ADVERTISEMENT

ಐದು ವರ್ಷಕ್ಕೊಮ್ಮೆ ಅಪೂರ್ವ ಜಾತ್ರೆ

ಆರ್. ಮಂಜುನಾಥ್
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST
ಗುಡ್ಡದರಂಗವ್ವನಹಳ್ಳಿಯಲ್ಲಿನ ಕೊಲ್ಲಾಪುರದಮ್ಮ
ಗುಡ್ಡದರಂಗವ್ವನಹಳ್ಳಿಯಲ್ಲಿನ ಕೊಲ್ಲಾಪುರದಮ್ಮ   

ಚಿತ್ರದುರ್ಗದಿಂದ 6 ಕಿ.ಮೀ ಸಮೀಪದಲ್ಲಿರುವ ಗುಡ್ಡದರಂಗವ್ವನಹಳ್ಳಿ(ಜಿ.ಆರ್.ಹಳ್ಳಿ)ಯಲ್ಲಿ ಇಂದಿನಿಂದ ಕೊಲ್ಲಾಪುರದಮ್ಮನವರ ಜಾತ್ರೆಯ ಸಡಗರ. ಐದು ವರ್ಷಗಳಿಗೆ ಒಂದು ಸಲ ನಡೆಯುವ ಅಪೂರ್ವದ ಜಾತ್ರೆ ಇದು. ಇಂದು ರಾತ್ರಿ ಮದುವಣಗಿತ್ತಿಶಾಸ್ತ್ರದ ಮೂಲಕ ಜಾತ್ರೆ ಆರಂಭ. ನಾಳೆ ರಾಶಿ ಚೆಲ್ಲುವ ಕಾರ್ಯಕ್ರಮ ಮತ್ತು ಜಲಧಿ ಉತ್ಸವ.

ವಿಜಯನಗರ ಸಾಮ್ರಾಜ್ಯದ ಅರಸರ ಆಳ್ವಿಕೆಯ ಕಾಲದಲ್ಲಿ ಅನೇಕ ಅಧೀನ ಪಾಳೇಗಾರಿಕೆಗಳು ಇದ್ದವು. ಅವುಗಳಲ್ಲಿ ಚಿತ್ರದುರ್ಗ ಪಾಳೇಗಾರಿಕೆಯೂ ಒಂದು. ಕ್ರಿ.ಶ. 1565ರಲ್ಲಿ ಜರುಗಿದ ತಾಳಿಕೋಟೆ ಕದನದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನವಾಯಿತು.

ಚಿತ್ರದುರ್ಗ ಪಾಳೇಗಾರಿಕೆಯು ಸ್ವತಂತ್ರವಾಗಿ 211 ವರ್ಷಗಳ ಕಾಲ ಚಿತ್ರದುರ್ಗವನ್ನು ಆಳಿತು. ಈ ಪಾಳೇಗಾರರಲ್ಲಿ ಪ್ರಸಿದ್ಧರಾದವರೆಂದರೆ ಬಿಚ್ಚುಗತ್ತಿ ಭರಮಣ್ಣನಾಯಕ ಮತ್ತು ರಾಜಾವೀರ ಮದಕರಿನಾಯಕ. ಗುಡ್ಡದರಂಗವ್ವನಹಳ್ಳಿಯು ಇವರ ಅಧೀನದಲ್ಲಿ ಇತ್ತು. ಈ ಊರಿಗೆ ಹಲವು ವರ್ಷಗಳ ಹಿಂದೆ  ಚಿತ್ರದುರ್ಗ ಪಾಳೇಗಾರರ ವಂಶದ ರಂಗವ್ವ ಎಂಬ ಮಹಿಳೆಯು ಗುಡ್ಡದಲ್ಲಿ ನೆಲೆಸಿದ್ದರ ಪರಿಣಾಮವಾಗಿ, ಈ ಸ್ಥಳಕ್ಕೆ ಗುಡ್ಡದರಂಗವ್ವನಹಳ್ಳಿ ಎಂಬ ಹೆಸರು ಬಂತು.

ಭೂಲೋಕದಲ್ಲಿ ಕೊಲ್ಲಾಸುರ ಎಂಬ ರಾಕ್ಷಸನು ಜನ್ಮತಾಳಿ ಲೋಕಕಂಟಕನಾದ. ಅವನಿಂದ ತಮ್ಮನ್ನು ಉಳಿಸಿಕೊಳ್ಳಲು ದೇವತೆಗಳು ವೈಕುಂಠಕ್ಕೆ ಹೋಗಿ, ಮಹಾವಿಷ್ಣುವಿನ ಬಳಿ ರಕ್ಷಣೆ ಕೋರಿದರು. ಆಗ ಮಹಾವಿಷ್ಣುವಿನ ಅಪ್ಪಣೆಯಂತೆ ಮಹಾಲಕ್ಷ್ಮಿಯು ಭೂಲೋಕಕ್ಕೆ ಬಂದು ಕೊಲ್ಲಾಸುರನನ್ನು ಸಂಹಾರ ಮಾಡಿದಳು. ಈಕೆಯು ಕೊಲ್ಲಾಸುರನನ್ನು ಸಂಹಾರ ಮಾಡಿದ ಪ್ರದೇಶವು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಎನಿಸಿಕೊಂಡಿತು.

ಈಕೆ ಎಲ್ಲಾ ಗ್ರಾಮಗಳಲ್ಲಿ ಗ್ರಾಮದೇವತೆಯಾಗಿ ನೆಲೆಸಿದಳು. ಅವುಗಳಲ್ಲಿ ಜಿ.ಆರ್.ಹಳ್ಳಿ ಅಥವಾ ಗುಡ್ಡದರಂಗವ್ವನಹಳ್ಳಿಯು ಸಹ ಒಂದು ಎನ್ನುತ್ತದೆ ಪುರಾಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.