡಿದೆ.

ಕ್ಯಾಂಪ್‌ನಲ್ಲಿ ನೆಲೆ ನಿಂತ ಕೆಲವು ವರ್ಷಗಳ ನಂತರ ಕೃಷಿ ಇವರ ಕೈ ಹಿಡಿಯಿತು. ರೊಕ್ಕಾ ಎಣಿಸಲು ಶುರು ಮಾಡಿದರು. ಬಡತನ ದೂರವಾಯಿತು. ನಡೆದುಕೊಂಡು ಓಡಾಡುತ್ತಿದ್ದವರು ಬೈಕ್‌ ಕೊಂಡುಕೊಂಡರು. ಕೆಲವರು ಟ್ರ್ಯಾಕ್ಟರ್‌ಗಳನ್ನು ಖರೀದಿಸಿದರು. ಜೋಪಡಿಗಳು ಆರ್‌ಸಿಸಿ ಮನೆಗಳಾಗಿ ರೂಪಾಂತರಗೊಂಡವು. ಆರ್ಥಿಕವಾಗಿ ಸಬಲರಾದವರು ಪಶ್ಚಿಮ ಬಂಗಾಳದಲ್ಲಿ ಆಸ್ತಿ ಖರೀದಿಸಿದರು. ಮಕ್ಕಳು ಶಿಕ್ಷಣಕ್ಕಾಗಿ ಕ್ಯಾಂಪ್‌ ಬಿಟ್ಟು ಸಿಂಧನೂರು, ರಾಯಚೂರು, ಬೆಂಗಳೂರಿಗೆ ಹೋದರು. ಹೀಗಾಗಿ ಇಬ್ಬರು ಸರ್ಕಾರಿ ನೌಕರಿ ಪಡೆದಿದ್ದಾರೆ. ಹತ್ತಕ್ಕೂ ಹೆಚ್ಚು ಯುವಕರು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಒಬ್ಬರು ವೈದ್ಯರಾಗಿ ಸಿಂಧನೂರಿನಲ್ಲಿ ಆಸ್ಪತ್ರೆ ತೆರೆದಿದ್ದಾರೆ.

ನಾನು ಪ್ರಸೇನ್‌ರೊಂದಿಗೆ ಕ್ಯಾಂಪಿನಿಂದ ಕ್ಯಾಂಪಿಗೆ ಓಡಾಡುವಾಗ ಜಮೀನಿನ ನಡುವೆ ಪುಟ್ಟ ಪುಟ್ಟ ಹೊಂಡಗಳು ಕಾಣಿಸುತ್ತಿದ್ದವು. ‘ಅರರೆ, ಇದೇನು ಇಷ್ಟೊಂದು ಹೊಂಡಗಳು ಇವೆಯಲ್ಲಾ?’ ಎಂದು ಅಚ್ಚರಿಯಿಂದಲೇ ಪ್ರಸೇನ್‌ ರಪ್ಟಾನ್‌ ಅವರನ್ನು ಹೇಳಿದೆ. ‘ನಿಮಗೆ ಗೊತ್ತಿಲ್ಲ ಎನಿಸುತ್ತದೆ. ಬಾಂಗ್ಲಾದೇಶದಲ್ಲಿ ಪ್ರತಿ ಮನೆಗೂ ಒಂದೊಂದು ಹೊಂಡ ಇರುತ್ತದೆ. ಇದು ನಮ್ಮ ಸಂಸ್ಕೃತಿ. ನಮ್ಮವರು ಎಲ್ಲಿಯೇ ಇದ್ದರೂ ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ಆದ್ದರಿಂದಲೇ ಇಲ್ಲಿ ನಮ್ಮವರು ಜಮೀನಿನಲ್ಲಿ ಹತ್ತರಿಂದ ಇಪ್ಪತ್ತು ಗುಂಟೆಗಳಷ್ಟು ಜಾಗದಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

ಈ ಹೊಂಡಗಳಲ್ಲಿ ಮೀನುಗಳನ್ನು ಸಾಕುತ್ತಾರೆ. ಅದೇ ನೀರನ್ನು ಬಳಸಿ ಹಸುಗಳಿಗೆ ಹಸಿರು ಮೇವು ಬೆಳೆಯುತ್ತಾರೆ. ಇದರಿಂದಾಗಿಯೇ ನಮ್ಮವರ ಬದುಕು ಬಂಗಾರವಾಗಿದೆ. ಬೇಸಿಗೆಯಲ್ಲಿ ಸ್ಥಳೀಯರ ಜಮೀನು ಬರಡಾಗಿದ್ದರೆ, ಪಕ್ಕದಲ್ಲೇ ಇರುವ ನಮ್ಮವರ ಜಮೀನಿನಲ್ಲಿ ಬಗೆಬಗೆಯ ತರಕಾರಿ ಮತ್ತು ಸೊಪ್ಪುಗಳು ನಳನಳಿಸುತ್ತವೆ. ನಮ್ಮವರನ್ನು ನೋಡಿ ಕೆಲವು ಸ್ಥಳೀಯರೂ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದು ಪ್ರಸೇನ್‌ ತಿಳಿಸಿದರು. ದಾರಿ ಮಧ್ಯದಲ್ಲಿ ಜವಳಗೇರಾ ಗ್ರಾಮ ಹುಚ್ಚಪ್ಪ ಮಾತಿಗೆ ಸಿಕ್ಕಿದವರು ‘ಇವ್ರು ಇಂದ್ರಾಗಾಂಧಿ ಜನ ಸಾರ್‌. ಬಾಂಗ್ಲಾ ವಾರ್‌ ಟೈಮ್‌ನಲ್ಲಿ ಇಲ್ಲಿಗೆ ಕರೆತಂದು ಇರಿಸಿದ್ದಾರೆ. ಆಗ ಇವರು ಇಷ್ಟೊಂದು ನಾಜೂಕಾಗಿ ಇರಲಿಲ್ಲ. ನಮ್ಮೊಂದಿಗೆ ಬೆರೆಯುತ್ತಲೂ ಇರಲಿಲ್ಲ.

ಈಗ ಅವರಲ್ಲೂ ವಿದ್ಯಾವಂತರು, ಉದ್ಯೋಗಸ್ಥರು ಇದ್ದಾರೆ. ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರೂ ಆಗಿದ್ದು, ನಮ್ಮಂತೆಯೇ ಇರುತ್ತಾರೆ’ ಎಂದು ಹೇಳಿದರು. ಹುಚ್ಚಪ್ಪನವರ ಅಭಿಪ್ರಾಯವನ್ನು ಅನುಮೋದಿಸಿದ ರೈತ ವಿರೂಪಾಕ್ಷಪ್ಪ ಕುರಿ ‘ನಮ್ಮೂರಿನ ದ್ಯಾಮವ್ವನ ಕಡೆಯವರು ಭತ್ತದ ಸಸಿ ನಾಟಿ ಮಾಡಿದರೆ ಎಕರೆಗೆ ನಲವತ್ತು ಚೀಲ ಇಳುವರಿ ಬರುತ್ತದೆ ಅಂತ ಇಟ್ಟುಕೊಳ್ಳಿ. ಕ್ಯಾಂಪಿನವರು ನಾಟಿ ಮಾಡಿದರೆ ನಲವತ್ತೈದು ಚೀಲದಷ್ಟಾಗುತ್ತದೆ. ಅವರು ಎರಡೆರಡೇ ಭತ್ತದ ಸಸಿಗಳನ್ನು ತೆಗೆದು ಬೇರುಮಟ್ಟಕ್ಕೆ ಹದವಾಗಿ ನಾಟಿ ಮಾಡುತ್ತಾರೆ. ಅವರು ನಾಟಿ ಮಾಡಿದ ಬಳಿಕ ಗದ್ದೆಯ ಬದುವಿನ ಮೇಲೆ ನಿಂತು ನೋಡಿದರೆ ದಾರ ಹಿಡಿದು ನಾಟಿ ಮಾಡಿರಬಹುದು ಎನ್ನುವಷ್ಟರ ಮಟ್ಟಿಗೆ ಸಾಲುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಆದ್ದರಿಂದಲೇ ಅವರಿಗೆ ನಮ್ಮವರಿಗಿಂತ ಕೂಲಿ ಹೆಚ್ಚು ಕೊಡ್ತೀವಿ’ ಎಂದು ಖುಷಿಯಿಂದ ಹೇಳಿದರು.

ADVERTISEMENT

‘ನಿಮ್ಮ ಮತ್ತು ಬಂಗಾಳಿಗಳ ನಡುವಿನ ಸಂಬಂಧ ಹೇಗಿದೆ?’ ಎಂದು ವಿರೂಪಾಕ್ಷಪ್ಪ ಕುರಿಯನ್ನು ಕೇಳಿದೆ. ‘ಅವರು ಮತ್ತು ನಮ್ಮ ನಡುವೆ ಕಾಲುವೆಯ ನೀರಿಗಾಗಿ ಆಗಾಗ ಸಣ್ಣಪುಟ್ಟ ಜಗಳ ನಡೆಯುವುದು, ಪೊಲೀಸ್‌ ಠಾಣೆ ಮೆಟ್ಟಿಲು ಏರುವುದು ಆರಂಭದಲ್ಲಿ ಮಾಮೂಲಿಯಾಗಿತ್ತು. ಈಗ ಅದೂ ಕಡಿಮೆಯಾಗಿದೆ. ನಾವು, ಅವರು ಬಂಧುಗಳಂತೆ ಬದುಕುತ್ತಿದ್ದೇವೆ’ ಎಂದರು. ಪ್ರಸೇನ್‌ ಅವರ ಬೈಕ್‌ ಕ್ಯಾಂಪ್‌ನ ದುರ್ಗಾಮಾತಾ ಗುಡಿಯ ಮುಂದೆ ನಿಲ್ಲುವ ಹೊತ್ತಿಗೆ ಬೀದಿದೀಪಗಳು ಬೆಳಗುತ್ತಿದ್ದವು. ಗುಡಿಯ ಮುಂದೆ ಹತ್ತಾರು ಮಂದಿ ಹಿರಿಯರು ಹರಟುತ್ತಾ ಕುಳಿತಿದ್ದರು. ನನ್ನನ್ನು ಪ್ರಸೇನ್‌ ಅವರಿಗೆ ಪರಿಚಯಿಸಿದರು.

‘ನಾವು ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಿಕ್ಕಿತು. ಯಾವಾಗ ರಾಜ್ಯ ಸರ್ಕಾರಕ್ಕೆ ಒಳಪಟ್ಟೆವೋ ಅಂದಿನಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವುದನ್ನು ನಿಲ್ಲಿಸಲಾಯಿತು. ನಮ್ಮನ್ನು ಪಶ್ಚಿಮ ಬಂಗಾಳದಲ್ಲಿಯೇ ಬಿಟ್ಟಿದ್ದರೆ ನಾವು ಹುಟ್ಟಿದ ಜಾತಿಯಲ್ಲೇ ಇರುತ್ತಿದ್ದೆವು. ಈಗ ಬದಲಾಗಿರುವುದು ಜಾಗವಷ್ಟೆ; ಜಾತಿ ಅಲ್ಲ. ನಮ್ಮ ಒಡಹುಟ್ಟಿದ್ದವರು ಉಳಿದ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಆದರೆ ನಾವು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಿಂದ ಹೇಗೆ ಹೊರಗೆ ಉಳಿಯುತ್ತೇವೆ? ಇದೇ ವಿಷಯವನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ನಾವು ಕ್ಯಾಂಪಿನಲ್ಲಿ ನೆಲೆ ನಿಂತು ನಲವತ್ತೈದು ವರ್ಷಗಳಾದವು. ಆದರೂ ನಮಗೆ ಭೂಮಿಯ ಹಕ್ಕು ಕೊಟ್ಟಿಲ್ಲ. ನಾವು ಉಳುಮೆದಾರರು ಅಷ್ಟೆ. ಕ್ಯಾಂಪ್‌ಗಳು ಕಂದಾಯ ಗ್ರಾಮಗಳಾಗಿಲ್ಲ. ನಮಗೆ ಭೂಮಿಯ ಹಕ್ಕು ನೀಡಿ, ಕ್ಯಾಂಪ್‌ಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದರೆ ಸಾಕು; ನಾವು ಸ್ವರ್ಗದಲ್ಲಿ ಬದುಕುತ್ತಿದ್ದೇವೆ ಅಂದುಕೊಳ್ಳುತ್ತೇವೆ’ ಎಂದು ಹಿರಿಯರು ತಮ್ಮ ನೋವನ್ನು ನಿವೇದಿಸಿಕೊಂಡರು.

ಈ ಕಥೆಯನ್ನು ಕೇಳಿ... ರೇಣುಕಾ ದೇವದುರ್ಗ ತಾಲ್ಲೂಕು ಬೊಮ್ಮನಹಳ್ಳಿಯ ಯುವತಿ. ಶ್ಯಾಮ್‌ ದೇವಡಿ ಬಾಂಗ್ಲಾ ನಿರಾಶ್ರಿತರ ಕ್ಯಾಂಪಿನ ಯುವಕ. ಬೊಮ್ಮನಹಳ್ಳಿ ಬಳಿ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು. ಅಲ್ಲಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪರಿಚಯವಾಯಿತು. ಗುತ್ತಿಗೆದಾರ ಸೇತುವೆ ನಿರ್ಮಿಸಲು ತುಂಬಾ ಸಮಯ ತೆಗೆದುಕೊಂಡ. ಆದರೆ ಒಲಿದ ಹೃದಯಗಳು ‘ಪ್ರೇಮ ಸೇತುವೆ’ ನಿರ್ಮಿಸಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ. ಇಬ್ಬರೂ ಮನೆಯವರಿಗೆ ವಿಷಯ ತಿಳಿಯಿತು. ಸ್ವಲ್ಪ ತಿಕ್ಕಾಟದ ನಂತರ ಎರಡೂ ಕುಟುಂಬಗಳು ಒಪ್ಪಿಗೆ ಕೊಟ್ಟವು. ಇದರೊಂದಿಗೆ ನಿರಾಶ್ರಿತರ ಕ್ಯಾಂಪ್‌ನಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ಮೊದಲ ಅಂತರ್ಜಾತಿ ಮತ್ತು ಅಂತರ್ಭಾಷಾ ‘ಪ್ರೇಮ ವಿವಾಹ’ಕ್ಕೆ ರೇಣುಕಾ ಮತ್ತು ಶ್ಯಾಮ್‌ ದೇವಡಿ ಮುನ್ನುಡಿ ಬರೆದರು.

ಬಂಗಾಳಿಗಳು ರಕ್ತ ಸಂಬಂಧದಲ್ಲಿ ಮದುವೆ ಆಗುವುದಿಲ್ಲ. ಆದ್ದರಿಂದ ಕೆಲವೊಮ್ಮೆ ಮಕ್ಕಳಿಗೆ ಮದುವೆ ಮಾಡುವುದು ಕಷ್ಟವಾಗುತ್ತದೆ. ದೇಶದ ಮೂಲೆ ಮೂಲೆಯಲ್ಲಿರುವ ತಮ್ಮವರ ಕ್ಯಾಂಪ್‌ಗಳಿಗೆ ವಧು, ವರರನ್ನು ಹುಡುಕಿಕೊಂಡು ಹೋಗುತ್ತಾರೆ. ಈಗ ಕ್ಯಾಂಪ್‌ಗಳಲ್ಲಿ ನಾಲ್ಕೈದು ಕನ್ನಡದ ಹುಡುಗಿಯರು, ಬಂಗಾಳಿ ಹುಡುಗರು, ಇದೇ ರೀತಿ ಬಂಗಾಳಿ ಹುಡುಗಿಯರು, ಕನ್ನಡದ ಹುಡುಗರು ಸಂಬಂಧವನ್ನು ಬೆಸೆದಿದ್ದಾರೆ; ಬೆಸೆಯುತ್ತಿದ್ದಾರೆ. ಇಂಥ ಮದುವೆಗಳು ಬಂಗಾಳಿಗಳಿಗೆ ಮಧು–ವರರ ಸಮಸ್ಯೆಗೆ ‘ಪರಿಹಾರ’ದಂತೆ ಗೋಚರಿಸಿವೆ. ಮರುದಿನ ನಾನು ಮತ್ತು ಪ್ರಸೇನ್‌ ಒಂದೆಡೆ ಮಾತಿಗೆ ಕುಳಿತೆವು.

‘ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯ. ಸಾವಿರಾರು ನಿರಾಶ್ರಿತ ಕುಟುಂಬಗಳು ನೂಕುನುಗ್ಗಲ ನಡುವೆ ಛಿದ್ರವಾಗಿ ಹೋದವು. ನನ್ನ ತಂದೆ, ತಾಯಿ ಭಾರತದಲ್ಲೇ ಅತ್ಯಂತ ಪುಟ್ಟ ನಿರಾಶ್ರಿತರ ಪುನರ್ವಸತಿ ಕ್ಯಾಂಪ್‌ ಎನಿಸಿರುವ ಸಿಂಧನೂರಿಗೆ ಬರಬೇಕಾಯಿತು. ನಮ್ಮ ಮನೆಯಲ್ಲಿ ತಂದೆ, ತಾಯಿ ವಿರಾಮದ ವೇಳೆ ಬಂಧು–ಬಳಗವನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು. ನಾನು ಬಾಲ್ಯದಿಂದಲೇ ಅದನ್ನು ಕೇಳುತ್ತಲೇ ಬೆಳೆದೆ. ಪ್ರೌಢಾವಸ್ಥೆಗೆ ಬಂದ ಮೇಲೆ ಬಂಧುಗಳನ್ನು ಕಳೆದುಕೊಂಡ ನೋವು ಮತ್ತು ಅವರನ್ನು ಕಾಣುವ ತವಕ ಉತ್ಕಟವಾಯಿತು. ನಾನು ನಿರಾಶ್ರಿತ ಬಂಗಾಳಿಗಳ ಸಂಘಟನೆಯಲ್ಲಿ ತೊಡಗಿಕೊಂಡ ಮೇಲೆ ಬಂಧುಗಳ ಹುಡುಕಾಟ ಸುಲಭವಾಯಿತು’ ಎನ್ನುತ್ತಲೇ ಪ್ರಸೇನ್‌ ಮತ್ತೊಂದು ಕಥೆಯನ್ನು ನಿರೂಪಿಸತೊಡಗಿದರು.

‘ದೇಶದ ಯಾವುದೇ ನಿರಾಶ್ರಿತರ ಕ್ಯಾಂಪ್‌ಗಳಿಗೆ ಭೇಟಿ ಕೊಟ್ಟರೂ ಅಲ್ಲಿ ನನ್ನ ಬಂಧುಗಳು ಸಿಕ್ಕಿಬಿಡಬಹುದು ಎನ್ನುವ ಧಾವಂತ ಹೆಚ್ಚಾಗುತ್ತಿತ್ತು. ಒಮ್ಮೆ ಒಡಿಶಾ ರಾಜ್ಯದ ಮಲ್ಕಾನ್‌ಗಿರಿ ಪೊಟೆರೊ ವಿಲೇಜ್‌ (ಎಂಪಿವಿ) ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದೆ. ಈ ವೇಳೆ ಸ್ಥಳೀಯರೊಂದಿಗೆ ಮಾತುಕತೆ ಶುರುವಾಯಿತು. ಇಬ್ಬರು ನಿರಾಶ್ರಿತ ಬಂಗಾಳಿಗಳು ಪರಸ್ಪರ ಪರಿಚಯವಾದರೆ ಅವರ ನಡುವೆ ತಮ್ಮ ಬೇರುಗಳನ್ನು ಹುಡುಕುವಂತಹ ಸಂಭಾಷಣೆಯೇ ನಡೆಯುತ್ತದೆ. ಸಮ್ಮೇಳನದಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ನನಗೆ ಅಚ್ಚರಿ ಕಾದಿತ್ತು’.

‘ನನ್ನ ತಾಯಿ ಕಾಳಿದಾಸಿ. ಬಾಂಗ್ಲಾದೇಶದ ಖುಲ್ನಾ ಜಿಲ್ಲೆ ಕಮ್ಖೋಲ ಹುಲು ಗ್ರಾಮದವರು. ಅವರಿಗೆ ಸೋದರ, ಸೋದರಿಯರಿದ್ದರು’ ಎಂದು ನನ್ನ ತಾಯಿಯ ಕುಟುಂಬದ ವಿವರ ನೀಡಿದೆ. ‘ನಿಮ್ಮ ತಾಯಿ ಹೆಸರು ಕಾಳಿದಾಸಿಯೇ?’ ಪರಿಚಿತ ವ್ಯಕ್ತಿ ಒತ್ತಿ ಕೇಳಿದನು. ‘ಹೌದು, ಏಕೆ?’ ಆಶ್ಚರ್ಯದಿಂದಲೇ ಕೇಳಿದೆ. ‘ಮಲ್ಕಾನ್‌ಗಿರಿ ಪೊಟೆರೊ ವಿಲೇಜ್‌ ನಂಬರ್‌ ಏಳರಲ್ಲಿ ಒಬ್ಬ ಮಹಿಳೆ ಕಾಳಿದಾಸಿ ಎನ್ನುವ ಹೆಸರು ಹೇಳುತ್ತಿದ್ದ ನೆನಪು’ ಎಂದು ಆ ವ್ಯಕ್ತಿ ಹೇಳಿದನು. ನನಗೆ ತಳಮಳ ಶುರುವಾಯಿತು. ಆ ಮಹಿಳೆಯ ಬಳಿ ಕರೆದುಕೊಂಡು ಹೋಗುವಂತೆ ವಿನಂತಿಸಿಕೊಂಡೆ. ದಾರಿಯುದ್ದಕ್ಕೂ ಮನಸ್ಸಿನಲ್ಲಿ ತಂದೆ, ತಾಯಿ ಹೇಳುತ್ತಿದ್ದ ಊರಿನ ಕಥೆಗಳು, ಕೂಡುಕುಟುಂಬ, ಗತಕಾಲದ ನೆನಪುಗಳು ಹಾಗೂ ಇನ್ನೂ ಏನೇನೋ ಚಿತ್ರಗಳು ಹಾಯ್ದು ಹೋಗುತ್ತಿದ್ದವು. ಪರಿಚಿತ

ವ್ಯಕ್ತಿ ಹೇಳಿದ ಮಹಿಳೆ ನನ್ನ ಚಿಕ್ಕಮ್ಮನೇ ಆಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡೆ’. ‘ನಿಮ್ಮ ಹೆಸರು..?’ ನನ್ನ ಎದುರಿಗೆ ನಿಂತಿದ್ದ ಮಹಿಳೆಯನ್ನುದ್ದೇಶಿಸಿ ಕೇಳಿದೆ. ‘ಹರಿಮತಿ’–ಐವತ್ತೈದು ವರ್ಷದ ಮಹಿಳೆ ಅನುಮಾನಿಸುತ್ತಲೇ ಉತ್ತರಿಸಿದರು. ‘ಹರಿಮತಿ! ನಿಮ್ಮ ಹೆಸರು ಹರಿಮತಿಯೇ?’ ಖಚಿತಪಡಿಸಿಕೊಳ್ಳುವ ಧ್ವನಿಯಲ್ಲಿ ಕೇಳಿದೆ. ‘ಹೌದು, ಏಕೆ ಹೀಗೆ ಕೇಳುತ್ತಿದ್ದೀರಿ? ನೀವು ಯಾರು?’ ಹರಿಮತಿ ಯಾವುದೇ ಭಾವನೆಗಳನ್ನು ಹೊರಹಾಕದೆ ಕೇಳಿದರು. ‘ನಿಮಗೆ ಬಾಂಗ್ಲಾದೇಶದ ಖುಲ್ನಾ ಜಿಲ್ಲೆ ಕಮ್ಖೋಲ ಹುಲು ಗ್ರಾಮದ ಕಾಳಿದಾಸಿ...’ ಎಂದು ನಾನು ಮಾತು ಪೂರ್ಣಗೊಳಿಸುವ ಮುನ್ನವೇ– ‘ಹೌದು, ಆಕೆ ನನ್ನಕ್ಕ. ನಿಮಗೆ ಹೇಗೆ ಗೊತ್ತು?’ ಸ್ವಲ್ಪ ಉದ್ವೇಗ ಮತ್ತು ಕುತೂಹಲದಿಂದ ಅವಸರವಾಗಿಯೇ ಕೇಳಿದರು.

‘ನಾನು ಅವರ ಮಗ. ಕರ್ನಾಟಕದ ಸಿಂಧನೂರು ಕ್ಯಾಂಪ್‌ನಲ್ಲಿದ್ದೇನೆ’ ಎನ್ನುವಷ್ಟರಲ್ಲಿ ಚಿಕ್ಕಮ್ಮ ನನ್ನನ್ನು ಬಿಗಿದಪ್ಪಿಕೊಂಡರು. ಚಿಕ್ಕಮ್ಮ ಮತ್ತು ನಾನು ಜೋರಾಗಿ ಅಳುತ್ತಿದ್ದೆವು. ಇದನ್ನು ನೋಡುತ್ತಿದ್ದವರ ಕಣ್ಣಲ್ಲೂ ನೀರು. ಆ ಸನ್ನಿವೇಶವನ್ನು ಪದಗಳಲ್ಲಿ ಹೇಗೆ ತಿಳಿಸಲಿ? ಚಿಕ್ಕಮ್ಮ ಸಿಕ್ಕಿದ್ದು ನಲವತ್ತು ವರ್ಷಗಳ ನಂತರ! ಇಷ್ಟರಲ್ಲಿ ನನ್ನ ತಾಯಿ ಕಾಳಿದಾಸಿ ತೀರಿಕೊಂಡು ಮೂರು ವರ್ಷಗಳಾಗಿದ್ದವು’ ಎಂದು ಪ್ರಸೇನ್‌ ಗದ್ಗದಿತರಾದರು. ಈಗಲೂ ಪ್ರಸೇನ್‌ ತನ್ನವರ ಹುಡುಕಾಟವನ್ನು ನಿಲ್ಲಿಸಿಲ್ಲ. ನಿರಾಶ್ರಿತ ಬಂಗಾಳಿಗಳು ಎಲ್ಲಿಯೇ ಭೇಟಿಯಾದರೂ ಮತ್ತೆ ಅದೇ ಪ್ರಶ್ನೆಗಳು....

‘ಬಾಂಗ್ಲಾದಲ್ಲಿ ನಿಮ್ಮದು ಯಾವ ಜಿಲ್ಲೆ? ಅಲ್ಲಿ ಯಾವ ಊರು? ಈಗ ಯಾವ ಕ್ಯಾಂಪಿನಲ್ಲಿದ್ದೀರಿ? ಅಲ್ಲಿ ಯಾರು ಯಾರು ಇದ್ದಾರೆ? ಒಂದು ವೇಳೆ ನಮ್ಮವರ ಮಾಹಿತಿ ಸಿಕ್ಕರೆ ದಯವಿಟ್ಟು ಕರೆ ಮಾಡಿ...’ ಬಿಮಲ್‌ ಮಂಡಲ್‌, ಪ್ರಸೇನ್‌ ರಪ್ಟಾನ್‌ ಅವರ ಕಥೆಯನ್ನು ಕೇಳಿದ ಮೇಲೆ ಸ್ವಗತದಂತೆ ಹೇಳಿಕೊಂಡೆ: ಜನರಿಗೆ ಬೇಡವಾದ ಯುದ್ಧಗಳು ಸಂಭವಿಸುವುದಾದರೂ ಹೇಗೆ? ಏಕೆ? ಬಹುಶಃ ದೂರದಲ್ಲೆಲ್ಲೋ ಕುಳಿತು ಬಲೆ ಹೆಣೆಯುವ ಶಸ್ತ್ರಾಸ್ತ್ರ ಕಂಪೆನಿಗಳು, ಲಾಭವನ್ನು ಲೆಕ್ಕಹಾಕಿ ಯುದ್ಧವನ್ನು ಪ್ರೋತ್ಸಾಹಿಸುವ ಬಲಾಢ್ಯದೇಶಗಳ ಕೈವಾಡ ಇರಬಹುದೇ? ಅಥವಾ ಧರ್ಮಾಂಧರ ಸಂಕುಚಿತ ಆಲೋಚನೆಗಳು ಇರಬಹುದೇ? ಬಿಮಲ್‌ ಮಂಡಲ್‌ ಹಾಗೂ ಪ್ರಸೇನ್‌ ರಪ್ಟಾನ್‌ ಅವರು ಹೇಳಿದ ವಿವರಗಳನ್ನು ಕೇಳಿದಾಗ ಯುದ್ಧಗಳು ಅಮಾಯಕ ಜನರ ಬದುಕನ್ನು ಛಿದ್ರಗೊಳಿಸುತ್ತವೆ ಎನ್ನುವುದು ಖಚಿತವಾಯಿತು.

(ಕರ್ನಾಟಕ ದರ್ಶನ ಪುರವಣಿಯಲ್ಲಿ ಈ ಲೇಖನ ಜನವರಿ 5, 2016ರಂದು ಪ್ರಕಟವಾಗಿತ್ತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.