ADVERTISEMENT

ಗೋಲಗೇರಿ ಗೊಲ್ಲಾಳೇಶ್ವರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಿಂದ 20 ಕಿಮೀ ದೂರದಲ್ಲಿರುವ ಗೋಲಗೇರಿಯಲ್ಲಿದೆ ಗೊಲ್ಲಾಳೇಶ್ವರ ದೇವಸ್ಥಾನ. ಇದನ್ನು ಜನ ಗೋಲಗೇರಿ ಲಿಂಗಯ್ಯನ ಊರು ಎಂದೇ ಕರೆಯುತ್ತಾರೆ.

ದೇವರ ಪ್ರೇರಣೆಯಂತೆ ಸುರಪುರದ ಮುತ್ತು ರತ್ನ ವ್ಯಾಪಾರಿ ಮರಿಯಪ್ಪ ಸಾಹುಕಾರರು ನಿರ್ಮಿಸಿದ ಮೂರು ದ್ವಾರಗಳ ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ತ್ರಿಕಾಲ ಪೂಜೆ, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ರಥೋತ್ಸವ ನಡೆಯುತ್ತದೆ.

ಈ ಭಾಗದಲ್ಲಿ ಇಂದಿಗೂ ಗೊಲ್ಲಾಳೇಶ್ವರ ಸಹಸ್ರಾರು ಜನರ ಮನೆ ದೇವರು, ಹೀಗಾಗಿಯೇ ಗೊಲ್ಲಾಳಪ್ಪ, ಗೊಲ್ಲಾಳೇಶ್ವರ ಮುಂತಾದ ಹೆಸರುಗಳು ಇಲ್ಲಿ ಸರ್ವೇಸಾಮಾನ್ಯ. ಭಕ್ತನೇ ಇಲ್ಲಿ ಭಗವಂತನಾಗಿದ್ದಾನೆ. ಅದಕ್ಕಾಗಿ ಮಹಾ ಶಿವಭಕ್ತ ಗೊಲ್ಲಾಳೇಶ್ವರನಿಗೇ ಇಲ್ಲಿ ಅಗ್ರಪೂಜೆ.

ಕ್ಷೇತ್ರ ಮಹಾತ್ಮೆಯ ಪ್ರಕಾರ ಕುರುಬ ಕುಟುಂಬದ ಡವಳಾರದ ಬಿಲ್ಲುಗ ಮತ್ತು ದುಗ್ಗಳಾದೇವಿಯ ಮಗ ಗೊಲ್ಲಾಳ, ಭಗವಾನ್ ಈಶ್ವರನ ಪರಮ ಭಕ್ತ. ಒಮ್ಮೆ ಶ್ರಿಶೈಲಕ್ಕೆ ತೆರಳುತ್ತಿದ್ದ ನಂದಯ್ಯ ಎಂಬಾತನ ಬಳಿ `ಅಲ್ಲಿಂದ ಬರುವಾಗ ನನಗೊಂದು ಶಿವಲಿಂಗ ತಂದು ಕೊಡು~ ಎಂದು ಬೇಡುತ್ತಾನೆ.
 
ಆದರೆ ನಂದಯ್ಯ ಇದನ್ನು ಮರೆತು ಬಿಡುತ್ತಾನೆ. ಯಾತ್ರೆ ಮುಗಿಸಿ ವಾಪಸ್ ಗೋಲಗೇರಿ ಹತ್ತಿರ ಬರುವಾಗ ಏಕಾಏಕಿ ಗೊಲ್ಲಾಳನ ಮಾತು ನೆನಪಿಗೆ ಬರುತ್ತದೆ. ಅಲ್ಲಿಯೇ ಇದ್ದ ಕುರಿ ಹಿಕ್ಕೆಯನ್ನು ತೆಗೆದುಕೊಂಡು ಗೊಲ್ಲಾಳನಿಗೆ ಕೊಟ್ಟು `ಇದೇ ಶ್ರೀಶೈಲದಿಂದ ತಂದ ಲಿಂಗ~ ಎಂದು ಹೇಳುತ್ತಾನೆ.

ಇದನ್ನು ನಂಬಿದ ಗೊಲ್ಲಾಳ ಗೊಬ್ಬರದ ಗುಂಡಿಯಲ್ಲಿ ನಂದಯ್ಯ ನೀಡಿದ ಹಿಕ್ಕೆ ಇಟ್ಟು ಆತನ ಮಾತಿನಂತೆಯೇ ಭಕ್ತಿಯಿಂದ ಪೂಜಿಸುತ್ತಾನೆ. ಇದನ್ನು ಮೆಚ್ಚಿದ ಶಿವ ಆತನ ಭಕ್ತಿಗೆ ಒಲಿದ ಕಾರಣಕ್ಕಾಗಿ ಶಿವ-ಗೊಲ್ಲಾಳ ಒಂದೇ ಎಂಬ ಭಾವ ಈ ದೇಗುಲಕ್ಕೆ ಬರುವ ಭಕ್ತರದ್ದು.
 

ಸೇವಾ ವಿವರ               (ರೂಪಾಯಿ)

ಶಾಶ್ವತ ರುದ್ರಾಭಿಷೇಕ      1100
ರುದ್ರಾಭಿಷೇಕ                    501
ಪಂಚಾಮೃತ                     251
ಅಭಿಷೇಕ                          101
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.