ADVERTISEMENT

ದ್ವಾದಶ ಜ್ಯೋತಿರ್ಲಿಂಗ ಮಂದಿರ

ಆಶಾ ಹೆಗಡೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ದೇಶದ ವಿವಿಧ ಭಾಗದಲ್ಲಿರುವ ದ್ವಾದಶ (12) ಜ್ಯೋತಿರ್ಲಿಂಗಗಳು ಭಕ್ತರ ಶ್ರದ್ಧಾ, ಭಕ್ತಿಯ ನೆಲೆಗಳಾಗಿವೆ. ಈ ಎಲ್ಲ 12 ಜ್ಯೋತಿರ್ಲಿಂಗಗಳನ್ನು  ಪ್ರತ್ಯೇಕ ಗರ್ಭಗುಡಿಗಳು ಹಾಗೂ  ಪ್ರತ್ಯೇಕ ವಿಮಾನ  ಗೋಪುರಗಳೊಂದಿಗೆ ಒಂದೇ ಕಡೆ ಪ್ರತಿಷ್ಠಾಪಿಸಿದ ವಿಶಿಷ್ಟ ದೇಗುಲವೊಂದು ಬೆಂಗಳೂರಿನಲ್ಲಿದೆ.

   ಇಲ್ಲಿನ ಓಂಕಾರೇಶ್ವರ ಜ್ಯೋತಿರ್ಲಿಂಗವು 6 ಅಡಿ ಎತ್ತರವಿದ್ದು  ಮಧ್ಯದಲ್ಲಿ ಸ್ಫಟಿಕದ  ಶ್ರೀಯಂತ್ರವಿದೆ. ಇದು ಈ ದೇಗುಲದ  ಪ್ರಮುಖ ಜ್ಯೋತಿರ್ಲಿಂಗ. ಇದರ ವಿಮಾನ ಗೋಪುರದ ಎತ್ತರ 100 ಅಡಿ. ವೈದ್ಯನಾಥ, ವಿಶ್ವನಾಥ, ಭೀಮಾಶಂಕರ, ತ್ರಯಂಬಕೇಶ್ವರ, ಘೃಶ್ನೇಶ್ವರ, ರಾಮೇಶ್ವರ, ಸೋಮನಾಥ, ಕೇದಾರನಾಥ, ನಾಗೇಶ್ವರ, ಮಲ್ಲಿಕಾರ್ಜುನ, ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇಗುಲಗಳು ಇದನ್ನು ಸುತ್ತುವರೆದಿವೆ.
ಇಲ್ಲೂ ಸಹ ಶ್ರೀಶೈಲ ಮಲ್ಲಿಕಾರ್ಜುನ  ಮತ್ತು ರಾಮೇಶ್ವರ  ಜ್ಯೋತಿರ್ಲಿಂಗ ದೇಗುಲಗಳ  ವಿಮಾನ ಗೊಪುರಗಳು ದಕ್ಷಿಣ ಭಾರತದ ಶೈಲಿಯಲ್ಲಿದ್ದು ಉಳಿದ ಹತ್ತು ದೇವಾಲಯಗಳ ವಿಮಾನ ಗೋಪುರಗಳು ಉತ್ತರ ಭಾರತದ ಶೈಲಿಯಲ್ಲಿವೆ. ಜ್ಯೋತಿರ್ಲಿಂಗದ ಶಿಲೆಗಳನ್ನು ನರ್ಮದಾ ನದಿಯಿಂದ ತರಲಾಗಿದೆ. 

   ಪ್ರತಿಯೊಂದು ಜ್ಯೋತಿರ್ಲಿಂಗದ  ಸುತ್ತಲೂ ಒಂದು ಇಂಚು ಎತ್ತರದ ಸಾವಿರ ನರ್ಮದೇಶ್ವರ ಲಿಂಗಗಳನ್ನು, ಓಂಕಾರೇಶ್ವರ ಲಿಂಗದ ತಳದಲ್ಲಿ ಮಾತ್ರ ಎರಡು ಸಾವಿರ ಲಿಂಗಗಳನ್ನು ಇರಿಸಲಾಗಿದೆ. ಹಾಗಾಗಿ ಕಣ್ಣಿಗೆ ಕಾಣುವ ಹನ್ನೆರಡು ಪ್ರಮುಖ ಲಿಂಗಗಳೊಂದಿಗೆ 13000 ಅಗೋಚರ ಲಿಂಗಗಳು ಈ ದೇಗುಲಗಳಲ್ಲಿವೆ.

ಶಿವರಾತ್ರಿಯಂದು  ಭಕ್ತರು ಗರ್ಭಗುಡಿ ಪ್ರವೇಶಿಸಿ ದೇವರನ್ನು ಮುಟ್ಟಿ ಪೂಜಿಸಬಹುದು. ಇಲ್ಲಿ ವಿದ್ಯಾ ಗಣಪತಿ, ಸುಬ್ರಹ್ಮಣ್ಯ, ಕಾಲಭೈರವ, ಚಂಡಿಕೇಶ್ವರ ಮತ್ತು ಹನ್ನೊಂದು ರುದ್ರದೇವತೆಗಳು, ಅಂದಾಜು 1 ಸಾವಿರ ಕಿಲೊ ತೂಗುವ  ಪಂಚಲೋಹ ನಟರಾಜ, ಶ್ರೀ ಯಂತ್ರಗಳೂ ಕಾಣಸಿಗುತ್ತವೆ. ಅಲ್ಲದೆ ಶ್ರೀ ಮತ್ಸ್ಯನಾರಾಯಣ, ಶ್ರೀ ನಾಗದೇವತಾ, ಶ್ರೀ ವನದುರ್ಗಾ, ಶ್ರೀ ಮುನೀಶ್ವರ ದೇಗುಲಗಳಿವೆ. ಇವುಗಳೊಂದಿಗೆ ಬೃಹದಾಕಾರದ ಗಡಿಯಾರ ಇಲ್ಲಿಯ ಆಕರ್ಷಣೆ. 

   ಓಂಕಾರ ನಾದ, ಶಂಖ, ತಮಟೆ, ಜಾಗಟೆಗಳೊಂದಿಗೆ ಸಮಯ ತೋರಿಸುವ ಎಚ್‌ಎಂಟಿ ನಿರ್ಮಿತ ಈ ಗಡಿಯಾರ ಲಂಡನ್ನಿನ `ಬಿಗ್‌ಬೆನ್~ಗಿಂತಲೂ ದೊಡ್ಡದಾಗಿದ್ದು ಸದ್ಯಕ್ಕೆ ದುರಸ್ತಿಯಲ್ಲಿದೆ. ಇಲ್ಲಿಯ ಇನ್ನೊಂದು ಆಕರ್ಷಣೆಯೆಂದರೆ  `ಓಂಕಾರ್ ಹಿಲ್ಸ್~ ತುದಿಯ ವಿಶಾಲ ಮಂಟಪ. ಇಲ್ಲಿಂದ ಬೆಂಗಳೂರಿನ ಬಹುತೇಕ ಭಾಗಗಳ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಇಲ್ಲೊಂದು ಸರ್ವ ಧರ್ಮ ಸಮನ್ವಯ ಮಂಟಪವಿದೆ.

ಏಕೆಂದರೆ ವಿವಿಧ ಧರ್ಮಗುರುಗಳ ಶಿಲಾ ಪ್ರತಿಮೆಗಳು ಇಲ್ಲಿವೆ. ಪುಟ್ಟ ಪ್ರವಾಸಕ್ಕೂ ಇದು ಸೂಕ್ತ ಸ್ಥಳ. ಈ ದೇಗುಲಗಳ  ಪರಿಕಲ್ಪನೆ ಬ್ರಹ್ಮೈಕ್ಯ ಸದ್ಗುರು ಶಿವಪುರಿ ಮಹಾಸ್ವಾಮೀಜಿಯವರದು.

ಎಲ್ಲಿದೆ?
ಬೆಂಗಳೂರು ನಗರದಿಂದ  ಸುಮಾರು 16 ಕಿ.ಮಿ. ದೂರದಲ್ಲಿ  ಕೆಂಗೇರಿ- ಉತ್ತರಹಳ್ಳಿ ಮಾರ್ಗದ  ಶ್ರೀನಿವಾಸಪುರದ ಓಂಕಾರ್  ಹಿಲ್ಸ್‌ನಲ್ಲಿ ಈ ಸುಂದರ ದೇಗುಲವಿದೆ. 375, 378 ಮತ್ತು 222ಡಿ ಸಂಖ್ಯೆಯ ಬಸ್‌ಗಳಿಂದ ಇಲ್ಲಿ ತಲುಪಬಹುದು.

ಪೂಜೆ
*
ಪ್ರತಿ ದಿನ ರುದ್ರಾಭಿಷೇಕ, ಹಬ್ಬಗಳಂದು ಹೋಮ  ನಡೆಯುತ್ತದೆ.
* ಪ್ರದೋಷ ಪೂಜಾ ಹಾಗು ಸಂಕಷ್ಟಹರ ಗಣಪತಿ ಪೂಜೆ.
* ನವಗ್ರಹ ಜಪ ಮತ್ತು ಹೋಮ.

ಮಾಹಿತಿಗೆ: 2860 2586, 91419 20920, 91419 30930.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.