ಅಣ್ಣಮ್ಮ ಬೆಂಗಳೂರು ನಗರ ದೇವತೆ. ನಗರದ ಹೃದಯ ಭಾಗ ಎಂದೇ ಪರಿಗಣಿಸಿರುವ ಗಾಂಧಿ ನಗರದಲ್ಲಿರುವ ಅಣ್ಣಮ್ಮ ದೇವಸ್ಥಾನ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಒಂದು.
ಕೆಂಪೇಗೌಡ ವೃತ್ತದಿಂದ ಕೂಗಳತೆ ದೂರದಲ್ಲಿರುವ ಅಣ್ಣಮ್ಮದೇವಿ ದೇವಾಲಯ 10ನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂಬ ಮಾಹಿತಿ ಇತಿಹಾಸದಲ್ಲಿ ಉಲ್ಲೇಖವಾಗಿದೆ.
ದೇವಸ್ಥಾನದ ಹೊರಗೋಡೆಯ ಮೇಲೆ ಅಣ್ಣಮ್ಮ ದೇವಿಯ ಸಪ್ತ ಅವತಾರಗಳ ಉಬ್ಬುಶಿಲ್ಪಗಳಿವೆ. ಈ ಶಿಲ್ಪಗಳು ಆಕರ್ಷಕವಾಗಿವೆ. ನಗರದ ಅತ್ಯಂತ ಜನದಟ್ಟಣೆಯ ಪ್ರದೇಶದಲ್ಲಿ ದೇವಸ್ಥಾನ ಇರುವುದು ಹೊಸಬರಿಗೆ ಗೊತ್ತೇ ಆಗುವುದಿಲ್ಲ.
ಇತಿಹಾಸ: ಕೆಲವು ಶತಮಾನಗಳ ಹಿಂದೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಎಂಬ ಸೋದರರ ಕನಸಿನಲ್ಲಿ ಅಣ್ಣಮ್ಮ ದೇವಿ ಕಾಣಿಸಿಕೊಂಡು ನಾವು ಏಳು ಮಂದಿ ಅಕ್ಕತಂಗಿಯರಿದ್ದೇವೆ. ನಾನು ನಿಮ್ಮ ಜಮೀನಿನಲ್ಲಿ ಒಡಮೂಡುತ್ತೇನೆ. ನನ್ನನ್ನು ಆರಾಧಿಸಿದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದಳಂತೆ.
ಅದರಂತೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಅವರ ಜಮೀನಿನಲ್ಲಿ ಅಣ್ಣಮ್ಮ ದೇವಿ ಮೂರ್ತಿ ಉದ್ಭವವಾದಳು. ಅಂದಿನಿಂದ ಅಣ್ಣಮ್ಮನನ್ನು ನಮ್ಮ ಕುಟುಂಬದವರುಪೂಜಿಸಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಕುಟುಂಬದ ವಾರಸುದಾರರಾದ ಮೋಹನ್.
ಚೈತ್ರ, ವೈಶಾಖ ಮಾಸಗಳಲ್ಲಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅವರು ತಮ್ಮ ಇಷ್ಟಾರ್ಥಗಳಿಗಾಗಿ ಹರಕೆ ಮಾಡಿಕೊಳ್ಳುವ ಸಂಪ್ರದಾಯ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ.
ಬೆಂಗಳೂರು ಸಣ್ಣ ಗ್ರಾಮವಾಗಿದ್ದಾಗ ಗ್ರಾಮ ದೇವತೆ ಎಂದೇ ಕರೆಸಿಕೊಳ್ಳುತ್ತಿದ್ದ ಅಣ್ಣಮ್ಮ ದೇವಿ ನಗರ ಬೆಳೆದಂತೆ ಈಗ ನಗರ ದೇವತೆಯಾಗಿದ್ದಾಳೆ. ಅಣ್ಣಮ್ಮ ದೇವಿಗೆ ಮಂಗಳವಾರ, ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ.
ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಜೊತೆಗೆ ರಾಜರಾಜೇಶ್ವರಿ, ಶೃಂಗೇರಿ ಶಾರದೆ ಹೀಗೆ ವಿವಿಧ ರೂಪಗಳಲ್ಲಿ ಅಲಂಕಾರ ಮಾಡಲಾಗುತ್ತದೆ. ಮಕ್ಕಳಿಗೆ `ಅಮ್ಮ~ ಬಂದರೆ ವಾಸಿಯಾಗಲೆಂದು ಮತ್ತು ಸಂತಾನಕ್ಕಾಗಿ ಹರಕೆ ಮಾಡಿಕೊಳ್ಳುತ್ತಾರೆ.
ತಮ್ಮ ಕಷ್ಟ ಪರಿಹಾರವಾದರೆ ದೇವಿಗೆ ಕೋಳಿ, ಕುರಿ ಹಾಗೂ ಮೇಕೆಯನ್ನು ಬಿಡುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಕಷ್ಟ ಪರಿಹಾರವಾದರೆ ಅವನ್ನು ಜೀವಂತವಾಗಿ ದೇವಾಲಯಕ್ಕೆ ತಂದು ಬಿಡುವ ಸಂಪ್ರದಾಯವೂ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಅಣ್ಣಮ್ಮ ದೇವತೆಯ ಉತ್ಸವ ಮೂರ್ತಿಯನ್ನು ನಗರದ ವಿವಿಧ ಭಾಗಗಳಿಗೆ ಕರೆದುಕೊಂಡು ಪೂಜಿಸಿ ಮೆರವಣಿಗೆ ಮಾಡುವ ಪರಿಪಾಠವಿದೆ. ಭಕ್ತರು ದೇವಿಗೆ ನಿಂಬೆಹಣ್ಣಿನ ಹಾರ, ಸೀರೆ ಇತ್ಯಾದಿಗಳನ್ನು ಅರ್ಪಿಸುತ್ತಾರೆ.
ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳು ವಿಶೇಷ ಪೂಜೆ ನಡೆಯುತ್ತದೆ. ಕರಗ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ.
ಹೋಳಿ ಹಬ್ಬದ ಏಳನೇ ದಿನದಂದು ಮಾರ್ವಾಡಿ ಸಮುದಾಯದವರು ದೇವಿಗೆ ತಂಡಾಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಭಕ್ತರಿಗೆ ನಿಂಬೆಹಣ್ಣು, ತಾಯತ ಕೊಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ 98800 02221
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.