ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ಬೆಳೆಯುವ ಕೋಕೊ ತುಂಬಾ ರುಚಿಕರ. ಇದಕ್ಕೆ ಕಾರಣ ಈ ಮಣ್ಣು, ನೀರು, ಹವಾಮಾನದ ಗುಣ. 3-4 ದಶಕಗಳ ಹಿಂದೆ ವಿದೇಶಿ ಸಂಸ್ಥೆಗಳು ಇಲ್ಲಿ ಕೋಕೊ ಬೆಳೆಯವಂತೆ ರೈತರನ್ನು ಪುಸಲಾಯಿಸಿದವು, ಬೆಳೆದಿದ್ದನ್ನೆಲ್ಲ ಲಾಭದಾಯಕ ದರದಲ್ಲಿ ಖರೀದಿಸುವ ಆಮಿಷ ಒಡ್ಡಿದವು. ಇದಕ್ಕೆ ಮರುಳಾದ ರೈತರು ಕೋಕೊ ಬೆಳೆದರು.
ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಕೆಲವೇ ವರ್ಷದಲ್ಲಿ ಖಾಸಗಿ ಕಂಪೆನಿಗಳ ಇನ್ನೊಂದು ಮುಖ ಬೆಳಕಿಗೆ ಬರಲಾರಂಭಿಸಿತು. ಇವು ಕರಾವಳಿ ರೈತರು ಬೆಳೆದ ಕೋಕೊ ಬಿಟ್ಟು ಏಕಾಏಕೀ ಕಡಿಮೆ ದರಕ್ಕೆ ಸಿಗುವ ಆಫ್ರಿಕ ದೇಶದ ಕೋಕೊಗಳತ್ತ ಮುಖ ಮಾಡಿದವು.
ಹೀಗಾಗಿ ಇಲ್ಲಿ ಬೆಳೆದ ಕೋಕೊಗೆ ಬೇಡಿಕೆ, ಬೆಲೆ ಇರಡೂ ಇಲ್ಲದಂತಾಯಿತು. ರೈತರು ಕಂಗಾಲಾದರು. ಕೆಲವರು ಆತ್ಮಹತ್ಯೆಗೂ ಮುಂದಾದರು. ಇಂಥ ಸಂದರ್ಭದಲ್ಲಿ ಅವರ ನೆರವಿಗೆ ಬಂತು ಕ್ಯಾಂಪ್ಕೊ. ಆಗ ಮೂಲತಃ ಅಡಿಕೆ ಬೆಳೆಗಾರರ ಸಹಕಾರಿ ಒಕ್ಕೂಟವಾಗಿದ್ದ ಕ್ಯಾಂಪ್ಕೊ ಕೋಕೊ ಖರೀದಿಗೆ ಇಳಿಯಿತು. ಆದರೆ ಖರೀದಿಸಿದ ಮಾಲಿಗೆ ಮಾರುಕಟ್ಟೆ ಸಮಸ್ಯೆ ಎದುರಾಯಿತು.
ವಾರಣಾಸಿ ಸುಬ್ರಾಯ ಭಟ್‌ರವರ ನೇತೃತ್ವದಲ್ಲಿ ರೈತರು ಸಂಘಟಿತರಾಗಿ ಕೇರಳ- ಕರ್ನಾಟಕ ಸರ್ಕಾರಗಳ ಮೇಲೆ ಒತ್ತಡ ತಂದರು, ಅದರ ಫಲವೇ 1987ರಲ್ಲಿ ಪುತ್ತೂರಿನ ಮರಿಲ್ ಎಂಬಲ್ಲಿ ದಕ್ಷಿಣ ಏಷ್ಯಾದ ಅತಿ ದೊಡ್ಡ ಚಾಕೊಲೇಟ್ ಕಂಪೆನಿ ಪ್ರಾರಂಭ. ಭಟ್ಟರೇ ಸ್ಥಾಪಕ ಅಧ್ಯಕ್ಷರಾದರು. ಘಟಕ ಉದ್ಘಾಟಿಸಲು ಆಗಿನ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಪುತ್ತೂರಿಗೆ ಬಂದಿದ್ದರು.
ಹೀಗೆ ಹೋರಾಟದಲ್ಲಿ ಹುಟ್ಟಿ ಬೆಳೆದ ಕ್ಯಾಂಪ್ಕೊಗೆ ಈಗ ಬೆಳ್ಳಿಹಬ್ಬದ ಸಂಭ್ರಮ. ಈ ಕಾಲು ಶತಮಾನದಲ್ಲಿ ಅದು ಹಲವು ಏಳು ಬೀಳುಗಳನ್ನು ಕಂಡಿದೆ. `ಏಷ್ಯಾದಲ್ಲಿ ಅತಿ ದೊಡ್ಡ ಚಾಕೊಲೇಟ್ ಘಟಕ~ ಎಂದು ಕರೆಸಿಕೊಂಡರೂ ಅನುಭವದ ಕೊರತೆಯಿಂದ ಪ್ರಾರಂಭದಲ್ಲಿ ನಷ್ಟ ಅನುಭವಿಸಿತು.
ಆದರೆ ಈಗ ಹಾಗಿಲ್ಲ. ಕೆಎಂಎಫ್ ನಂದಿನಿ, ನೆಸ್ಲೆ, ಕ್ಯಾಡ್ಬೆರಿ ಸೇರಿದಂತೆ ಹಲವು ಕಂಪೆನಿಗಳಿಗೆ ಚಾಕೊಲೇಟ್ ಮತ್ತು ಇತರ ಉತ್ಪನ್ನ ತಯಾರು ಮಾಡಿಕೊಡುತ್ತಿದೆ~ ಎಂದು ಕ್ಯಾಂಪ್ಕೊ ಡಿಜಿಎಂ ಕೃಷ್ಣಕುಮಾರ್ ಅವರು ಹೇಳುತ್ತಾರೆ.
ಕ್ಯಾಂಪ್ಕೊ ಈಗ ರೈತರಿಂದ ವಾರ್ಷಿಕ ಸುಮಾರು 13 ಲಕ್ಷ ಟನ್ ಕೋಕೊ ಖರೀದಿಸುತ್ತಿದೆ. ವಾರ್ಷಿಕ 15 ಕೋಟಿ ರೂಪಾಯಿ ಲಾಭ ಗಳಿಸುತ್ತಿದೆ. ಬೆಳೆಗಾರರು ನೆಮ್ಮದಿ ಕಾಣುವ ಅವಕಾಶ ಕಲ್ಪಿಸಿದೆ. ಹಾಲಿನಿಂದ ತಯಾರಿಸಿದ ಚಾಕಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಹಾಲಿನ ಚಾಕೊಲೇಟನ್ನು ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಇದರದು. ಇಂದು ಒಟ್ಟು ಇಪ್ಪತ್ನಾಲ್ಕು ಬಗೆಯ ಚಾಕೊಲೇಟ್ ತಯಾರಿಸುತ್ತಿದೆ.
ಪ್ರಾರಂಭದಲ್ಲಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳೂ ಕ್ಯಾಂಪ್ಕೊದಲ್ಲಿ ಬಂಡವಾಳ ಹಾಕಿದ್ದವು. ಹೀಗಾಗಿ ಅಧಿಕಾರಿಗಳ ಕೈ ಮೇಲಾಗಿತ್ತು. ಅವರಿಗೆ ದೂರದೃಷ್ಟಿ ಇರಲಿಲ್ಲ, ದುಂದು ಜಾಸ್ತಿಯಾಗಿ ನಷ್ಟ ಅನುಭವಿಸುವಂತಾಯಿತು.
ಆಗ ಅಧ್ಯಕ್ಷರಾಗಿದ್ದ ರಂಗಮೂರ್ತಿ ಅವರು ಮುಂದಾಲೋಚನೆ ಮಾಡಿ ಎರಡೂ ಸರ್ಕಾರಗಳ ಷೇರು ಮರಳಿಸಿದರು. ಸಂಸ್ಥೆಯೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಂಡರು. ಅದರ ನಂತರವೇ ಕ್ಯಾಂಪ್ಕೊ ಗಟ್ಟಿಯಾಯಿತು ಎಂದು ಸ್ಮರಿಸುತ್ತಾರೆ ಹಾಲಿ ಅಧ್ಯಕ್ಷ ಕೊಂಕೋಡಿ ಪದ್ಮಾನಾಭ. ಈಗ ಚಾಕೊಲೇಟ್ ಘಟಕದಲ್ಲಿ ಸುಮಾರು 400 ಜನ ಕೆಲಸ ಮಾಡುತ್ತಾರೆ.
ಇಲ್ಲಿಗೆ ಭೇಟಿ ನೀಡುವವರಿಗೆ ಶನಿವಾರ ಮುಕ್ತ ಅವಕಾಶವಿದೆ. ನೀವು ನೋಡಲು ಬಯಸುವಿರಾದರೆ - 08251 230658 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.