ADVERTISEMENT

ಪಂಚಗ್ರಹ ಗುಡ್ಡದ ಸಿದ್ದೇಶ್ವರ

ಎ.ಎಸ್.ಹೂಗಾರ
Published 30 ಜುಲೈ 2012, 19:30 IST
Last Updated 30 ಜುಲೈ 2012, 19:30 IST
ಪಂಚಗ್ರಹ ಗುಡ್ಡದ ಸಿದ್ದೇಶ್ವರ
ಪಂಚಗ್ರಹ ಗುಡ್ಡದ ಸಿದ್ದೇಶ್ವರ   

ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯ ಮೇಲೆ ಮಲಗಿದ ಸಿಂಹದಂತೆ ಕಾಣುವ ಗುಡ್ಡದ ಅಡಿಯ ಊರು ನರಗುಂದ. ಅದು ಒಂದು ಕಾಲಕ್ಕೆ ಬ್ರಿಟಿಷರನ್ನೇ ಬೆದರಿಸಿದ ಸ್ಥಳ. ರೈತರ ಬಂಡಾಯ ಹುಟ್ಟಿದ್ದೇ ಇಲ್ಲಿ.

ಇಷ್ಟೊಂದು ಮಹತ್ವದ ಈ ಊರ ಉತ್ತರಕ್ಕೆ ಗುಡ್ಡದ ಮಧ್ಯದ ಕೆಳಭಾಗದಲ್ಲಿ ನಿಸರ್ಗದ ಮಡಿಲಲ್ಲಿ ಸಿದ್ಧೇಶ್ವರ ದೇವಾಲಯವಿದೆ. `ಗುಡ್ಡದ ಸಿದ್ದಣ್ಣ~ ಎಂತಲೂ ಕರೆಯುತ್ತಾರೆ. ದೇವಾಲಯದ ಸುತ್ತ ಹೂವು-ಹಣ್ಣಿನ ಗಿಡಮರಗಳು, ಗಿಳಿ-ಕೋಗಿಲೆಗಳು, ಕೆಂಬಣ್ಣ ಶಿಲೆಯ ಗುಡ್ಡ, ಮೌನವೃತದ ಕಣಿವೆ-ಕೊಳ್ಳಗಳು, ಭಕ್ತಿ ಅಲೆಯ ವಚನಗಳು, ಮಂತ್ರ ಘೋಷಗಳು ಋಷಿ ಮುನಿಗಳ ಆಶ್ರಮವನ್ನು ನೆನಪಿಸುತ್ತವೆ.

ಈ ದೇವಾಲಯ ನಾಲ್ಕು ಕಂಬಗಳನ್ನೊಳಗೊಂಡಿದ್ದು ನಿರಾಲಂಕಾರದ ಚಿಕ್ಕಬಾಗಿಲವಾಡವು ಗರ್ಭಗುಡಿಗಿದೆ. ಚಾಲುಕ್ಯ ಶೈಲಿಯ ಕಪ್ಪುಶಿಲೆಯ ಎತ್ತರದ ಶಿವಲಿಂಗದ ಎದುರು ನಂದಿಯ ಶಿಲಾಮೂರ್ತಿ ಇದೆ. ಹೊಯ್ಸಳ ಶೈಲಿಯ ಗೋಪುರ ಇರುವುದು ವಿಶೇಷ.

ದೇವಾಲಯದ ಮುಂದಿರುವ ಗುಹೆಯಲ್ಲಿನ `ಗುಪ್ತ ಗಂಗಾ ಝರಿ~ಗೆ `ಸಿದ್ಧೇಶ್ವರನ ಹೊಂಡ, ಸಿದ್ಧಣ್ಣನ ತೀರ್ಥ~ ಎಂತಲೂ ಹೆಸರು. ಆವರಣದಲ್ಲಿ ಪಂಚಗ್ರಹ ಗುಡ್ಡ ಹಿರೇಮಠದ ಹಿಂದಿನ ಪಟ್ಟಾಧ್ಯಕ್ಷರ ಸಮಾಧಿಗಳಿದ್ದು, ನಿತ್ಯವೂ ಪೂಜೆ ಸಲ್ಲುತ್ತದೆ. ದೇವಾಲಯದ ಶಿಖರ, ನಂದಿ ಧ್ವಜ ಬಹುದೂರದ ವರೆಗೂ ಗೋಚರಿಸುತ್ತದೆ.

ಭಕ್ತರು ಮೆಟ್ಟಿಲು ಏರಿ ಬರಬಹುದು. ವಾಹನಗಳಿಗೆ ಇನ್ನೊಂದು ದಾರಿಯುಂಟು. ಶ್ರಾವಣಮಾಸ, ನವರಾತ್ರಿ, ದೀಪಾವಳಿಗಳಲ್ಲಿ ವಿಶೇಷವಾಗಿ ಜನರು ಸೇರುತ್ತಾರೆ.
ಅಮಾವಾಸ್ಯೆಯಂದು ಬರುವ ಬರುವವರ ಸಂಖ್ಯೆ ಹೆಚ್ಚು.

ಪರಸ್ಥಳದಿಂದ ಬರುವ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಇದೆ. ಪೂಜೆ-ಪುನಸ್ಕಾರಗಳಿಗೆ ನಿರ್ದಿಷ್ಟ ಸೇವಾ ಶುಲ್ಕ ಇರುವುದಿಲ್ಲ.ರಾಜ್ಯದ ಪ್ರಮುಖ ಊರುಗಳಿಂದ ಇಲ್ಲಿಗೆ ಬಸ್ಸುಗಳಿವೆ. ಮಾಹಿತಿಗೆ 94818 16299 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.