ADVERTISEMENT

ಕಲೆಯಲ್ಲಿ ಮೀಯಿಸುವ ಮೀಯ್ಯಾರು

ಪ್ರಸಾದ್ ಶೆಣೈ ಆರ್ ಕೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಕಲೆಯಲ್ಲಿ ಮೀಯಿಸುವ ಮೀಯ್ಯಾರು
ಕಲೆಯಲ್ಲಿ ಮೀಯಿಸುವ ಮೀಯ್ಯಾರು   

‘ದೂರನಾಡಿನ ಹಕ್ಕಿ ಹಾರಿ ಬಾ ಗೂಡಿಗೆ’ ಅಂತ ಮನುಷ್ಯನ್ನೊಬ್ಬ ಆಗಸ ನೋಡುತ್ತ ಹಕ್ಕಿಗಳನ್ನು ಕರೆಯುತ್ತಿದ್ದಾನೆ. ಅಲ್ಲೇ ಪಕ್ಕದಲ್ಲಿ ಕೂತ ಗೊಲ್ಲನೊಬ್ಬನ ಕೊಳಲ ಹಾಡಿಗೆ ಗೋವುಗಳು ನಲಿದು ಹಿಂಡಾಗಿ ಬರುತ್ತಿವೆ. ಮರದಲ್ಲಿ ಕೂತ ಅಳಿಲು, ಹಣ್ಣು ತಿನ್ನುತ್ತ ಇವನ್ನೆಲ್ಲಾ ನೋಡುತ್ತಿದೆ. ಅಷ್ಟೊತ್ತಿಗೆ ಘರ್ಜನೆಯೊಂದು ಕಾಡಿನ ತುಂಬೆಲ್ಲಾ ಮೊಳಗಿ, ಬೊಬ್ಬಿರಿದು ಬರುವ ಹುಲಿಯ ಕೆಂಡಗಣ್ಣಿನ ಮಿಂಚು ಇಡೀ ಕಾಡಲ್ಲಿ ಹೊಳೆದು ಕಾಡೇ ಭೀಕರವಾಗಿ ಕಾಣುತ್ತಿದೆ...

ಇದು ಯಾವುದಾದರೂ ಕಾಡಿನ ಥ್ರಿಲ್ಲರ್ ಕಾದಂಬರಿಯೇ ಅಂತ ಪ್ರಶ್ನೆ ಕೇಳಿ ನೀವು ಅರೆಕ್ಷಣ ಕಾಡಿನ ಜಾಡಿನಲ್ಲಿ ಕಳೆದು ಹೋಗಬಹುದು. ಇದ್ಯಾವ ಕಾದಂಬರಿಯ ಚಿತ್ರಣವೂ ಅಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಿಯ್ಯಾರಿನಲ್ಲಿರುವ ಸಿ.ಇ. ಕಾಮತ್ ಕರಕುಶಲ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಬೆರಗಿನ ಕೈಚಳಕದಲ್ಲಿ ಹುಟ್ಟಿಕೊಂಡ ಕಲಾಕೃತಿಗಳು ಕಟ್ಟಿ ಕೊಡುವಂತಹ ಕಾಡಿನ ಮೋಹಕ ಚಿತ್ರಣ. ಸುಂದರ ಕರಿಕಲ್ಲಿನಲ್ಲಿ, ಮರದ ತುಂಡಿನಲ್ಲಿ, ಲೋಹದ ಹಾಳೆಯಲ್ಲಿ ಚಿತ್ರಗಳಾಗುತ್ತ, ಆಕೃತಿಗಳು ರೂಪುಗೊಳ್ಳುತ್ತಾ ಹೋದಂತೆ ಮನಸ್ಸು ಅಲ್ಲೇ ಕಳೆದುಹೋಗುತ್ತದೆ.

ಕಾಷ್ಠ ಕಲೆ ಹಾಗೂ ಪ್ರಾಚೀನ ಶಿಲ್ಪ ಕಲೆಗೊಂದು ಹೊಸ ಬೆಳಕು ತೋರಿಸಬೇಕು. ಎಳೆಯರ ಬೊಗಸೆಗಂಗಳಲ್ಲಿ ಹುಟ್ಟಿಕೊಂಡ ಕಲ್ಪನೆಗಳೆಲ್ಲಾ ಶಿಲ್ಪಗಳಾಗಿ, ಮೂರ್ತಿಗಳಾಗಿ, ಕೆತ್ತನೆಯ ಸೊಗಸಿನಲ್ಲಿ ಮಾತಾಡುವ ಜೀವಗಳಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿದ್ದೇ ತಡ, ಕೆನರಾ ಬ್ಯಾಂಕ್‍ನ ಸಂಸ್ಥಾಪಕರಾದ ಸಿ.ಇ.ಕಾಮತ್ ಅವರು 1997ರಲ್ಲಿ ಕಾರ್ಕಳದ ಕರಿಯಕಟ್ಟೆಯಲ್ಲಿ ತಮ್ಮ ಕನಸುಗಳ ಸಾಕಾರಕ್ಕೆ ನಾಂದಿ ಇಟ್ಟರು.

ADVERTISEMENT


 

ಮಿಯ್ಯಾರು ಅನ್ನೋ ಪುಟ್ಟ ಊರಿನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಹೊಸ ಕಲಾಕೇಂದ್ರವೊಂದು ರೂಪುಗೊಂಡಿತು. ಇದೀಗ ಕೆನರಾ ಬ್ಯಾಂಕ್ ವರ್ಷಂಪ್ರತೀ 50 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿ ಅವರಲ್ಲಿ ಕಲೆಯ ಪ್ರೀತಿ ಹುಟ್ಟಿಸಿ, ಸ್ವಾವಲಂಬಿಯಾಗಿಸುತ್ತಿದೆ. ಕಲೆಯನ್ನೇ ನಂಬಿ ಬದುಕಬಹುದು, ಸಂತೃಪ್ತಿಯ ಜೀವನ ಕಂಡುಕೊಳ್ಳಬಹುದು ಎನ್ನುವ ಭರವಸೆ ಹುಟ್ಟಿಸಿದ ಈ ಸಂಸ್ಥೆಯಿಂದ ಈವರೆಗೂ 700 ವಿದ್ಯಾರ್ಥಿಗಳು ಕಲೆ, ಶಿಲೆಯ ಪಾಠ ಕಲಿತು ಸ್ವಾವಲಂಬಿಗಳಾಗಿದ್ದಾರೆ.

ದೇಶದೆಲ್ಲೆಡೆ ವಿದ್ಯಾರ್ಥಿಗಳ ಶಿಲ್ಪಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಕೋಲ್ಕತ್ತ, ಮುಂಬೈ ಹಾಗೂ ನಮ್ಮ ನಾಡಿನ ವಿವಿಧ ನಗರಗಳಿಂದ ಪ್ರತೀ ವರ್ಷವೂ ಕಲೆಯ ಸೆಳೆತಕ್ಕೊಳಗಾಗಿ ಮಿಯ್ಯಾರಿನತ್ತ ಬರುವ ಯುವಕರ ಸಂಖ್ಯೆ ಜಾಸ್ತಿಯಾಗುತ್ತಿದೆ.

ಕೇಂದ್ರದ ಆವರಣದೊಳಗೆ ಕಾಲಿಟ್ಟ ಕೂಡಲೇ ಗೋಡೆಮಣ್ಣಿನ ಕೆಂಪಿನಲ್ಲಿ ಕಿರೀಟ ತೊಟ್ಟು ಮಂದಹಾಸ ಬೀರಿ ಸ್ವಾಗತಿಸುವ ಬಡಗುತಿಟ್ಟಿನ ಯಕ್ಷಗಾನ ವೇಷಧಾರಿಯ ಮಣ್ಣಿನ ಕೆತ್ತನೆಗೆ ಯಾರೇ ಆಗಲಿ ಮಾರು ಹೋಗದಿರಲು ಅಸಾಧ್ಯ. ಇನ್ನೂ ಚೂರು ಮುಂದಕ್ಕೋದರೆ ಕಲ್ಲಿನಲ್ಲೇ ಕೆತ್ತಿರುವ ಗಿಳಿಯೊಂದು ನಮ್ಮನ್ನೇ ನೋಡುತ್ತ ಚೀಂವ್ ಚೀಂವ್ ಎಂದು ಉಲಿದಂತೆ ಕಂಡು ಮನಸ್ಸು ರೆಕ್ಕೆಬಿಚ್ಚುತ್ತದೆ.


 

ಕೋಗಿಲೆಯಿಂದ ಹಿಡಿದು ಕಾಂಗರೂಗಳವರೆಗೂ ಕಾಡುವ ಕಾಡಿನ ಜೀವಲೋಕ ಕಂಡು ಒಂದರೆಕ್ಷಣ ಮೂಕವಿಸ್ಮಿತ. ಮರದ ತೊಗಟೆಯಲ್ಲಿ ಚಿಮ್ಮುವ ಜಿಂಕೆ, ಪುಟ್ಟದೊಂದು ಮರದ ತುಂಡಿನಲ್ಲಿ ನಗುವ ಗಾಂಧೀಜಿ, ನೀರಿನ ಮಹತ್ವವನ್ನು ಜಗತ್ತಿಗೆ ಸಾರಿಹೇಳುವ ಜಲದೇವತೆ, ಶಿಷ್ಯರಿಗೆ ಬಿಲ್ವಿದ್ಯೆ ಕಲಿಸುವ ದೋಣಾಚಾರ್ಯ... ಮೊದಲಾದ ಆಕೃತಿಗಳು ಭವ್ಯವಾಗಿವೆ.

ಪುಟ್ಟ ಊರಿನಲ್ಲಿ ನಿಂತುಕೊಂಡು ಹೊರದೇಶದ ವಿಸ್ಮಯಗಳನ್ನು ಕಲೆಯಲ್ಲಿ ಮೂಡಿಸಿದ, ತಾವು ಕೇಳಿದ ಕತೆಯಲ್ಲಿನ ಪಾತ್ರಗಳನ್ನೇ ಕೆತ್ತಿ ಅದಕ್ಕೆ ಕಲ್ಲಿನಲ್ಲೇ ಜೀವಕೊಟ್ಟ, ಎಳೆಯ ಹುಡುಗರ ಕಲ್ಪನೆ ಅದೆಷ್ಟು ಸುಂದರ ಅಂತನ್ನಿಸದೇ ಇರದು. ಇಲ್ಲಿನ ಇನ್ನೊಂದು ಚೆಂದದ ಕಲಾಕೃತಿ ಎಂದರೆ ಮರದ ಬಣ್ಣದ ರಥ. ಸುಮಾರು 3-4 ಅಡಿ ಉದ್ದವಿರುವ ಈ ರಥ, ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಒಡಮೂಡಿದ ಮುತ್ತಿನಂತಿದೆ. ಯಾವುದಕ್ಕೂ ನಾಲಾಯಕ್ ಅಂತನ್ನಿಸುವ ಸಣ್ಣ ಸಣ್ಣ ಮರದ ತುಂಡುಗಳಲ್ಲೇ ಕಲಾಕೃತಿ ಅರಳಿಸಿದ್ದಾರೆ.

ಈ ಸಂಸ್ಥೆಯಲ್ಲಿ ಕಲೆಯ ಕುರಿತ ಆಸಕ್ತಿಯಿರುವ 17-37 ವರ್ಷ ವಯೋಮಾನದವರಿಗೆ ಶಿಲೆ, ಲೋಹ ಹಾಗೂ ಮಣ್ಣಿನ ಕಲಾಕೃತಿ ಗಳ ರಚನೆಯ ತರಬೇತಿಯನ್ನು ನೀಡಲಾಗುತ್ತದೆ.

ವಿದ್ಯಾರ್ಥಿಗಳು ಬದುಕು ಕಂಡು ಕೊಳ್ಳುವ ಆಸ್ಥೆಯಿಂದ, ಕಲೆಯಲ್ಲಿ ತಾವು ಬೆಳಕು ಪಡೆಯಬೇಕು ಎನ್ನುವ ಹಪಾಹಪಿಯಿಂದ ಪ್ರತೀ ಕ್ಷಣವೂ ಇಲ್ಲಿ ಕಲಿಯುತ್ತಿದ್ದಾರೆ. ವಸತಿ, ಊಟ-ಉಪಚಾರಕ್ಕೂ ಸಂಸ್ಥೆ ಧಾರಾಳದಲ್ಲಿ ಖರ್ಚು ಮಾಡುತ್ತಿದ್ದು ಒಬ್ಬ ಅಭ್ಯರ್ಥಿಗೆ ಒಂದು ಲಕ್ಷದಷ್ಟು ವೆಚ್ಚ ತಗುಲುತ್ತಿದೆ.

‘ಯುವಕರಲ್ಲಿ ಸ್ವಾವಲಂಬಿ ಮನೋಭಾವ ಮೂಡಿಸಿ ಅವರಿಗೆ ಬದುಕು ಕೊಡುವ ಉದ್ದೇಶವೇ ಸಂಸ್ಥೆಯದ್ದು, ವರ್ಷಂಪ್ರತಿ ಸಂಸ್ಥೆ ಯಲ್ಲಿ 15 ಸೀಟುಗಳು ಲಭ್ಯವಿವೆ. ಹೊರ ರಾಜ್ಯಗಳಿಂದಲೂ ಅರ್ಜಿ ಗಳು ಬರುತ್ತಿವೆ. ಬಿಹಾರದಿಂದ ಬಂದ ಯುವಕನೋರ್ವ ಇಲ್ಲಿ ತರಬೇತಿ ಪಡೆದು, ಇದೀಗ ಕುಮಟಾದಲ್ಲಿ ಕಲಾಕೇಂದ್ರ ಆರಂಭಿಸಿ ಸುಮಾರು 20 ಮಂದಿ ಯುವಕರಿಗೆ ಉದ್ಯೋಗ ನೀಡಿದ್ದಾನೆ. ಈ ದಾರಿಯಲ್ಲಿ ನಡೆವವರು ತುಂಬಾ ಮಂದಿ ಇದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಸುರೇಂದ್ರ ಕಾಮತ್ ಹೆಮ್ಮೆಯಿಂದ ನುಡಿಯುತ್ತಾರೆ.

ವಿದ್ಯಾರ್ಥಿಗಳ ಚೆಂದದ ಕಲಾಕೃತಿಗೆ ದೊಡ್ಡ ಮಾರುಕಟ್ಟೆಯೂ ಇದೆ. ವಿದ್ಯಾರ್ಥಿಗಳು ತಯಾರಿಸಿದ ಲೋಹ, ಮರ ಹಾಗೂ ಮಣ್ಣಿನ ವಿಗ್ರಹಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ವಿವಿಧ ಜಾತ್ರೆಗಳಲ್ಲಿ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗುತ್ತದೆ. ಮಾರಾಟದಿಂದ ಬರುವ ಲಾಭದ ಶೇ 25ರಷ್ಟನ್ನು ಕಲಾಕೃತಿ ತಯಾರಿಸಿದ ವಿದ್ಯಾರ್ಥಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ. ಒಂದೊಂದು ಕಲಾಕೃತಿಗೂ ₹30 ಸಾವಿರದವರೆಗೂ ಬೆಲೆ ಇದೆ. ಗಳಿಕೆಯ ಉದ್ದೇಶದಿಂದ ಮಾತ್ರವಲ್ಲದೆ ಬದುಕಿನ ಖುಷಿ ಕಂಡುಕೊಳ್ಳುವುದಕ್ಕೂ ಚೆಂದದ ಕಲಾಕೃತಿಯನ್ನು ಮಾಡುವ ಇಲ್ಲಿನ ವಿದ್ಯಾರ್ಥಿಗಳ ಪ್ರತೀ ಶಿಲ್ಪದಲ್ಲಿಯೂ ಪರಿಶ್ರಮದ ಕಲಾಕುಸುರಿಯಿದೆ, ಕ್ರಿಯಾಶೀಲತೆಯ ಅಂದವಿದೆ, ದೇಶೀಯತೆಯ ನೈಜ ಗಂಧವಿದೆ. ಆ ಶಿಲ್ಪಗಳ ಬೆಡಗು, ಬಿನ್ನಾಣವನ್ನೊಮ್ಮೆ ನೋಡಲು, ಕಲೆಯ ನೈಜತೆಯಲ್ಲಿ ಕಳೆದುಹೋಗಲು ನೀವೂ ಒಮ್ಮೆ ಕಾರ್ಕಳದತ್ತ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.