ADVERTISEMENT

ಜೋಪಡಿಯಲ್ಲೇ ಚಿಗುರಿದ ಪ್ರತಿಭೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾ.ಪಂ.ವ್ಯಾಪ್ತಿಯ ಯೇನೆಕಲ್ಲು ಎಂಬ ಪುಟ್ಟ ಗ್ರಾಮದಲ್ಲಿನ ಹೊಳೆ ಬದಿಯಲ್ಲಿನ ಪುಟ್ಟ ಜೋಪಡಿ. ಗೋಡೆಗೆ ಗಾರೆ ಇಲ್ಲದೇ ಈಗಲೋ ಆಗಲೋ ಎನ್ನುತ್ತ ಕನಿಷ್ಠ ಮೂಲಸೌಕರ್ಯದಿಂದಲೂ ವಂಚಿತವಾಗಿರುವ ಈ ಜೋಪಡಿಯಲ್ಲಿ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗುವಿನೊಂದಿಗೆ ಅಮ್ಮನ ಸಂಸಾರ. ಅದಾವುದೋ ಕಾರಣಕ್ಕೆ ಮನೆ ಬಿಟ್ಟು ತೆರಳಿದ್ದ ಯಜಮಾನ ಇಪ್ಪತ್ತೈದು ವರ್ಷವಾದರೂ ಹಿಂದಿರುಗಿಲ್ಲ.

ಕಿತ್ತು ತಿನ್ನುವ ಬಡತನದ ನಡುವೆಯೂ ಮಕ್ಕಳ ಆರೈಕೆ ಮಾಡಿದ ತಾಯಿ ಮೂವರು ಮಕ್ಕಳನ್ನು ಬೆಳೆಸಿದಳು. ಹೆಣ್ಣುಮಕ್ಕಳಿಗೆ ಮದುವೆಯನ್ನೂ ಮಾಡಿದಳು. ಅಂದು ಅಪ್ಪ ಎಂಬ ಮಮತೆಯ ಎರಡಕ್ಷರದ ಆಸರೆಯಿಂದ ವಂಚಿತನಾದ ಪುಟ್ಟ ಬಾಲಕ ಮಂಜುನಾಥ ಪದವಿ ವ್ಯಾಸಂಗದವರೆಗೂ ಕೂಲಿ ನಾಲಿ ಮಾಡಿ ಕಲಿತ. ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಯೊಂದರಲ್ಲಿ ಪ್ರವೇಶ ಪಡೆದು ಇಂದು ಭುವನೇಶ್ವರಕ್ಕೆ ಹೊರಟು ನಿಂತಿದ್ದಾನೆ. ಬುದ್ಧಿ ಬರುವ ಮೊದಲೇ ಕೂಲಿನಾಲಿ ಮಾಡಿ ವಿದ್ಯಾಭ್ಯಾಸ ಮಾಡಿರುವ ಈ ಯುವಕನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಿನ ಹಸ್ತ ಬೇಕಿದೆ.

ಹೀಗಿದೆ ನೋವು-ನಲಿವು
ಸುಮಾರು 30 ವರ್ಷಗಳ ಹಿಂದಿನ ಮಾತು. ರಸ್ತೆಗೆ ಡಾಂಬರು ಹಾಕುವ ಕೂಲಿ ಕೆಲಸ ಮಾಡುತ್ತಿದ್ದ ಸಿದ್ಧನಾಕ ಮತ್ತು ಸುಶೀಲ ದಂಪತಿ ಈ ಗ್ರಾಮದಲ್ಲಿ ನೆಲೆಸಿದರು. ಮೂವರು ಮಕ್ಕಳು ನೀಡಿದ ತಂದೆ ನಾಪತ್ತೆಯಾದ. ಧೃತಿಗೆಡದ ಸುಶೀಲಾ ಅಕ್ಕಪಕ್ಕದ ಮನೆಗಳಲ್ಲಿ ಕೂಲಿ ಕೆಲಸಮಾಡಿ ಮಕ್ಕಳನ್ನು ಬೆಳೆಸಿದರು. ಹಿರಿಯ ಪುತ್ರಿ ನೇತ್ರಾವತಿ ನವೋದಯ ಶಾಲೆಯಲ್ಲಿ ಓದಿ ಪೊಲೀಸ್ ಇಲಾಖೆಗೆ ಸೇರಿದಳು. ತಂಗಿ ರಾಜೇಶ್ವರಿ. ಇವರಿಬ್ಬರ ಮದುವೆಯನ್ನೂ ಸಾಹಸದಿಂದಲೇ ಮಾಡಿದರು ಸುಶೀಲಾ. ಮನೆಯಲ್ಲಿ ಕಿತ್ತು ತಿನ್ನುವ ಬಡತನ.

ಮನೆಯಲ್ಲಿದ್ದ ಪುಟಾಣಿ ಮಂಜುನಾಥ ಯೇನೆಕಲ್ಲು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿದ ನಂತರ ಹೋಟೆಲ್ ಒಂದರಲ್ಲಿ ಪ್ಲೇಟು, ಗ್ಲಾಸ್ ತೊಳೆದು ಹೊಟ್ಟೆ ತುಂಬಿಸಿ ಪುಡಿಗಾಸು ಸಂಪಾದಿಸಿದ. ದೂರದ ಸುಳ್ಯಕ್ಕೆ ಖುದ್ದು ಹೋಗಿ ನವೋದಯ ಶಾಲೆಯ ಅರ್ಜಿ ತಂದು ತುಂಬಿ ಅಲ್ಲಿ ಆಯ್ಕೆಯೂ ಆದ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿ ಅಖಿಲ ಭಾರತ ಮಟ್ಟದ ಸಿಇಟಿ ಪರೀಕ್ಷೆಯಲ್ಲಿ 195ನೇ ರ‍್ಯಾಂಕನ್ನೂ ಗಳಿಸಿದ. ಆದರೆ ಕಾಲೇಜು- ವಿದ್ಯಾರ್ಥಿ ನಿಲಯದ ಶುಲ್ಕ ಕಟ್ಟಲು ಹಣವಿಲ್ಲದ ಕಾರಣ ಪುನಃ ಊರಿಗೆ ವಾಪಸಾಗಿ ಕೂಲಿ ಮಾಡಲು ಆರಂಭಿಸಿದ. ಕೂಲಿ ಮಾಡುತ್ತಲೇ ಬಿ.ಎಸ್ಸಿ ಪದವಿ ಮುಗಿಸಿದ. ಪುಸ್ತಕ ಖರೀದಿಗೆ ಹಣ ಹೊಂದಿಸಲು ಕಂಡುಕೊಂಡ ದಾರಿ ಕಾರ್ಖಾನೆಯೊಂದರಲ್ಲಿ ರಾತ್ರಿ ಪಾಳಿಯ ಉದ್ಯೋಗ. ನಿದ್ದೆಗೆಟ್ಟು ರಾತ್ರಿ ಕಾರ್ಖಾನೆಯಲ್ಲಿ ದುಡಿದರೆ, ಹಗಲಿನಲ್ಲಿ ಅಭ್ಯಾಸ! ಆದರೆ ಅಲ್ಲಿಯೂ ಅದೃಷ್ಟ ಕೈಕೊಟ್ಟಿತು. ಕಾರ್ಖಾನೆಗೆ ಬೆಂಕಿ ಬಿದ್ದು ಅದನ್ನು ಮುಚ್ಚಲಾಯಿತು. ಮತ್ತೆ ಅಲ್ಲಿ ಇಲ್ಲಿ ಕೂಲಿ.

ಬಿ.ಎಸ್ಸಿ ಪದವಿಯಲ್ಲಿ 84 ಶೇಕಡಾ ಅಂಕದೊಂದಿಗೆ 2013ರಲ್ಲಿ ಉತ್ತೀರ್ಣವಾದಾಗ ಇನ್ನೂ ಓದುವ ಆಸೆ. ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದ. ಅಖಿಲಭಾರತ ಮಟ್ಟದ ಐಐಟಿ ಪರೀಕ್ಷೆಗೆ ಹಾಜರಾದ. ಅಖಿಲಭಾರತ ಮಟ್ಟದ ಪರೀಕ್ಷೆಯಲ್ಲಿ 3137ನೇ ರ‌್ಯಾಂಕ್ ಪಡೆದು ಸಂದರ್ಶನದ ಕರೆ ಬಂದಾಗ ಮಂಜುನಾಥನ ಸಂತಸಕ್ಕೆ ಪಾರವೇ ಇಲ್ಲ. ಆತನ ಪ್ರಯಾಣದ ಖರ್ಚನ್ನು ಮಿತ್ರರೊಡಗೂಡಿ ಭರಿಸಿದರು. ದೂರದ ಕಾನ್ಪುರ ಹಾಗೂ ಮುಂಬಯಿಯಲ್ಲಿ  ಎರಡು ಹಂತದ ಸಂದರ್ಶನ ಎದುರಿಸಿ ಭುವನೇಶ್ವರದ ಐಐಟಿಯಲ್ಲಿ ಆರು ವರ್ಷ ಅವಧಿಯ ಎಂ.ಎಸ್ಸಿ ಹಾಗೂ ಪಿ.ಎಚ್.ಡಿ. ವ್ಯಾಸಂಗಕ್ಕೆ ಪ್ರವೇಶ ಪಡೆದ ಮಂಜುನಾಥ.
ಅದಾಗಲೇ ಬೆಂಗಳೂರಿನ ಐಐಎಸ್‌ನಲ್ಲೂ ಸಂದರ್ಶನಕ್ಕೆ ಕರೆ ಬಂದಿತ್ತು. ಆ ವೇಳೆಗಾಗಲೇ ನಡೆದ ಎರಡು ಸಂದರ್ಶನದಲ್ಲಿ ಭುವನೇಶ್ವರದ ಐಐಟಿಗೆ ಆತ ಆಯ್ಕೆಯಾಗಿದ್ದ. ಈತನಲ್ಲೆಗ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳಿವೆ.

ಮೂರನೆಯ ತರಗತಿಯ ವಿದ್ಯಾರ್ಥಿ ಅಂದು ಹೋಟೆಲ್ ಕ್ಲೀನರ್ ಆಗಿ ಆಳವಾದ ಬಾವಿಯಲ್ಲಿ ದೊಡ್ಡ ಕೊಡಪಾನದಲ್ಲಿ ನೀರು ಸೇದುತ್ತಿದ್ದ. ಇಂದು ಅದೇ ಹುಡುಗ ರಾಷ್ಟ್ರದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯದಲ್ಲಿ  ವಿಜ್ಞಾನಿಯಾಗಲು ಸೇರಿರುವನು. ಭುವನೇಶ್ವರದ ಐಐಟಿಗೆ ಆಯ್ಕೆಯಾಗಿರುವ ಪ್ರತಿಭಾವಂತರ ಪಟ್ಟಿಯಲ್ಲಿ ಮಂಜುನಾಥನ ಹೆಸರು ಮೊದಲ ಸ್ಥಾನದಲ್ಲಿದೆ.
ಎಲ್ಲ ಸೌಲಭ್ಯಗಳಿದ್ದರೂ ಸೋಮಾರಿಗಳಾಗುತ್ತಿರುವ ಇಂದಿನ ಹಲವು ಯುವಕರ ಮುಂದೆ ಮಂಜುನಾಥನದ್ದು ಸಾಹಸಗಾಥೆ.

ಮುಂದಿನ ವ್ಯಾಸಂಗಕ್ಕಾಗಿ ಸಂಸ್ಥೆಯಿಂದ ಪತ್ರ ಬಂದಿದೆ. ಆದರೆ ಶುಲ್ಕ ಭರಿಸಲು ಹಣವಿಲ್ಲ. ಇಲ್ಲಿಯವರೆಗೆ ಕೂಲಿ ನಾಲಿ ಮಾಡಿ ಅವರು ಇವರು ಕೊಟ್ಟ ಅಷ್ಟಿಷ್ಟು ದುಡ್ಡು ಪಡೆದು ಓದಿರುವ ಮಂಜುನಾಥನಿಗೆ ಈಗ ದಾನಿಗಳ ನೆರವಿನ ಅಗತ್ಯವಿದೆ. ಮಂಜುನಾಥನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 2858101003675. ಆತನ ಸಂಪರ್ಕಕ್ಕೆ 9902495359.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.